
ಸಾರ್ವಜನಿಕರಿಗೆ ಮ್ಯೂಟೇಶನ್ ಹೊರೆ,
ಅನಧಿಕೃತ ಮನೆಗಳಿಗೆ ಖಾತಾ ಉತಾರ ನೀಡದಂತೆ ಅಧ್ಯಕ್ಷರ ತಾಕೀತು
ಕರುನಾಡ ಬೆಳಗು ಸುದ್ದಿ
ಕುಷ್ಟಗಿ, 01- ಪಟ್ಟಣದ ಪುರಸಭೆಯ ಕಾರ್ಯಾಲಯದ ಸಭಾಂಗಣದಲ್ಲಿ ಪುರಸಭೆಯ ನೂತನ ಅಧ್ಯಕ್ಷ ಮಹಾಂತೇಶ ಕಲಬಾವಿ ಅವರ ಅಧ್ಯಕ್ಷತೆಯಲ್ಲಿ ಆಡಳಿತ ಮಂಡಳಿಯ ಸಾಮಾನ್ಯ ಸಭೆ ಜರುಗಿತು.
ಸದ್ದು ಗದ್ದಲದ ಸಭೆಯಲ್ಲಿ ಕೆಲವು ಮಹತ್ವದ ನಿರ್ಣಯಗಳನ್ನುಕೈಗೊಳ್ಳಲಾಯಿತು. ಪ್ರಮುಖವಾಗಿ ಪುರಸಭೆಯ ಆದಾಯ ದೃಷ್ಟಿಕೋನದಿಂದ ಮುಟೇಷನ್ ಶುಲ್ಕವನ್ನು 1500 ರೂಪಾಯಿಗಳಿಂದ 2500 ರೂಪಾಯಿಗೆ ಹೆಚ್ಚಿಗೆ ಮಾಡಲಾಯಿತು. ಇದರೊಂದಿಗೆ ಇನ್ನು ಮುಂದೆ ಪುರಸಭೆಯ ವ್ಯಾಪ್ತಿಯ ಆಸ್ತಿ ಮ್ಯೂಟೇನ್ ಗಳಿಗೆ ಹೆಚ್ಚುವರಿ ಶುಲ್ಕ ನಿಗಧಿಗೊಳಿಸಲಾಯಿತು. ಇದಲ್ಲದೇ ಪಟ್ಟಣದ ಅನೇಕ ಬಡಾವಣೆಯಲ್ಲಿರುವ ಉದ್ಯಾನವನ ಹಾಗೂ ನಾಗರೀಕ ಸೌಲಭ್ಯದ ಸಲುವಾಗಿ ಮಿಸಲಿಟ್ಟ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಿಕೊಂಡಿರುವ ಕಟ್ಟಡಗಳಿಗೆ ಯಾವುದೆ ಉತಾರವನ್ನು ಕೊಡಬಾರದು ಎಂದು ಸದಸ್ಯರು ಒತ್ತಾಯಿಸಿದ ಪ್ರಯುಕ್ತ ಅಧ್ಯಕ್ಷ ಮಹಾಂತೇಶ ಅವರು ಅಂಥಹ ಮನೆ ಹಾಗೂ ಕಟ್ಟಡಗಳಿಗೆ ಖತಾ ಉತಾರ ನೀಡದಂತೆ ಸೂಚಿಸಿದರು.
ಸಮರ್ಪಕ ಮಾರುಕಟ್ಟೆ : ಕೋರ್ಟ್ ಕಂಪೌಡ್ಗೆ ಹೊಂದಿಕೊಂಡು ಬೀದಿಬದಿ ವ್ಯಾಪಾರಸ್ಥರು ಅಂಗಡಿ ಹಾಕಿ ವ್ಯಾಪಾರ ಮಾಡುತ್ತಿದ್ದು, ಕೋರ್ಟನಿಂದ ಅಂಗಡಿಗಳನ್ನು ತೆರವುಗೊಳಿಸುವಂತೆ ಪುರಸಭೆಗೆ ನೋಟಿಸನ್ನು ಕಳಿಸಿಕೊಟ್ಟಿದ್ದು ತಕ್ಷಣವೆ ಮಾರುಕಟ್ಟೆಯಲ್ಲಿ ಇರುವ ಖಾಲಿ ಜಾಗದಲ್ಲಿ ಸಮರ್ಪಕ ಕಟ್ಟೆಗಳನ್ನು ನಿರ್ಮಾಣ ಮಾಡುವ ಮೂಲಕ ವ್ಯಾಪಾರಸ್ಥರಿಗೆ ಅನೂಕೂಲ ಮಾಡಿಕೊಡಲು ತೀರ್ಮಾನಿಸಲಾಯಿತು. ಅದೇ ರೀತಿ ರಸ್ತೆ ಬದಿಯಲ್ಲಿ ಚಿಕನ್ ಸೆಂಟರಗಳು ಸಹ ನಡೆಯುತ್ತಿದ್ದು ಅವರಿಗೂ ಒಂದು ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟು ನಂತರ ಮಾರುಕಟ್ಟೆಯಲ್ಲಿ ಕಟ್ಟೆಗಳನ್ನು ನಿರ್ಮಾಣ ಮಾಡಬೇಕು ಎಂದು ತಿಳಿಸಿದರು. ಎಲ್ಲಾ ವ್ಯಾಪಾರಸ್ಥರಿಗೂ ಅನೂಕೂಲವಾಗುವಂತೆ ಯೋಜನೆ ಹಾಕಿಕೊಂಡು ಎಂಟರಪ್ರೈಸಸ್ 50 ಲಕ್ಷ ರೂ ಅನುದಾನದಲ್ಲಿ ಮಾರುಕಟ್ಟೆಯ ನಿರ್ಮಾಣ ಮಾಡಲು ಮುಂದಾಗುತ್ತದೆ ಎಂದು ಅಧ್ಯಕ್ಷರು ತಿಳಿಸಿದರು.
ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಯಿತು. ಸಾರ್ವಜನಿಕರಿಗೆ ತೊಂದರೆಯಾಗದಂತೆ ಸೇವೆ ಒದಗಿಸಲು ಹೆಚ್ಚುವರಿ ಸಿಬ್ಬಂದಿಗಳನ್ನು ನೇಮಕಾತಿಯನ್ನು ಮಾಡಿಕೊಳ್ಳುವದು, ಪಟ್ಟಣದ ಸ್ವಚ್ಚತೆ ಮಾಡುವ ಪೌರಕಾರ್ಮಿಕರಿಗೆ ಬೇಕಾಗುವ ಸಲಕರಣೆಗಳು, ಪುರಸಭೆಯ ವಾಹನಗಳನ್ನು ದುರಸ್ಥಿಗೊಳಿಸುವದು, ಸೋಲಾರ ಲೈಟ್, ಆರ್.ಓ ಪ್ಲಾಂಟ್ ದುರಸ್ತಿ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒದಗಿಸಲು ಕ್ರಮಕ್ಕೆ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಯವರು ಸೂಚಿಸಿದರು.
ಅನಧಿಕೃತ ಶೆಡ್ ತೆರವಿಗೆ ಕ್ರಮ: ಇಲ್ಲಿನ ಸಂದೀಪ ನಗರದಲ್ಲಿ 2018ರಲ್ಲಿ ಕೇವಲ 79 ಮನೆಗಳು ಇದ್ದವು ಆದರೆ ಈಗ 204 ಮನೆಗಳು ಶೆಡ್ಡಗಳು ನಿರ್ಮಾಣವಾಗಿದ್ದು ಅನಧಿಕೃತವಾದ ಶೆಡ್ಡಗಳನ್ನು ಕಿತ್ತಿಸಬೇಕು ಎಂದು ಸಭೆಯಲ್ಲಿ ತಿರ್ಮಾನಿಸಲಾಯಿತು.ಮದಲಗಟ್ಟಿ ಕೆರೆಯ ಹತ್ತಿರ ಇರುವ ಸಾರ್ವಜನಿಕ ಉದ್ಯಾನವನವನ್ನು ಜಿಲ್ಲಾಧಿಕಾರಿಗಳು ಒಪ್ಪಿಗೆಯನ್ನು ನೀಡಿ ನಿರ್ವಹಣೆ ಜವಾಬ್ದಾರಿಯನ್ನು ಕೊಟ್ಟರೆ ಮಾತ್ರ ನಿರ್ವಹಣೆ ಮಾಡಬೇಕು ಎಂದು ತೀರ್ಮಾನಿಸಲಾಯಿತು.
ಮನವಿ ಸಲ್ಲಿಕೆ: ಪೌರಕಾರ್ಮಿಕರು ನಿವೇಶನವನ್ನು ಒದಗಿಸಿಕೊಡುವಂತೆ ಒತ್ತಾಯಿಸಿ ಮನವಿಯನ್ನು ಸಲ್ಲಿಸಿದರು. ಹಾಗೂ ಮೂರನೇಯ ವಾರ್ಡಿನ ರಹವಾಸಿ ಸಂಘದ ವತಿಯಿಂದ ರಾಜಕಾಲುವೆ, ಚರಂಡಿ ನಿರ್ಮಾಣ, ರಸ್ತೆ ನಿರ್ಮಾಣ ಸೇರಿದಂತೆ ಅನೇಕ ಬೇಡಿಕೆಗಳಿಗಾಗಿ ಒತ್ತಾಯಿಸಿ ಮನವಿಯನ್ನು ಸಲ್ಲಿಸಿದರು.
ಈ ಸಂದರ್ಬದಲ್ಲಿ ಪುರಸಭೆಯ ಉಪಾಧ್ಯಕ್ಷರಾದ ನಾಹೀನ್ ಬೇಗಂ ಮುಲ್ಲಾ. ಮುಖ್ಯಾಧಿಕಾರಿ ಧರಣೆಂದ್ರಕುಮಾರ ಸೇರಿದಂತೆ ಪುರಸಭೆಯ ಸದಸ್ಯರು ಹಾಗೂ ಸಿಬ್ಬಂದಿಗಳು ಇದ್ದರು.