
ನಾಡಿನ ನೆಲ,ಜಲ,ಗಡಿ, ಭಾಷೆ ಗೌರವಿಸಿ – ರವಿ ಚೇಳ್ಳಗುರ್ಕಿ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 01- ನಾಡಿನ ನೆಲ,ಜಲ,ಗಡಿ, ಭಾಷೆ ಹಾಗೂ ಸಂಸ್ಕೃತಿಯನ್ನು ಪ್ರತಿಯೊಬ್ಬರೂ ಕೂಡ ಗೌರವಿಸಿ, ಕಾಪಾಡಿಕೊಂಡು ಹೋಗಬೇಕೆಂದು ಕರ್ನಾಟಕ ರಾಜ್ಯ ಕ್ರಿಯಾಶೀಲ ಶಿಕ್ಷಕರ ವೇದಿಕೆ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ರವಿಚೇಳ್ಳಗುರ್ಕಿ ಹೇಳಿದರು.
ತಾಲ್ಲೂಕಿನ ಸಂಜೀವರಾಯನಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವ -50 ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ ಅಖಂಡ ಕರ್ನಾಟಕದ ಏಕೀಕರಣಕ್ಕಾಗಿ ಕವಿಗಳು, ಸಾಹಿತಿಗಳು, ಭಾಷಾಭಿಮಾನಿಗಳು,ಸಂಘಸಂಸ್ಥೆಗಳು ಹಗಲಿರುಳು ಶ್ರಮಿಸಿದ್ದಾರೆ.
ಅಲ್ಲದೆ ಕನ್ನಡ ಭಾಷೆಗೆ ಎರಡು ಸಾವಿರ ವರ್ಷಗಳ ಇತಿಹಾಸವಿದೆ.ಆದ್ದರಿಂದ ಕವಿ ಮಹಾಲಿಂಗರಂಗ ಅವರು ಕನ್ನಡ ಭಾಷೆ ಮಹತ್ವದ ಕುರಿತು ಈ ರೀತಿ ವರ್ಣಿಸಿದ್ದಾರೆ.
ಸಿಪ್ಪೆ ತೆಗೆದ ಕಬ್ಬಿನಂದದಿ,ಸುಲಿದ ಬಾಳೆ ಹಣ್ಣಿನಂದದಿ,ಅಳಿದ ಉಷ್ಣದ ಹಾಲಿನಂದದಿ ಕಲಿಯಲು ಸುಲಭ ಎಂದಿದ್ದಾರೆ.
ಆದ್ದರಿಂದ ವಿದ್ಯಾರ್ಥಿಗಳು ಚಿಕ್ಕಂದಿನಲ್ಲೆ ಭಾಷೆಯ ಮಹತ್ವ ತಿಳಿದು ತಪ್ಪಿಲ್ಲದೇ ಓದಲು, ಬರೆಯಲು ಹಾಗೂ ಮಾತನಾಡಲು ಕಲಿಯಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆಯರಾದ ಪದ್ಮಾವತಿ ಹಾಗೂ ಶ್ರೀದೇವಿ ಅವರನ್ನು ಕ್ರಿಯಾಶೀಲ ಶಿಕ್ಷಕರ ವೇದಿಕೆಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಶಾಲೆಯ ಎಸ್. ಡಿ.ಎಂ.ಸಿ.ಅಧ್ಯಕ್ಷ ದೊಡ್ಡ ಕುಮಾರ,ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಬಸಮ್ಮ, ಸದಸ್ಯರಾದ ಕೆ.ನೀಲಮ್ಮ, ಕೆ.ಹೊನ್ನೂರಪ್ಪ,ಕೆ.ಪಿ.ಸುಂಕಣ್ಣ, ಕೆ.ತಿಪ್ಪೇಸ್ವಾಮಿ, ಪರಮೇಶ್ವರಪ್ಪ,ಸುಂಕಪ್ಪ, ಶಿಕ್ಷಕರಾದ ಬಸವರಾಜ, ಮೋದಿನ್ ಸಾಬ್, ಚನ್ನಮ್ಮ, ಸುಮತಿ,ಸುಧಾ, ವೈಶಾಲಿ,ಶ್ವೇತಾ, ಉಮ್ಮೇಹಾನಿ,ಶಶಮ್ಮ,ರಾಮಾಂಜಿನೇಯ ಹಾಗೂ ವಿದ್ಯಾರ್ಥಿ ಪ್ರತಿನಿಧಿ ಮಹೇಶ ಮುಂತಾದವರು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಿಂದ ಭಾಷಣ, ಅಭಿನಯ ಗೀತೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.