WhatsApp Image 2024-06-04 at 5.02.16 PM

ನಾಯಿ ಕಡಿದಲ್ಲಿ ನಿರ್ಲಕ್ಷ್ಯ ಮಾಡದೇ ರೇಬೀಸ್ ಚುಚ್ಚುಮದ್ದು ಪಡೆಯಿರಿ : ಡಾ.ವೈ.ರಮೇಶ ಬಾಬು

ಕರುನಾಡ ಬೆಳಗು ಸುದ್ದಿ

ಬಳ್ಳಾರಿ, 4- ಸಾಕಿದ ಅಥವಾ ಬೀದಿ ನಾಯಿಗಳು ಕಡಿದ ಸಂದರ್ಭದಲ್ಲಿ ನಿರ್ಲಕ್ಷ್ಯ ತೋರದೆ, ಸೋಪು, ನೀರಿನಿಂದ ಗಾಯ ಅಥವಾ ಪರಚಿದ ಭಾಗವನ್ನು ತೊಳೆದು ತಕ್ಷಣ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ರೇಬೀಸ್ ಚುಚ್ಚುಮದ್ದು ಪಡೆಯಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೈ.ರಮೇಶ್ ಬಾಬು ಅವರು ಹೇಳಿದರು.

ಅವರು, ಬಳ್ಳಾರಿಯ ಬಂಡಿಹಟ್ಟಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ವಟ್ಟಪ್ಪಕೇರಿ ಪ್ರದೇಶದಲ್ಲಿ ಕ್ಷೇತ್ರ ಭೇಟಿ ಮಾಡಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿ ಮಾತನಾಡಿದರು.

ನಾಯಿ, ಬೆಕ್ಕು, ಇತರೆ ಯಾವುದೇ ಪ್ರಾಣಿಗಳು ಕಚ್ಚಿದಾಗ ರೇಬೀಸ್ ಕಾಯಿಲೆ ಬರುವ ಸಾಧ್ಯತೆಯಿದ್ದು, ಮುಖ್ಯವಾಗಿ ನಾಯಿಗಳ ಕಡಿತದಿಂದ ಹೆಚ್ಚಿನ ಪ್ರಮಾಣದಲ್ಲಿ ರೋಗ ಹರಡುವುದರಿಂದ ನಿರ್ಲಕ್ಷ್ಯ ಮಾಡದೇ, ಚುಚ್ಚುಮದ್ದು ಪಡೆದು, ಸಂಭಾವ್ಯ ರೇಬಿಸ್ ಖಾಯಿಲೆ ತಡೆಯುವುದರ ಮೂಲಕ ವ್ಯಕ್ತಿಯ ಜೀವ ಕಾಪಾಡುವ ಕಾರ್ಯ ಪ್ರತಿಯೊಬ್ಬರೂ ಮಾಡಬೇಕಿದೆ ಎಂದರು.

ಮನುಷ್ಯರಿಗೆ ರೇಬಿಸ್ ರೋಗವು ಶೇ.99ರಷ್ಟು ನಾಯಿ ಕಡಿತದಿಂದ ಬರುತ್ತದೆ, ಇನ್ನುಳಿದಂತೆ ಬೆಕ್ಕು ತೋಳ ನಾಯಿ ಕಾಡು ಪ್ರಾಣಿಗಳ ಕಡಿತದಿಂದ ಶೇ.1 ಪ್ರಮಾಣದಷ್ಟು ಹರಡುತ್ತದೆ. ರೇಬೀಸ್ ತಡೆಗೆ ನಾಯಿ ಕಚ್ಚಿದ ನಂತರ ಗಾಯವನ್ನು ಸ್ವಚ್ಚ ನೀರಿನಲ್ಲಿ 15 ನಿಮಿಷಗಳ ಕಾಲ ತೊಳೆಯುವುದರಿಂದ ಶೇ.50 ರಿಂದ 70 ರಷ್ಟು ರೇಬಿಸ್‍ಗೆ ತುತ್ತಾಗುವುದನ್ನು ತಡೆಯಬಹುದು. ವೈದ್ಯರ ಸಲಹೆ ಮೇರೆಗೆ 1ನೇ ದಿವಸ, 3ನೇ ದಿವಸ, 7ನೇ ದಿವಸ, 14ನೇ ದಿವಸ, 28ನೇ ದಿವಸ ಸಂಪೂರ್ಣವಾಗಿ (ಎಲ್ಲಾ 5 ಡೋಸ್‍ಗಳನ್ನು) ಪಡೆಯುವುದರ ಮೂಲಕ ರೇಬಿಸ್ ತಡೆಗಟ್ಟಬಹುದಾಗಿದೆ ಎಂದರು.

ವಿಶ್ವದಾದ್ಯಂತ ಸಂಭವಿಸುವ ರೇಬಿಸ್ ಸಾವಿನ ಪ್ರಕರಣಗಳಲ್ಲಿ ಶೇ.36ರಷ್ಟು ಭಾರತದಲ್ಲಿಯೇ ಸಂಭವಿಸುತ್ತಿವೆ. ಪ್ರಸ್ತುತ ಬಳ್ಳಾರಿ ಜಿಲ್ಲೆಯ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ತಕ್ಷಣ ಲಸಿಕೆ ಲಭ್ಯವಾಗುವ ನಿಟ್ಟಿನಲ್ಲಿ ಆ್ಯಂಟಿ ರೇಬಿಸ್ ಕ್ಲಿನಿಕ್‍ನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!