
ಸಮಸ್ಯೆಗಳ ಆಗರ ಮಂಗಳೂರ ಬಸ್ ನಿಲ್ದಾಣ
ಶೌಚಾಲಯಕ್ಕಾಗಿ ಮಹಿಳಾ ಪ್ರಯಾಣಿಕರ ಪರದಾಟ
ಶಾಸಕರೇ ಇತ್ತ ಗಮನಹರಿಸಿ
ಕರುನಾಡ ಬೆಳಗು ಸುದ್ದಿ
ಸುಭಾಸ ಮದಕಟ್ಟಿ
ಕುಕನೂರ, ೨೧- ತಾಲೂಕಿನ ಮಂಗಳೂರ ಬಸ್ ನಿಲ್ದಾಣ ಸಮಸ್ಯೆಗಳ ಆಗರವಾಗಿದೆ.ಪ್ರಯಾಣೀಕರು ನಿತ್ಯ ಒಂದಿಲ್ಲೊಂದು ಸಮಸ್ಯೆ ತೋಡಿಕೊಳ್ಳುವಂತಾಗಿದೆ. ನಾನಾ ಊರುಗಳಿಂದ ಬರುವ ಪ್ರಯಾಣಿಕರು ಸೌಕರ್ಯಗಳ ಬಗ್ಗೆ ಅಸಮಾದಾನ ವ್ಯಕ್ತಪಡಿಸಿದ್ದಾರೆ. ಬಸ್ ನಿಲ್ದಾಣದಲ್ಲಿ ಯಾವುದೇ ಸೌಲಭ್ಯವಿಲ್ಲದೆ ಮಹಿಳೆಯರಿಗೆ, ವಿಧ್ಯಾರ್ಥಿಗಳಿಗೆ, ಹಿರಿಯ ನಾಗರಿಕರಿಗೆ ತುಂಬಾ ತೊಂದರೆ ಆಗುತ್ತಿದೆ. ಕುಡಲು ಸರಿಯಾದ ಆಸನಗಳಿಲ್ಲ, ಇದ್ದ ಆಸನಗಳು ದುರಸ್ಥಿ ಹಂತದಲ್ಲಿವೆ. ಎಲ್ಲಿ ನೋಡಿದರು ದೂಳು, ಕಸದ ರಾಶಿ.
ಮಹಿಳೆಯರಿಗೆ , ವಿಧ್ಯಾರ್ಥಿಗಳಿಗೆ ಶೌಚಾಲಯಕ್ಕೆ ಹೋಗಲು ಸರಿಯಾದ ವ್ಯವಸ್ಥೆಯೇ ಇಲ್ಲ. ಶೌಚಾಲಯ ಕೊಠಡಿಗಳು ನೀರಿಲ್ಲದೇ ಇದ್ದರು ಇಲ್ಲದಂತಾಗಿದೆ.ಇದ್ದ ಕೊಠಡಿಗಳು ಹೆಸರಿಗಷ್ಟೇ ಸಿಮಿತವಾಗಿವೆ ಎಂದು ಪ್ರಯಾಣಿಕರು ಅಳಲು ತೊಡಿಕೊಳ್ಳುತ್ತಿದ್ದಾರೆ. ನೀರಿನ ಸೌಕರ್ಯವಿಲ್ಲ, ಆಸನಗಳಿಲ್ಲ, ಜನಸಂದಣಿಯಿಂದ ತುಂಬಿ ತುಳುಕುವ ಈ ಬಸ್ ನಿಲ್ದಾಣದಲ್ಲಿ ಸಮಸ್ಯೆಗಳು ತುಂಬಿ ತುಳುಕುತ್ತಿವೆ. ಮೂಲ ಸೌಕರ್ಯವಿಲ್ಲದೇ ಅನಾಥವಾಗಿದೆ. ನಿಲ್ದಾಣದ ಪಕ್ಕ ಬೆಳೆದಿರುವ ಮರದ ಬೇರುಗಳು ಬಸ್ ನಿಲ್ದಾಣದ ತುಂಬೆಲ್ಲ ಹರಡಿ ಕಟ್ಟಡ ಶಿಥಿಲಾವಸ್ಥೆಗೆ ಬಂದಿದೆ. ಮಳೆ ಬಂತೆಂದರೆ ನೀರು ಪೂರ್ತಿ ನಿಲ್ದಾಣದ ಒಳಗೆ ಸೇರುತ್ತದೆ. ಅದು ಅಲ್ಲಿಯೆ ಸಂಗ್ರಹವಾಗಿ ಕಟ್ಟಡ ಕುಸಿಯುತ್ತಿದೆ.
ಈ ಸಮಸ್ಯೆಗಳ ಮುಕ್ತಿಗೆ ಪ್ರಯಾಣಿಕರು ಸಂಚಾರಿ ನಿಯಂತ್ರಕರ ಮುಖಾಂತರ ಗ್ರಾಮ ಪಂಚಾಯತ್ ಗೆ ಹಲವಾರು ಭಾರಿ ಮನವಿ ಪತ್ರ ಕೊಟ್ಟರು ಸಮಸ್ಯೆಗಳು ಬಗೆಹರಿದಿಲ್ಲ ಎಂದು ಸ್ಥಳೀಯರು ದೂರಿದ್ದಾರೆ . ಸಂಬಂಧಪಟ್ಟ ಅಧಿಕಾರಿಗಳು ನಿರ್ಲಕ್ಷ್ಯ ಮಾಡುವುದನ್ನು ಬಿಟ್ಟು ಆದಷ್ಟು ಬೇಗ ಎಲ್ಲ ಸೌಕರ್ಯಗಳನ್ನು ಪೂರೈಸಲಿ ಎನ್ನುವುದು ಸ್ಥಳೀಯರ ಬೇಡಿಕೆ. ನೂತನ ಬಸ್ ನಿಲ್ದಾಣ, ಸಮರ್ಪಕ ನೀರು ಪೂರೈಕೆ, ಶೌಚಾಲಯ ನವೀಕರಣ, ಮತ್ತು ಕಸ ಸ್ವಶ್ಚತೆ ಮಾಡುವ ಸಿಬ್ಬಂದಿಗಳ ನೇಮಕ ಹಾಗೂ ವಾಣಿಜ್ಯ ಸಂಕೀರ್ಣ ನಿರ್ಮಾಣ ಆಗಲಿ ಅಂತ ಸ್ಥಳೀಯರು ಆಗ್ರಹಿಸಿದ್ದಾರೆ.