
ಅನಾಮಧೇಯ ಕರೆ (ಕಥೆಯಲ್ಲ..ವ್ಯಥೆ) : ವೀಣಾ ಪಾಟೀಲ್
ಕರುನಾಡ ಬೆಳಗು ಸುದ್ದಿ
ಟೇಬಲ್ ಮೇಲೆ ವೈಬ್ರೇಶನ್ ಮೋಡ್ನಲ್ಲಿದ್ದ ಮೊಬೈಲ್ ಫೋನಿನ ಶಬ್ದ ಸುಗುಣಳಲ್ಲಿ ನಡುಕ ಹುಟ್ಟಿಸಿತು. ಭಯದಿಂದಲೇ ರಿಸೀವ್ ಮಾಡಿದ ಆಕೆಗೆ “ಯಾಕ್ರೀ! ಫೋನ್ ರಿಸೀವ್ ಮಾಡ್ತಾನೆ ಇಲ್ಲ? ಎಂದು ಅತ್ತ ಕಡೆಯಿಂದ ಗಂಡಸಿನ ಧ್ವನಿ ಕೇಳಿ ಬಂತು. ತುಸು ಕೋಪದಿಂದಲೇ ಆತನನ್ನು ಗದರಿಸಿ ಕರೆ ತುಂಡರಿಸಿದ ಆಕೆ ಫೋನನ್ನು ಸ್ವಿಚ್ ಆಫ್ ಮಾಡಿ ತಾನು ಕುಳಿತಿದ್ದ ಸೋಫಾದಲ್ಲಿಯೇ ಹಿಂದಕ್ಕೆ ಒರಗಿದಳು. ಕಣ್ಣಂಚಿನಿಂದ ನೀರು ಹನಿಯಾಗಿ ಧಾರೆಯಾಗುತ್ತಿತ್ತು. ಮನಸ್ಸು ಮುಂಜಾನೆ ನಡೆದ ಘಟನೆಯನ್ನು ಮತ್ತೆ ನೆನಪಿಸಿತು.
ಇಂದು ಮುಂಜಾನೆ ಮಗಳನ್ನು ಶಾಲೆಗೆ ಕಳುಹಿಸುವ ಭರದಲ್ಲಿ ಆಲೂ ಪರೋಟ ಮಾಡಿ ಮಗಳಿಗೆ ತಿನ್ನಿಸಿ ಡಬ್ಬಕ್ಕೆ ತಿಂಡಿಯನ್ನು ಹಾಕುತ್ತಿರುವಾಗ ಆಕೆಯ ಮೊಬೈಲ್ ರಿಂಗ್ ಆಗತೊಡಗಿತು. ಒಂದೆರಡು ಬಾರಿ ರಿಂಗ್ ಆಗಿ ಕರೆ ಕಟ್ಟಾಗುವುದು ಎರಡು ಮೂರು ಬಾರಿ ನಡೆದಾಗ ಕುತೂಹಲ ತಡೆಯದೆ ತಾನೇ ಮರಳಿ ಆ ನಂಬರಿಗೆ ಕರೆ ಮಾಡಿದಳು ಸುಗುಣ. ಅತ್ತಲಿಂದ ಮಾತನಾಡಿದ ಗಂಡಸು ಏನ್ರಿ ಚೆನ್ನಾಗಿದ್ದೀರಾ?? ಮತ್ತೇನು ಸಮಾಚಾರ ಎಂದು ಸಲಿಗೆಯಿಂದ ಮಾತನಾಡಲು ಆರಂಭಿಸಿದ. ತುಸು ಗಾಬರಿಯಾದ ಸುಗುಣ ಈ ಸಂಖ್ಯೆಯಿಂದ ಪದೇ ಪದೇ ಕಾಲ್ ಬಂದದ್ದರಿಂದ ಮರಳಿ ಕರೆ ಮಾಡಿದ್ದೇನೆಯೇ ಹೊರತು ನೀವು ಯಾರು ಎಂದೇ ನನಗೆ ಗೊತ್ತಿಲ್ಲ ಎಂದು ಹೇಳಿ ಫೋನ್ ಇಟ್ಟಳು. ಮತ್ತೆ ಅದೇ ನಂಬರ್ ನಿಂದ ಕರೆ ಬಂದಿತು ತುಸು ಗಾಬರಿಯಿಂದಲೇ ಮತ್ತೆ ಎತ್ತಿದ ಸುಗುಣಳಿಗೆ ಆತ ಪರಿಚಿತ ವ್ಯಕ್ತಿಯಂತೆ ಮಾತನಾಡಲು ಆರಂಭಿಸಿದ. ಗಾಬರಿಗೊಂಡ ಸುಗುಣ ಫೋನನ್ನು ಸ್ವಿಚ್ ಆಫ್ ಮಾಡಿದಳು. ಯಾವುದೇ ಹೊಸ ಕಾನ್ಫಿಗರೇಷನ್ ಇಲ್ಲದ ಹಳೆಯ ಮೊಬೈಲ್ ಫೋನ್ ಆಕೆಯದಾಗಿತ್ತು. ತನ್ನ ಎಲ್ಲಾ ಕೆಲಸ ಮುಗಿದ ಮೇಲೆ ಮತ್ತೆ ಫೋನ ಸ್ವಿಚ್ ಆನ್ ಮಾಡಿದ ಆಕೆ ಸೈಲೆಂಟ್ ಮೋಡಿಗೆ ಹಾಕಿ ಬಿಟ್ಟಳು. ತನ್ನ ದೈನಂದಿನ ಎಲ್ಲ ಆಗುಹೋಗುಗಳನ್ನು ಚಾಚೂ ತಪ್ಪದೇ ಗಂಡನಿಗೆ ಹೇಳುವ ಆಕೆ ಈ ವಿಷಯವನ್ನು ಕೊಂಚ ಹಿಂಜರಿಕೆಯಿಂದ ಹೇಳಲೇ ಇಲ್ಲ.
ಸುಗುಣಳ ಗಂಡ ಸುರೇಶ ಸಣ್ಣ ವ್ಯಾಪಾರಿಯಾಗಿದ್ದು ಮಧ್ಯಾಹ್ನದ ಊಟಕ್ಕೆ ಮನೆಗೆ ಬರುತ್ತಿದ್ದನು. ಊಟವಾದ ನಂತರ ಒಂದು ಗಂಟೆ ಕಾಲ ವಿಶ್ರಾಂತಿ ಪಡೆದು ಮತ್ತೆ ತನ್ನ ಕೆಲಸಕ್ಕೆ ಹೊರಟು ಹೋಗುತ್ತಿದ್ದನು. ಅಂತೆಯೇ ಅಂದು ಕೂಡ ಊಟವಾದ ಮೇಲೆ ಆತ ಕೋಣೆಗೆ ತೆರಳಿ ಮಲಗಿದನು. ತನ್ನೆಲ್ಲ ಕೆಲಸ ಮುಗಿಸಿದ ಸುಗುಣ ಕೂಡ ಕೋಣೆಗೆ ತೆರಳಿ ಮಂಚದ ಮೇಲೆ ಗಂಡನ ಪಕ್ಕ ಉರುಳಿಕೊಂಡಳು. ಇಬ್ಬರೂ ತುಸು ಹೊತ್ತು ವಿಶ್ರಾಂತಿ ಪಡೆದ ನಂತರ ಸುರೇಶ ಎದ್ದು ಮುಖ ತೊಳೆಯಲು ಹೋದರೆ ಸುಗುಣ ಆತನಿಗೆ ಚಹ ಮಾಡಲು ಇಟ್ಟು ತಾನು ಕೂಡ ಮುಖ ತೊಳೆಯಲು ಬಂದಳು. ಇಷ್ಟರಲ್ಲಾಗಲೇ ಆಕೆಯ ಮೊಬೈಲ್ ಫೋನ್ ಗುರುಗುಡಲಾರಂಭಿಸಿತು… ಮೊಬೈಲ್ ನ ಸ್ಕ್ರೀನ್ ನ ಮೇಲೆ ಮುಂಜಾನೆ ಬಂದ ನಂಬರ್ನಿಂದಲೇ ಕರೆ ಬಂದದ್ದನ್ನು ಕಂಡು ಆಕೆ ಗಾಬರಿಯಿಂದ ಫೋನ್ ಕಟ್ ಮಾಡಿದಳು. ಮುಖವನ್ನು ಟವಲ್ ನಿಂದ ಒರೆಸುತ್ತಿದ್ದ ಸುರೇಶ ಪದೇ ಪದೇ ಪತ್ನಿಯ ಮೊಬೈಲಿಗೆ ಕರೆ ಬರುತ್ತಿರುವುದನ್ನೂ ಆಕೆ ಅದನ್ನು ತುಂಡರಿಸುತ್ತಿರುವುದನ್ನು ಗಮನಿಸಿ ತುಸು ಅನುಮಾನದಿಂದಲೇ ಏನಾಯ್ತು ಎಂದು ಕೇಳಿದ. ಈಗ ಅನಿವಾರ್ಯವಾಗಿ ಸುಗುಣ ನಡೆದುದನ್ನು ಹೇಳಿದಳು.
