
ತೋಟಗಾರಿಕೆ ಉತ್ಪನ್ನಗಳ ಕುರಿತು ರೈತರಿಗೆ ರಫ್ತು/ಖರೀದಿದಾರರ ಮತ್ತು ಮಾರಾಟಗಾರರ ಸಮಾವೇಶ-2024 ರೈತನಿಂದಲೇ ನಮ್ಮ ಬದುಕು, ದೇಶದ ಅಭಿವೃದ್ಧಿ ಸಾಧ್ಯ : ಸಂಸದ ಸಂಗಣ್ಣ ಕರಡಿ
ಕರುನಾಡ ಬೆಳಗು ಸುದ್ದಿ
ಕೊಪ್ಪಳ,27- ನಮ್ಮ ದೇಶದ ಅಭಿವೃದ್ಧಿ ಹಾಗೂ ನಮ್ಮ ಬದುಕು ನಿಂತಿರುವುದು ರೈತರ ಮೇಲೆ. ಅವರಿಂದ ಮಾತ್ರ ನಮ್ಮ ದೇಶದ ಅಭಿವೃದ್ಧಿ ಸಾಧ್ಯ. ಆದ್ದರಿಂದಲೇ ರೈತರನ್ನು ದೇಶದ ಬೆನ್ನೆಲುಬು ಎನ್ನುತ್ತೇವೆ ಎಂದು ಸಂಸದರಾದ ಸಂಗಣ್ಣ ಕರಡಿ ಅವರು ಹೇಳಿದರು.
ತೋಟಗಾರಿಕೆ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ ನಿಯಮಿತ(ಕೆಪೆಕ್) ರವರ ಸಹಯೋಗದಲ್ಲಿ ನಗರದ ಮಧುಶ್ರೀ ಗಾರ್ಡನ್ನಲ್ಲಿ ಆಯೋಜಿಸಿದ್ದ ಕೊಪ್ಪಳ ಜಿಲ್ಲೆಯ ಹಾಗೂ ಕಲಬುರಗಿ ವಿಭಾಗದ ಜಿಲ್ಲೆಗಳ ತೋಟಗಾರಿಕೆ ಉತ್ಪನ್ನಗಳ ಕುರಿತು ರೈತರಿಗೆ ರಫ್ತುದಾರರ/ಖರೀದಿದಾರರ ಮತ್ತು ಮಾರಾಟಗಾರರ ಸಮಾವೇಶ-2024 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತೋಟಗಾರಿಕೆ ಹಾಗೂ ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ, ಸೂಕ್ತ ಔಷಧೋಪಚಾರಗಳನ್ನು ಬಳಸಿಕೊಂಡು ರೈತರು ಉತ್ತಮ ಇಳುವರಿ ಪಡೆಯಬಹುದು. ನಮ್ಮ ಜಿಲ್ಲೆಯ ತೋಟಗಾರಿಕೆ ಹಾಗೂ ಕೃಷಿ ಇಲಾಖೆಯು ಸದಾ ರೈತರ ನೆರವಿಗೆ ಇದ್ದು, ರೈತರಿಗೆ ಉಪಯೋಗವಿರುವ ಸಲಹೆ, ಸೂಚನೆಗಳನ್ನು ಇಲಾಖೆಗಳಿಂದ ಪಡೆಯಬಹುದು. ಇಂದಿನ ಖರೀದಿದಾರರ ಹಾಗೂ ಮಾರಾಟಗಾರರ ಸಮಾವೇಶದಲ್ಲಿ ಭಾಗವಹಿಸಿರುವ ರೈತರು ತಮ್ಮ ತೋಟಗಾರಿಕೆ ಬೆಳೆಗಳ ಸೂಕ್ತ ಮಾರಾಟಕ್ಕೆ ಮಾರಾಟ ತಂತ್ರಗಳು, ಉತ್ತಮ ಮಾರುಕಟ್ಟೆ, ರಫ್ತು ವಿಧಾನ ಮುಂತಾದವುಗಳ ಬಗ್ಗೆ ಚರ್ಚಿಸಿ, ಮಾಹಿತಿ ಪಡೆಯಿರಿ. ಖರೀದಿದಾರರು ತೋಟಗಾರಿಕೆ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಒದಗಿಸಲು ಅಳವಡಿಸಿಕೊಳ್ಳಬಹುದಾದ ವಿಧಾನಗಳು, ಉತ್ಪನ್ನದ ಗುಣಮಟ್ಟ, ಮಾರುಕಟ್ಟೆಯ ಬೇಡಿಕೆ ವಿಸ್ತರಣೆ ಮುಂತಾದವುಗಳ ಕುರಿತು ರೈತರಿಗೆ ಸೂಕ್ತ ಮಾಹಿತಿ ನೀಡಿ. ಜಿಲ್ಲೆಯ ತೋಟಗಾರಿಕೆ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ಒದಗಿಸಿ, ರೈತರ ಶ್ರಮಕ್ಕೆ ಉತ್ತಮ ಆದಾಯ ದೊರೆಯಲು ಅನುಕೂಲ ಕಲ್ಪಿಸಿ ಎಂದು ಹೇಳಿದರು.
ಜಿಲ್ಲಾಧಿಕಾರಿ ನಲಿನ್ ಅತುಲ್ ಅವರು ಮಾತನಾಡಿ, ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ಒದಗಿಸುವುದು ಮುಖ್ಯವಾಗಿದೆ. ಜಿಲ್ಲೆಯಲ್ಲಿ ಸದ್ಯ ಶೇ.10 ರಷ್ಟು ಪ್ರದೇಶದಲ್ಲಿ ತೋಟಗಾರಿಕೆ ಬೆಳೆಗಳನ್ನು ಬೆಳೆಯುತ್ತಿದ್ದು, ಅದನ್ನು ಶೇ.30 ರಷ್ಟು ವಿಸ್ತರಿಸಿ, ತೋಟಗಾರಿಕೆ ಬೆಳೆಗಳು, ಉತ್ಪನ್ನಗಳನ್ನು ಜಿಲ್ಲೆಯಿಂದ ಬೇರೆಡೆ ರಫ್ತು ಮಾಡಬುದು ನಮ್ಮ ಉದ್ದೇಶವಾಗಿದೆ. ಈ ಕುರಿತು ಸಂಬAಧಿಸಿದ ಇಲಾಖಾ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ. ಒಟ್ಟು 1.5 ಲಕ್ಷ ಹೆಕ್ಟೆರ್ ತೋಟಗಾರಿಕೆ ಬೆಳೆಯ ಕ್ಷೇತ್ರವನ್ನು ಜಿಲ್ಲೆಯಲ್ಲಿ ವಿಸ್ತರಿಸಬೇಕು. ತೋಟಗಾರಿಕೆ ಬೆಳೆಗಳನ್ನು ಬೆಳೆಯುವ ಕುರಿತು ಆಸಕ್ತ ರೈತರು ತೋಟಗಾರಿಕೆ ಇಲಾಖೆಯನ್ನು ಸಂಪರ್ಕಿಸಿ, ಮಣ್ಣಿನ ಪರೀಕ್ಷೆ ಮಾಡಿಸಿ, ಮಣ್ಣಿನ ಗುಣಕ್ಕೆ ಅನುಗುಣವಾಗಿ ಬೆಳೆಯನ್ನು ಬೆಳೆಯಬೇಕು. ಅದರಂತೆ ತಾವು ಬೆಳೆಯುವ ಬೆಳೆಗೆ ಸೂಕ್ತ ಮಾರುಕಟ್ಟೆ ಕಲ್ಪಿಸುವುದು ಕೂಡ ರೈತರ ಜವಾಬ್ದಾರಿಯಾಗಿದೆ. ರೈತರು ತಮ್ಮ ತೋಟಗಾರಿಕೆ ಬೆಳೆಗಳು, ಉತ್ಪನ್ನಗಳ ಬಗ್ಗೆ ಸೂಕ್ತ ಮಾರುಕಟ್ಟೆ ಕಲ್ಪಿಸಲು ತೋಟಗಾರಿಕೆ ಇಲಾಖೆಯನ್ನು ಸಂಪರ್ಕಿಸಬಹುದು. ಇಂತಹ ಸಮಾವೇಶಗಳು ಕೂಡ ರೈತರಿಗೆ ಸಹಕಾರಿಯಾಗುತ್ತವೆ. ಕನಕಗಿರಿಯಲ್ಲಿ ತೋಟಗಾರಿಕೆ ಟೆಕ್ ಪಾರ್ಕ್ ನಿರ್ಮಿಸಲು ರೂ.100 ಕೋಟಿ ವೆಚ್ಚದ ಪ್ರಾಜೆಕ್ಟ್ ಮಾಡಲು ನಿರ್ಧರಿಸಿದ್ದು, ಅಗತ್ಯ ಪ್ರಮಾಣದ ಭೂಮಿ ಖರೀದಿ ಪ್ರಕ್ರಿಯೆ ನಡೆಯುತ್ತಿದೆ. ಇದರಿಂದ ತೋಟಗಾರಿಕೆ ಉತ್ಪನ್ನಗಳಿಗೆ ಉತ್ತಮ ಬೆಂಬಲ ದೊರೆಯುತ್ತದೆ ಎಂದು ಹೇಳಿದರು.
ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡೆಯ ಅವರು ಮಾತನಾಡಿ, ತೋಟಗಾರಿಕೆ ಕ್ಷೇತ್ರ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ರೈತರು ಅವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಕೇಂದ್ರ ಸರ್ಕಾರದಿಂದ ರಾಷ್ಟಿçÃಯ ತೋಟಗಾರಿಕೆ ಮಿಷನ್, ಕೋಲ್ಡ್ ಸ್ಟೋರೇಜ್, ಪ್ರಧಾನ ಮಂತ್ರಿ ಸಿಂಚಾಯಿ ಯೋಜನೆ ಮುಂತಾದ ಯೋಜನೆಗಳಿವೆ. ಕೃಷಿ ಹೊಂಡಗಳ ನಿರ್ಮಾಣಕ್ಕೆ ನರೇಗಾದಿಂದ ಸಹಾಯ ಪಡೆಯಬಹುದು. ಒಂದು ಬಾರಿ ಕೃಷಿ ಹೊಂಡವನ್ನು ಪೂರ್ಣ ಭರ್ತಿಗೊಳಿಸಿದರೆ ಕನಿಷ್ಠ ಮೂರು ವರ್ಷಗಳ ಕಾಲ ನೀರಿನ ಕೊರತೆಯಾಗದಂತೆ ನಿರ್ವಹಿಸಬಹುದು. ಸರ್ಕಾರದ ಇಂತಹ ಯೋಜನೆಗಳನ್ನು ರೈತರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.
