05ca78b6-6d2b-4a2f-85a4-84fbd724ce8e-231x300

ಛಲದಂಕಮಲ್ಲ ದುರ್ಯೋಧನನ ಔದಾರ್ಯ : ವೀಣಾ ಹೇಮಂತಾಗೌಡ ಪಾಟೀಲ್

ಕರುನಾಡ ಬೆಳಗು ಸುದ್ದಿ 

ಮಹಾಭಾರತದಲ್ಲಿ ಕೌರವರ ಅಗ್ರಜ ದುರ್ಯೋಧನ ಅಸೂಯೆಗೆ ಮತ್ತೊಂದು ಹೆಸರು. ಛಲಗಾರ ದುರ್ಯೋಧನ ಪಾಂಡವರೆಡೆಗೆ ಅದೆಷ್ಟು ಕ್ರೌರ್ಯವನ್ನು ಸಾಧಿಸಿದನೋ ಅಷ್ಟೇ ಪ್ರೀತಿ, ವಿಶ್ವಾಸ, ಸ್ನೇಹವನ್ನು ತನ್ನ ಜೊತೆಗಿರುವವರೊಂದಿಗೆ ಹೊಂದಿದ್ದನು. ಆತನ ಈ ರೀತಿಯ ಪ್ರೀತಿ ವಿಶ್ವಾಸಕ್ಕೆ ಪಾತ್ರರಾದ ಹಲವರು ಆತನ ಔದಾರ್ಯ, ಮಿತ್ರ ಪ್ರೇಮವನ್ನು ಛಲವನ್ನು ಹಾಡಿ ಹೊಗಳುತ್ತಾರೆ.

ಗುರು ದ್ರೋಣಾಚಾರ್ಯರ ಬಳಿ ಶಸ್ತ್ರ ವಿದ್ಯೆ ಕಲಿತು ಪೂರೈಸಿದ ಶಿಷ್ಯರ ಪಾಂಡಿತ್ಯ ಪ್ರದರ್ಶನಕ್ಕೆ ಅರಮನೆಯ ಮೈದಾನದಲ್ಲಿ ಅವಕಾಶ ಕಲ್ಪಿಸಲಾಗಿತ್ತು. ಪಂಚ ಪಾಂಡವರ ಜೊತೆಗೆ ದುರ್ಯೋಧನ ದುಶ್ಯಾಸನಾದಿಯಾಗಿ ನೂರು ಜನ ಕೌರವರ ಶಸ್ತ್ರ ವಿದ್ಯಾ ಪರಿಣತಿಯನ್ನು ಪರೀಕ್ಷಿಸುವ ಆ ಸಮಯದಲ್ಲಿ ಅಲ್ಲಿಗೆ ಸೂತಪುತ್ರ ರಾಧೇಯ ಆಗಮಿಸಿ ತಾನು ಅರ್ಜುನನನ್ನು ಮೀರಿಸುವ ಶಸ್ತ್ರ ವಿದ್ಯಾ ಪರಿಣತನಾಗಿದ್ದೇನೆ, ತನ್ನ ಪಾಂಡಿತ್ಯ ಪ್ರದರ್ಶನಕ್ಕೆ ಅವಕಾಶ ಕೊಡಿ ಎಂದು ಸಭೆಯ ಮುಖ್ಯಸ್ಥರಲ್ಲಿ ಅರಿಕೆ ಮಾಡಿಕೊಂಡನು. ಆದರೆ ಅರ್ಜುನನ ಮೇಲೆ ತುಸು ಹೆಚ್ಚೇ ಮಮಕಾರ ಇರಿಸಿಕೊಂಡಿದ್ದ ದ್ರೋಣರು ಇದಕ್ಕೆ ಒಡಂಬಡದೆ ಇದು ಕೇವಲ ರಾಜರ ಮತ್ತು ರಾಜ ಪುತ್ರರ ಪಾಂಡಿತ್ಯ ಪ್ರದರ್ಶನದ ಸ್ಥಳ ಎಂದು ಹೇಳಿದಾಗ ಅಲ್ಲಿಯೇ ಇದ್ದ ದುರ್ಯೋಧನನು ಕೂಡಲೇ ಸೂತ ಪುತ್ರ ರಾಧೇಯನೆಡೆ ಸ್ನೇಹದ ಹಸ್ತವನ್ನು ಚಾಚಿ, ತನ್ನ ಅಧಿಪತ್ಯದಲ್ಲಿದ್ದ ಅಂಗರಾಜ್ಯಕ್ಕೆ ಆತನನ್ನು ರಾಜನಾಗಿ ಘೋಷಿಸಿದನು. ಮುಂದೆ ಈ ಸ್ನೇಹವನ್ನು ತನ್ನ ಜೀವಿತದ ಕೊನೆಯವರೆಗೂ ಆತ ನಿಭಾಯಿಸಿದನು. ತನ್ನನ್ನು ಅವಮಾನಿಸಿದ ಎಲ್ಲರ ಮುಂದೆ ಸ್ನೇಹಹಸ್ತ ಚಾಚಿದ ದುರ್ಯೋಧನನೆಡೆ ಅಪರಿಮಿತ ಗೌರವವನ್ನು ಹೊಂದಿದ್ದ ಕರ್ಣ.