ಕೂಡಲೇ ಸುರೇಶ ತನ್ನ ಪತ್ನಿಯ ಮೊಬೈಲ್ ನಿಂದ ಆ ನಂಬರಿಗೆ ಕರೆ ಮಾಡಿದ. ಅತ್ತ ಕರೆ ಸ್ವೀಕರಿಸಿದ ವ್ಯಕ್ತಿ “ಏನು ಸ್ವೀಟ್ ಹಾರ್ಟ್, ಎಷ್ಟೊತ್ತಿನಿಂದ ಫೋನ್ ಮಾಡ್ತಾ ಇದೀನಿ ಯಾಕೆ ರಿಸೀವ್ ಮಾಡ್ತಾ ಇಲ್ಲ” ಎಂದು ಕೇಳಿದ. ಇದನ್ನು ಕೇಳಿ ನಖಶಿಖಾಂತ ಉರಿದು ಬಿದ್ದ ಸುರೇಶ ಕರೆಯ ಆ ತುದಿಯಲ್ಲಿದ್ದ ವ್ಯಕ್ತಿಗೆ ಜೋರಾಗಿ ಗದರಿಸಿದ. ಕಕ್ಕಾಬಿಕ್ಕಿಯಾದ ಆ ವ್ಯಕ್ತಿ ಆಕೆಯೇ ನನಗೆ ಮೊದಲು ಕರೆ ಮಾಡಿದ್ದು, ಬೇಕಿದ್ರೆ ಅವರನ್ನೇ ಕೇಳಿ ಎಂದು ಹೇಳಿ ಕರೆಯನ್ನು ತುಂಡರಿಸಿದ. ಎಲ್ಲ ವಿದ್ಯಮಾನಗಳನ್ನು ನೋಡುತ್ತಿದ್ದ ಸುಗುಣ ಕೊಂಚ ಗಾಬರಿಯಾದಳು. ಸುರೇಶನ ತಲೆಯಲ್ಲಿ ಅನಾಮಧೇಯ ವ್ಯಕ್ತಿಯ ಮಾತುಗಳು ರಿಂಗಣಿಸತೊಡಗಿದವು. ಮನ ಸಂಶಯದ ಹುತ್ತಕ್ಕೆ ಎಡೆ ಮಾಡಿಕೊಟ್ಟಿತು. ಕೂಡಲೇ ಹೆಂಡತಿಯ ಫೋನ್ನಲ್ಲಿದ್ದ ಇಂದಿನ ಕಾಲ್ ಹಿಸ್ಟರಿ ತೆಗೆದು ನೋಡಿದ. ಅದರಲ್ಲಿ ಕರೆ ಪತ್ನಿಯಿಂದಲೇ ಮೊದಲು ಹೋಗಿದ್ದು ಕಂಡು ಬಂತು( ಬೆಳಿಗ್ಗೆ ಆತನ ಫೋನ್ ಬಂದಾಗ ಗಾಬರಿಯಲ್ಲಿ ಮೊದಲು ಆತನ ಕರೆ ಬಂದದ್ದನ್ನು ಸುಗುಣ ಅಳಿಸಿ ಹಾಕಿದ್ದಳಲ್ಲ!). ಅನ್ಯಮನಸ್ಕನಾಗಿ ಪತ್ನಿ ಕೊಟ್ಟ ಚಹಾ ಕುಡಿದು ಹೊರಬಿದ್ದ ಆತ. ಇತ್ತ ದೀರ್ಘವಾದ ನಿಟ್ಟುಸಿರನ್ನು ಬಿಟ್ಟ ಸುಗುