
ಅಂಚೆ ಮತದಾನ ಕೇಂದ್ರ ಹಾಗೂ ಮತದಾರರ ಸೌಲಭ್ಯ ಕೇಂದ್ರಗಳ ಸ್ಥಾಪನೆ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 30- ಲೋಕಸಭಾ ಚುನಾವಣೆ-2024ರ ಹಿನ್ನೆಲೆಯಲ್ಲಿ ಅಗತ್ಯ ಸೇವೆಗಳಡಿ ಕಾರ್ಯನಿರ್ವಹಿಸುತ್ತಿರುವ ಮತದಾರರಿಗೆ ಮತಚಲಾಯಿಸಲು ಅಂಚೆ ಮತದಾನ ಕೇಂದ್ರವನ್ನು ಹಾಗೂ ಮತದಾನದ ಕರ್ತವ್ಯಕ್ಕಾಗಿ ಮತಗಟ್ಟೆಗಳಿಗೆ ನಿಯೋಜಿಸಲಾದ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಮತಚಲಾಯಿಸಲು ಮತದಾರರ ಸೌಲಭ್ಯ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ನಲಿನ್ ಅತುಲ್ ಅವರು ತಿಳಿಸಿದ್ದಾರೆ.
ಭಾರತ ಚುನಾವಣಾ ಆಯೋಗವು ಅಗತ್ಯ ಸೇವೆಯಡಿ ಕರ್ತವ್ಯ ನಿರ್ವಹಿಸುವ ಗೈರು ಮತದಾರರಿಗೆ ಮತ್ತು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾದ ಮತದಾರರಿಗೆ ಆಂಚೆ ಮತಪತ್ರದ ಮೂಲಕ ಮತದಾನದ ಅವಕಾಶವನ್ನು ನೀಡಿರುತ್ತದೆ. ಈ ನಿರ್ದೇಶನಗಳನ್ವಯ ಅಗತ್ಯ ಸೇವೆಗಳಡಿ ಕಾರ್ಯನಿರ್ವಹಿಸುತ್ತಿರುವ 16 ಇಲಾಖೆಗಳಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗೈರು ಮತದಾರರು (ಎವಿಇಎಸ್) ಮತಚಲಾಯಿಸಲು ಪೋಸ್ಟಲ್ ವೋಟಿಂಗ್ ಸೆಂಟರ್ (ಪಿವಿಸಿ) (ಅಂಚೆ ಮತದಾನ ಕೇಂದ್ರ) ಮತ್ತು ಮತದಾನದ ಕರ್ತವ್ಯಕ್ಕಾಗಿ ಮತಗಟ್ಟೆಗಳಿಗೆ ನಿಯೋಜಿಸಲಾದ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಅಂಚೆ ಮತಪತ್ರದ ಮೂಲಕ ಮತದಾನದ ಅವಕಾಶ ಮಾಡಿಕೊಡಲು ಆಯಾ ವಿಧಾನಸಭಾ ಕ್ಷೇತ್ರಗಳ ತರಬೇತಿ ಕೇಂದ್ರಗಳಲ್ಲಿ ಮತ್ತು ಮತಗಟ್ಟೆ ಕರ್ತವ್ಯ ಹೊರತುಪಡಿಸಿ ಇತರೆ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾದ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಮತ ಚಲಾಯಿಸಲು ಚುನಾವಣಾಧಿಕಾರಿಗಳ ಕಚೇರಿಯಲ್ಲಿ (ಮತದಾರರ ಸೌಲಭ್ಯ ಕೇಂದ್ರ)ಗಳನ್ನು ಸ್ಥಾಪಿಸಲಾಗಿದೆ.
