
ನವಜಾತ ಶಿಶು ಮಕ್ಕಳಲ್ಲಿ ಬಿಸಿಲಿನಿಂದಾಗುವ ನಿರ್ಜಲೀಕರಣ ತಡೆಯಲು ಎದೆ ಹಾಲುಣಿಸಿ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 1- ಜಿಲ್ಲೆಯಲ್ಲಿ ವಿಪರೀತ ಬಿಸಿಲು ದಾಖಲಾಗುತ್ತಿರುವ ಹಿನ್ನಲೆಯಲ್ಲಿ ಬಿಸಿಲಿನ ತಾಪಮಾನದಿಂದ ಮಕ್ಕಳಲ್ಲಿ ಉಂಟಾಗುವ ನಿರ್ಜಲೀಕರಣ ತಡೆಯಲು ತಾಯಂದಿರು ನವಜಾತ ಶಿಶು ಮಕ್ಕಳಿಗೆ ಹೆಚ್ಚು-ಹೆಚ್ಚು ಎದೆ ಹಾಲುಣಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೈ.ರಮೇಶ್ಬಾಬು ತಿಳಿಸಿದ್ದಾರೆ.
ಸಾಮಾನ್ಯವಾಗಿ ಮಾರ್ಚ್ ಮತ್ತು ಏಪ್ರೀಲ್ ತಿಂಗಳುಗಳಲ್ಲಿ ಬಳ್ಳಾರಿ ಸೇರಿದಂತೆ ರಾಜ್ಯದ ಬಹಳಷ್ಟು ಜಿಲ್ಲೆಗಳಲ್ಲಿ ಸಹ 40 ಡಿಗ್ರಿ ಮೇಲ್ಪಟ್ಟು ಬಿಸಿಲು ಕಂಡುಬರುತ್ತಿದ್ದು, ಸಾರ್ವಜನಿಕರು ಮಧ್ಯಾಹ್ನ 01 ಗಂಟೆಯಿಂದ ಸಂಜೆ 04 ಗಂಟೆಯವರೆಗೆ ಮನೆಯಲ್ಲಿಯೇ ಇರಬೇಕು. ಒಂದು ವೇಳೆ ಮನೆಯಿಂದ ಹೊರಗೆ ಬರುವ ಅಗತ್ಯವಿದ್ದರೆ ಮಾತ್ರ ಛತ್ರಿ ಹಾಗೂ ನೀರಿನ ಬಾಟೆಲ್ನೊಂದಿಗೆ ಬರುವಂತೆ ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ.
ಜಿಲ್ಲಾ ಮಲೇರಿಯಾ ನಿಯಂತ್ರಣ ಅಧಿಕಾರಿ ಹಾಗೂ ಹವಮಾನ ಬದಲಾವಣೆ ಮತ್ತು ಮಾನವ ಆರೋಗ್ಯ ಕಾರ್ಯಕ್ರಮ ಅಧಿಕಾರಿ ಡಾ.ಅಬ್ದುಲ್ಲಾ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮರಿಯಂಬಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್ ದಾಸಪ್ಪನವರ ಒಳಗೊಂಡ ತಂಡವನ್ನು ವಿಮ್ಸ್ ಮಕ್ಕಳ ವಿಭಾಗಕ್ಕೆ ಕಳುಹಿಸಿ ಅಲ್ಲಿಯ ವಿಭಾಗದ ಮುಖ್ಯಸ್ಥರಾದ ಡಾ.ವಿಶ್ವನಾಥ್ ಬಿ ಮಕ್ಕಳ ತಜ್ಞರಾದ ಡಾ.ಬಿ.ಕೆ.ಸುಂದರ್, ಡಾ.ದುರುಗಪ್ಪ ರವರೊಂದಿಗೆ ಚರ್ಚಿಸಿದ ನಂತರ, ಜಿಲ್ಲೆಯಲ್ಲಿ ಬಿಸಿಲಿನ ತಾಪಮಾನದಿಂದ ಅಥವಾ ಬಿಸಿ ಗಾಳಿಯಿಂದ ಆರೋಗ್ಯದಲ್ಲಿ ಏರುಪೇರಾಗಿ ಯಾವುದೇ ಮಗು ದಾಖಲಾಗಿರುವುದಿಲ್ಲ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.
ಸಾಮಾನ್ಯವಾಗಿ ಬೇಸಿಗೆ ಕಾಲದಲ್ಲಿ ಹೆರಿಗೆಯಾಗುವ ಅದರಲ್ಲೂ ಮೊದಲ ಮಗುವಿಗೆ ಜನನ ನೀಡುವ ತಾಯಿಗೆ ತನ್ನ ನವಜಾತ ಶಿಶುವಿಗೆ ಹೆರಿಗೆ ನಂತರದಲ್ಲಿ ನಿಯಮಿತವಾಗಿ ಹಾಲುಣಿಸುವ ಅಭ್ಯಾಸವು ಗೊತ್ತಿಲ್ಲದೆ ಕೆಲವು ನವಜಾತ ಶಿಶುವುಗಳಲ್ಲಿ ನಿರ್ಜಲೀಕರಣ ಕಂಡುಬರುವ ಸಾಧ್ಯತೆಗಳಿವೆ. ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆಯಾದಲ್ಲಿ ಇಂತಹ ಸಾಧ್ಯತೆಗಳು ಹೆಚ್ಚು. ಅಂತಹ ಸಂದರ್ಭದಲ್ಲಿ ಕುಟುಂಬದ ಸದಸ್ಯರು ಚೊಚ್ಚಲು ಹೆರಿಗೆಯಾದ ಬಾಣಂತಿಯರಿಗೆ ಹೆರಿಗೆ ನಂತರದಲ್ಲಿ ಪ್ರತಿ ಒಂದರಿಂದ 2 ಗಂಟೆಯೊಳಗಡೆ ಶಿಶುವಿಗೆ ತಪ್ಪದೇ ಎದೆ ಹಾಲುಣಿಸಬೇಕು ಮತ್ತು ಎದೆ ಹಾಲಿನಲ್ಲಿ ಶೇ.70 ರಷ್ಟು ನೀರಿನ ಅಂಶವಿರುವುದರಿಂದ ಮಗುವಿಗೆ ಉಂಟಾಗಬಹುದಾದ ನಿರ್ಜಲೀಕರಣವನ್ನು ತಡೆಗಟ್ಟುತ್ತದೆ. 6 ತಿಂಗಳವರೆಗೆ ಮಗುವಿಗೆ ತಾಯಿಯ ಎದೆಹಾಲನ್ನು ಮಾತ್ರ ಕೊಡಬೇಕು ಎಂದಿದ್ದಾರೆ.
