
- ತುಂಗಭದ್ರಾ ಹೂಳೆತ್ತುವ ಜೊತೆಗೆ ರೇಲ್ವೇ ಹಾಗೂ ಅಭಿವೃದ್ಧಿ ಕಾಮಗಾರಿಗಳಿಗೆ ಹೆಚ್ಚು ಒತ್ತು ನೀಡುವೆ: ಸಂಸದ ರಾಜಶೇಖರ ಹಿಟ್ನಾಳ
ಮತದಾರರು ನನಗೆ ಆಶಿರ್ವದಿಸಿ ಕೊಪ್ಪಳ ಕ್ಷೇತ್ರದ ಸಂಸದನನ್ನಾಗಿ ಮಾಡಿದ್ದು ನಮ್ಮ ಮುಂದೆ ಅನೇಕ ಸವಾಲುಗಳಿದ್ದು ಮುಖ್ಯವಾಗಿ ರೈತರ ಜೀವನಾಡಿ ತುಂಗಭದ್ರ ಡ್ಯಾಂ ಹೂಳೆತ್ತುವುದು, ಕ್ಷೇತ್ರದಲ್ಲಿ ಆಮೆಗತಿಯಲ್ಲಿರುವ ರೇಲ್ವೇ ಸೇರಿದಂತೆ ಅಭಿವೃದ್ಧಿ ಕಾಮಗಾರಿಗಳಿಗೆ ಹೆಚ್ಚು ಒತ್ತು ನೀಡುವೆ ಎಂದು ಸಂಸದ ರಾಜಶೇಖರ ಹಿಟ್ನಾಳ ಹೇಳಿದರು.
ಕುಷ್ಟಗಿ ತಾಲೂಕಿನ ಒಕ್ಕನದುರ್ಗ ದೇವಸ್ಥಾನಕ್ಕೆ ಹಾಗೂ ಬಾದಿಮನಾಳ ಶಾಖಾಮಠಕ್ಕೆ ತೆರಳುವ ಮಾರ್ಗ ಮಧ್ಯೆ ಪಟ್ಟಣದ ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಮರೇಗೌಡ ಬಯ್ಯಾಪುರ ಅವರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಮತದಾರ ಬಾಂಧವರ ಹಾಗೂ ಕಾಂಗ್ರೆಸ್ ಪಕ್ಷದ ಎಲ್ಲ ಮುಖಂಡರ ಕಾರ್ಯಕರ್ತರ ಆಶಿರ್ವಾದದಿಂದ ನೂತನ ಸಂಸದನಾಗಿದ್ದು ನಮ್ಮ ಭಾಗದ ರೈತರಿಗೆ ತುಂಗಭದ್ರ ಸಮಾನಾಂತರ ಯೋಜನೆ, ಹೂಳೆತ್ತುವದು ಪ್ರಮುಖ ಬೇಡಿಕೆ ಎಂದರೆ ತಪ್ಪಿಲ್ಲ. ತುಂಗಭದ್ರಾ ಜಲಾಶಯದಲ್ಲಿ ಹೂಳು ಜಾಸ್ತಿಯಾಗಿದ್ದು ಇದರಿಂದ ಸುಮಾರು ೩೦ ಟಿಎಂಸಿ ನೀರು ಹರಿದು ಬೇರೆ ರಾಜ್ಯಕ್ಕೆ ಹೊಗುತ್ತಿದೆ. ಮೊದಲು ಹೋಳೆತ್ತುವ ಚಿಂತನೆ ಮಾಡಲಾಗುವುದು. ಇದರ ಜೊತೆಗೆ ರೇಲ್ವೇ ಕಾಮಗಾರಿಗಳಿಗೆ ಈಗಾಗಲೆ ಡಿಪಿಆರ್ ರೆಡಿ ಮಾಡಲಾಗಿದೆ ಎಂದು ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದೇನೆ. ಗಂಗಾವತಿ- ದರೋಜಿ ರೇಲ್ವೇ ಲೈನ್ ಡಿಪಿಆರ್ ಸಿದ್ಧವಾಗಿದೆ. ನಮ್ಮ ಮಾಜಿ ಸಂಸದ ಸಂಗಣ್ಣ ಕರಡಿ ಅವರ ಹಾಗೂ ಪಕ್ಷದ ಹಿರಿಯರ ಸಲಹೆ ಮಾರ್ಗದರ್ಶನ ಪಡೆದು ಮುಂದಿನ ಅಭಿವೃದ್ಧಿಗೆ ಸಾಗುತ್ತೇನೆ ಹಾಗೂ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಅಭಿವೃದ್ಧಿ ಕಾಮಗಾರಿಗಳಿಗೆ ಹೆಚ್ಚು ಒತ್ತು ನೀಡುತ್ತೇನೆ. ಕೊಪ್ಪಳಲೋಕಸಭಾ ಕ್ಷೇತ್ರದಾಧ್ಯಂತ ಹಂತ ಹಂತವಾಗಿ ಮತದಾರರಿಗೆ ಮುಖಂಡರಿಗೆ ಹಾಗೂ ಕಾರ್ಯಕರ್ತರಿಗೆ ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತೇನೆ ಎಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಸಂಸದರಿಗೆ ಹೂ ಹಾರ ಶಾಲು ಹಾಕಿ ಸನ್ಮಾನಿಸಿದರು. ಮುಖಂಡರಾದ ದೊಡ್ಡಬಸವನಗೌಡ ಬಯ್ಯಾಪುರ, ಜಿ.ಪಂ ಮಾಜಿ ಸದಸ್ಯ ವಿಜಯ ನಾಯಕ, ಮಾಲತಿ ನಾಯಕ, ಉಮೇಶ ಮಂಗಳೂರ ಸೇರಿದಂತೆ ಮತ್ತಿತರರು ಇದ್ದರು.