ತೋಟಗಾರಿಕೆ ಉಪನಿರ್ದೇಶಕರಾದ ಕೃಷ್ಣ ಉಕ್ಕುಂದ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ತೋಟಗಾರಿಕೆ ಬೆಳೆಗಳು ಉತ್ತಮ ಆದಾಯ ನೀಡುವ ಬೆಳೆಗಳಾಗಿದ್ದು, ರೈತರು ತೋಟಗಾರಿಕೆ ಬೆಳೆಗಳ ಬಗ್ಗೆ ಆಸಕ್ತಿ ವಹಿಸಿದರೆ ಇಲಾಖೆಯಿಂದ ಅಗತ್ಯ ಸಲಹೆ ಸೂಚನೆ, ನೆರವು ನೀಡಲಾಗುವುದು. ಈಗಾಗಲೇ ಜಿಲ್ಲೆಯಲ್ಲಿ ದಾಳಿಂಬೆಯನ್ನು 4800 ಹೆ., ಮಾವು-4850 ಹೆ., ಪೇರಲ-2450 ಹೆ., ದ್ರಾಕ್ಷಿ-519 ಹೆ. ಪ್ರದೇಶ ಸೇರಿದಂತೆ ವಿವಿಧ ಹಣ್ಣುಗಳನ್ನು ಒಟ್ಟು 16509 ಹೆ. ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. ಹಾಗೂ ಅವುಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆಯನ್ನು ಸಹ ಕಲ್ಪಿಸಲಾಗಿದೆ. ಅದರಂತೆ ಇನ್ನೂ ಹೆಚ್ಚಿನ ರೈತರು ತೋಟಗಾರಿಕೆ ಬೆಳೆಗಳಲ್ಲಿ ಆಸಕ್ತಿ ವಹಿಸಿ, ಬೆಳೆ ಬೆಳೆಯಬೇಕು. ಸೂಕ್ತ ಮಾರುಕಟ್ಟೆಗಾಗಿ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕು. ಹೆಚ್ಚಿನ ಮಾಹಿತಿಗೆ ಇಲಾಖೆಯನ್ನು ಸಂಪರ್ಕಿಸಬಹುದು. ಇಂದಿನ ಸಮಾವೇಶದಲ್ಲಿ ಖರೀದಿದಾರು ಭಾಗವಹಿಸಿದ್ದು, ಅವರು ತೋಟಗಾರಿಕೆ ಉತ್ಪನ್ನಗಳ ಬೇಡಿಕೆ, ಗುಣಮಟ್ಟ ಹಾಗೂ ಮಾರುಕಟ್ಟೆಯ ತಾಂತ್ರಿಕತೆ ಬಗ್ಗೆ ಮಾಹಿತಿ ನೀಡುತ್ತಾರೆ. ರೈತರು ಈ ಸಮಾವೇಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬೆಂಗಳೂರು ಲಾಲ್ಬಾಗ್ನ ಕ್ಷೇತ್ರ ಮತ್ತು ನರ್ಸರಿ ಹಾಗೂ ತಾಳೆ ಬೆಳೆ ಯೋಜನೆಯ ತೋಟಗಾರಿಕೆ ಅಪರ ನಿರ್ದೇಶಕರಾದ ಡಾ.ಪಿ.ಎಂ. ಸೊಬರದ, ಹಣ್ಣುಗಳ ವಿಭಾಗದ ತೋಟಗಾರಿಕೆ ಅಪರ ನಿರ್ದೇಶಕರು ಹಾಗೂ ಜಿಲ್ಲಾ ನೋಡಲ್ ಅಧಿಕಾರಿಗಳಾದ ಕೆ.ಬಿ.