
ಅಭಿನಂದನಾ ಸಮಾರಂಭ : ಅತಿಥಿ ಉಪನ್ಯಾಸಕರ ಹೋರಾಟಕ್ಕೆ ಸಹಕರಿಸಿದ ಮಹನೀಯರಿಗೆ ಸತ್ಕಾರ
ಕರುನಾಡ ಬೆಳಗು ಸುದ್ದಿ
ಕೊಪ್ಪಳ,1- ಹೋರಾಟವಿಲ್ಲದೆ ಏನನ್ನೂ ಪಡೆಯದ ಕಾಲಘಟ್ಟವಿದು. ಚಳವಳಿ ಇಲ್ಲದಿದ್ದರೆ ಯಾವ ಬೇಡಿಕೆಯೂ ಈಡೇರುವುದಿಲ್ಲ. ಈ ಸಲ ಅತಿಥಿ ಉಪನ್ಯಾಸಕರ ಹೋರಾಟ ಗಟ್ಟಿತನ, ದಿಟ್ಟತನದಿಂದ ಕೂಡಿದ್ದ ಪರಿಣಾಮ, ಸರಕಾರ ಕೆಲ ಬೇಡಿಕೆಗಳನ್ನು ಈಡೇರಿಸಿದೆ. ಇದು ಪ್ರತಿಭಟನೆಯ ಫಲ, ಅತಿಥಿ ಉಪನ್ಯಾಸಕರಿಗೆ ವರ್ಷದ ಹನ್ನೇರಡು ತಿಂಗಳು ಸರಕಾರ ಸೇವೆಗೆ ಅನುವು ಮಾಡಿಕೊಡುವ ಕುರಿತು ಮಾತುಕತೆ ನಡೆದಿದೆ ಎಂದು ಅತಿಥಿ ಉಪನ್ಯಾಸಕರ ಸಂಘಟನೆಯ ರಾಜ್ಯಾಧ್ಯಕ್ಷ ಡಾ.ಹನುಮಂತಗೌಡ ಕಲ್ಮನಿ ಹೇಳಿದರು.
ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಿಲ್ಲಾ ಅತಿಥಿ ಉಪನ್ಯಾಸಕರ ಸಂಘಟನೆಯ ಆಶ್ರಯದಲ್ಲಿ ನಡೆದ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ನಿವೃತ್ತಿ ವಯಸ್ಸನ್ನು 60 ರಿಂದ 65 ವರ್ಷಗಳಿಗೆ ಹೆಚ್ಚಿಸಲು ಇಡುಗಂಟನ್ನು 5 ಲಕ್ಷದಿಂದ 60 ಲಕ್ಷ ರೂಪಾಯಿಗಳಿಗೆ ಹೆಚ್ಚಿಸಲು ಸರಕಾರಕ್ಕೆ ಮನವಿ ಸಲ್ಲಿಸಿದ್ದು ಬರುವ ದಿನಗಳಲ್ಲಿ ನಮ್ಮ ಬೇಡಿಕೆಗಳು ಹಂತ ಹಂತವಾಗಿ ಈಡೇರುವ ನಿಟ್ಟಿನಲ್ಲಿ ರಾಜ್ಯ ಸಂಘಟನೆ ಪ್ರಯತ್ನ ನಡೆಸಿದೆ. ಬರುವ ದಿನಗಳಲ್ಲಿ ಅತಿಥಿ ಉಪನ್ಯಾಸಕರು ಸಹ ಶೈಕ್ಷಣಿಕ ಅರ್ಹತೆ ಗಳಿಸುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು ಎಂದು ಕಲ್ಮನಿ ಕರೆ ನೀಡಿದರು.
ಕೊಪ್ಪಳ ಹೋರಾಟದ ಕಿಚ್ಚಿರುವ ನೆಲ. ಅತಿಥಿ ಉಪನ್ಯಾಸಕರ ಹೋರಾಟದಲ್ಲಿ ಇಡೀ ರಾಜ್ಯದಲ್ಲೇ ಕೊಪ್ಪಳ ಜಿಲ್ಲೆ ಮುಂಚೂಣಿಯಲ್ಲಿತ್ತು. ಹೀಗೇ ಎಲ್ಲ ಜಿಲ್ಲೆಗಳಲ್ಲೂ ಸಂಘಟನೆ ಮತ್ತಷ್ಟೂ ಸದೃಢವಾಗಲು ಎಲ್ಲರ ಸಹಕಾರ ಅತ್ಯಗತ್ಯ. ಹೋರಾಟಕ್ಕೆ ಸಹಕಾರ ನೀಡಿದ ಎಲ್ಲ ಮಹನೀಯರನ್ನು ಸ್ಮರಿಸಬೇಕಾದದ್ದು ನಮ್ಮ ಕರ್ತವ್ಯ ಎಂದರು.
ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಮಂಜುನಾಥ ಗೊಂಡಬಾಳ ಮಾತನಾಡಿ, ಅತಿಥಿ ಉಪನ್ಯಾಸಕರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲು ಸರಕಾರ ಬದ್ಧವಾಗಿದೆ. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಕೆಲಸ ಮಾಡುವ ಬೋಧಕ ಸಿಬ್ಬಂದಿ ರಕ್ಷಣೆಗೆ ಸದಾ ಸಿದ್ಧ ಎಂದು ಭರವಸೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಪ್ರೊ.ತಿಮ್ಮಾರಡ್ಡಿ ಮೇಟಿ ಮಾತನಾಡಿ, ನಮ್ಮ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕ, ಕಾಯಂ ಉಪನ್ಯಾಸಕ ಎಂಬ ಭೇದವಿಲ್ಲ. ಕಾಲೇಜಿನ ಏಳಿಗೆ ಹಿನ್ನೆಲೆಯಲ್ಲಿ ನಾವೆಲ್ಲ ಒಟ್ಟಾಗಿ ಕಾರ್ಯ ನಿರ್ವಹಿಸುತ್ತೇವೆ. ಸರಕಾರದ ಆದೇಶ ಪಾಲನೆಯ ಜೊತೆಗೆ ಮಾನವೀಯ ಕಾಳಜಿ ನಮ್ಮ ಕಾಲೇಜಿನ ಸಿಬ್ಬಂದಿಗಿದೆ. ಆದಷ್ಟೂ ಬೇಗನೇ ಅತಿಥಿ ಉಪನ್ಯಾಸಕರ ಇತರೆ ಬೇಡಿಕೆಗಳು ಈಡೇರುವಂತಾಗಲಿ ಎಂದು ಶುಭ ಹಾರೈಸಿದರು.
ಅತಿಥಿ ಉಪನ್ಯಾಸಕರ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಡಾ.ವಿನೋದ ಚಂದ ಪೀಟರ್, ಜಿಲ್ಲಾಧ್ಯಕ್ಷ ಡಾ.ವೀರಣ್ಣ ಸಜ್ಜನರ್, ಪ್ರಧಾನ ಕಾರ್ಯದರ್ಶಿ ಡಾ.ಸಣ್ಣದೇವೇಂದ್ರಸ್ವಾಮಿ, ಮಹಿಳಾ ಮುಖಂಡರಾದ ಗಿರಿಜಾ ತುರಮುರಿ ಮಾತನಾಡಿದರು.
ವೀಣಾ ಪೂಜಾರ್ತಿ ಪ್ರಾರ್ಥಿಸಿದರು. ಬಸವರಾಜ ಕರುಗಲ್ ಪ್ರಾಸ್ತಾವಿಕ ಮಾತನಾಡಿದರು. ಗೀತಾ ಬನ್ನಿಕೊಪ್ಪ ಸ್ವಾಗತಿಸಿದರು. ಡಾ.ಮಹಾಂತೇಶ ನೆಲಾಗಣಿ ನಿರೂಪಿಸಿದರು. ಶಿವಬಸಪ್ಪ ಮಸ್ಕಿ ವಂದಿಸಿದರು.
ಈ ವೇಳೆ ಡಾ.ತುಕಾರಾಂ ನಾಯಕ, ವಿಜಯಕುಮಾರ್.ಕೆ., ಅಶೋಕ ಯಕ್ಲಾಸಪುರ, ಪ್ರಕಾಶ್ ಜಡಿಯವರ್, ಜ್ಞಾನೇಶ್ವರ ಪತ್ತಾರ, ಗೋಣಿಬಸಪ್ಪ, ಸೋಮೇಶ್ ಉಪ್ಪಾರ, ಶಂಕರಾನಂದ, ವಿಜಯ ಕುಲಕರ್ಣಿ, ಡಾ.ಪ್ರಕಾಶ್ ಬಳ್ಳಾರಿ, ಸಿ.ಬಸವರಾಜ, ವಸಂತಕುಮಾರ, ಗುರುಬಸವ ರಾಘವೇಂದ್ರ, ಲತಾ, ಉಷಾ, ಅಕ್ಕಮಹಾದೇವಿ, ವಿದ್ಯಾ, ನವೀನ್, ಮಾರುತಿ, ಶಿವಮೂರ್ತಿಸ್ವಾಮಿ ಗುತ್ತೂರು, ಬಿಷ್ಠಪ್ಪ, ನಜ್ಮಾ, ಸುಷ್ಮಾ, ಅನುರಾಧಾ, ಡಾ.ವಿಪ್ಲವಿ, ಡಾ.ಸಾವಿತ್ರಿ ಕಣವಿ ಮತ್ತಿತರರು ಇದ್ಧರು.