
ಪ್ರೀತಿ ಎಂದರೆ ನಂಬಿಕೆ,ಪ್ರೀತಿ ಎಂದರೆ ಜೀವನ : ವಸಂತ ರಾಜೂರ
ಕರುನಾಡ ಬೆಳಗು ಸುದ್ದಿ
ಹಾಯ್ ಸ್ನೇಹಿತರೆ ಕೊನೆಗೂ ನಾವೆಲ್ಲರೂ ಬಹಳ ಕಾತುರದಿಂದ ಕಾಯುತ್ತಿದ್ದ ಈ ದಿನ ಬಂದಿದೆ. ಗುಲಾಬಿಗಳು, ಪ್ರಸ್ತಾಪಗಳು, ಚಾಕೋಲೇಟ್ ಗಳು, ಟೆಡ್ಡಿಬೇರ್ ಗಳು, ಭರವಸೆಗಳು, ಅಪ್ಪುಗೆಗಳು ಮತ್ತು ಚುಂಬನಗಳನ್ನು ಒಳಗೊಂಡ ದಿನವಾಗಿದೆ.
ಪ್ರೇಮಿಗಳ ದಿನದ ಮೊದಲು, ಜನರು ರೋಸ್ ಡೇ, ಪ್ರಪೋಸ್ ಡೇ, ಚಾಕೊಲೇಟ್ ಡೇ, ಟೆಡ್ಡಿ ಡೇ, ಪ್ರಾಮಿಸ್ ಡೇ, ಹಗ್ ಡೇ ಮತ್ತು ಕಿಸ್ ಡೇ ಅನ್ನು ಸಹ ಆಚರಿಸುತ್ತಾರೆ. ಇಂದು ಪ್ರೆಮಿಗಳ ದಿನ ಬಂದಿದೆ. ಎಲ್ಲವನ್ನೂ ಬದಿಗಿರಿಸಿ ಒಂದಷ್ಟು ಸಮಯ ಬಿಡುವು ಮಾಡಿಕೊಳ್ಳಿ. ಪ್ರೀತಿ ಹಂಚಿದ ಸೇಂಟ್ ವ್ಯಾಲಂಟೈನ್ ಹೆಸರಿನಲ್ಲಿ ನೀವೂ ಒಂದಿಷ್ಟು ಪ್ರೀತಿ ಹಂಚಿ, ಶುಭಕೋರಿ. ನಾವುಗಳು ಪ್ರತಿವರ್ಷ ಅಂದರೆ ಫೆಬ್ರವರಿ 14 ರಂದು ಪ್ರೇಮಿಗಳ ದಿನವನ್ನು ಆಚರಿಸುತ್ತೇವೆ.
ಈ ದಿನ ಎಷ್ಟು ಮಹತ್ವ ಪಡೆದುಕೊಂಡಿದೆ ಎಂದರೆ ಪ್ರತಿಯೊಬ್ಬರೂ ತಮ್ಮ ಜೀವನದುದ್ದಕ್ಕೂ ತಮ್ಮ ಸಂಗಾತಿಯಾಗುವವರೊಂದಿಗೆ ಕಳೆಯುವ, ಮನಸ್ಸಿನ ಭಾವನೆಗಳನ್ನು ಹಂಚಿಕೊಳ್ಳಲು ಹಂಬಲಿಸುವ ದಿನವಾಗಿದೆ.
ಈ ದಿನ ಪ್ರೇಮಿಗಳ ಜೀವನದ ಅತ್ಯುತ್ತಮ ಘಟ್ಟವಾಗಿದೆ ಕೆಲವರು ತಮ್ಮ ಭಾವನೆಗಳನ್ನು ಉಡುಗೊರೆ ನೀಡುವ ಮೂಲಕ ಹಂಚಿಕೊಳ್ಳುತ್ತಾರೆ, ಇನ್ನೂ ಕೆಲವರು ತಮ್ಮ ಸಂಗಾತಿಯೊಂದಿಗೆ ಏಕಾಂಗಿಯಾಗಿ ಕಳೆಯಲು, ತಮ್ಮ ಸಂಗಾತಿ ಇಷ್ಟ ಪಡುವಂತಿರಲು ಭರವಸೆಗಳನ್ನು ನೀಡುವ ಹಾಗೂ ತಮ್ಮಲ್ಲಿ ಬದಲಾವಣೆಗಳನ್ನು ಕಂಡುಕೊಳ್ಳುವ ಮೂಲಕ ಅವರವರ ಮನಸ್ಸಿನ ಭಾವನೆಗೆ ತಕ್ಕಂತೆ ಅವರು ಪ್ರೇಮಿಗಳ ದಿನವನ್ನು ಆಚರಿಸಿಕೊಳ್ಳುತ್ತಾರೆ.
