
‘ರಾಷ್ಟ್ರದ ಸಂಸ್ಕೃತಿ ಸಂವರ್ಧನೆ ಧರ್ಮಪೀಠಗಳ ಕರ್ತವ್ಯ’
ರಾಮೇಶ್ವರದಲ್ಲಿ ವೀರಶೈವ ಧರ್ಮದ ಕಾಶೀ ಜಗದ್ಗುರು ಪೀಠದ ಶಾಖಾಮಠ ಸ್ಥಾಪನೆಗೆ ಭೂಮಿ ಪೂಜೆ
ಕರುನಾಡ ಬೆಲಗು ಸುದ್ದಿ
ಧಾರವಾಡ, ೨೦- ಮೇರು ಮೌಲ್ಯಗಳ ವಿಶಿಷ್ಟ ಘನತೆ ಹೊಂದಿರುವ ಭಾರತದ ಧಾರ್ಮಿಕ ಮತ್ತು ಚಾರಿತ್ರಿಕ ಉತ್ಕೃಷ್ಟ ಪರಂಪರೆಯು ನಮ್ಮ ಸಂಸ್ಕೃತಿಯ ಭಾಗವೇ ಆಗಿದೆ. ಹಾಗಾಗಿ ರಾಷ್ಟ್ರದ ಸಂಸ್ಕೃತಿ ಸಂವರ್ಧನೆ ಧರ್ಮಪೀಠಗಳ ಪರಮ ಕರ್ತವ್ಯವಾಗಿದೆ ಎಂದು ಕಾಶಿ ಜ್ಞಾನ ಪೀಠದ ಹಿರಿಯ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗತ್ಪಾದರು ಹೇಳಿದರು.
ಅವರು ತಮಿಳುನಾಡಿನ ರಾಮನಾಡು ಜಿಲ್ಲೆಯ ರಾಮೇಶ್ವರ ಜ್ಯೋತಿರ್ಲಿಂಗ ಕ್ಷೇತ್ರದ ಬಸ್ ನಿಲ್ದಾಣದ ಹತ್ತಿರವಿರುವ ವಿಶಾಲ ನಿವೇಶನದಲ್ಲಿ ವೀರಶೈವ ಧರ್ಮದ ಪಂಚಪೀಠಗಳಲ್ಲಿ ಒಂದಾಗಿರುವ ಕಾಶಿ ಜಗದ್ಗುರು ಪೀಠದ ಶಾಖಾ ಜಂಗಮವಾಡಿಮಠದ ನಿರ್ಮಾಣಕ್ಕಾಗಿ ರವಿವಾರ ನಡೆದ ಭೂಮಿಪೂಜಾ ಸಮಾರಂಭದ ಸಾನ್ನಿಧ್ಯವಹಿಸಿ ಮಾತನಾಡುತ್ತಿದ್ದರು. ಭಾರತದ ಅನೇಕ ಸಂತ-ಮಹಾಂತ ತಪಸ್ವಿಗಳು ದೇಶದ ಉನ್ನತ ಆಧ್ಯಾತ್ಮಿಕ ತನ್ಮಯತೆಯನ್ನು ಉಳಿಸಬೇಕೆಂಬ ಉದ್ದೇಶದಿಂದ ನದಿ, ಬೆಟ್ಟ, ಸರೋವರ, ಸಮುದ್ರಗಳ ತಟಗಳಲ್ಲಿ ಧರ್ಮಕ್ಷೇತ್ರಗಳ ಮತ್ತು ಮಠ-ಪೀಠಗಳ ಸ್ಥಾಪನೆಗೆ ಮುಂದಾಗಿದ್ದು, ಪ್ರಸ್ತುತ ಅವುಗಳನ್ನು ಸಂವರ್ಧನೆಗೊಳಿಸಿ ಮುಂದಿನ ಜನಾಂಗಕ್ಕೆ ಉಳಿಸಬೇಕಾಗಿದೆ. ಈ ನಿಟ್ಟಿನಲ್ಲಿ ಭಾರತದ ದಕ್ಷಿಣದ ತುದಿಯಲ್ಲಿ ಕಾಶಿ ಜಗದ್ಗುರು ಪೀಠದ ಶಾಖಾ ಜಂಗಮವಾಡಿಮಠದ ನಿರ್ಮಾಣ ಕಾರ್ಯಕ್ಕೆ ಈಗ ಚಾಲನೆ ಕೊಡಲಾಗಿದೆ ಎಂದರು.
