
“ಸಂವಿಧಾನ ಜಾಗೃತಿ ಜಾಥಾ”: ರೂಪನಗುಡಿಯಲ್ಲಿ ಅದ್ದೂರಿ ಸ್ವಾಗತ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ,1- ಸಂವಿಧಾನದ ಮಹತ್ವ ಮತ್ತು ಅದರ ಅರಿವು ಕುರಿತಾಗಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಜಿಲ್ಲೆಯಲ್ಲಿ ಸಂಚರಿಸುತ್ತಿರುವ “ಸಂವಿಧಾನ ಜಾಗೃತಿ ಜಾಥಾ”ಗೆ ಬಳ್ಳಾರಿ ತಾಲ್ಲೂಕಿನ ರೂಪನಗುಡಿ ಗ್ರಾಮದಲ್ಲಿ ಬುಧವಾರ ಅದ್ದೂರಿಯಾಗಿ ಬರಮಾಡಿಕೊಂಡರು.
ರೂಪನಗುಡಿ ಗ್ರಾಮಕ್ಕೆ ಸಂವಿಧಾನ ಜಾಗೃತಿ ಜಾಥಾ ಆಗಮಿಸುತ್ತಿದಂತೆಯೇ ಕಳಶ ಮತ್ತು ಪೂರ್ಣ ಕುಂಭ ಹೊತ್ತ ಮಹಿಳೆಯರು, ಡೊಳ್ಳು ಕಲಾವಿದರು, ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು, ಗ್ರಾಮದ ಜನಪ್ರತಿನಿಧಿಗಳು, ಊರಿನ ಮುಖಂಡರು ಹಾಗೂ ಸಾರ್ವಜನಿಕರು ಅದ್ದೂರಿಯಾಗಿ ಸ್ವಾಗತಿಸಿದರು.
ಜಾಥಾ ಕಾರ್ಯಕ್ರಮದಲ್ಲಿ ರೂಪನಗುಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಲ್ಲಯ್ಯ ಅವರು ಮಾತನಾಡಿ, ಸರ್ಕಾರವು ಸಮಾಜ ಕಲ್ಯಾಣ ಇಲಾಖೆಯ ಮೂಲಕ ಸಂವಿಧಾನ ಜಾಗೃತಿ ಜಾಥಾವನ್ನು ಎಲ್ಲಾ ಗ್ರಾಮ ಪಂಚಾ ಯಿತಿಗಳ ವ್ಯಾಪ್ತಿಯಲ್ಲಿ ಸಂಚರಿಸಿ ಜನ ಜಾಗೃತಿ ಮೂಡಿಸುತ್ತಿರುವುದು ತುಂಬಾ ಸಂತೋಷದಾಯಕ ವಿಚಾರವಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖಾ ಸಚಿವರಾದ ಎಚ್.ಸಿ.ಮಹಾದೇವಪ್ಪ ರವರಿಗೆ ಅಭಿನಂದನೆ ತಿಳಿಸಿದರು. ಚೆಳ್ಳಗುರ್ಕಿ ಗ್ರಾಮದ ಮುಖಂಡ ರಾಮಣ್ಣ ಅವರು ಮಾತನಾಡಿ, ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮವು ಜನಸಾಮಾನ್ಯರು ಸಂವಿಧಾನದ ಬಗ್ಗೆ ತಿಳಿಯಲು ಉಪಯುಕ್ತವಾಗಿದೆ ಎಂದರು.
ಇದಕ್ಕೂ ಮುನ್ನ ಜಾಥಾವು ರೂಪನಗುಡಿ, ಚೆಳ್ಳಗುರ್ಕಿ, ಪಿ.ಡಿ.ಹಳ್ಳಿ, ಅಮರಾಪುರ, ಶಿಡಿಗಿನಮೊಳ ಹಾಗೂ ಕಾರೇಕಲ್ಲು ಮಾರ್ಗವಾಗಿ ಸಂಚರಿಸಿ, ಸಂವಿಧಾನದ ಆಶಯ ಮತ್ತು ಮೌಲ್ಯಗಳನ್ನು ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ, ಸಂವಿಧಾನ ರಚನಾ ಸಭೆಯ ಕುರಿತ ವಿಡಿಯೋ ತುಣುಕುಗಳನ್ನು ಸಾರ್ವಜನಿರಿಗೆ ಪ್ರದರ್ಶಿಸಲಾಯಿತು.
ಬಳಿಕ ಸಂವಿಧಾನ ಪ್ರಸ್ತಾವನೆಯ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಿ, ಜಾಥಾದ ಉದ್ದಕ್ಕೂ ಸಂವಿಧಾನ ಪ್ರಸ್ತಾವನೆಯ ಪ್ರತಿಗಳನ್ನು ಹಂಚಿಕೆ ಮಾಡಲಾಯಿತು.
ಜಾಥಾ ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಪಿ.ಮಮತಾ, ಇಲಾಖೆಯ ಸಿಬ್ಬಂದಿ ವರ್ಗದವರು, ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ವಿವಿಧ ಇಲಾಖೆಗಳ ಸಿಬ್ಬಂದಿ ವರ್ಗದವರು, ಗ್ರಾಮ ಪಂಚಾಯಿತಿಗಳ ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರು ಪಾಲ್ಗೊಂಡಿದ್ದರು.