
ಮೈಕ್ರೋ ಅಬ್ಸರ್ವರ್ಸ್ಗೆ ಚುನಾವಣಾ ತರಬೇತಿ ಕಾರ್ಯಾಗಾರ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 30- ಬಳ್ಳಾರಿ ಲೋಕಸಭಾ ಕ್ಷೇತ್ರ ಚುನಾವಣೆ ಸಂಬಂಧ ಬರುವ ಮೇ 07 ರಂದು ಮತದಾನ ನಡೆಯಲಿದ್ದು, ಈಗಾಗಲೆ ಗುರುತಿಸಲಾಗಿರುವ ಸೂಕ್ಷ್ಮ ಮತಗಟ್ಟೆಗಳಲ್ಲಿ ಅಂದು ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆ ನಡೆಸುವಲ್ಲಿ ಮೈಕ್ರೋ ಅಬ್ಸರ್ವರ್ಗಳ ಪಾತ್ರ ಮಹತ್ವದ್ದಾಗಿದೆ ಎಂದು ಚುನಾವಣಾ ಸಾಮಾನ್ಯ ವೀಕ್ಷಕ ಚಂದ್ರಶೇಖರ ಸಖಮುರಿ ಅವರು ಹೇಳಿದರು.
ನಗರದ ಜಿಲ್ಲಾ ಪಂಚಾಯತಿಯ ನಜೀರ್ಸಾಬ್ ಸಭಾಂಗಣದಲ್ಲಿ ಮೈಕ್ರೋ ಅಬ್ಸರ್ವರ್ಸ್ಗಳಿಗೆ ಏರ್ಪಡಿಸಲಾಗಿದ್ದ ತರಬೇತಿ ಕಾರ್ಯಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಈಗಾಗಲೆ ಜಿಲ್ಲೆಯಲ್ಲಿ 396 ಮತಗಟ್ಟೆಗಳನ್ನು ಸೂಕ್ಷ್ಮ ಮತಗಟ್ಟೆಗಳನ್ನಾಗಿ ಗುರುತಿಸಲಾಗಿದ್ದು, ಪ್ರತಿ ಮತಗಟ್ಟೆಗೆ ಒಬ್ಬರು ಮೈಕ್ರೋ ಅಬ್ಸರ್ವರ್ಸ್ ಅನ್ನು ನೇಮಿಸಲಾಗಿದೆ. ಮೈಕ್ರೋ ಅಬ್ಸರ್ವರ್ಸ್ ಗಳು ಸಾಮಾನ್ಯವಾಗಿ ಬ್ಯಾಂಕ್ ಅಥವಾ ಕೇಂದ್ರ ಸೇವೆಯ ಅಧಿಕಾರಿ, ಸಿಬ್ಬಂದಿಯಾಗಿರುತ್ತಾರೆ. ಚುನಾವಣೆಯನ್ನು ಮುಕ್ತ ಹಾಗೂ ನ್ಯಾಯ ಸಮ್ಮತವಾಗಿ ನಡೆಸುವುದು ಇದರ ಉದ್ದೇಶವಾಗಿರುತ್ತದೆ.
ಸಾರ್ವತ್ರಿಕ ಚುನಾವಣೆಯನ್ನು ಮುಕ್ತ ಹಾಗೂ ನ್ಯಾಯ ಸಮ್ಮತವಾಗಿ ನಡೆಸಲು ಪ್ರತಿಯೊಬ್ಬ ಮೈಕ್ರೋ ಅಬ್ಸರ್ವರ್ ಕೂಡ ಪ್ರತಿ ಮತಗಟ್ಟೆಯಲ್ಲಿ ಮೇ 07 ರಂದು ಜರುಗಲಿರುವ ಚುನಾವಣಾ ಪ್ರಕ್ರಿಯೆಯ ಪ್ರತಿಯೊಂದು ಹಂತದಿಂದ ಅಂದರೆ ಬೆಳಿಗ್ಗೆ ಆರು ಗಂಟೆಯ ಅಣುಕು ಮತದಾನದಿಂದ ಪ್ರಾರಂಭಿಸಿ ಮತದಾನ ಮುಕ್ತಾಯವಾಗುವ ತನಕ ಪ್ರತಿಯೊಂದು ಹಂತವನ್ನು ಸೂಕ್ಷ್ಮವಾಗಿ ಗಮನಿಸಿ ಎಲ್ಲಾ ಹಂತದಲ್ಲಿ ಮತದಾನವು ಮುಕ್ತ ಹಾಗೂ ನ್ಯಾಯಸಮ್ಮತವಾಗಿ ಜರುಗಲು, ಮತದಾರರು ನಿರ್ಭೀತಿಯಿಂದ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಲು ಅವಕಾಶ ಕಲ್ಪಿಸಬೇಕಿದೆ ಎಂದರು.
ಚುನಾವಣೆಯ ಪ್ರತಿ ಹಂತವನ್ನು ದಾಖಲಿಸಲು ತಾವು ಪ್ರಮುಖ ಪಾತ್ರ ವಹಿಸಬೇಕು. ಮತಗಟ್ಟೆಗಳಲ್ಲಿ ಮತದಾನ ದಿನದಂದು ನಿಯಮಾನುಸಾರ ಕೈಗೊಳ್ಳಬೇಕಾದ ಎಲ್ಲ ಕಾರ್ಯಗಳು ಅಚ್ಚುಕಟ್ಟಾಗಿ ನಡೆಯುವಂತಾಗಲು ಹಾಗೂ ಚುನಾವಣೆಯನ್ನು ಪಾರದರ್ಶಕವಾಗಿ ಯಶಸ್ವಿಯಾಗಿಸಲು ಎಲ್ಲರ ಸಹಕಾರ ಅಗತ್ಯವಾಗಿದೆ ಎಂದರು.
ಚುನಾವಣಾ ಪ್ರಕ್ರಿಯೆಯ ದಿನದಂದು ಮೈಕ್ರೋ ಅಬ್ಸರ್ವರ್ಗಳ ಕರ್ತವ್ಯಗಳು ಸೇರಿದಂತೆ ಅವರು ಪ್ರತಿ ಹಂತದ ಚುನಾವಣಾ ಪ್ರಕ್ರಿಯೆ ದಾಖಲಿಸುವ ಚೆಕ್ ಲೀಸ್ಟ್ನಲ್ಲಿ ದಾಖಲಿಸುವ ಪ್ರಕ್ರಿಯೆಯನ್ನು ತರಬೇತಿ ಕಾರ್ಯಗಾರದಲ್ಲಿ ನೀಡಲಾಯಿತು.
ತರಬೇತಿಯಲ್ಲಿ ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಝುಬೇರ್ ಸೇರಿದಂತೆ ವಿವಿಧ ನೋಡಲ್ ಅಧಿಕಾರಿಗಳು ಉಪಸ್ಥಿತರಿದ್ದರು. ಚುನಾವಣಾ ತರಬೇತಿಗೆ ಬಳ್ಳಾರಿ ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳಿಂದ 396 ಮೈಕ್ರೋ ಅಬ್ಸರ್ವರ್ಸ್ಗಳು ಹಾಜರಾಗಿದ್ದರು.