ದ್ವಾದಶ ಜ್ಯೋತಿರ್ಲಿಂಗ ಕ್ಷೇತ್ರಗಳಲ್ಲಿ ಒಂದಾದ ರಾಮೇಶ್ವರದಲ್ಲಿ ಕಾಶಿ ಜಗದ್ಗುರು ಪೀಠದ ಶಾಖೆಯನ್ನು ಸ್ಥಾಪಿಸುವಂತೆ ಕಾಶಿಗೆ ಆಗಮಿಸುವ ದಕ್ಷಿಣ ಭಾರತದ ಸಮಸ್ತ ಭಕ್ತ ಸಮೂಹ ಅನೇಕ ವರ್ಷಗಳಿಂದ ಒತ್ತಾಯ ಮಾಡುತ್ತಿದ್ದರು. ಭಕ್ತರ ಇಚ್ಛೆಯಂತೆ ಇದೀಗ ಕಾಶಿ ಪೀಠವು ತನ್ನ ಶಾಖೆಯ ಕಟ್ಟಡ ನಿರ್ಮಿಸಲು ಮುಂದಾಗಿದ್ದು, ವಿಶೇಷವಾಗಿ ದಕ್ಷಿಣ ಭಾರತದ ರಾಜ್ಯಗಳ ಭಕ್ತ ಸಂಕುಲದ ಸೇವೆಗಳಲ್ಲಿ ಇದು ಆದಷ್ಟೂ ಬೇಗ ತೆಲೆ ಎತ್ತಲಿದೆ ಎಂದೂ ಕಾಶಿ ಪೀಠದ ಹಿರಿಯ ಜಗದ್ಗುರುಗಳು ಹೇಳಿದರು.
ಶ್ರೀಶೈಲ ಪೀಠದ ಶ್ರೀಜಗದ್ಗುರು ಡಾ. ಚೆನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಆಶೀರ್ವನ ನೀಡಿ, ರಾಷ್ಟçದ ವಿವಿಧ ಭಾಗಗಳಲ್ಲಿರುವ 12 ಜ್ಯೋತಿರ್ಲಿಂಗಗಳು ಭಾರತೀಯರೂ ಸೇರಿದಂತೆ ವಿಶ್ವತೋಮುಖವಾಗಿ ಜನಮನಗಳನ್ನು ಒಂದಾಗಿಸಲು ಸಾಕ್ಷಿಯಾಗಿವೆ. ಎಲ್ಲಿ ಭಕ್ತಿ ಇದೆಯೋ ಅಲ್ಲಿ ಭೇದವಿಲ್ಲ. ದಕ್ಷಿಣ ಭಾರತದ ರಾಜ್ಯಗಳೂ ಸೇರಿದಂತೆ ಭಾರತದ ವಿವಿಧ ರಾಜ್ಯಗಳ ಭಕ್ತಗಣದ ಸಂಕಲ್ಪವನ್ನು ಆಗುಮಾಡಲು ಪ್ರಸ್ತುತ ಕಾಶಿ ಜಗದ್ಗುರು ಪೀಠದ ಶಾಖಾ ಜಂಗಮವಾಡಿಮಠದ ನಿರ್ಮಾಣಕ್ಕಾಗಿ ಕಾಶಿ ಪೀಠದ ಉಭಯ ಜಗದ್ಗುರುಗಳು ಮುಂದಾಗಿರುವುದು ತಮಗೆ ಸಂತಸವನ್ನು ತಂದಿದೆ ಎಂದರು.