ಈಗಿನ ಯುವ ಪ್ರೇಮಿಗಳಿಗೆ ಕೆಲ ಸಂದೇಶಗಳು : –
“ಪ್ರೀತಿ ಎಂಬುದು ಬರೀ ಆಕರ್ಷಣೆ ಅಲ್ಲ”
ಈಗಿನ ಕಾಲದಲ್ಲಿ ಪ್ರೀತಿ ಎಂಬುದು ಆಕರ್ಷಣೆ, ಅದರಾಚೆಗೆ ಮದುವೆ ಎಂಬ ಜವಾಬ್ದಾರಿ, ಇದೆರಡರ ನಡುವಿನ ಬದುಕು ಅಷ್ಟು ಸುಲಭವಲ್ಲ. ಮದುವೆ ಎಂಬ ವೇದಿಕೆಗೆ ಪ್ರೀತಿಯೇ ಮೆಟ್ಟಿಲು. ಈ ಮೆಟ್ಟಿಲನ್ನೆರುವುದು ಕೂಡ ಒಂದು ರೀತಿಯ ಸವಾಲು, ಭಾರತದಂತಹ ಸಂಪ್ರದಾಯದ ರಾಷ್ಟ್ರದಲ್ಲಿ ಪ್ರೀತಿಸುವುದೇ ಮದುವೆ ಯಾಗಲು ಎನ್ನಬಹುದು ಆದರೆ ಬಹಳಷ್ಟು ಜನರ ಬದುಕಿನಲ್ಲಿ ಪ್ರೀತಿ ಮದುವೆ ತನಕ ಹೋಗುವುದೇ ಇಲ್ಲ. ಅವರ ನಡುವಿನ ಹತ್ತಾರು ಸಮಸ್ಯೆಗಳಿಗೆ ಪ್ರೀತಿಯನ್ನು ಬಲಿ ಕೊಡುತ್ತಾರೆ.
“ಪ್ರೀತಿ ಎಂದರೆ ಎಂಜಾಯ್ ಮಾಡುವುದಲ್ಲ”
ಇವತ್ತಿನ ಆಧುನಿಕ ಬದುಕಿನಲ್ಲಿ ಮತ್ತು ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವಗಳು ಪ್ರೀತಿಪ್ರೆಮದ ಮಹತ್ವವನ್ನು ಗಾಳಿಗೆ ತೂರಿ ಅದೊಂದು ಎಂಜಾಯ್ ಎಂಬ ಮಟ್ಟಿಗೆ ತಂದು ನಿಲ್ಲಿಸಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ.
ದೈಹಿಕ ಆಕರ್ಷಣೆಯನ್ನೇ ಪ್ರೀತಿ ಎಂದು ನಂಬುವುದು, ಜತೆಗೆ ಸಧ್ಯಕ್ಕೆ ನನಗೊಬ್ಬ ಗೆಳಯ/ಗೆಳತಿ ಇರಲಿ, ಆಮೇಲೆ ನೋಡಿದರಾಯಿತೆಂಬ ಮನಸ್ಥಿತಿಗಳು ಬಹಳಷ್ಟು ಸಲ ತೊಂದರೆಗಳಿಗೆ ಎಡೆ ಮಾಡಿಕೊಡುವುದಂತು ನಿಶ್ಚಿತ.
“ಹುಷಾರ್ ವಂಚಕ ಪ್ರೇಮಿಗಳಿದ್ದಾರೆ!”
