ಡೆಂಗ್ಯೂ ಖಾಯಿಲೆ ನಿಯಂತ್ರಣ ಕುರಿತು ಅರಿವು ಕಾರ್ಯಕ್ರಮ

ಡೆಂಗ್ಯೂ ನಿಯಂತ್ರಣಕ್ಕೆ ಜಾಗೃತಿ ಮೂಡಿಸಿ : ಶಿವಾನಂದ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 4- ಡೆಂಗ್ಯೂ ನಿಯಂತ್ರಣ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಈ ಖಾಯಿಲೆಯ ನಿಯಂತ್ರಣಕ್ಕೆ ಎಲ್ಲರಲ್ಲಿಯೂ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಶಿವಾನಂದ ವ್ಹಿ.ಪಿ. ಅವರು ಹೇಳಿದರು.

ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳ ಕಚೇರಿ, ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಮುರಾರ್ಜಿ ದೇಸಾಯಿ ವಸತಿ ಶಾಲೆ, ಬೇವೂರು ಇವರ ಸಂಯುಕ್ತಾಶ್ರಯದಲ್ಲಿ “ಡೆಂಗ್ಯೂ ಖಾಯಿಲೆ ನಿಯಂತ್ರಣ” ಕುರಿತು ಶಾಲೆಯ ಸಭಾ ಆವರಣದಲ್ಲಿ ಜುಲೈ 03ರಂದು ಹಮ್ಮಿಕೊಳ್ಳಲಾಗಿದ್ದ ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರಸ್ತುತ ಮಳೆಗಾಲ ಪ್ರಾರಂಭವಾದ ಕಾರಣ ಶುದ್ಧ ನೀರಿನಲ್ಲಿ ಸೋಂಕಿತ ಈಡಿಸ್ ಜಾತಿಯ ಸೊಳ್ಳೆಗಳು ಮೊಟ್ಟೆಗಳನ್ನಿಟ್ಟು ಸಂತಾನಾಭಿವೃದ್ಧಿ ಮಾಡುತ್ತವೆ. ನಂತರ ಮನುಷ್ಯರಿಗೆ ಕಚ್ಚುವುದರಿಂದ ಈ ಖಾಯಿಲೆ ಹರಡುತ್ತದೆ. ಈ ರೋಗದ ಲಕ್ಷಣಗಳು ತಲೆನೋವು, ವಾಂತಿ, ಕಣ್ಣಿನ ಹಿಂಭಾಗದಲ್ಲಿ ನೋವು, ಮೈಮೇಲೆ ಬಿಲ್ಲೆ ಹಾಕಾರದ ಕೆಪ್ಪು ಗಂಧೆಗಳು, ಕಪ್ಪು ಮಲವಿಸರ್ಜನೆ, ವಸಡುಗಳಲ್ಲಿ ರಕ್ತಸ್ರಾವ ಇಂತಹ ಲಕ್ಷಣಗಳಿದ್ದರೆ ತಮ್ಮ ಸಮೀಪದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ, ರಕ್ತ ಪರೀಕ್ಷೆ ಮಾಡಿಸಿ, ಖಚಿತ ಪಟ್ಟರೆ ಚಿಕಿತ್ಸೆ ಪಡೆದುಕೊಳ್ಳಬೇಕು. ಯಾವುದೇ ಕಾರಣಕ್ಕೂ ಜ್ವರದ ಬಗ್ಗೆ ನಿರ್ಲಕ್ಷತನ ಮಾಡಬಾರದು. ಈ ಬಗ್ಗೆ ಜಾಗೃತಿ ಮೂಡಿಸುವುದು ಡೆಂಗ್ಯೂ ಖಾಯಿಲೆ ನಿಯಂತ್ರಣ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.