ದುಂಡಿ, ಕಲಬುರಗಿ ವಿಭಾಗದ ವಿಭಾಗೀಯ ತೋಟಗಾರಿಕೆ ಜಂಟಿ ನಿರ್ದೇಶಕರಾದ ಮಂಜುನಾಥ ನಾರಾಯಣಪುರ, ಬೆಂಗಳೂರು ಲಾಲ್ಬಾಗ್ನ ತೋಟಗಾರಿಕೆ ಉಪನಿರ್ದೇಶಕರಾದ ಕ್ಷಮಾ ಪಾಟೀಲ್, ನಬಾರ್ಡ್ ವ್ಯವಸ್ಥಾಪಕರು, ಕೆಪೆಕ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಎಂ.ಎಚ್.ಬತ್ನಾಳ್, ಬೆಂಗಳೂರಿನ ಕಿಸಾನ್ ಸಾಥಿ ಸಂಸ್ಥೆಯ ಸಂಸ್ಥಾಪಕರು ಹಾಗೂ ಸಿಇಒ ಆದ ಪ್ರೇಮ್ ರಾಠೋಡ್, ಜಿಲ್ಲಾ ಹಾಪ್ಕಾಮ್ಸ್ ಅಧ್ಯಕ್ಷರಾದ ಯಂಕಣ್ಣ ಯರಾಶಿ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷರಾದ ಶಿವಣ್ಣ ಮೂಲಿಮನಿ, ಜಿಲ್ಲೆಯ ಅಭಿನವಶ್ರೀ ತೋಟಗಾರಿಕೆ ರೈತ ಉತ್ಪಾದಕರ ಸಂಸ್ಥೆಯ ಅಧ್ಯಕ್ಷರಾದ ಶಿವರಾಮಪ್ಪ ಗಬ್ಬೂರ, ಬೇವೂರನ ಯಲಬುರ್ಗಾ ತೋಟಗಾರಿಕೆ ರೈತ ಉತ್ಪಾದಕರ ಸಂಸ್ಥೆಯ ಅಧ್ಯಕ್ಷರಾದ ಮಲ್ಲನಗೌಡ ಕೋನನಗೌಡ್ರ, ಕುಷ್ಟಗಿಯ ಕಪಿಲತೀರ್ಥ ತೋಟಗಾರಿಕೆ ರೈತ ಉತ್ಪಾದಕರ ಸಂಸ್ಥೆ ಅಧ್ಯಕ್ಷರಾದ ಶರಣಗೌಡ ಪಾಟೀಲ್, ತಾವರಗೇರಾ ಅಮೃತ ವರ್ಷಿಣಿ ರೈತ ಉತ್ಪಾದಕರ ಸಂಸ್ಥೆ ಅಧ್ಯಕ್ಷರಾದ ಸಂತೋಷ ಸರನಾಡಗೌಡ್ರ, ಕುಕನೂರು ಗಂಧ ತೋಟಗಾರಿಕೆ ರೈತ ಉತ್ಪಾದಕ ಸಂಸ್ಥೆಯ ಅಧ್ಯಕ್ಷರಾದ ರಮೇಶ ಬಳೂಟಗಿ, ಹಿರೇಸಿಂಧೋಗಿಯ ಕಾಯಕ ಕೃಷಿ ಮಿತ್ರ ತೋಟಗಾರಿಕೆ ರೈತ ಉತ್ಪಾದಕರ ಸಂಸ್ಥೆಯ ಅಧ್ಯಕ್ಷರಾದ ಕೊಟ್ರೇಶ ಗುಡ್ಲಾನೂರು, ದಮ್ಮೂರು ರೈತನ ಬೆಳಕು ರೈತ ಉತ್ಪಾದಕರ ಸಂಸ್ಥೆಯ ಅಧ್ಯಕ್ಷರಾದ ರಸೂಲ್ಸಾಬ್ ದನ್ನೂರ, ಕೊಪ್ಪಳ ರೈತ ಜಾಗೃತಿ ರೈತ ಉತ್ಪಾದಕರ ಸಂಸ್ಥೆಯ ಅಧ್ಯಕ್ಷರಾದ ರಾಹುಲ್ ರೆಡ್ಡಿ, ಕನಕಗಿರಿಯ ರೈತ ಜೀವ ತೋಟಗಾರಿಕೆ ರೈತ ಉತ್ಪಾದಕರ ಸಂಸ್ಥೆಯ ಅಧ್ಯಕ್ಷರಾದ ಶರಣೇಗೌಡ, ಕನಕಗಿರಿ ತಪಸ್ಸು ರೈತ ಉತ್ಪಾದಕರ ಸಂಸ್ಥೆಯ ಅಧ್ಯಕ್ಷರಾದ ಅಶೋಕ ಜಾಡಿ, ಸೇರಿದಂತೆ ತೋಟಗಾರಿಕೆ ಇಲಾಖೆಯ ರಾಜ್ಯ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು, ಖರೀದಿದಾರರು, ಮಾರಾಟಗಾರರು, ರೈತರು ಉಪಸ್ಥಿತರಿದ್ದರು.