
ಯಲಬುರ್ಗಾ/ ಕುಕನೂರ ತಾಲೂಕು ನರೇಗಾ ಪ್ರಗತಿ ಪರಿಶೀಲನೆ ಜಿಪಂ ಯೋಜನಾ ನಿರ್ದೇಶಕರು
ರೈತರಿಗೆ ಹೆಚ್ಚು ವೈಯಕ್ತಿಕ ಕಾಮಗಾರಿ ಕೊಟ್ಟು ಸಬಲರನ್ನಾಗಿಸಿ: ಟಿ. ಕೃಷ್ಣಮೂರ್ತಿ
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ, 07- ಉದ್ಯೋಗ ಖಾತ್ರಿ ಯೋಜನೆಯಡಿ ತಾಲೂಕಿನ ರೈತರಿಗೆ ಹೆಚ್ಚು ವೈಯಕ್ತಿಕ ಕಾಮಗಾರಿಗಳನ್ನು ಕೊಟ್ಟು ಆರ್ಥಿಕವಾಗಿ ಸಬಲರನ್ನಾಗಿ ಮಾಡಲು ಕ್ರಿಯಾಯೋಜನೆ ಸಿದ್ದಪಡಿಸಬೇಕು ಎಂದು ಕೊಪ್ಪಳ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕರಾದ ಟಿ.ಕೃಷ್ಣಮೂರ್ತಿ ಅವರು ಹೇಳಿದರು.
ಮಂಗಳವಾರ ಯಲಬುರ್ಗಾ ಹಾಗೂ ಕುಕನೂರ ತಾಲೂಕು ಪಂಚಾಯತಿ ವತಿಯಿಂದ ಹಮ್ಮಿಕೊಂಡಿದ್ದ ನರೇಗಾ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮುಂಬರಲಿರುವ 2024-25 ನೇ ಸಾಲಿನ ಕ್ರಿಯಾಯೋಜನೆ ಸಿದ್ದಪಡಿಸಲು ಈಗಾಗಲೇ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ವಾರ್ಡ್ ಹಾಗೂ ಗ್ರಾಮ ಸಭೆ ನಡೆಸಿ ಕ್ರಿಯಾಯೋಜನೆ ಸಿದ್ದಪಡಿಸಲಾಗುತ್ತಿದೆ. ಇದರಲ್ಲಿ ಗ್ರಾಮ ಪಂಚಾಯತಿಯವರು ಮಾತ್ರವಲ್ಲದೇ ಕೃಷಿ, ತೋಟಗಾರಿಕೆ, ಅರಣ್ಯ, ರೇಷ್ಮೆ ಇಲಾಖೆ ಅಧಿಕಾರಿಗಳು ಗ್ರಾಮ ಪಂಚಾಯತಿಗೆ ಕನಿಷ್ಠ 100 ವೈಯಕ್ತಿಕ ಫಲಾನುಭವಿಗೆ ಕೆಲಸ ಕೊಡುವಂತೆ ಕ್ರಿಯಾಯೋಜನೆ ಸಿದ್ದಪಡಿಸಿ ಸಲ್ಲಿಸಬೇಕು. ಈ ರೀತಿ ಮಾಡಿದರೆ ತಾಲೂಕಿನ ಶೇಕಡಾ 50 ರಷ್ಟು ರೈತರಿಗೆ ಇಲಾಖೆಗಳಿಂದ ಸೌಲಭ್ಯ ಸಿಗಲಿವೆ ಎಂದರು.
ಈ ಬಾರಿ ಮಳೆ ಬಾರದ ಹಿನ್ನೆಲೆಯಲ್ಲಿ ಜನರಿಗೆ ನರೇಗಾದಡಿ ಹೆಚ್ಚಿನ ಸಂಖ್ಯೆಯಲ್ಲಿ ಕೆಲಸ ಕೊಡಬೇಕು. ಗ್ರಾಮೀಣ ಜನರಿಗೆ ತಾವಿರುವಲ್ಲೆ ಕೆಲಸ ಕೊಟ್ಟು ಗೂಳೆ ಹೋಗದಂತೆ ತಡೆಯಬೇಕು. ಇದಕ್ಕೆ ಸಂಬಂಧಪಟ್ಟಂತೆ ಗ್ರಾಮ ಪಂಚಾಯತಿಯವರು ಸಾಮೂಹಿಕ ಕೆಲಸ ಕೊಡಬೇಕು. ಗೋಮಾಳ ಅಭಿವೃದ್ಧಿಪಡಿಸಬೇಕು. ಬೋರ್ ವೆಲ್ ರಿಚಾರ್ಜ್ ಪಿಟ್ ಕಾಮಗಾರಿ ತುರ್ತಾಗಿ ಮುಗಿಸಬೇಕು. ಬಯೋಗ್ಯಾಸ್, ಶಾಲಾಭಿವೃದ್ಧಿ ಕಾಮಗಾರಿಗಳು ಮುಂತಾದವುಗಳನ್ನು ತುರ್ತಾಗಿ ಮುಗಿಸಬೇಕು. ಜಾಬ್ ಕಾರ್ಡ್ ಸಮೀಕ್ಷೆ ಮುಗಿಸಬೇಕು ಎಂದರು.
ಸಭೆಯಲ್ಲಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಸಂತೋಷ ಪಾಟೀಲ್ ಬಿರಾದಾರ್, ಯಲಬುರ್ಗಾ/ ಕುಕನೂರ ತಾಲೂಕಿನ ಸಹಾಯಕ ನಿರ್ದೇಶಕರಾದ ಕು. ಗೀತಾ ಅಯ್ಯಪ್ಪ, ವೆಂಕಟೇಶ ವಂದಾಲ, ಫಕೀರಪ್ಪ ಕಟ್ಟಿಮನಿ, ಶರಣಪ್ಪ ಕೆಳಗಿನಮನಿ ಹಾಗೂ ಎಲ್ಲ ಅನುಷ್ಟಾನ ಇಲಾಖೆಯ ಅಧಿಕಾರಿಗಳು, ತಾಪಂ ಸಿಬ್ಬಂದಿ, ಗ್ರಾಮ ಪಂಚಾಯತಿ ಪಿಡಿಒರವರು, ಟಿಎಇ, ಬಿಎಫ್ ಟಿ, ಗ್ರಾಮ ಕಾಯಕ ಮಿತ್ರರು ಉಪಸ್ಥಿತರಿದ್ದರು.