ಒಂದು ದಿನ ದುರ್ಯೋಧನನನ್ನು ಭೇಟಿಯಾಗಲು ರಾಜ ಭವನಕ್ಕೆ ಬಂದ ಕರ್ಣ ಅಲ್ಲಿ ದುರ್ಯೋಧನ ಹೊರಗೆ ಹೋಗಿದ್ದಾನೆಂಬ ವಿಷಯವನ್ನು ಅರಿತು ಮರಳುತ್ತಿರುವಾಗ ಅಲ್ಲಿಯೇ ಪಗಡೆಯ ಹಾಸನ್ನು ಹಾಕಿಕೊಂಡು ಕುಳಿತಿದ್ದ ದುರ್ಯೋಧನನ ಪತ್ನಿ ರಾಣಿ ಭಾನುಮತಿಯು ಕರ್ಣನನ್ನು ಪಗಡೆಯಾಡಲು ಆಹ್ವಾನಿಸಿದಳು. ಆಕೆಯ ಆಹ್ವಾನಕ್ಕೆ ಮನ್ನಣೆಯಿತ್ತ ಕರ್ಣ. ಇಬ್ಬರು ತಮ್ಮ ತಮ್ಮ ಕೊರಳ ಸರಗಳನ್ನು ಪಂಥವಾಗಿ ಇಟ್ಟರು. ಆಟದಲ್ಲಿ ಗೆದ್ದ ಕರ್ಣನು ಪಂದ್ಯದ ಪ್ರಕಾರ ಭಾನುಮತಿಯ ಕೊರಳ ಸರವನ್ನು ಕೊಡಲು ಆಗ್ರಹಿಸಿದನು. ಇದಕ್ಕೆ ಭಾನುಮತಿ ಒಪ್ಪದೆ ಹೋದಾಗ ತಮಾಶೆಯಾಗಿ ಮಾತಾಡುತ್ತಲೇ ಅಂಗ ರಾಜನು ಆಕೆಗೆ ಕೊರಳ ಮುತ್ತಿನ ಸರಕ್ಕೆ ಕೈ ಹಾಕಿದನು. ಭಾನುಮತಿ ಕೂಡಲೇ ಹಿಂದೆ ಸರಿದ ಕಾರಣ ಮುತ್ತಿನ ಸರ ತುಂಡಾಗಿ ಮುತ್ತುಗಳೆಲ್ಲ ಕೋಣೆಯ ತುಂಬಾ ಹರಡಿದವು. ಅದೇ ಸಮಯಕ್ಕೆ ಅಲ್ಲಿಗೆ ಬಂದ ದುರ್ಯೋಧನನು ಮುತ್ತುಗಳನ್ನು ಆಯುತ್ತಿದ್ದ ಸ್ನೇಹಿತ ಕರ್ಣನಿಗೆ ನಾನು ಕೂಡ ಮುತ್ತುಗಳನ್ನು ಆಯ್ದುಕೊಳ್ಳಲು ಸಹಾಯ ಮಾಡಲೇ ಎಂದು ಕೇಳಿದನು. ತನ್ನ ಪತ್ನಿ ಮತ್ತು ಸ್ನೇಹಿತನೆಡೆ ಅಷ್ಟೊಂದು ವಿಶ್ವಾಸ ಮತ್ತು ನಂಬಿಕೆಯನ್ನು ಹೊಂದಿದ್ದನು ದುರ್ಯೋಧನ.

ತನ್ನ ಮಗ ಪಾಂಡವರೊಂದಿಗೆ ಯುದ್ಧ ಮಾಡಲು ಸಂಪೂರ್ಣ ವಜ್ರದೇಹಿ ಆಗಿರಬೇಕು ಎಂಬ ಆಶಯದಿಂದ ಗಾಂಧಾರಿ ದುರ್ಯೋಧನನಿಗೆ ನದಿಯಲ್ಲಿ ಸ್ನಾನ ಮಾಡಿ ಸಂಪೂರ್ಣ ಬೆತ್ತಲೆಯಾಗಿ ತನ್ನ ಮುಂದೆ ಬಂದು ನಿಲ್ಲಲು ಹೇಳಿದಳು. ಮಾತೃ ವಾಕ್ಯ ಪರಿಪಾಲಕನಾದ ದುರ್ಯೋಧನನು ತಾಯಿ ಹೇಳಿದಂತೆ ನದಿಯಲ್ಲಿ ಸ್ನಾನ ಮಾಡಿ ನಗ್ನದೇಹಿಯಾಗಿ ಬರುತ್ತಿರುವಾಗ ಕೃಷ್ಣನು ಬ್ರಾಹ್ಮಣ ವೇಷದಲ್ಲಿ ಬಂದು ಆತನಿಗೆ ತಮಾಷೆ ಮಾಡಿ ಆತನ ನಗ್ನತೆಯನ್ನು ಅಣಕಿಸಿದನು. ಆಗ ದುರ್ಯೋಧನನು ತನ್ನ ಸೊಂಟದ ಸುತ್ತ ಬಾಳೆಎಲೆಯನ್ನು ಕಟ್ಟಿಕೊಂಡು ತಾಯಿಯ ಮುಂದೆ ಮಾತೃ ವಾಕ್ಯ ಪರಿಪಾಲಕನಾಗಿ ಬಂದು ನಿಂತನು. ಈಗಾಗಲೇ ಎದೆಯುದ್ಧ ಬೆಳೆದ ಮಕ್ಕಳನ್ನು ಹೊಂದಿದ್ದರು ಕೂಡ ತಾಯಿಯ ಮಾತನ್ನು ಪಾಲಿಸುತ್ತಿದ್ದ ದುರ್ಯೋಧನ ತಂದೆ ಮತ್ತು ಮಾವ ಶಕುನಿಯನ್ನು ಕೂಡ ಅಷ್ಟೇ ಗೌರವದಿಂದ ಕಾಣುತ್ತಿದ್ದನು.

