
“ಪ್ರಥಮ ರಂಗ ಪ್ರವೇಶದ ಸುಂದರ ಅನುಭವ”
“ಮನಸಿದ್ದರೆ ಮಾರ್ಗ ಎಂಬ ಮಾತು ಸಾಬೀತು”
– ಕುಬೇರ ಮಜ್ಜಿಗಿ
ಗ್ರಾಮದ ಕೆಲ ವಿದ್ಯಾವಂತ ಸ್ನೇಹಿತರು ನಾವೆಲ್ಲಾ ಸೇರಿ ಒಂದು ನಾಟಕ ಪ್ರದರ್ಶನ ಮಾಡೋಣವೆಂದಾಗ ನಾನು ನಕ್ಕು ಬಿಟ್ಟೆ. ನಾನು ನಾಟಕದಲ್ಲಿ ಪಾತ್ರ ಮಾಡೋದಾ? ಅದು ಸಾಧ್ಯವೇ ಇಲ್ಲ. ಯಾಕೆಂದರೆ ಜೀವನದಲ್ಲಿ ಒಮ್ಮೆಯೂ ಬಣ್ಣ ಹಚ್ಚಿದವನಲ್ಲ ನಾನು. ಅಷ್ಟಾಗಿ ಆಸಕ್ತಿಯೂ ಇಲ್ಲ.
“ಇದು ನಿಮ್ಮಿಂದ ಸಾಧ್ಯವಿದೆ. ನೀವು ಮನಸ್ಸು ಮಾಡಬೇಕಷ್ಟೇ” ಎಂದು ಸಹೋದರ ಪದವಿ ಕಾಲೇಜಿನ ಪ್ರಾಚಾರ್ಯರಾದ ನಿಂಗಪ್ಪ ಕಂಬಳಿ, ಶಿಕ್ಷಕ ಸುರೇಶ್ ಕಂಬಳಿ, ರಾಮನಗೌಡ ಗೌಡ್ರು, ಹನುಮಂತಪ್ಪ ಕುರಿ, ಬಸವರಾಜ ಲಿಂಗದಹಳ್ಳಿ ಸೇರಿದಂತೆ ಹಲವರು ಭರವಸೆಯ ಮಾತುಗಳನ್ನಾಡಿ ಕೊನೆಗೆ ನನ್ನನ್ನು ಒಪ್ಪಿಸುವಲ್ಲಿ ಯಶಸ್ವಿಯಾದರು. ಪಾತ್ರ ಮಾಡಲು ಒಪ್ಪಿಕೊಂಡ ನನಗೆ ಕಥಾ ನಾಯಕನ ಪಾತ್ರ ಮಾಡುವ ದೊಡ್ಡ ಜವಾಬ್ದಾರಿಯನ್ನು ನೀಡಿದಾಗ ಒಂದಿಷ್ಟು ಆತಂಕವಾಗಿದ್ದಂತೂ ಸುಳ್ಳಲ್ಲ.
ಎಲ್ಲರ ಪ್ರೀತಿಯ ಒತ್ತಾಯಕ್ಕೆ ಮಣಿದ ನಾನು ಅವತ್ತು ಪಾತ್ರ ಮಾಡಲು ತೀರ್ಮಾನಿಸಿದೆ. ಆದರೆ ಪಾತ್ರ ಮತ್ತು ನಾಟಕ ಯಾವುದೇ ಕಾರಣಕ್ಕೂ ವಿಫಲವಾಗಬಾರದು. ಅದನ್ನು ಸಕ್ಸಸ್ ಮಾಡಲೇಬೇಕು ಎಂದು ಮನಸ್ಸು ಮಾಡಿದೆ. ಶ್ರದ್ದೆಯಿಂದ ಮಾತು (ಡೈಲಾಗ್) ಕಲಿತೆ. ಅದಕ್ಕಾಗಿ ಸಮಯ ಮೀಸಲಿಟ್ಟೆ. ಸಹ ಕಲಾವಿದರೆಲ್ಲರ ಸಹಕಾರದಿಂದ ಪ್ರತಿದಿನ ತಾಲೀಮು ನಡೆಸಿದೆವು. ಸರಿ ಸುಮಾರು ಒಂದು ತಿಂಗಳ ಕಾಲ ತಾಲೀಮು ನಡೆಸಿ ರಂಗಭೂಮಿ ಪ್ರವೇಶಕ್ಕೆ ಸಜ್ಜಾದೆವು.
