
ಅರಿವಿನ ಕದ ತೆರೆವ …. ಘಂಟಾನಾದ
ಕರುನಾಡ ಬೆಳಗು
ದೇವಸ್ಥಾನಗಳನ್ನು ಪ್ರವೇಶಿಸಿದಾಗ ಜಂತಿಗೆ, ತೊಲೆ ಕಂಬಗಳಿಗೆ ತೂಗು ಹಾಕಿರುವ ಗಂಟೆಯನ್ನು ಬಾರಿಸಿ ಒಳಗೆ ಪ್ರವೇಶಿಸುವುದು ಹಿಂದಿನಿಂದಲೂ ನಡೆದು ಬಂದ ಪದ್ಧತಿ.ದೇವರ ಪೂಜೆಯ ಸಮಯದಲ್ಲಿ ಊದುಬತ್ತಿಯನ್ನು, ತುಪ್ಪದ ಬತ್ತಿಯನ್ನು ಬೆಳಗುತ್ತಾ, ಮಂಗಳಾರತಿಯನ್ನು ಮಾಡುವಾಗ ಗಂಟೆ
ಯನ್ನು ಬಳಸುತ್ತಾರೆ. ಮಹಾ ಮಂಗಳಾರತಿ ಸಮಯದಲ್ಲಂತೂ ಗಂಟೆ, ಜಾಗಟೆ ಮತ್ತು ಇತ್ತೀಚೆಗೆ ಎಲೆಕ್ಟ್ರಾನಿಕ್ ಸಂಪರ್ಕವನ್ನು ಹೊಂದಿರುವ ಅತ್ಯಾಧುನಿಕವಾದ ಸಕಲ ವಾದ್ಯಗಳು ಏಕಕಾಲದಲ್ಲಿ ನುಡಿಸಲ್ಪಡುವ ಯಂತ್ರಗಳನ್ನು ಬಳಸಲಾಗುತ್ತಿದೆ.
ಆಗಮನಾರ್ತಂ ತು ದೇವಾನಾಂ
ಗಮನಾರ್ತಂ ತು ರಾಕ್ಷಸಮ್
ಕುವೆ೯ ಘಂಟಾರವಂ ಭಕ್ತ್ಯ
ದೇವತಾಹ್ವಾನ ಲಾಂಛನಮ್
ಈ ಶ್ಲೋಕದ ಸಾರ ಹೀಗಿದೆ….. ಘಂಟಾನಾದವನ್ನು ಮಾಡುವುದರ ಮೂಲಕ ನಾನು ದೇವ ದೇವಿಯರನ್ನು ಆಹ್ವಾನಿಸುತ್ತೇನೆ. ತತ್ಪರಿಣಾಮವಾಗಿ ಧನಾತ್ಮಕ ಚಿಂತನೆಗಳು ಮತ್ತು ಉನ್ನತ ವಿಚಾರಗಳು ನನ್ನ ಹೃದಯ ಮತ್ತು ಮನೆಯನ್ನು ಪ್ರವೇಶಿಸಲಿ ಮತ್ತು ನನ್ನ ಮನದಲ್ಲಿರುವ ರಾಕ್ಷಸೀ ಪ್ರವೃತ್ತಿ ಮತ್ತು ಋಣಾತ್ಮಕ ವಿಚಾರಗಳು ನನ್ನ ಮನೆಯಿಂದ ಹೊರ ಹೋಗಲಿ ಎಂದು.
ಗಂಟೆಯ ಆಕಾರವು ಸಾಂಕೇತಿಕವಾಗಿ ಅನಂತತೆಯನ್ನು ಸೂಚಿಸುತ್ತದೆ. ಅನಂತ ಎಂಬುದು ಅಗಾಧತೆ, ಅವಿನಾಶಿಯಾದ, ಎಂದೂ ಮುಗಿಯದ ಎಂಬ ಅರ್ಥವನ್ನು ಸೂಚಿಸಿದರೆ, ಗಂಟೆಯ ಒಳಭಾಗದಲ್ಲಿರುವ ನಾಲಿಗೆಯು ಜ್ಞಾನದ ಅಧಿದೇವತೆ ವಿದ್ಯಾಮಾತೆ ಸರಸ್ವತಿಯನ್ನು ಸೂಚಿಸುತ್ತದೆ. ಗಂಟೆಯ ಹಿಡಿಭಾಗದಲ್ಲಿ ಸಾಮಾನ್ಯವಾಗಿ ಶಂಖ, ಚಕ್ರ,ಗರುಡ,ಹನುಮ, ಸುದರ್ಶನ ಚಕ್ರ ಮತ್ತು ನಂದಿಯ ವಿಗ್ರಹಗಳನ್ನು ಕೆತ್ತಲಾಗಿರುತ್ತದೆ. ಅವರವರ ಇಷ್ಟ ದೈವದ ವಿಗ್ರಹವನ್ನು ಹೊಂದಿರುವ ಗಂಟೆಗಳನ್ನು ಬಳಸುತ್ತಾರೆ.
ಗಂಟೆಯನ್ನು ತಯಾರಿಸಲು ಸಪ್ರ ಧಾತುಗಳನ್ನು ಬಳಸುತ್ತಾರೆ. ಈ ಸಪ್ತ ಧಾತುಗಳಲ್ಲಿ ಒಂದೊಂದು ಧಾತುವೂ ಒಂದೊಂದು ಗ್ರಹವನ್ನು ಸಂಕೇತಿಸುತ್ತದೆ. ಚಿನ್ನವು ಸೂರ್ಯನನ್ನು, ಬೆಳ್ಳಿಯು ಚಂದ್ರನನ್ನು, ಸೀಸವು ಶನಿ ಗ್ರಹವನ್ನು, ಕಬ್ಬಿಣವು ಮಂಗಳ ಗ್ರಹವನ್ನು, ತವರವು ಗುರು ಗ್ರಹವನ್ನು, ಪಾದರಸವು ಬುಧ ಗ್ರಹವನ್ನು ತಾಮ್ರವು ಶುಕ್ರ ಗ್ರಹವನ್ನು ಪ್ರತಿಪಾದಿಸುತ್ತದೆ.
ಶಿಲ್ಪ ಶಾಸ್ತ್ರದ ಪ್ರಕಾರ ಗಂಟೆಯನ್ನು ಪಂಚ ಧಾತುಗಳಿಂದ ತಯಾರಿಸಬೇಕು. ಚಿನ್ನ, ಬೆಳ್ಳಿ, ತಾಮ್ರ, ಸತು ಮತ್ತು ಉಕ್ಕಿನಿಂದ ಗಂಟೆಯನ್ನು ತಯಾರಿಸಬೇಕು. ಈ ಐದು ಧಾತುಗಳು ಅಥವಾ ಲೋಹಗಳು ಪಂಚಮಹಾಭೂತಗಳಾದ ಪೃಥ್ವಿ, ವಾಯು, ಅಗ್ನಿ, ಆಕಾಶ ಮತ್ತು ಜಲ ತತ್ವಗಳನ್ನು ಸಂಕೇತಿಸುತ್ತವೆ. ಈ ಧಾತುಗಳನ್ನು ಸರಿಯಾದ ಪ್ರಮಾಣದಲ್ಲಿ ಸೇರಿಸಿ ತಯಾರಿಸುವುದರಲ್ಲಿಯೇ ಗಂಟೆಯ ವೈಜ್ಞಾನಿಕ ಮಹತ್ವ ಅಡಗಿರುವುದು.
ಗಂಟೆಯನ್ನು ಬಾರಿಸಿದಾಗ ಉಂಟಾಗುವ ಕಂಪನಗಳಿಂದ ‘ಓಂ’ ಎಂಬ ಶಬ್ದವು ಉತ್ಪತ್ತಿಯಾಗಿ ತನ್ನ ತರಂಗಾಂತರಗಳನ್ನು ಶಬ್ದದ ಮೂಲಕ ಎಲ್ಲೆಡೆ ಹರಡಿ ಮನಸ್ಸಿನಲ್ಲಿ ದಿವ್ಯಾನುಭೂತಿಯನ್ನು ಮೂಡಿಸುತ್ತದೆ. ಪ್ರತಿ ಬಾರಿಯೂ ಗಂಟೆಯನ್ನು ಬಾರಿಸಿದಾಗ ಆ ಗಂಟೆಯೂ ಕನಿಷ್ಠ ಏಳು ಸೆಕೆಂಡುಗಳ ಕಾಲ ಗಟ್ಟಿಯಾದ ನಾದವನ್ನು ಹೊರಡಿಸುತ್ತದೆ. ಈ ರೀತಿಯ ನಾದ ತರಂಗಾಂತರದ ಕಂಪನಗಳು ಮೆದುಳಿನ ಎರಡು ಭಾಗಗಳಾದ ಬಲ ಮತ್ತು ಎಡ ಮೆದುಳುಗಳಲ್ಲಿ ಏಕತೆಯನ್ನು ಉಂಟು ಮಾಡುತ್ತವೆ. ಆದ್ದರಿಂದಲೇ ಮೆದುಳು ತನ್ನೆಲ್ಲ ಕ್ರಿಯೆಗಳಿಂದ ಮುಕ್ತವಾಗಿ ಪ್ರಶಾಂತವಾಗುತ್ತದೆ.
