
ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತರು, ಜಿಪಂ ಸಿಇಓ ಜಂಟಿಯಾಗಿ ಶಾಲಾ ಸಂದರ್ಶನ
ಕರುನಾಡ ಬೆಳಗು ಸುದ್ದಿ
ವಿಜಯನಗರ, 1- ಶಾಲಾ ಶಿಕ್ಷಣ ಇಲಾಖೆಯ ಕಲಬುರಗಿ ವಿಭಾಗದ ಅಪರ ಆಯುಕ್ತರಾದ ಆಕಾಶ ಎಸ್ ಹಾಗೂ ವಿಜಯನಗರ ಜಿಲ್ಲೆಯ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಸದಾಶಿವ ಪ್ರಭು ಬಿ ಅವರು ಜಂಟಿಯಾಗಿ ಇತ್ತೀಚೆಗೆ ವಿಜಯನಗರ ಜಿಲ್ಲೆಯಲ್ಲಿ ವಿವಿಧ ಶಾಲೆಗಳ ಸಂದರ್ಶನ ನಡೆಸಿದರು.
ಮೊದಲಿಗೆ ಟಿ.ಬಿ.ಡ್ಯಾಂನ ಸರ್ಕಾರಿ ಪ್ರೌಢಶಾಲೆ ಮತ್ತು ಹೊಸಪೇಟೆ ನಗರದಲ್ಲಿನ ಅಮರಾವತಿಯ ಸರ್ಕಾರಿ ಬಾಲಕಿಯರ ಪ್ರೌಢಶಾಲೆಗೆ ಭೇಟಿ ನೀಡಿ ಅಲ್ಲಿ ಎ.ಎಸ್.ಎಲ್.ಸಿ. ಮುಖ್ಯಪರೀಕ್ಷೆಯಲ್ಲಿ ಅನುತ್ತೀರ್ಣರಾದ ಮಕ್ಕಳಿಗೆ ನಡೆಯುತ್ತಿದ್ದ ಪರಿಹಾರ ಬೋಧನೆಯ ತರಗತಿಗಳ ಬಗ್ಗೆ ಮಾಹಿತಿ ಪಡೆದರು.
ಬಳಿಕ ಚಿತ್ತವಾಡಗಿಯ ಶ್ರೀ ವಿನೋಬಾ ಭಾವೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಹೊಸಪೇಟೆ ನಗರದಲ್ಲಿನ ಸ್ವಾಮಿ ವಿವೇಕಾನಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಭೇಟಿ ನೀಡಿ, 2024-25ನೇ ಸಾಲಿನಲ್ಲಿ ಅಕ್ಷರ ಅವಿಷ್ಕಾರ ಯೋಜನೆಯಡಿಯಲ್ಲಿ ಆಯ್ದ ಸರ್ಕಾರಿ ಶಾಲೆಗಳಲ್ಲಿ ಪ್ರಾರಂಭವಾಗುವ ಎಲ್.ಕೆ.ಜಿ ಮತ್ತು ಯು.ಕೆ.ಜಿ. ಹಾಗೂ ದ್ವಿಭಾಷಾ ಶಾಲೆಗಳು ಮತ್ತು ಎನ್.ಎಸ್.ಕ್ಯೂ.ಎಫ್.ಶಾಲೆಗಳ ಬಗ್ಗೆ ತಿಳಿಸಿದರು.
ವಿವಿಧ ಶಾಲೆಗಳ ಸಂದರ್ಶನದ ವೇಳೆಯಲ್ಲಿ ಸರ್ಕಾರಿ ಶಾಲೆಗಳ ದಾಖಲಾತಿ ಹೆಚ್ಚಿಸುವ ಬಗ್ಗೆ ಸೂಕ್ತ ಮಾರ್ಗದರ್ಶನ ಮಾಡಿದರು.
ಬಳಿಕ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ವಿಜಯನಗರ ಜಿಲ್ಲೆ ಮತ್ತು ಬಳ್ಳಾರಿ ಜಿಲ್ಲೆಗಳ ಅನುಷ್ಠಾನಾಧಿಕಾರಿಗಳ ಸಭೆ ನಡೆಸಿದರು.
ಈ ಸಂದರ್ಭದಲ್ಲಿ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಯುವರಾಜ ನಾಯ್ಕ, ಡಯಟ್‌ನ ಉಪ ನಿರ್ದೇಶಕರಾದ ಹನುಮಕ್ಕ ಮತ್ತು ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯ ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಇಲಾಖೆಯ ವಿವಿಧ ಅಧಿಕಾರಿಗಳು ಹಾಜರಿದ್ದರು.