ಎಲ್ಲಾ ಪಾತ್ರಧಾರಿಗಳು ಕೂಡ ವಿದ್ಯಾವಂತರು ಹಾಗೂ ಉತ್ತಮ ಸ್ಥಾನಮಾನದಲ್ಲಿರುವವರು. ಹಾಗಾಗಿ ನಾಟಕ ಸಕ್ಸಸ್ ಮಾಡಲೇಬೇಕಾಗಿತ್ತು. ಕೊನೆಗದು ನಮ್ಮೆಲ್ಲರ ಅಪೇಕ್ಷೆಯಂತೆ ನಾಟಕ ಸಕ್ಸಸ್ ಆಯಿತು. ನಾಟಕ ವೀಕ್ಷಿಸಿದ ಪ್ರೇಕ್ಷಕರು 100ಕ್ಕೆ 100 ಮಾರ್ಕ್ಸ್ ನೀಡಿ ಅಭಿನಂದಿಸಿದಾಗ ಸಂತೋಷ ಇಮ್ಮಡಿಯಾಯ್ತು. ಏನೋ ಒಂದು ಸಾಧಿಸಿದ ಸಂತೃಪ್ತ ಭಾವ ಮೂಡಿತು.
ಪಾತ್ರಕ್ಕೆ ಜೀವ ತುಂಬಿದ ಖುಷಿ : ನನಗೆ ನೀಡಿದ ಪಾತ್ರಕ್ಕೆ ಜೀವ ತುಂಬಿದ್ದೇನೆ ಎಂಬ ಸಂತೃಪ್ತ ಭಾವನೆ ನನಗಿದೆ. ಕಥಾನಾಯಕನಿಗೆ ಒದಗಿದ ಸಂಕಷ್ಟಕ್ಕೆ ದುಃಖ ಪಡುವ ಸನ್ನಿವೇಶದಲ್ಲಿ ನನ್ನ ಅಂತರಾಳದಿಂದ ದುಃಖ ಉಕ್ಕಿ ಕಣ್ಣೀರು ಧಾರೆ ಸುರಿದಿದ್ದು ನನಗೇ ಅಚ್ಚರಿಯಾಗುವಂತಾಗಿದೆ. ಎರಡು ಸನ್ನಿವೇಶದಲ್ಲಿ ಪ್ರೇಕ್ಷಕರು ಕಣ್ಣೀರಿನ ಕಡಲಲ್ಲಿ ಮುಳುಗಿದ್ದಂತೂ ಸುಳ್ಳಲ್ಲ. ಪ್ರತಿಯೊಬ್ಬ ಪ್ರೇಕ್ಷಕರು ಕಣ್ಣೀರು ಹಾಕಿದ್ದಾರೆ ಎಂದು ಹೇಳಿದಾಗ ನನ್ನೊಳಗಿನ ಕಲಾವಿದನಿಗೆ ಧನ್ಯವಾದ ಹೇಳಲೇಬೇಕೆನಿಸಿತು.
ಬಾಂಧವ್ಯ ಬೆಸೆದ ನಾಟಕ : ನಾಟಕ ಪ್ರದರ್ಶನ ಮನೋರಂಜನೆ ಹಾಗೂ ಮನಸ್ಸಿಗೆ ಖುಷಿ ನೀಡುವ ಜೊತೆಗೆ ಪ್ರೀತಿ ಬಾಂಧವ್ಯವನ್ನು ಬೆಸೆದಿದೆ. ಅಷ್ಟಕ್ಕಷ್ಟೇ ಇದ್ದ ಸ್ನೇಹ ಹೆಚ್ಚಿದೆ. ಮನಸುಗಳು ಕೂಡಿವೆ. ಒಂದು ತಿಂಗಳು ಕಾಲ ಜೊತೆ ಜೊತೆಯಾಗಿದ್ದ ಎಲ್ಲಾ ಪಾತ್ರಧಾರಿಗಳು ಅತ್ಯಂತ ಸಹಕಾರದಿಂದ ನಡೆದುಕೊಂಡು ಆತ್ಮೀಯರಾಗಿದ್ದಾರೆ. ಜೊತೆಗೆ ನಾಟಕ ಯಶಸ್ಸಿಗೆ ಕಾರಣರಾಗಿದ್ದಾರೆ. ಎಲ್ಲಾ ಪಾತ್ರಗಳು ಅತ್ಯುತ್ತಮವಾಗಿ ಮೂಡಿ ಬಂದಿದೆ.
