2c136fae-be38-4577-97e1-318669006cc9

ಗೃಹ ಜ್ಯೋತಿ ಯೋಜನೆ : ಉಚಿತ ವಿದ್ಯುತ್ ಸೌಲಭ್ಯಕ್ಕೆ ನೋಂದಾಯಿಸಿ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 4- ಗೃಹ ಜ್ಯೋತಿ ಯೋಜನೆಯಡಿ ನೋಂದಣಿಯಾಗದೆ ಬಾಕಿ ಉಳಿದಿರುವ ಅರ್ಹ ಗ್ರಾಹಕರು ಉಚಿತ ವಿದ್ಯುತ್ ಸೌಲಭ್ಯ ಪಡೆದುಕೊಳ್ಳುವಂತೆ ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಕೊಪ್ಪಳ ಕಾರ್ಯ ಮತ್ತು ಪಾಲನಾ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.

ಕರ್ನಾಟಕ ಸರ್ಕಾರವು ಗೃಹ ಜ್ಯೋತಿ ಯೋಜನೆಯನ್ನು 2023ರ ಜುಲೈ 01 ರಿಂದ ಜಾರಿಮಾಡಲಾಗಿದ್ದು, ಈವರೆಗೆ ಸುಮಾರು ಶೇಕಡಾ 96% ಗ್ರಾಹಕರು ಯೋಜನೆಯ ಫಲವನ್ನು ಸದ್ಬಳಕೆ ಮಾಡಿಕೊಂಡಿರುತ್ತಾರೆ. ಇನ್ನೂ ಕೆಲ ಗ್ರಾಹಕರು ಯೋಜನೆಗೆ ನೋಂದಾಯಿಸದೆ ಬಾಕಿ ಉಳಿದಿದ್ದು, ಗ್ರಾಹಕರಿಗೆ ಕೆಲವು ಮಾನದಂಡನೆಗಳೊಂದಿಗೆ ಉಚಿತ ವಿದ್ಯುತ್ ಯೋಜನೆಯ ಫಲವನ್ನು ಪಡೆಯಲು ಸೇವಾಸಿಂಧುವಿನ ಮೂಲಕ ನೋಂದಾಯಿಸಲು ಅವಕಾಶ ಕಲ್ಪಿಸಲಾಗಿದೆ.

ರಾಜ್ಯದಲ್ಲಿನ ಪ್ರತಿ ಮನೆಗೆ ತಿಂಗಳಿಗೆ ಗರಿಷ್ಠ 200 ಯುನಿಟ್‌ಗಳವರೆಗೆ ಬಳಕೆಯ ಮಿತಿಯಲ್ಲಿ ಪ್ರತಿ ಗ್ರಾಹಕರ ಮಾಸಿಕ ಸರಾಸರಿ ಬಳಕೆಯ (ಆರ್ಥಿಕ ವರ್ಷ 2022-23 ಬಳಕೆಯ ಆಧಾರದನ್ವಯ) ಯೂನಿಟ್‌ಗಳ ಮೇಲೆ + ಶೇ.10ರಷ್ಟು ಹೆಚ್ಚಿನ ಬಳಕೆಯ ಮಿತಿಯನ್ನು ಅನುಮತಿಸಿ ಗೃಹಬಳಕೆಯ ಗ್ರಾಹಕರಿಗೆ ಉಚಿತ ವಿದ್ಯುತ್ ನೀಡಲು ಅನುಮೋದಿಸಿದೆ. ಭಾಗ್ಯ ಜ್ಯೋತಿ/ ಕುಟಿರ ಜ್ಯೋತಿ ಗ್ರಾಹಕರಿಗೆ ರಾಜ್ಯದ ಸರಾಸರಿ 53 ಯುನಿಟ್ ಬಳಕೆಯ ಮೇಲೆ + ಶೇ10 ರಷ್ಟು ಹೆಚ್ಚಿನ ಮಿತಿಯನ್ನು ಅನುಮತಿಸಿ ಉಚಿತ ವಿದ್ಯುತ್ ನೀಡಲು ಅನುಮೋದಿಸಿದೆ. ಅಮೃತಜ್ಯೋತಿ ಯೋಜನಡಿಯಲ್ಲಿನ ಪರಿಶಿಷ್ಟ ಜಾತಿ ಮತ್ತು ಪಂಗಡ ಗ್ರಾಹಕರಿಗೆ 75 ಯುನಿಟ್ ಬಳಕೆಯ ಮೇಲೆ + ಶೇ10% ರಷ್ಟು ಹೆಚ್ಚಿನ ಮಿತಿಯನ್ನು ಅನುಮತಿಸಿ ವಿದ್ಯುತ್ ಬಿಲ್ಲಿನ ಮೊತ್ತವನ್ನು ಉಚಿತವಾಗಿ ನೀಡಲು ಅನುಮೋದಿಸಿದೆ.

ಹೊಸ ಸಂಪರ್ಕ ಗ್ರಾಹಕರಿಗೆ ಬಳಕೆ ಇತಿಹಾಸ ಇಲ್ಲದಿರುವುದರಿಂದ ರಾಜ್ಯದ ಗೃಹಬಳಕೆದಾರರ ಸರಾಸರಿ ಬಳಕೆಯ ಮಾಸಿಕ 53 ಯುನಿಟ್‌ಗಳು ಉಚಿತ ವಿದ್ಯುತ್ ನೀಡಲು ಅನುಮೋದಿಸಿದೆ.

ಬಳಕೆ ಇತಿಹಾಸ ಇಲ್ಲದಿರುವ ಬಳಕೆದಾರರಿಗೆ ಸರಾಸರಿ ಬಳಕೆಯ ಮಾಸಿಕ 53 ಯುನಿಟ್‌ಗಳ ಉಚಿತ ವಿದ್ಯುತ್ ನೀಡಲು ಅನುಮೋದಿಸಿದೆ. ಗೃಹ ವಿದ್ಯುತ್ ಬಳಕೆದಾರರ ಹೆಸರಿನಲ್ಲಿ ಒಂದಕ್ಕಿಂತ ಹೆಚ್ಚು ಸ್ಥಾವರಗಳಿದ್ದಲ್ಲಿ ಒಂದು ಸ್ಥಾವರಕ್ಕೆ ಮಾತ್ರ ಈ ಯೋಜನೆಯಡಿಯ ಸೌಲಭ್ಯ ಪಡೆಯಲು ಅರ್ಹರಾಗಿರುತ್ತಾರೆ. ಯೋಜನೆಯ ಲಾಭ ಪಡೆಯಲು ಅರ್ಹ ಗ್ರಾಹಕರು ವೆಬ್‌ಸೈಟ್ https://sevasindhugs.karnataka.gov.in/ ನಲ್ಲಿ ನೋಂದಾಯಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!