ದೇವಸ್ಥಾನಗಳಲ್ಲಿ ವೈಜ್ಞಾನಿಕವಾಗಿ ಗಂಟೆಗಳನ್ನು ತಯಾರಿಸಿ ಬಳಸುವುದರಿಂದ ಘಂಟೆಯನ್ನು ಬಾರಿಸಿದಾಗ ಉಂಟಾಗುವ ನಾದದಿಂದ ತಲೆಯಲ್ಲಿನ ಯೋಚನೆಗಳೆಲ್ಲವೂ ಖಾಲಿಯಾದಂತೆನಿಸಿ ಮನಸ್ಸು ಶಾಂತ ಸ್ವರೂಪವನ್ನು ಹೊಂದುತ್ತದೆ.
ಕುಂಡಲಿನಿ ಯೋಗದ ಪ್ರಕಾರ ಗಂಟೆಯ ನಾದವು ನಮ್ಮ ದೇಹದಲ್ಲಿ ಸ್ಥಿತವಿರುವ ಏಳು ಚಕ್ರಗಳಾದ ಮೂಲಾಧಾರ ಚಕ್ರ, ಸ್ವಾದಿಷ್ಟಾನ ಚಕ್ರ, ಮಣಿಪೂರ ಚಕ್ರ, ಅನಾಹತ ಚಕ್ರ, ವಿಶುದ್ದಿ ಚಕ್ರ,ಆಜ್ಞಾ ಚಕ್ರ ಮತ್ತು ಸಹಸ್ರಾರ ಚಕ್ರಗಳನ್ನು ಶುದ್ಧಗೊಳಿಸಿ ಮೈ ಮನವನ್ನು ಶಾಂತಗೊಳಿಸುತ್ತದೆ. ಘಂಟಾನಾದವು ದೇಹದಲ್ಲಿರುವ ಶಕ್ತಿ ಮೂಲಗಳಲ್ಲಿ ಸಂಚರಿಸಿ ಚೈತನ್ಯವನ್ನು ಉದ್ದೀಪಿಸುತ್ತದೆ.
ಘಂಟಾನಾದವು ನಿಮ್ಮ ಆಂತರ್ಯದ ವ್ಯಕ್ತಿತ್ವವನ್ನು ಪರಿಚಯಿಸುತ್ತಾ ಬಾಹ್ಯದ ಗಲಭೆಗಳನ್ನು ನಿಯಂತ್ರಿಸುತ್ತಾ ಆಂತರಿಕವಾಗಿ
ಸೆಳೆಯುತ್ತದೆ. ಎಲ್ಲವನ್ನು ಮರೆಸಿ ಅರಿವಿನ ಕದವನ್ನು ತೆರೆಯುತ್ತದೆ.ಆದ್ದರಿಂದಲೇ ದೇವಸ್ಥಾನವನ್ನು ಪ್ರವೇಶಿಸುತ್ತಲೇ ಎಲ್ಲರೂ ಗಂಟೆಯನ್ನು ಬಾರಿಸಿ ಒಳಗೆ ಹೋಗುವುದು. ಹಾಗೆ ಗಂಟೆಯನ್ನು ಬಾರಿಸುವ ಮೂಲಕ ನಮ್ಮೊಳಗಿನ ತಳಮಳಗಳನ್ನು ಹೊರ ಹೋಗಲು ಪ್ರಚೋದಿಸಿ ಸಂಪೂರ್ಣವಾಗಿ ನಮ್ಮ ಚಿತ್ತವನ್ನು ದೇವರತ್ತ ಹರಿಸಿ ಶುದ್ಧ ಮನಸ್ಕರಾಗಿ ದೇವರ ಸನ್ನಿಧಾನದಲ್ಲಿ ಧನ್ಯತಾ ಭಾವ, ಶಾಂತಿ, ಸಮಾಧಾನಗಳನ್ನು ಹೊಂದುವುದು. ಆದ್ದರಿಂದಲೇ ಹಿಂದೂ ಪುರಾಣದ ಪ್ರಕಾರ ಅಷ್ಟಮಂಗಳಗಳಲ್ಲಿ ಘಂಟಾನಾದವನ್ನು ಕೂಡ ಒಂದೆಂದು ಪರಿಗಣಿಸಲಾಗಿರುವುದು.