ಕೆಲವು ವಂಚಕ ಮನಸ್ಸುಗಳು ಬೇರೆ ಬೇರೆ ರೀತಿಯಲ್ಲಿ ಆಕರ್ಷಿಸಿ ಪ್ರೀತಿಸುವ ನಾಟಕವಾಡಿ ತಾನು ಬಯಸಿದ್ದನ್ನು ಪಡೆದು ದೂರ ಸರಿಯುವವರು ಇಲ್ಲಿದ್ದಾರೆ. ಇಂಥವರಿಂದ ಪ್ರಾಮಾಣಿಕ ಪ್ರೀತಿಗೆ ಅವಮಾನವಾಗುತ್ತದೆ. ಪ್ರೀತಿಯ ಮೇಲೆ ಅನುಮಾನ ಮೂಡುತ್ತದೆ. ಅದರಲ್ಲೂ ಮುಖ್ಯವಾಗಿ ಕಾಲೇಜು ವಿದ್ಯಾರ್ಥಿಗಳು ಈ ದಿನವನ್ನು ಹಬ್ಬದಂತೆ ಆಚರಿಸುತ್ತಿರುವುದು ಕಂಡುಬರುತ್ತದೆ. ಇದರ ಅಗತ್ಯತೆ ಇದೆಯಾ? ಇದೆಲ್ಲ ಬೇಕಾ? ಎಂಬ ಪ್ರಶ್ನೆಗಳ ಜೊತೆಯಲ್ಲಿ ನಮ್ಮನು ಹೆತ್ತವರಲ್ಲಿ ನಮ್ಮ ಬಗ್ಗೆ ತಳಮಳಗಳು ಹೆಚ್ಚಾಗುವಂತೆ ಮಾಡುತ್ತಿದ್ದೇವೆ.
“ಪ್ರೇಮ ಅಂದ್ರೆ ಸೂಕ್ಷ್ಮ ಸಂವೇದಿ”
ಪ್ರೀತಿಯೆಂದರೆ ಅಪರೂಪಕ್ಕೆ ಭೇಟಿಯಾಗಿ ಹರಟೆ ಹೊಡೆಯುವುದು, ಐಸ್ ಕ್ರೀಮ್ ಮೆಲ್ಲು lವುದು, ಊಟ ಮಾಡುವುದು, ಸಿನಿಮಾ ನೋಡುವುದು, ಎಲ್ಲವೂ ಖುಷಿ ಕೊಡುತ್ತಿರುತ್ತದೆ. ಏಕೆಂದರೆ ಪ್ರೇಮ ಅಂದ್ರೆ ಅದೊಂದು ಸೂಕ್ಷ್ಮ ಸಂವೇದಿ. ಈ ಪ್ರೇಮ ಗಟ್ಟಿಯಾಗಬೇಕಾದರೆ ಪ್ರೇಮಿಗಳಲ್ಲಿ ನಂಬಿಕೆ ಮತ್ತು ಪ್ರಾಮಾಣಿಕತೆ ಮುಖ್ಯವಾಗುತ್ತದೆ ಅದೆರಡು ಇಲ್ಲದೇ ಹೋದರೆ ಪ್ರೀತಿಸಲು ಸಾಧ್ಯವಿಲ್ಲ. ಒಂದು ವೇಳೆ ಪ್ರೀತಿಸಿದರು ಅಂತಹ ಪ್ರೀತಿ ಹೆಚ್ಚು ಕಾಲ ಉಳಿಯುವುದಿಲ್ಲ.
