111

ಚುನಾವಣಾ ಕಾರ್ಯಗಳಲ್ಲಿ ಮಕ್ಕಳ ಬಳಕೆ ನಿಷೇಧ : ಡಿಸಿ ನಲಿನ್ ಅತುಲ್

ಕರುನಾಡ ಬೆಳಗು ಸುದ್ದಿ

ಕೊಪ್ಪಳ,27- ಯಾವುದೇ ಚುನಾವಣಾ ಕಾರ್ಯಗಳಲ್ಲಿ, ರಾಜಕೀಯ ಪಕ್ಷಗಳು ತಮ್ಮ ಚುನಾವಣಾ ಪ್ರಚಾರ ಕಾರ್ಯಗಳಲ್ಲಿ ಮಕ್ಕಳನ್ನು ಬಳಸಿಕೊಳ್ಳುವುದನ್ನು ನಿಷೇಧಿಸಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ನಲಿನ್ ಅತುಲ್ ಅವರು ತಿಳಿಸಿದ್ದಾರೆ.

ಮಕ್ಕಳ ಹಕ್ಕುಗಳ ಒಡಂಬಡಿಕೆ ಹಾಗೂ ಮಕ್ಕಳ ನ್ಯಾಯ (ಮಕ್ಕಳ ಪೋಷಣೆ ಮತ್ತು ರಕ್ಷಣೆ ಕಾಯ್ದೆ)-2015 ಹಾಗೂ ತಿದ್ದುಪಡಿ ಕಾಯ್ದೆ-2021 ರನ್ವಯ 18 ವರ್ಷದೊಳಗಿನ ಎಲ್ಲಾ ಮಾನವ ಜೀವಿಗಳು ಮಕ್ಕಳು ಎಂದು ಪರಿಗಣಿಸಲಾಗಿದೆ. ಮಕ್ಕಳ ಹಕ್ಕುಗಳ ಒಡಂಬಡಿಕೆಯ ಕಲಂ 32 ಮತ್ತು 36ರಲ್ಲಿ ಮಕ್ಕಳ ಆರೋಗ್ಯ ಮತ್ತು ಶಿಕ್ಷಣಕ್ಕೆ ಅಪಾಯಕಾರಿಯಾದ ಕ್ಷೇತ್ರಗಳಲ್ಲಿ ಮಕ್ಕಳು ಕಾರ್ಯನಿರ್ವಹಿಸದಂತೆ ಹಾಗೂ ಮಕ್ಕಳ ಬೆಳವಣಿಗೆಗೆ ತೊಡಕನ್ನುಂಟು ಮಾಡುವ ಯಾವುದೇ ಚಟುವಟಿಕೆಯಲ್ಲಿ ಮಕ್ಕಳು ಭಾಗವಹಿಸದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ನಿರ್ದೇಶಿಸಿರುತ್ತದೆ.

ಅದರಂತೆ ಭಾರತ ಚುನಾವಣಾ ಆಯೋಗವು ಚುನಾವಣಾ ಕಾರ್ಯಗಳಲ್ಲಿ ಅಥವಾ ರಾಜಕೀಯ ಪಕ್ಷಗಳು ಚುನಾವಣಾ ಪ್ರಚಾರ ಕಾರ್ಯಗಳಲ್ಲಿ ಮಕ್ಕಳನ್ನು ಬಳಸಿಕೊಳ್ಳುವುದನ್ನು ನಿಷೇಧಿಸಿರುವ ಕುರಿತು ಪ್ರಕಟಣೆಯನ್ನು ಸಹ ಹೊರಡಿಸಿರುತ್ತಾರೆ.

ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಪದ್ಧತಿ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ-1986 ಹಾಗೂ ತಿದ್ದುಪಡಿ ಕಾಯ್ದೆ-2016 ಕಾಯ್ದೆಯನ್ವಯ 14 ವರ್ಷದೊಳಗಿನ ಮಕ್ಕಳು ಯಾವುದೇ ದುಡಿಮೆ ಕಾರ್ಯದಲ್ಲಿ ಅಥವಾ ದುಡಿಮೆ ಚಟುವಟಿಕೆಗಳಲ್ಲಿ ಮಕ್ಕಳನ್ನು ಬಳಸಿಕೊಳ್ಳುವುದನ್ನು ನಿಷೇಧಿಸಿದೆ ಮತ್ತು 18 ವರ್ಷದೊಳಗಿನ ಮಕ್ಕಳು ಅಪಾಯಕಾರಿ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುವುದನ್ನು ನಿಷೇಧಿಸಿದೆ.

ಒಂದು ವೇಳೆ ಕಾಯ್ದೆಯನ್ನು ಉಲ್ಲಂಘಿಸಿ ಮಕ್ಕಳನ್ನು ಕೆಲಸ ಅಥವಾ ಇನ್ನಾವುದೇ ಕಾರ್ಯಗಳಲ್ಲಿ ನೇಮಿಸಿಕೊಂಡಲ್ಲಿ ಕಲಂ 14ರಡಿಯಲ್ಲಿ 2 ವರ್ಷದವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ಮತ್ತು ರೂ. 50,000/- ದಂಡವನ್ನು ವಿಧಿಸಬಹುದಾಗಿದೆ.

ಆದ್ದರಿಂದ ಎಲ್ಲಾ ಅಧಿಕಾರಿಗಳು, ಚುನಾವಣಾ ಜಾಗೃತ ದಳಗಳು, ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಸಾರ್ವಜನಿಕರು ಯಾವುದೇ ಚುನಾವಣಾ ಕಾರ್ಯಗಳಲ್ಲಿ ಹಾಗೂ ಯಾವುದೇ ರಾಜಕೀಯ ಪಕ್ಷಗಳು ತಮ್ಮ ಚುನಾವಣಾ ಪ್ರಚಾರ ಕಾರ್ಯಗಳಲ್ಲಿ ಮಕ್ಕಳನ್ನು ಬಳಸಿಕೊಳ್ಳುವುದನ್ನು ನಿಷೇಧಿಸಲಾಗಿದೆ.

ಒಂದು ವೇಳೆ ಯಾರಾದರೂ ಈ ರೀತಿಯ ಕಾರ್ಯಗಳಲ್ಲಿ 18 ವರ್ಷದೊಳಗಿನ ಮಕ್ಕಳನ್ನು ಬಳಸಿಕೊಂಡಲ್ಲಿ, ಮೇಲ್ಕಾಣಿಸಿದ ಕಾಯ್ದೆಗಳನ್ವಯ ಕಾನೂನು ರೀತ್ಯಾ ಸೂಕ್ತ ಶಿಸ್ತಿನ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!