
ಕಾನೂನು ಪದವೀಧರರಿಗೆ ತರಬೇತಿ ಭತ್ಯೆ : ಅರ್ಜಿ ಆಹ್ವಾನ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 27- ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ 2024-25ನೇ ಸಾಲಿನಲ್ಲಿ ಜಿಲ್ಲೆಯ ಅಲ್ಪಸಂಖ್ಯಾತರ ಸಮುದಾಯದ ಕಾನೂನು ಪದವಿ ಪಡೆದಿರುವ ಅಭ್ಯರ್ಥಿಗಳಿಗೆ 4 ವರ್ಷಗಳ ಕಾನೂನು ತರಬೇತಿ ಭತ್ಯೆ ನೀಡಲಾಗುತ್ತಿದ್ದು, ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ತರಬೇತಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಅಲ್ಪಸಂಖ್ಯಾತರ ಸಮುದಾಯಗಳಾದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ದ, ಸಿಖ್ ಮತ್ತು ಪಾರ್ಸಿಗೆ ಸೇರಿದವರಾಗಿದ್ದು, ರಾಜ್ಯದ ನಿವಾಸಿಯಾಗಿರಬೇಕು.
ಕುಟುಂಬದ ವಾರ್ಷಿಕ ಆದಾಯ ರೂ.3.50 ಲಕ್ಷ ಮೀರಿರಬಾರದು. ಅಭ್ಯರ್ಥಿಯು ಬಾರ್ ಕೌನ್ಸಿಲ್‌ನಲ್ಲಿ ಹೆಸರನ್ನು ನೋಂದಾಯಿಸಿರಬೇಕು. ಅರ್ಜಿ ಸ್ವೀಕರಿಸಲು ನಿಗದಿ ಪಡಿಸಿದ ಕೊನೆಯ ದಿನಾಂಕಕ್ಕೆ ಅಭ್ಯರ್ಥಿಯ ವಯಸ್ಸು 30 ವರ್ಷವಾಗಿರಬೇಕು ಮತ್ತು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕಕ್ಕೆ ಕಾನೂನು ಪದವಿ ಪೂರ್ಣಗೊಳಿಸಿ 2 ವರ್ಷವಾಗಿರಬೇಕು. ಅಭ್ಯರ್ಥಿಗಳು ಸಲ್ಲಿಸುವ ಮಾಹೆಯಾನ ದಿನಚರಿಯನ್ನು ಪರಿಶೀಲಿಸಿ ತರಬೇತಿ ಭತ್ಯೆಯನ್ನು ಮಂಜೂರು ಮಾಡಲಾಗುವುದು. ಅಭ್ಯರ್ಥಿಯು ತರಬೇತಿಯನ್ನು ಮಧ್ಯದಲ್ಲಿ ಬಿಡುವಂತಿಲ್ಲ. ಈ ಬಗ್ಗೆ ಒಂದು ಮುಚ್ಚಳಿಕೆ ಪತ್ರ ನೀಡಬೇಕು. ಒಂದು ವೇಳೆ ಸರ್ಕಾರಿ ಉದ್ಯೋಗ ದೊರಕಿದಲ್ಲಿ ಅಥವಾ ನ್ಯಾಯಾಧೀಶರಾಗಿ ನೇಮಕಾತಿ ಹೊಂದಿದಲ್ಲಿ ಜಿಲ್ಲಾ ಸಮಿತಿಯ ಗಮನಕ್ಕೆ ತಂದು ತರಬೇತಿ ಬಿಡಬಹುದು ಹಾಗೂ ವಿಶೇಷ ಸಂದರ್ಭದಲ್ಲಿ ಬಿಡಬೇಕಾದಲ್ಲಿ ಸರ್ಕಾರದ ಅನುಮತಿ ಪಡೆಯಬೇಕು.
ಈ ತರಬೇತಿಗೆ ಜಿಲ್ಲೆಯಲ್ಲಿ 03 ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಆಸಕ್ತ ಅರ್ಹ ಅಭ್ಯರ್ಥಿಗಳು ಜಿಲ್ಲಾ ಅಧಿಕಾರಿಗಳು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಮೌಲಾನಾ ಆಜಾದ್ ಭವನ, ಹೊಸಪೇಟೆ ರಸ್ತೆ, ಕೊಪ್ಪಳ ಇಲ್ಲಿ ನಿಗದಿತ ಅರ್ಜಿ ನಮೂನೆಗಳನ್ನು ಉಚಿತವಾಗಿ ಪಡೆದು, ಭರ್ತಿ ಮಾಡಿ ಅಗತ್ಯ ದಾಖಲಾತಿಗಳೊಂದಿಗೆ ಜುಲೈ 25ರ ಸಂಜೆ 5 ಗಂಟೆಯೊಳಗಾಗಿ ಇದೇ ಕಚೇರಿಗೆ ಸಲ್ಲಿಸಬೇಕು ಎಂದು ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.