ಮಗುವಿಗೆ ಬಿಸಿಲಿನ ತಾಪಮಾನದಿಂದ ರಕ್ಷಿಸಲು ತೆಳುವಾದ ಹತ್ತಿಬಟ್ಟೆಯನ್ನು ಮಾತ್ರ ಹಾಕಬೇಕು. 2 ರಿಂದ 3 ಬಟ್ಟೆಗಳನ್ನು ಅಥವಾ ಹೊದಿಕೆಯನ್ನು ಮಕ್ಕಳ ಮೇಲೆ ಹಾಕಬಾರದು. ಮುಂಜಾಗೃತ ಕ್ರಮವಾಗಿ ಮಕ್ಕಳು ಮತ್ತು ವಯಸ್ಕರರಿಗೆ ಕಂಡುಬರಬಹುದಾದ ಅಪಾಯಕಾರಿ ಚಿಹ್ನೆಗಳನ್ನು ಗುರುತಿಸಿ ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಬರಬೇಕು ಎಂದು ಹೇಳಿದ್ದಾರೆ.
ಸಾಮಾನ್ಯ ಅಪಾಯದ ಚಿಹ್ನೆಗಳು : ಮಕ್ಕಳು ಆಹಾರ ಸೇವಿಸಲು ನಿರಾಕರಿಸುವುದು, ಕನಿಷ್ಠ ಮೂತ್ರ ವಿಸರ್ಜನೆ, ಬಾಯಿ ಒಣಗುವಿಕೆ, ಆಲಸ್ಯ, ಮೂರ್ಛೆ ಹೋಗುವುದು, ದೇಹದ ಯಾವುದೇ ಭಾಗದಲ್ಲಿ ರಕ್ತಸ್ರಾವ ವಯಸ್ಕರಲ್ಲಿ ಅರೆಪ್ರಜ್ಞಾವಸ್ಥೆ, ಪ್ರಜ್ಞೆ ತಪ್ಪುವುದು, ಸಿಡಿಮಿಡಿಗೊಳ್ಳುವುದು, ಗಾಬರಿಗೊಳ್ಳುವುದು, ಅತಿಯಾದ ತಲೆನೋವು, ಚರ್ಮವು ಬಿಸಿ ಹಾಗೂ ಕೆಂಪಾದ ಒಣಚರ್ಮ, ಆತಂಕ, ತಲೆಸುತ್ತುವಿಕೆ, ಮಾಂಸಖಂಡಗಳಲ್ಲಿ ಸುಸ್ತು ಅಥವಾ ಸೆಳೆತ, ವಾಕರಿಕೆ ಮತ್ತು ವಾಂತಿ ಕಂಡುಬರಬಹುದು.
ಶಾಖಾಘಾತಕ್ಕೆ ಚಿಕಿತ್ಸೆ : ನೆರಳಿರುವೆಡೆಗೆ ಸ್ಥಳಾಂತರಿಸಬೇಕು. ವ್ಯಕ್ತಿಯ ವಸ್ತ್ರಗಳನ್ನು ಸಡಿಲಗೊಳಿಸಿ, ಅಂಗಾತ ಮಲಗಿಸಿ, ಕಾಲುಗಳನ್ನು ಎತ್ತರಿಸಬೇಕು. ಸಾಮಾನ್ಯ ನೀರಿನಿಂದ ದೇಹವನ್ನು ಒರೆಸಬೇಕು. ಹತ್ತಿರದ ವೈದ್ಯರನ್ನು ಕರೆಸಬೇಕು.
ರಾಷ್ಟ್ರೀಯ ಹವಮಾನ ಬದಲಾವಣೆ ಹಾಗೂ ಮಾನವ ಆರೋಗ್ಯ ಕಾರ್ಯಕ್ರಮದ ಅಡಿಯಲ್ಲಿ ಜಿಲ್ಲಾ ಮಟ್ಟದಲ್ಲಿ ಡಾ.ಅಬ್ದುಲ್ಲಾ ರವರ ನೇತೃತ್ವದಲ್ಲಿ ತಂಡ ರಚಿಸಿ ಕಾರ್ಯನಿರ್ವಹಿಸಲಾಗುತ್ತಿದೆ. ಅಲ್ಲದೇ ದಿನ ಪತ್ರಿಕೆಗಳು, ರೇಡಿಯೋ, ದೂರದರ್ಶನ, ಮತ್ತು ಜಿಲ್ಲಾ ವಿಪತ್ತು ಪ್ರಾಧಿಕಾರದ ಮೂಲಕ ನೀಡುವ ಸೂಚನೆಗಳನ್ನು ತಪ್ಪದೇ ಪಾಲಿಸಬೇಕು ಡಿಹೆಚ್ಓ ಅವರು ಕೋರಿದ್ದಾರೆ.