
ಕಳ್ಳತನ ಮಾಡಿದ ಅಪರಾಧಕ್ಕಾಗಿ ಅಪರಾಧಿಗೆ ಜೈಲು ಶಿಕ್ಷೆ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 26- ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಗಂಗಾವತಿ ತಾಲೂಕಿನ ಉಪ್ಪನಮಳ್ಳಿ ಕ್ಯಾಂಪ್ನ ಪ್ರತಾಪ ತಂದೆ ಹುಲಗಪ್ಪ ಮುಚಿಗೇರ ಎಂಬ ಅಪರಾಧಿಗೆ ಕೊಪ್ಪಳ ಮುಖ್ಯ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಲಯದ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರು ಮತ್ತು ಮುಖ್ಯ ನ್ಯಾಯಿಕ ದಂಡಾಧಿಕಾರಿಗಳಾದ ಮಹಾಂತೇಶ ದುರ್ಗದ ಅವರು 02 ವರ್ಷಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ.
ದಿನಾಂಕ: 18-10-2023 ರಂದು ಬೆಳಿಗ್ಗೆ 11-15 ಗಂಟೆ ಸುಮಾರಿಗೆ ಕೊಪ್ಪಳ ನಗರದ ಸಿದ್ದೇಶ್ವರ ಓಣಿಯಲ್ಲಿ ವಾಸ ಮಾಡುತ್ತಿರುವ ಫರ್ಯಾದಿದಾರ ಶರಣಯ್ಯ ತಂದೆ ಕಲ್ಲಯ್ಯ ಶಶಿಮಠ ಇವರ ಮನೆಯೊಳಗೆ ಪ್ರವೇಶ ಮಾಡಿ ಅಲಮಾರವನ್ನು ಕಬ್ಬಿಣದ ರಾಡಿನಿಂದ ತೆರೆದು ಅಲಮಾರದಲ್ಲಿದ್ದ 24 ಗ್ರಾಂ ತೂಕದ ಬಂಗಾರದ ಆಭರಣಗಳನ್ನು ಕಳುವು ಮಾಡಿರುವ ಬಗ್ಗೆ ತನಿಖೆಯಲ್ಲಿ ಆರೋಪಿತನ ವಿರುದ್ದ ಕಳ್ಳತನ ಅಪರಾಧ ಸಾಭೀತಾಗಿದ್ದರಿಂದ ಕೊಪ್ಪಳ ನಗರ ಪೋಲಿಸ್ ಠಾಣೆಯ ಪಿಎಸ್ಐ ಶರಣಪ್ಪ ಕಟ್ಟಿಮನಿ ರವರು ಆರೋಪ ಪಟ್ಟಿಯನ್ನು ಸಲ್ಲಿಸಿದ್ದರು.
ಪ್ರಕರಣದಲ್ಲಿ ಗಂಗಾವತಿ ತಾಲೂಕಿನ ಉಪ್ಪನಮಳ್ಳಿ ಕ್ಯಾಂಪ್ನ ಅಪರಾಧಿ ಪ್ರತಾಪ ತಂದೆ ಹುಲಗಪ್ಪ ಮುಚಿಗೇರ ಇತನ ಮೇಲಿರುವ ಕಳ್ಳತನದ ಆರೋಪಗಳು ಸಾಭೀತಾಗಿವೆ ಜೂನ್ 24 ರಂದು ಗೌರವಾನ್ವಿತ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರು ಮತ್ತು ಮುಖ್ಯ ನ್ಯಾಯಿಕ ದಂಡಾಧಿಕಾರಿಗಳು ಅಪರಾಧಿಗೆ 02 ವರ್ಷ ಜೈಲು ಶಿಕ್ಷೆ ವಿಧಿಸಿದ್ದಾರೆ. ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕರಾದ ವಸಂತ ಅವರು ಪ್ರಕರಣ ನಡೆಸಿ ವಾದ ಮಂಡಿಸಿದ್ದರು ಎಂದು ಪ್ರಕಟಣೆ ತಿಳಿಸಿದೆ.