ಎಲ್ಲರೂ ಮನೆಗಳಲ್ಲಿ ನೀರು ಶೇಖರಿಸುವ ಡ್ರಮ್, ಬ್ಯಾರಲ್, ಸಿಮೆಂಟ್ ತೊಟ್ಟೆ, ಕಲ್ಲಿನ ದೋಣಿ ಇನ್ನಿತರ ನೀರು ಸಂಗ್ರಹ ಪರಿಕರಗಳನ್ನು ವಾರದಲ್ಲಿ 2 ಬಾರಿ ಸ್ವಚ್ಛವಾಗಿ ತೊಳೆದು, ಒಣಗಿಸಿ ಪುನಃ ನೀರು ತುಂಬಬೇಕು. ಸಲಕರಣೆಗಳಿಗೆ ಭದ್ರವಾಗಿ ಮುಚ್ಚಳದಿಂದ ಮುಚ್ಚಬೇಕು. ಸಾಯಂಕಾಲ ವೇಳೆ ಮನೆಯ ಮುಂದೆ ಬೇವಿನ ಸೊಪ್ಪಿನ ಹೊಗೆ ಹಾಕಬೇಕು. ಸೊಳ್ಳೆ ಕಡಿತದಿಂದ ದೂರವಿರಲು ವೈಯಕ್ತಿಕ ರಕ್ಷಣೆ ಮಾಡಿಕೊಳ್ಳಬೇಕು. ಮನೆಯ ಸುತ್ತ ಮುತ್ತಲು ನೀರು ನಿಲ್ಲದಂತೆ ಎಚ್ಚರಿಕೆವಹಿಸಬೇಕು. ಲಾರ್ವಾ ನಾಶಕ್ಕಾಗಿ ಸ್ವಚ್ಛಗೊಳಿಸತ್ತಿರಬೇಕು. ಆರೋಗ್ಯ ಇಲಾಖೆ ಸಿಬ್ಬಂದಿಗಳು ಮತ್ತು ಆಶಾ ಕಾರ್ಯಕರ್ತೆಯರು ತಮ್ಮ ಮನೆಗೆ ಭೇಟಿ ನೀಡಿದಾಗ ಸಹಕರಿಸಿ, ಕೈಜೋಡಿಸಬೇಕು. ತಮ್ಮ ಮನೆಯ ಸುತ್ತಾ-ಮುತ್ತಾ ತ್ಯಾಜ್ಯ ವಸ್ತುಗಳಾದ ಟೈರ್, ಒರಳುಕಲ್ಲು, ತೆಗ್ಗಿನ ಚಿಪ್ಪು, ಹೊಡೆದ ಪ್ಲಾಸ್ಟಿಕ್ ಬಕೆಟ್ ಇತ್ಯಾದಿಗಳನ್ನು ಬಿಸಾಡಬಾರದು. ಸ್ವಚ್ಛತೆ ಕಾಪಾಡಬೇಕು. ಇದರ ಬಗ್ಗೆ ಎಲ್ಲಾ ವಿದ್ಯಾರ್ಥಿಗಳು ತಮ್ಮ ಮನೆ ಹಾಗೂ ಸುತ್ತಮುತ್ತಲಿನಲ್ಲಿ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.

ಸಮುದಾಯ ಆರೋಗ್ಯಾಧಿಕಾರಿಗಳಾದ ಈಶಪ್ಪ ರಾಠೋಡ್ ಅವರು ಸಾಂಕ್ರಾಮಿಕ ರೋಗಗಳಾದ ಮಲೇರಿಯಾ, ಕ್ಷಯರೋಗ, ಕುಷ್ಠರೋಗ, ಹದಿಹರೆಯದವರ ಆರೋಗ್ಯದ ಮಹತ್ವ, ಅಸಾಂಕ್ರಾಮಿಕ ರೋಗಗಳ ನಿಯಂತ್ರಣ ಕುರಿತು ವಿವರವಾಗಿ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕರಾದ ಚಂದ್ರಕಲಾ ಅವರು ಮಾತನಾಡಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಾಕಾಂಕ್ರಮಿಕ ರೋಗಗಳ ನಿಯಂತ್ರಕ್ಕಾಗಿ ಹಮ್ಮಿಕೊಳ್ಳುವ ಅರಿವು ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಬಹಳ ಉಪಯುಕ್ತವಾಗಿವೆ. ವಿದ್ಯಾರ್ಥಿಗಳು ಇಂತಹ ಕಾರ್ಯಕ್ರಮಗಳ ಸದುಪಯೋಗ ಪಡೆದುಕೊಂಡು ತಮ್ಮ ತಮ್ಮ ಗ್ರಾಮಗಳಲ್ಲಿ, ವಾರ್ಡ್ಗಳಲ್ಲಿ ಹಾಗೂ ಸುತ್ತ ಮುತ್ತಲಿನ ಸಾರ್ವಜನಿಕರಿಗೆ ಅರಿವು ಮೂಡಿಸುವಂತೆ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಸಮುದಾಯಾ ಆರೋಗ್ಯಾಧಿಕಾರಿಗಳಾದ ಮಂಜುಳಾ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳಾದ ಉಮಾ, ಸಹಶಿಕ್ಷಕರಾದ ಪ್ರವೀಣ, ಶ್ರೀಶೈಲ ಬಡಿಗೇರ್, ಮಹಾಂತೇಶ, ಮಹಮ್ಮದ್ ಜಹೀರ್, ಅಹಮ್ಮದಪಾಷಾ, ಕೀಮಪ್ಪ ದೇವರಮನಿ ಸೇರಿದಂತೆ ಇತರೆ ಶಿಕ್ಷಕರು, ಆಶಾ ಕಾರ್ಯಾಕರ್ತೆಯರು, ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!