Prakash Kandakoor-

ಅಂತರಾಷ್ಟ್ರೀಯ ಛಾಯಾಗ್ರಹಣ ಸ್ಪರ್ಧೆ : ಕಂದಕೂರಗೆ 2 ಚಿನ್ನ, 1 ಬೆಳ್ಳಿ ಪದಕ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 30- ಹಾಂಕಾಂಗ್‌ನಲ್ಲಿ ನಡೆದ ನಾಲ್ಕನೇ ಹಾಂಕಾಂಗ್‌ ಚಿಯುಂಗ್‌ ಚಾವು ಫೊಟೋಗ್ರಾಫಿಕ್‌ ಆರ್ಟ್‌ (ಎಚ್‌ಕೆಸಿಸಿಪಿಎ) ಅಂತರಾಷ್ಟ್ರೀಯ ಛಾಯಾಗ್ರಹಣ ಸ್ಪರ್ಧೆಯಲ್ಲಿ ಕೊಪ್ಪಳದ ಛಾಯಾಗ್ರಾಹಕ ಪ್ರಕಾಶ ಕಂದಕೂರ ಅವರ ಚಿತ್ರಗಳು ಎರಡು ಚಿನ್ನ, ಒಂದು ಬೆಳ್ಳಿ ಸೇರಿದಂತೆ ಒಟ್ಟು ಮೂರು ಪದಕಗಳನ್ನು ಮುಡಿಗೇರಿಸಿಕೊಂಡಿವೆ.

ಸ್ಪರ್ಧೆಯ ಜರ್ನಲಿಸಂ ವಿಭಾಗದಲ್ಲಿ ಅವರ ʻದಿ ಫೀಯರ್‌ʼ ಶೀರ್ಷಿಕೆಯ ಚಿತ್ರ ಚಿಯುಂಗ್‌ ಚಾವು ಫೊಟೋಗ್ರಾಫಿಕ್‌ ಆರ್ಟ್‌ನ ಚಿನ್ನದ ಪದಕ (CCPA Gold Medal), ಫೊಟೋ ಟ್ರಾವೆಲ್‌ ವಿಭಾಗದಲ್ಲಿ ʻಗವಿಸಿದ್ಧೇಶ್ವರ ರಥೋತ್ಸವʼ ಶೀರ್ಷಿಕೆಯ ಚಿತ್ರ ಗ್ಲೋಬಲ್‌ ಫೊಟೋಗ್ರಫಿಕ್‌ ಯೂನಿಯನ್‌ನ ಚಿನ್ನದ ಪದಕ (GPU Gold Medal) ಹಾಗೂ ಕಪ್ಪು ಬಿಳುಪು ವಿಭಾಗದಲ್ಲಿ ʻಫ್ರೆಂಡ್‌ಶಿಪ್‌ʼ ಶೀರ್ಷಿಕೆ ಚಿತ್ರ ಫೆಡರೇಷನ್‌ ಆಫ್‌ ಇಂಟರ್ನ್ಯಾಷನಲ್‌ ಫೊಟೋಗ್ರಫಿಕ್‌ ಆರ್ಟ್‌ನ ಬೆಳ್ಳಿ ಪದಕ (FIAP Silver Medal) ಪಡೆದುಕೊಂಡಿವೆ. ಇದಲ್ಲದೆ ಅವರ ಒಟ್ಟು ೧೨ ಚಿತ್ರಗಳು ಪ್ರದರ್ಶನಕ್ಕೂ ಆಯ್ಕೆಯಾಗಿವೆ.

ಏಷ್ಯಾದ ಪ್ರತಿಷ್ಠಿತ ಛಾಯಾಗ್ರಹಣ ಸ್ಪರ್ಧೆ ಎನಿಸಿರುವ ಇಲ್ಲಿಗೆ ಈ ಬಾರಿ ಪ್ರಪಂಚದ 50 ದೇಶಗಳ 264 ಜನ ಛಾಯಾಗ್ರಾಹಕರ 3,793 ಚಿತ್ರಗಳು ಆಗಮಿಸಿದ್ದವು. ಖ್ಯಾತ ಛಾಯಾಗ್ರಾಹಕರಾದ ಮಕಾವ್‌ನ ಲಿಯಾಂಗ್‌ ಇಮ್‌ ಕಾಯ್‌, ಹಾಂಕಾಂಗ್‌ನ ಲಿಯಾಂಗ್‌ ಕಾಯ್‌ ಯೂ, ಚಿಯಾಂಗ್‌ ವಾಯ್‌ ಮ್ಯಾನ್‌, ಡೇನಿಯಲ್‌ ಟ್ಸೆ ಕ್ವಾಕ್‌ ಕೆ ಹಾಗೂ ಅವರ ತಂಡಗಳ ಸದಸ್ಯರು ತೀರ್ಪುಗಾರರಾಗಿ ಭಾಗವಹಿಸಿದ್ದರು.

ಜುಲೈ 1 ರಿಂದ 3 ರವರೆಗೆ ಹಾಂಕಾಂಗ್‌ನ ಚಿಯುಂಗ್‌ ಚಾವು ಫೊಟೋಗ್ರಾಫಿಕ್‌ ಆರ್ಟ್‌ನ ಸಭಾಂಗಣದಲ್ಲಿ ಪ್ರಶಸ್ತಿ ವಿಜೇತ ಛಾಯಾಚಿತ್ರಗಳ ಪ್ರದರ್ಶನ ನಡೆಯಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಟಾಟ್‌ ಚುಯೇನ್‌ ಲಾಮ್‌ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!