
ಆಯುಷ್ಮಾನ್ ಭವಃ ಆರೋಗ್ಯ ಮೇಳ;
ಸ್ಪರ್ಶ ಜ್ಞಾನವಿಲ್ಲದ ಮಚ್ಚೆಗಳಿದ್ದರೆ ತಪ್ಪದೇ ಪರೀಕ್ಷಿಸಿಕೊಳ್ಳಿ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, ೦೨- ಆಯುಷ್ಮಾನ್ ಭವಃ ಆರೋಗ್ಯ ಕಾರ್ಯಕ್ರಮದಡಿ ಮುಂದಿನ ಮಾರ್ಚ್-31 ರ ವರೆಗೆ ಜಿಲ್ಲೆಯ ಎಲ್ಲಾ ಆಸ್ಪತ್ರೆಗಳಲ್ಲಿ ಪ್ರತಿ ಮಂಗಳವಾರದಂದು ಹಮ್ಮಿಕೊಳ್ಳುವ ಉಚಿತ ಆರೋಗ್ಯ ಮೇಳಗಳಲ್ಲಿ ಭಾಗವಹಿಸಿ, ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೈ ರಮೇಶ್‍ಬಾಬು ಅವರು ಹೇಳಿದರು.
ಜಿಲ್ಲೆಯ ಎಲ್ಲಾ ಸಮುದಾಯ ಆರೋಗ್ಯ ಕೇಂದ್ರಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ನಮ್ಮ ಕ್ಲಿನಿಕ್, ಗ್ರಾಮೀಣ ಭಾಗದ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಲ್ಲಿ ಹಮ್ಮಿಕೊಳ್ಳುವ ಆಯುಷ್ಮಾನ್ ಭವಃ ಉಚಿತ ಆರೋಗ್ಯ ಮೇಳದಲ್ಲಿ ಸ್ಪರ್ಶ ಜ್ಞಾನವಿಲ್ಲದ ತಿಳಿಬಿಳಿ ತಾರ್ಮ ವರ್ಣದ ಮಚ್ಚೆಗಳಿದ್ದರೆ ತಪ್ಪದೆ ಪರೀಕ್ಷೆ ಮಾಡಿಸಿಕೊಳ್ಳಿ, ಒಂದು ವೇಳೆ ಕುಷ್ಠರೋಗವೆಂದು ಖಚಿತ ಪಟ್ಟಲ್ಲಿ ಉಚಿತ ಚಿಕಿತ್ಸೆ ಲಭ್ಯ ಪಡೆಯಬಹುದು ಎಂದು ತಿಳಿಸಿದ್ದಾರೆ.
ಆಯುಷ್ಮಾನ್ ಭವಃ ಮೇಳ ಮುಂದುವರಿಕೆ ಹಿನ್ನಲೆಯಲ್ಲಿ, ಶಿಬಿರದಲ್ಲಿ ಜೀವನ ಶೈಲಿಯ ರೋಗಗಳಾದ ರಕ್ತದೊತ್ತಡ, ಸಕ್ಕರೆ ಕಾಯಿಲೆಯನ್ನು ಪರೀಕ್ಷೆ, ಎರಡು ವಾರಕ್ಕಿಂತ ಹೆಚ್ಚು ದಿನಗಳ ಕೆಮ್ಮು ಇದ್ದಲ್ಲಿ ಕ್ಷಯರೋಗ ಪರೀಕ್ಷೆ ಹಾಗೂ ರೋಗ ಲಕ್ಷಣಗಳು ಉಳ್ಳುವರ ಕಫ ಪರೀಕ್ಷೆಯನ್ನು ಕೈಗೊಳ್ಳಲಾಗುವುದು ಮತ್ತು ಇತರ ಸಾಮಾನ್ಯ ಆರೋಗ್ಯ ಸೇವೆಗಳನ್ನು ಸಹ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಹೆಚ್ಚಿನ ಚಿಕಿತ್ಸೆ ಅಗತ್ಯ ಇರುವಂತಹ ರೋಗಿಗಳಿಗೆ ಜಿಲ್ಲಾ ಆಸ್ಪತ್ರೆ ಮತ್ತು ವಿಮ್ಸ್‍ಗೆ, ಕಳಿಸಿಕೊಡಲಾಗುವುದು. ಶಿಬಿರದಲ್ಲಿ ಆಯುಷ್ಮಾನ್ ಭವ- ಪ್ರಧಾನ ಮಂತ್ರಿ ಜನಾರೋಗ್ಯ ಯೋಜನೆ- ಮುಖ್ಯಮಂತ್ರಿಯ ಆರೋಗ್ಯ ಕರ್ನಾಟಕ ಯೋಜನೆ ಕಾರ್ಡ್, ಡಿಜಿಟಲ್ ಹೆಲ್ತ್‍ಕಾರ್ಡ್‍ಗಳನ್ನು ಸೃಜಿಸಲಾಗುವುದು.