“ಪ್ರೀತಿಯ ಕನಸು, ಮದುವೆಯಲ್ಲಿ ನನಸು”
ಹಾಗೆ ನೋಡಿದರೆ ಜವಾಬ್ದಾರಿಯುತ ಬದುಕು ಕಟ್ಟಿಕೊಳ್ಳುವ ಮುನ್ನ ಪ್ರೀತಿಯನ್ನು ಹೋರಾಡಿ ಗೆದ್ದರೂ, ಅದರ ಗೆಲುವನ್ನು ಜೀವನದ ಕೊನೆಯ ಕ್ಷಣದೊರೆಗು ಅನುಭವಿಸಲು ಸಾಧ್ಯವಾಗದೆ ಬದುಕಿನ ಅರ್ಧದಲ್ಲಿಯೇ ಪ್ರೀತಿಯನ್ನು ಕೈಚೆಲ್ಲಿ ಕುಳಿತಿರುವವರಿಗೇನು ಕೊರತೆಯಿಲ್ಲ. “ಪ್ರೀತಿ ಎಂಬುದೊಂದು ಕನಸು, ಆ ಕನಸನ್ನು ನಾವು ಮದುವೆಯೊಂದಿಗೆ ನನಸು ಮಾಡಿಕೊಳ್ಳಬೇಕಾಗಿದೆ.ಆಗ ಮಾತ್ರ ಆ ಪ್ರೀತಿಗೆ ಬೆಲೆ ಸಿಗುವುದು.
“ನಾವು ಪ್ರೀತಿಗೆ ಗೌರವ ಕೊಡೋಣ”
ಪ್ರೀತಿಸಿ ಬಳಿಕ ಮದುವೆಯಾಗಿ ಸದಾ ಜೊತೆಯಲ್ಲಿದ್ದು ಜವಾಬ್ದಾರಿಗಳನ್ನು ಎದುರಿಸುತ್ತಾ ಮುನ್ನಡೆಯುತ್ತಿರುವಾಗ ಜೀವನದ ಕ್ಷಣಗಳು ಕಷ್ಟವಾಗಿ ಕಾಣಲಾರಂಭಿಸುತ್ತದೆ. ಆದರೆ ಅದೆಲ್ಲವನ್ನೂ ಮೀರಿ ಖುಷಿ ಖುಷಿಯಾಗಿ ಬದುಕಿ ತೋರಿಸುವುದೇ ನಿಜವಾದ ಜೀವನ ಮತ್ತು ನಾವು ಪ್ರೀತಿಗೆ ಕೊಡುವ ಗೌರವವಾಗುತ್ತದೆ.
ನೆನಪಿರಲಿ ಪ್ರೇಮಿಗಳ ದಿನದಂದು ಶ್ರೀಮಂತರು ಐಷಾರಾಮಿ ಹೋಟೆಲುಗಳಲ್ಲಿ ಪಾರ್ಟಿ, ಕುಣಿತದೊಂದಿಗೆ ಅದ್ಧೂರಿಯಾಗಿ ಆಚರಿಸಿ ಶುಭಾಶಯ ವಿನಿಮಯ ಮಾಡಿಕೊಳ್ಳಬಹುದು, ಆದರೆ ಪ್ರಾಮಾಣಿಕ ಪ್ರೀತಿಗೆ ಅದ್ಯಾವುದೂ ಅವಶ್ಯವಿಲ್ಲ. ಹೀಗಿರುವಾಗ ಇದುವರೆಗೂ ಪ್ರೇಮಿಗಳ ದಿನದಂದು ಗುಲಾಬಿ ಹೂ ನೀಡಿ ಲವ್ ಯು ಎಂದವರು. ಈಗ ಮದುವೆ ಆಯಿತು ಅದೆಲ್ಲ ಯುವ ಪ್ರೇಮಿಗಳು ಮಾಡುತ್ತಾರೆ. ಎಂದು ತೆಪ್ಪಗೆ ಕೂರಬೇಡಿ ನಿಮ್ಮ ಸಂಗಾತಿಗೊಂದು ಗುಲಾಬಿ ನೀಡಿ ಐ ಲವ್ ಯು ಎಂದು ಹೇಳಿಬಿಡಿ… ಆ ಮನಸ್ಸಿಗೆ ಹೇಳಲಾರದಷ್ಟು ಖುಷಿ ಸಿಗುತ್ತದೆ…
ಪ್ರಾಮಾಣಿಕ ಪ್ರೀತಿಯನ್ನು ದಯವಿಟ್ಟು ಯಾರು ಕಳೆದುಕೊಳ್ಳದಿರಿ.