ಮುಂದೆ ಕುರುಕ್ಷೇತ್ರ ಯುದ್ಧದ ಸಮಯದಲ್ಲಿ ದುರ್ಯೋಧನನು ಚಕ್ರವ್ಯೂಹವನ್ನು ಪ್ರವೇಶಿಸಲು ಬಂದ ಅಭಿಮನ್ಯುವನ್ನು ಕುರಿತು ಕೌರವ ಮತ್ತು ಪಾಂಡವರ ಎರಡು ಕುಲಕ್ಕೆ ತಿಲಕಪ್ರಾಯ ನೀನು ಎಂದು ಅಭಿಮನ್ಯುವನ್ನು ಮೆಚ್ಚಿಕೊಂಡನು. ನಿನ್ನನ್ನು ಮಗನನ್ನಾಗಿ ಪಡೆದ ಪಾರ್ಥನೆ ಧನ್ಯ. ನಿನ್ನನ್ನು ತನ್ನುದರದಲ್ಲಿ ಬೆಳೆಸಿದ ಸುಭದ್ರೆ ಧನ್ಯಳು. ನಿನ್ನ ಶೌರ್ಯ ವೀರತ್ತ್ವದ ಗಾಥೆಗಳು ಇತಿಹಾಸದಲ್ಲಿ ಚಿರಸ್ಥಾಯಿಯಾಗಿ ಉಳಿಯುತ್ತವೆ ಎಂದು ಹಾರೈಸಿದ್ದ ದುರ್ಯೋಧನ.

ಅದೆಷ್ಟೇ ಛಲದಂಕಮಲ್ಲನಾದರೂ ತನ್ನನ್ನು ನಂಬಿದವರನ್ನು ಎಂದೂ ಕೈ ಬಿಡಲಿಲ್ಲ ದುರ್ಯೋಧನ. ಯುದ್ಧದಲ್ಲಿ ತಾನು ಸೋಲುತ್ತೇನೆ ಎಂಬ ಅರಿವಿದ್ದರೂ ಕೂಡ ರಣರಂಗಕ್ಕೆ ಬೆನ್ನು ಹಾಕಲಿಲ್ಲ. ತನ್ನ ಸ್ನೇಹಿತನಾದ ಅಂಗರಾಜ ಕರ್ಣನೆಡೆಗೆ ಆತನಿಗಿದ್ದ ಅಪರಿಮಿತ ವಿಶ್ವಾಸ ಆತನ ಶತ್ರುಗಳು ಕೂಡ ಮೆಚ್ಚುವಂಥದ್ದು. ಬಹುಶಹ ಆತನ ಪ್ರೀತಿ,ವಿಶ್ವಾಸ, ಗೌರವದ ಮತ್ತು ಆತನ ಉಪ್ಪುಂಡ ಸಲುವಾಗಿಯೇ ಆತ ತಪ್ಪು ಎಸಗುತ್ತಿದ್ದಾನೆ ಎಂಬ ಅರಿವಿದ್ದರೂ ಕೂಡ ಭೀಷ್ಮ, ದ್ರೋಣ, ಕೃಪರಾದಿಯಾಗಿ ಎಲ್ಲರೂ ಆತನಿಗೆ ಯುದ್ಧದಲ್ಲಿ ಜೊತೆ ನೀಡಿದ್ದು.

ಆದ್ದರಿಂದಲೇ ಇತಿಹಾಸದಲ್ಲಿ ತನ್ನ ಛಲ, ಅಸೂಯೆ, ಸ್ನೇಹ ಮತ್ತು ಔದಾರ್ಯಕ್ಕೆ ಅಜರಾಮರನಾಗಿದ್ದಾನೆ ಮಹಾರಥಿ ದುರ್ಯೋಧನ.

 

ವೀಣಾ ಹೇಮಂತ್ ಗೌಡ ಪಾಟೀಲ್

ಮುಂಡರಗಿ ಗದಗ್

Leave a Reply

Your email address will not be published. Required fields are marked *

error: Content is protected !!