
ಕುಷ್ಟಗಿ : ಮಲೇರಿಯಾ ವಿರೋಧಿ ಮಾಸಾಚರಣೆ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 16- ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳ ಕಛೇರಿ, ಕೊಪ್ಪಳ, ತಾಲೂಕಾ ಆರೋಗ್ಯಾಧಿಕಾರಿಗಳ ಕಛೇರಿ ಹಾಗೂ ಎಸ್.ವಿ.ಎಂ ಕಾಲೇಜ್, ಕುಷ್ಟಗಿ ಇವರ ಸಂಯುಕ್ತಾಶ್ರಯದಲ್ಲಿ ಜೂನ್ 15 ರಂದು ಮಲೇರಿಯಾ ವಿರೋಧಿ ಮಾಸಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ವ್ಹಿ.ಪಿ ಅವರು ಮಾತನಾಡಿ, ಪ್ರತಿ ವರ್ಷ ಜೂನ್ ತಿಂಗಳಲ್ಲಿ “ಮಲೇರಿಯಾ ವಿರೋಧಿ ಮಾಸಾಚರಣೆ” ಕಾರ್ಯಕ್ರಮ ಆಚರಿಸಲಾಗುತ್ತದೆ. ಈ ಕಾರ್ಯಕ್ರಮದ ಉದ್ದೇಶ ಮಳೆಗಾಲ ಪ್ರಾರಂಭವಾದ ಕಾರಣ ನೀರಿನಲ್ಲಿ ಸೊಳ್ಳೆಗಳು ಮೊಟ್ಟೆಗಳನ್ನಿಟ್ಟು ಸಂತಾನಾಭಿವೃದ್ಧಿ ಮಾಡುತ್ತವೆ. ಅನಾಫಿಲಿಸ್ ಎಂಬ ಸೋಂಕಿತ ಹೆಣ್ಣು ಸೊಳ್ಳೆಗಳಿಂದ ಮಲೇರಿಯಾ ಜ್ವರ ಹರಡುತ್ತದೆ.
ಈ ರೋಗದ ಲಕ್ಷಣಗಳಾದ ತಲೆನೋವು, ವಾಂತಿ, ವಿಪರೀತ ಚಳಿಜ್ವರ, ಮೈನಡುಕ ಲಕ್ಷಣಗಳಿದ್ದರೆ ತಮ್ಮ ಸಮೀಪದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ, ರಕ್ತ ಪರೀಕ್ಷೆ ಮಾಡಿಸಿ, ಖಚಿತ ಪಟ್ಟರೆ ಚಿಕಿತ್ಸೆ ಪಡೆದುಕೊಳ್ಳಬೇಕು. ಯಾವುದೇ ಕಾರಣಕ್ಕೂ ಜ್ವರದ ಬಗ್ಗೆ ನಿರ್ಲಕ್ಷತನ ಮಾಡಬಾರದು. ಆದ್ದರಿಂದ ಕಾಲೇಜಿನ ವಿದ್ಯಾರ್ಥಿಗಳಾದ ತಾವು ತಮ್ಮ ತಮ್ಮ ಮನೆಗಳಲ್ಲಿ ನೀರು ಶೇಖರಿಸುವ ಡ್ರಮ್, ಬ್ಯಾರಲ್, ಸಿಮೆಂಟ್ ತೊಟ್ಟಿ, ಕಲ್ಲಿನದೋಣಿ ಇನ್ನಿತರ ನೀರು ಸಂಗ್ರಹ ಪರಿಕರಗಳನ್ನು ವಾರದಲ್ಲಿ 2 ಬಾರಿ ಸ್ವಚ್ಚವಾಗಿ ತೊಳೆದು. ಒಣಗಿಸಿ ಪುನಃ ನೀರು ತುಂಬಬೇಕು. ಸಲಕರಣೆಗಳಿಗೆ ಭದ್ರವಾಗಿ ಮುಚ್ಚಳದಿಂದ ಮುಚ್ಚಬೇಕು, ಸಾಯಂಕಾಲ ವೇಳೆ ಬೇವಿನ ಸೊಪ್ಪಿನ ಹೊಗೆ ಹಾಕಬೇಕು. ಸೊಳ್ಳೆ ಕಡಿತದಿಂದ ದೂರವಿರಲು ವೈಯಕ್ತಿಕ ರಕ್ಷಣೆ ಮಾಡಿಕೊಳ್ಳಬೇಕು. ಮಲೇರಿಯಾ ನಿಯಂತ್ರಣ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಮನೆಯ ಸುತ್ತ ಮುತ್ತಲೂ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕು. ಮನೆಯಲ್ಲಿ ನೀರು ಶೇಖರಣಾ ತೊಟ್ಟಿಗಳಲ್ಲಿ ಸೊಳ್ಳೆಗಳು ಮೊಟ್ಟೆಗಳನ್ನಿಟ್ಟು ಸಂತಾನಭಿವೃದ್ಧಿ ಮಾಡುತ್ತವೆ. ಇದನ್ನು ತಡೆಯಲು ಲಾರ್ವಾ ನಾಶಕ್ಕಾಗಿ ಸ್ವಚ್ಚಗೊಳಿಸುತ್ತಿರಬೇಕು. ಆರೋಗ್ಯ ಇಲಾಖೆ ಸಿಬ್ಬಂದಿಗಳು ಮತ್ತು ಆಶಾ ಕಾರ್ಯಕರ್ತೆಯರು ಭೇಟಿ ನೀಡಿದಾಗ ಸಹಕರಿಸಿ, ರಕ್ತಲೇಪನ ನೀಡಿ ಮಲೇರಿಯಾ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಕೈಜೋಡಿಸುವಂತೆ ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಶರಣಮ್ಮ ಪಾಟೀಲ್ ಅವರು ಮಾತನಾಡಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಾಂಕ್ರ್ರಾಮಿಕ ರೋಗಗಳ ನಿಯಂತ್ರಣಕ್ಕಾಗಿ ಹಮ್ಮಿಕೊಳ್ಳುವ ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಬಹಳ ಉಪಯುಕ್ತವಾಗಿವೆ. ವಿದ್ಯಾರ್ಥಿಗಳು ಇಂತಹ ಕಾರ್ಯಕ್ರಮಗಳ ಸದುಪಯೋಗ ಪಡೆದುಕೊಂಡು ತಮ್ಮ ತಮ್ಮ ಗ್ರಾಮಗಳಲ್ಲಿ ಹಾಗೂ ಸುತ್ತ ಮುತ್ತಲಿನ ಸಾರ್ವಜನಿಕರಿಗೆ ಅರಿವು ಮೂಡಿಸಿ “2025ರ ವೇಳೆಗೆ ಭಾರತವನ್ನು ಮಲೇರಿಯಾ ಮುಕ್ತ ದೇಶವನ್ನಾಗಿಸಲು” ಶ್ರಮಿಸುವಂತೆ ಕರೆ ನೀಡಿದರು. ಕಾರ್ಯಕ್ರಮದಲ್ಲಿ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಸೋಮಶೇಖರ ಮೇಟಿ, ಚಿದಂಬರA ಜೋಶಿ, ಮಲೇರಿಯಾ ತಾಂತ್ರಿಕ ಮೇಲ್ವಿಚಾರಕರಾದ ಪ್ರಕಾಶ ಗುತ್ತೆದಾರ, ಸಹ ಉಪನ್ಯಾಸಕರು, ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.