05ca78b6-6d2b-4a2f-85a4-84fbd724ce8e

ಕಲಿ ನೀ… ಕೊಡುವುದ

ವೀಣಾ ಹೇಮಂತ್ ಗೌಡ ಪಾಟೀಲ್

ಕರುನಾಡ ಬೆಳಗು ಸುದ್ದಿ

ಅದೊಂದು ದೇವಸ್ಥಾನದಲ್ಲಿ ಪ್ರವಚನ ಕಾರ್ಯಕ್ರಮ. ಪ್ರತಿ ತಿಂಗಳು ಹುಣ್ಣಿಮೆಯಂದು ನಡೆಯುವ ಆ ಕಾರ್ಯಕ್ರಮದಲ್ಲಿ ಸಾಕಷ್ಟು ಜನರು ಸೇರಿರುತ್ತಿದ್ದರು. ಪ್ರವಚನ ಕಾರ್ಯಕ್ರಮ ಮುಗಿದ ನಂತರ ದೊನ್ನೆಗಳಲ್ಲಿ ರುಚಿಯಾದ ಪ್ರಸಾದವನ್ನು ವಿನಯೋಗಿಸಲಾಗುತ್ತಿತ್ತು

ಈ ಬಾರಿಯ ಪ್ರವಚನ ಓರ್ವ ಪ್ರಸಿದ್ಧ ಗುರುಗಳಿಂದ ಆರಂಭವಾಯಿತು. ಅತ್ಯಂತ ಆಸಕ್ತಿಯಿಂದ ಜನರು ಪ್ರವಚನವನ್ನು ಕೇಳಿದರು. ಪ್ರವಚನದ ನಂತರ ಖುದ್ದು ಆ ಗುರುಗಳೇ ಪ್ರಸಾದ ವಿನಿಯೋಗಕ್ಕೆ ಸಜ್ಜಾದರು. ಜನರೆಲ್ಲ ಪ್ರಸಾದವನ್ನು ಪಡೆಯಲು ಅತ್ಯಂತ ಶಿಸ್ತಿನಿಂದ ಸಾಲಾಗಿ ನಿಂತರು.

ಪ್ರಸಾದ ವಿನಿಯೋಗ ಆರಂಭವಾದೊಡನೆ ಓರ್ವ ಪುಟ್ಟ ಬಾಲಕ ಗುರುಗಳಿಂದ ಪ್ರಸಾದವನ್ನು ಪಡೆದು ಓಡಿ ಹೋದನು. ಕೆಲವೇ ಕ್ಷಣಗಳಲ್ಲಿ ವಾಪಸಾದ ಆ ಹುಡುಗ ಮತ್ತೆ ಪ್ರಸಾದಕ್ಕಾಗಿ ಕೈ ಚಾಚಿದನು ಗುರುಗಳು ನಸುನಗುತ್ತಾ ಆತನ ಒಡ್ಡಿದ ಕೈಗೆ ಪ್ರಸಾದದ ದೊನ್ನೆಯನ್ನು ಇರಿಸಿದರು. ಅದನ್ನು ಕೊಂಡೊಯ್ದ ಬಾಲಕ ಮತ್ತೆ ಹಾಜರಾಗಿ ಪ್ರಸಾದಕ್ಕಾಗಿ ಕೈಯೊಡ್ಡಿದನು. ಗುರುಗಳು ಮತ್ತೆ ಆತನ ಕೈಗೆ ದೊನ್ನೆಯನ್ನು ಇರಿಸಿದರು. ಇದು ಹೀಗೆ ಹಲವಾರು ಬಾರಿ ಪುನರಾವರ್ತನೆಯಾಯಿತು.

ಅಲ್ಲೇ ಗುರುಗಳ ಹಿಂದೆ ನಿಂತು ಈ ದೃಶ್ಯವನ್ನು ವೀಕ್ಷಿಸಿದ ಶಿಷ್ಯನಿಗೆ ಆ ಹುಡುಗನ ಕ್ರಿಯೆ ಒಪ್ಪಿಗೆಯಾಗಲಿಲ್ಲ. ಅಂತೆಯೇ ಆತನು ಗುರುಗಳನ್ನು ಕುರಿತು “ಗುರುಗಳೇ, ಇಷ್ಟೊಂದು ಜನರು ಕಾದಿರುವಾಗ್ಯೂ ಕೂಡ ಆ ಹುಡುಗ ಪದೇ ಪದೇ ಪ್ರಸಾದಕ್ಕೆ ಕೈಯೊಡ್ಡಿದಾಗ ನೀವು ಆತನಿಗೆ ಕೊಟ್ಟು ಕಳುಹಿಸುತ್ತಿದ್ದೀರಿ. ಇದು ನಿಮಗೆ ಸರಿದೋರುತ್ತದೆಯೇ?? ಎಂದು ಪ್ರಶ್ನಿಸಿದನು.

ಶಿಷ್ಯನ ಈ ಮಾತಿಗೆ ಮೆಲ್ಲನೆ ಮುಗುಳ್ನಕ್ಕ ಗುರುಗಳು
“ನೀನು ಆ ಬಾಲಕ ಪದೇ ಪದೇ ಪ್ರಸಾದವನ್ನು ಕೊಂಡೊಯ್ಯುತ್ತಿರುವುದನ್ನು ಮಾತ್ರ ನೋಡುತ್ತಿರುವೆ. ಆದರೆ ಹಾಗೆ ಕೊಂಡೊಯ್ದ ಪ್ರಸಾದವನ್ನು ಆತ ಹಿಂದೆ ಕುಳಿತಿರುವ ಉಳಿದ ಜನರಿಗೆ ಕೊಟ್ಟು ಬರುತ್ತಿದ್ದಾನೆ. ಅದನ್ನು ಗಮನಿಸಿರುವಿಯಾ? ಎಂದು ಮರು ಪ್ರಶ್ನಿಸಿದರು. ಅದಕ್ಕೆ ಶಿಷ್ಯ ಇಲ್ಲ ಎಂದು ಗೋಣು ಅಲ್ಲಾಡಿಸಿದನು.

ಆಗ ಗುರುಗಳು ಆ ಬಾಲಕ ಎಲ್ಲಿಯವರೆಗೆ ಬೇರೆಯವರಿಗೆ ಕೊಡುತ್ತ ಹೋಗುತ್ತಾನೋ ಅಲ್ಲಿಯವರಿಗೆ ನಾನು ಆತನಿಗೆ ಕೊಡುತ್ತೇನೆ. ಬೇರೆಯವರಿಗೆ ಕೊಡುವುದರಲ್ಲಿ ಇರುವ ಸಂತೋಷದ ಅರಿವು ಆ ಪುಟ್ಟ ಬಾಲಕನಿಗೆ ಇದೆ. ಎಲ್ಲಿಯವರೆಗೂ ನೀನು ಕೊಡುತ್ತಿರುವೆಯೋ ಅಲ್ಲಿಯವರೆಗೆ ನೀನು ಪಡೆಯುವೆ ಎಂಬ ಸರಳ ಸತ್ಯ ಅರಿತಿರುವ ಆ ಮಗು ಅತ್ಯಂತ ಆಸಕ್ತಿಯಿಂದ ಶ್ರದ್ಧೆಯಿಂದ ಈ ಕಾರ್ಯವನ್ನು ನಿರ್ವಹಿಸುತ್ತಿದ್ದಾನೆ. ಅಂತೆಯೇ ಆತ ನನಗೆ ಪ್ರಿಯವಾಗಿದ್ದಾನೆ ಎಂದು ಹೇಳಿದರು.

ನಿಜ ಅಲ್ಲವೇ ಸ್ನೇಹಿತರೆ… ಬೇರೆಯವರಿಗೆ ಕೊಟ್ಟು ನಾವು ತಿಂದಾಗ ಅದರ ರುಚಿ ದುಪಟ್ಟಾದ ಭಾವ ಮೂಡುತ್ತದೆ ಅಂತೆಯೇ ನಮ್ಮ ಸಂತೋಷವನ್ನು ನಾವು ಎಲ್ಲರೊಂದಿಗೆ ಹಂಚಿಕೊಳ್ಳುತ್ತೇವೆ… ದುಃಖವನ್ನು ಕೂಡ. ಹಂಚಿಕೊಳ್ಳುವುದರಿಂದ ಸಂತೋಷ ಹೆಚ್ಚಾಗುತ್ತದೆ ಮತ್ತು ದುಃಖ ಕಡಿಮೆಯಾಗುತ್ತದೆ. ಈ ಸತ್ಯವನ್ನು ಅರಿತು ನಮ್ಮಿಂದಾದಷ್ಟು ಸಹಾಯವನ್ನು ಮಾಡುವ ಮೂಲಕ ನಮ್ಮ ಸಾಮಾಜಿಕ ಜವಾಬ್ದಾರಿಯನ್ನು ನಿರ್ವಹಿಸೋಣ. ಸಮಾಜದ ಋಣವನ್ನು ತಿಳಿಸೋಣ ಎಂಬ ಸಂಕಲ್ಪದೊಂದಿಗೆ

ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್.

Leave a Reply

Your email address will not be published. Required fields are marked *

error: Content is protected !!