
ಪ್ರೀತಿಯ ಬೆಳಕು ನೀವು ಅಪ್ಪ : ವಸಂತ ರಾಜೂರ
ಕರುನಾಡ ಬೆಳಗು ಸುದ್ದಿ
ಜೀವನದ ಪಯಣದಲ್ಲಿ ಬೆನ್ನ ಹಿಂದೆಯೇ ಮರೆಯಾಗುವ ವ್ಯಕ್ತಿ ತಂದೆ…. ತನಗೆ ಎಷ್ಟೇ ಕಷ್ಟ ಎದುರಾದರೂ ತನ್ನ ನಂಬಿ ಬದುಕುತ್ತಿರುವ ಕುಟುಂಬಕ್ಕೆ ಆತನು ಎಂದಿಗೂ ಬೆಂಬಲಿಸುವುದನ್ನು ಬಿಡುವುದಿಲ್ಲ, ತನ್ನ ಕೊನೆಯ ಉಸಿರಿರುವರೆಗೂ ತನ್ನ ಮಕ್ಕಳಿಗಾಗಿ ಮತ್ತು ತನ್ನ ಕುಟುಂಬಕ್ಕಾಗಿ ಶ್ರಮಿಸುತ್ತಿರುತ್ತಾನೆ.
ಅಮ್ಮ ಬದುಕು ನೀಡಿದರೆ ಆ ಬದುಕಿಗೆ ಭರವಸೆ ತುಂಬುವವನೇ ಅಪ್ಪ… ಅಮ್ಮನ ಪ್ರೀತಿ ಆಕೆ ತೋರುವ ಮಮತೆಯಲ್ಲಿ ಕಾಣುತ್ತದೆ. ಆದರೆ ಅಪ್ಪ ಹಾಗಲ್ಲ, ತನ್ನ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸುವುದರಲ್ಲಿ ಪ್ರೀತಿ ತೋರಿಸಲು ಪ್ರಯತ್ನಿಸುತ್ತಾನೆ. ತಾಯಿ ಮಮತೆಯ ಮಡಿಲು ನೀಡಿದರೆ ತಂದೆ ರಕ್ಷಣೆಯ ಹೆಗಲು ನೀಡುತ್ತಾನೆ.
ಕೆಲ ಅಪ್ಪಂದಿರುವ ಮಕ್ಕಳ ಜೊತೆ ಸ್ನೇಹಿತರಂತೆ ಇರುತ್ತಾರೆ, ಇನ್ನು ಕೆಲವರು ತುಂಬಾ ಸ್ಟ್ರಿಕ್ಟ್ ಆಗಿರುತ್ತರೆ, ಹಾಗಂತ ಅವರಿಗೆ ಮಕ್ಕಳ ಮೇಲೆ ಪ್ರೀತಿಯಿಲ್ಲ ಎಂದಲ್ಲ ಅವರು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುವ ರೀತಿ ಅದಾಗಿರುತ್ತದೆ ಅಷ್ಟೇ… ಒಬ್ಬ ಅಪ್ಪನ ಪ್ರೀತಿ ಎಂಥದ್ದು ಎಂದು ಮಗಳಿಗೆ ತಿಳಿಯುವುದು ಅವಳು ಮದುವೆಯಾಗಿ ಹೋಗುವಾಗ, ಅದೇ ಮಗನಿಗೆ ತಿಳಿಯುವುದು ತಾನು ತಂದೆಯಾದಾಗ ಮಕ್ಕಳ ಮಮತೆಯಲ್ಲಿ ಮೈ ಮರೆತಾಗ.
ಒಬ್ಬ ತಂದೆಗೆ ತನ್ನ ಮಕ್ಕಳ ಎಲ್ಲಾ ಜವಾಬ್ದಾರಿಗಳಿರುತ್ತದೆ. ಅದನ್ನು ನಿಭಾಯಿಸುವುದರಲ್ಲಿಯೇ ತನ್ನ ಬದುಕನ್ನು ಸವೆಸುತ್ತಾನೆ. ತನ್ನ ಮಕ್ಕಳು ತಾನು ಬಯಸಿದಂತೆ ಉತ್ತಮ ವ್ಯಕ್ತಿಗಳಾಗಿ ಬೆಳೆದರೆ ಆ ಸಾರ್ಥಕತೆ ತಂದೆಯ ಕಣ್ಣುಗಳಲ್ಲಿ ಕಾಣಬಹುದು……. ಆ ಕಣ್ಣುಗಳಿಗೆ ನೋವಾಗದಂತೆ ನಾವು ಕಾಪಾಡಿಕೊಳ್ಳಬೇಕು, ತಾಯಿಯ ಕಣ್ಣೀರು ತಂದೆಯ ಬೆವರು ಯಾವತ್ತೂ ವೈರ್ಥವಾಗಲು ಬಿಡಬಾರದು……..
ಅಮ್ಮಂದಿರ ದಿನವನ್ನು ನಾವು ಎಷ್ಟು ಸ್ಪೆಷಲ್ ಆಗಿ ಆಚರಿಸುತ್ತೇವೆಯೋ ಅಷ್ಟೇ ಸ್ಪೆಷಲ್ ಆಗಿ ಅಪ್ಪಂದಿರ ದಿನ ಆಚರಣೆ ಮಾಡಬೇಕು. ಸಾಮಾನ್ಯವಾಗಿ ಅಪ್ಪನಿಗೆ ನಮ್ಮ ಮೇಲೆ ಬೆಟ್ಟದಷ್ಟು ಪ್ರೀತಿ ಇದ್ದರೂ ಕೂಡ ಅವರು ಅದನ್ನು ತೋರ್ಪಡಿಸೋದಿಲ್ಲ… ಆದರೆ ಮಗ-ಮಗಳಾಗಿ ನೀವು ನಿಮ್ಮ ಪ್ರೀತಿಯ ಅಪ್ಪನಿಗೆ ಈ ದಿನ ಅಕ್ಕರೆಯಿಂದ ಶುಭ ಕೋರಿ ನಿಮ್ಮ ಪ್ರೀತಿಯನ್ನು ಅವರೊಂಗಿಗೆ ಹಂಚಿಕೊಳ್ಳಿ………
Happy father’s Day ಅಪ್ಪ………