ಹೊಸ ಕಟ್ಟಡದ ಭೂಮಿಪೂಜೆ ನೆರವೇರಿಸಿದ ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಾತನಾಡಿ, ‘ದಕ್ಷಿಣಧಾಮ’ ಎಂದೇ ಪ್ರಸಿದ್ಧಿಯಾಗಿರುವ ರಾಮೇಶ್ವರ ಜ್ಯೋತಿರ್ಲಿಂಗ ಕ್ಷೇತ್ರವು ರಾಮಾಯಣದಷ್ಟೇ ಪ್ರಾಚೀನವಾದದ್ದು. ಶ್ರೀಲಂಕೆಯಲ್ಲಿದ್ದ ತನ್ನ ಧರ್ಮಪತ್ನಿ ಸೀತಾ ಮಾತೆಯನ್ನು ಕರೆತರಲು ಶ್ರೀರಾಮನು ಶ್ರೀಲಂಕೆಗೆ ಹೋಗುವ ಮಾರ್ಗಮಧ್ಯದಲ್ಲಿ ಈ ಕ್ಷೇತ್ರದಲ್ಲಿ ತಂಗಿ ಸಾಗರವನ್ನು ದಾಟುವ ಮುನ್ನ ಇಲ್ಲಿ ಶಿವಲಿಂಗವನ್ನು ಸ್ಥಾಪಿಸಿ ಅದನ್ನು ಪೂಜಿಸಿದ್ದರಿಂದ ಅದುವೇ ರಾಮೇಶ್ವರಲಿಂಗವಾಗಿ ಇಂದಿಗೂ ಪೂಜೆಗೊಳ್ಳುತ್ತಿದೆ. ಇಂತಹ ಪವಿತ್ರ ಕ್ಷೇತ್ರದಲ್ಲಿ ಭಕ್ತ ಸಮೂಹದ ಅನುಕೂಲಕ್ಕಾಗಿ ಕಾಶಿ ಪೀಠದ ಜಗದ್ಗುರುಗಳು ತಮ್ಮ ಪೀಠದ ಶಾಖೆ ಆರಂಭಿಸುತ್ತಿರುವುದು ಅತ್ಯಂತ ಸೂಕ್ತವಾಗಿದ್ದು, ತಾವು ಅತ್ಯಂತ ಭಕ್ತಿಪೂರ್ಣವಾಗಿ ಭೂಮಿಪೂಜೆ ನೆರವೇರಿಸಿರುವುದಾಗಿ ಹೇಳಿದರು.
ಕಾಶಿ ಜ್ಞಾನ ಪೀಠದ ಕಿರಿಯ ಜಗದ್ಗುರು ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಭಗವತ್ಪಾದರು, ಸೊಲ್ಲಾಪೂರ ಸಂಸದರಾದ ಡಾ.ಜಯಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು, ಬೆಂಗಳೂರು ವಿಭೂತಿಪುರಮಠದ ಡಾ. ಮಹಾಂತಲಿಂಗ ಶಿವಾಚಾರ್ಯ ಸ್ವಾಮಿಗಳು, ಶಿವಗಂಗಾಕ್ಷೇತ್ರದ ಡಾ.ಮಲಯ ಶಾಂತಮುನಿ ಶಿವಾಚಾರ್ಯ ಸ್ವಾಮಿಗಳು, ಕಡಗಂಚಿ, ಜೈನಾಪೂರ, ಅಕ್ಕಿಆಲೂರ, ಕೊಣ್ಣೂರು, ಚೆನ್ನಗಿರಿ, ಗುಳೇದಗುಡ್ಡ, ಔಸಾದ ಗುರುಮಹಾರಾಜರು ಸೇರಿದಂತೆ ವಿವಿಧ ರಾಜ್ಯಗಳ ಅನೇಕ ಮಠಾಧೀಶರು ಪಾಲ್ಗೊಂಡಿದ್ದರು.
ರಾಜ್ಯದ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ, ಜಮಖಂಡಿ ಶಾಸಕ ಜಗದೀಶ ಗುಡಗುಂಟಿಮಠ, ಬಾಗಲಕೋಟೆಯ ಮಾಜಿ ಶಾಸಕ ಡಾ. ವೀರಣ್ಣ ಚರಂತಿಮಠ, ಸೊಲ್ಲಾಪೂರ ಮಾಜಿ ಶಾಸಕ ವಿಶ್ವನಾಥ ಚಾಕೋಟೆ, ಗದಗದ ಶಿವಯೋಗಿ ತೆಗ್ಗಿನಮಠ, ರಾಮೇಶ್ವರ ಕ್ಷೇತ್ರದ ವಿವಿಧ ರಾಜಕೀಯ ಮುಖಂಡರು ಹಾಗೂ ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರ ಉತ್ತರಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳ ಭಕ್ತ ಸಮೂಹ ಈ ಭೂಮಿಪೂಜಾ ಸಮಾರಂಭಕ್ಕೆ ಸಾಕ್ಷಿಯಾಗಿದ್ದರು.