ಖಳನಾಯಕ ಪೃಥ್ವಿರಾಜನ ಪಾತ್ರ ಮಾಡಿದ ಡಾ. ನಿಂಗಪ್ಪ ಕಂಬಳಿ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಸಹನಾಯಕರಾದ ಇನ್ಸ್ಪೆಕ್ಟರ್ ಅಶೋಕ ಪಾತ್ರವನ್ನು ಮಹೇಶ್ ಯತ್ನಟ್ಟಿ ಹಾಗೂ ಪ್ರಜ್ವಲ್ ನ ಪಾತ್ರವನ್ನು ಹನುಮಂತಪ್ಪ ಕುರಿ ಅವರು ಮಾಡಿ ಜನ ಮೆಚ್ಚುಗೆ ಪಡೆದಿದ್ದಾರೆ. ಹಾಸ್ಯ ಪಾತ್ರದಲ್ಲಿ ಸುರೇಶ್ ಕಂಬಳಿ, ಭರಮಣ್ಣ ವಾಲಿಕಾರ್ ಹಾಗೂ ಬಸವರಾಜ ಲಿಂಗದಳ್ಳಿ ಕಾಣಿಸಿಕೊಂಡು ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದ್ದಾರೆ. ಲಾಯರ್ ಸುರೇಶನ ಪಾತ್ರದಲ್ಲಿ ಮುತ್ತಣ್ಣ ವಾಲಿಕಾರ್ , ಶಾಸಕ ಶರಣಪ್ಪನ ಪಾತ್ರದಲ್ಲಿ ರಾಮನಗೌಡ, ಲಾಯರ್ ಜಾನ್ ಪಾತ್ರದಲ್ಲಿ ಪೀರಸಾಬ ನದಾಫ, ಜಡ್ಜ್ ಪಾತ್ರದಲ್ಲಿ ಹನುಮೇಶ ಈರಗಾರ, ಬೆಲೀಫ್ ಪಾತ್ರದಲ್ಲಿ ಪಂಪಾಪತಿ ಕಂಬಳಿ ಅವರು ಕಾಣಿಸಿಕೊಂಡು ಅದ್ಭುತ ಪ್ರದರ್ಶನ ನೀಡಿದ್ದಾರೆ. ಸ್ತ್ರೀ ಪಾತ್ರಧಾರಿಗಳಾದ ರೇಖಾ ಹುಬ್ಬಳ್ಳಿ ಅದ್ಬುತ ಕಲಾವಿದೆ ಎಂಬುದನ್ನು ಅವರ ಕಥಾನಾಯಕಿ ಭಾರತಿ ಪಾತ್ರದಿಂದ ಸಾಬೀತು ಮಾಡಿದರು. ಪ್ರಮೀಳಾ ಬಾದಾಮಿ ಹಾಗೂ ಅರ್ಚನಾ ಬಾದಾಮಿ ಅವರು ತಮ್ಮ ಪಾತ್ರಕ್ಕೆ ನ್ಯಾಯ ನೀಡಿದ್ದಾರೆ.
ಕಥಾ ಸಂಚಾಲಕರಾಗಿ ರಾಮಣ್ಣ ಹಣವಾಳ, ಪಂಪಾಪತಿ, ಮಲ್ಲಿಕಾರ್ಜುನ ಮಜ್ಜಿಗಿ, ಮಲ್ಲಪ್ಪ ವಾಲಿಕಾರ್ ಅವರು ಉತ್ತಮ ಜವಾಬ್ದಾರಿ ನಿರ್ವಹಿಸಿದ್ದಾರೆ. ಗುಡದಪ್ಪ ಸಂದಿಮನಿ, ಭೀಮಪ್ಪ ಹರಿಜನ, ಮೇಲಪ್ಪ ಮಜ್ಜಿಗಿ, ಶರಣಪ್ಪ ದೊಡ್ಡಮನಿ ಅವರು ಮಾಲಕ ಹಾಗೂ ಮ್ಯಾನೇಜರ್ ಆಗಿ ಸೇವೆ ಸಲ್ಲಿಸಿದ್ದನ್ನು ಮರೆಯುವಂತಿಲ್ಲ. ಗ್ರಾ.ಪಂ. ಸದಸ್ಯರಾದ ಕರಿಯಪ್ಪ ಕಂಬಳಿ, ದೇವಪ್ಪ ಕುರಿ, ಅಣ್ಣಪ್ಪ ಪೂಜಾರ, ಲಕ್ಷ್ಮಣ ದೊಡ್ಡಮನಿ ಸೇರಿದಂತೆ ಗ್ರಾಮದ ಪ್ರಮುಖರು ಹಾಗೂ ಯುವ ಮಿತ್ರರ ಸಹಕಾರ ನಾಟಕಕ್ಕೆ ಶ್ರೀರಕ್ಷೆಯಾಗಿದ್ದಂತೂ ಸತ್ಯ. ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು.
ತಮ್ಮವ
-ಕುಬೇರ ಮಜ್ಜಿಗಿ