ಮತದಾರರ ಸೌಲಭ್ಯ ಕೇಂದ್ರ ವಿವರ : ಮತದಾರರ ಸೌಲಭ್ಯ ಕೇಂದ್ರಗಳ ವಿಳಾಸ, ಕಾರ್ಯನಿರ್ವಹಿಸುವ ದಿನಾಂಕಗಳು ಮತ್ತು ಸಮಯವನ್ನು ಮತದಾರರ ಮಾಹಿತಿಗಾಗಿ ವಿವರ ಇಂತಿದೆ. 58-ಸಿಂಧನೂರು ವಿಧಾನಸಭಾ ಕ್ಷೇತ್ರಕ್ಕೆ ಸಿಂಧನೂರಿನ ಸರ್ಕಾರಿ ಪದವಿ ಕಾಲೇಜನಲ್ಲಿ, 59-ಮಸ್ಕಿ ವಿಧಾನಸಭಾ ಕ್ಷೇತ್ರಕ್ಕೆ ಮಸ್ಕಿಯ ದೇವನಾಮಪ್ರಿಯ ಅಶೋಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, 60-ಕುಷ್ಟಗಿ ಕ್ಷೇತ್ರಕ್ಕೆ ಕುಷ್ಟಗಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, 61-ಕನಕಗಿರಿ ವಿಧಾನಸಭಾ ಕ್ಷೇತ್ರಕ್ಕೆ ಕನಕಗಿರಿಯ ಕರ್ನಾಟಕ ಪಬ್ಲಿಕ್ ಶಾಲೆ (ಪ್ರೌಢಶಾಲೆ ವಿಭಾಗ), 62-ಗಂಗಾವತಿ ವಿಧಾನಸಭಾ ಕ್ಷೇತ್ರಕ್ಕೆ ಗಂಗಾವತಿಯ ಲಯನ್ಸ್ ಕ್ಲಬ್ ಆವರಣದ ಲಯನ್ಸ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ (ಬಾಲಕರ ಪದವಿ ಪೂರ್ವ ಕಾಲೇಜು ಹಿಂಭಾಗ), 63-ಯಲಬುರ್ಗಾವಿಧಾನಸಭಾ ಕ್ಷೇತ್ರಕ್ಕೆ ಯಲಬುರ್ಗಾದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, 64-ಕೊಪ್ಪಳ ವಿಧಾನಸಭಾ ಕ್ಷೇತ್ರಕ್ಕೆ ಕೊಪ್ಪಳದ ಗವಿಸಿದ್ದೇಶ್ವರ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ ಹಾಗೂ 92-ಸಿರಗುಪ್ಪ ವಿಧಾನಸಭಾ ಕ್ಷೇತ್ರಕ್ಕೆ ಸಿರಗುಪ್ಪದ ಶ್ರೀ ವಿವೇಕಾನಂದ ಪಬ್ಲಿಕ್ ಸ್ಕೂಲ್, ಈ ಎಲ್ಲಾ ವಿ.ಎಫ್.ಸಿ ಕೇಂದ್ರಗಳಲ್ಲಿ ಮೇ 1 ರಿಂದ ಮೇ.2ರ ವರೆಗೆ (ತರಬೇತಿ ಅವಧಿಯಲ್ಲಿ) ಕಾರ್ಯನಿರ್ವಹಿಸಲಿವೆ.
ಡಿಸಿ ಕಚೇರಿಯಲ್ಲಿ ಅಂಚೆ ಮತದಾನ ಕೇಂದ್ರ ಹಾಗೂ ಪಿವಿಸಿ ಕೇಂದ್ರ : ಕೊಪ್ಪಳ ಚುನಾವಣಾಧಿಕಾರಿಗಳ ಕಚೇರಿಯ (ಜಿಲ್ಲಾಧಿಕಾರಿಗಳ ಕಾರ್ಯಾಲಯ) ಕೆಸ್ವಾನ್ ಕೊಠಡಿ-2ರಲ್ಲಿ ಸ್ಥಾಪಿಸಲಾದ ಅಂಚೆ ಮತದಾನ ಕೇಂದ್ರ (ಪಿವಿಸಿ)ವು ಮೇ 1ರಿಂದ ಮೇ.3ರ ವರೆಗೆ ಬೆಳಿಗ್ಗೆ 9 ರಿಂದ ಸಾಯಂಕಾಲ 5 ಗಂಟೆಯವರೆಗೆ ಮತ್ತು ಕೆಸ್ವಾನ್ ಕೊಠಡಿ-2ರಲ್ಲಿರುವ ಮತದಾರರ ಸೌಲಭ್ಯ ಕೇಂದ್ರವು ಮೇ.4 ರಿಂದ ಮೇ.6ರ ವರೆಗೆ (ಕಚೇರಿ ವೇಳೆಯಲ್ಲಿ) ಕಾರ್ಯನಿರ್ವಹಿಸಲಿದೆ ಎಂದು ಪ್ರಕಟಣೆ ತಿಳಿಸಿದೆ.