ಜಿಲ್ಲೆಯಲ್ಲಿ ಈಗಾಗಲೇ 3000 ಜನರ ಅಂಗಾಂಗ ದಾನ ನೋಂದಣಿಯನ್ನು ಮಾಡಿ ರಾಜ್ಯ ಮಟ್ಟದಲ್ಲಿ ಮುಂಚುಣಿಯಲ್ಲಿದ್ದು, ಅಂಗಾಂಗ ನೋಂದಣಿ ಸಹ ಮಾಡಲಾಗುವುದು ಎಂದಿದ್ದಾರೆ.
ಶಿಬಿರದಲ್ಲಿ ಡೆಂಗ್ಯು ಮತ್ತು ಚಿಕುನ್‍ಗುನ್ಯ, ಕುಟುಂಬ ಕಲ್ಯಾಣ ವಿಧಾನಗಳು, ತಾಯಿ ಮಗುವಿನ ಆರೈಕೆ, ಟೆಲಿ ಮನಸ್ ಮಾನಸಿಕ ಆರೋಗ್ಯ ಸಹಾಯವಾಣಿ 14416 ಕುರಿತು ಮಾಹಿತಿ ನೀಡಲಾಗುವುದು. ಸಾರ್ವಜನಿಕರು ತಮ್ಮ ಆಧಾರ್‍ಕಾರ್ಡ್, ಮೊಬೈಲ್ ಸಂಖ್ಯೆ ಹಾಗೂ ಈ ಹಿಂದೆ ಅಸ್ಪತ್ರೆಗೆ ತೋರಿಸಿದ ಚೀಟಿಗಳನ್ನು ತಂದು ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ಕೋವಿಡ್ ನಿರ್ವಹಣೆಗೆ ಸಿದ್ದತೆ:ಕೋವಿಡ್ ಮುಂಜಾಗ್ರತೆಗಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಎಲ್ಲಾ ಆಸ್ಪತ್ರೆಗಳಲ್ಲಿ ಬೆಡ್‍ಗಳ ಸಿದ್ದತೆ, ಆಕ್ಸಿಜನ್ ಸಂಪರ್ಕ ಸಮರ್ಪಕವಾಗಿದ್ದು, ಪ್ರತಿ ದಿನ ಕೆಮ್ಮು ನೆಗಡಿ ಉಸಿರಾಟದ ತೊಂದರೆ ಇರುವವರನ್ನು ಗುರುತಿಸಿ ಪರೀಕ್ಷೆಗೆ ಒಳಪಡಿಸಲಾಗುತ್ತದೆ ಹಾಗೂ 60 ವರ್ಷ ಮೇಲ್ಪಟ್ಟವರಿಗೆ ಮನೆಯಿಂದ ಹೊರಗಡೆ ಬರುವಂತ ಸಂದರ್ಭದಲ್ಲಿ ಮಾಸ್ಕ್ ಧರಿಸಲು ಜಾಗೃತಿ ನೀಡಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ವೈ.ರಮೇಶ್ ಬಾಬು ಅವರು ತಿಳಿಸಿದ್ದಾರೆ.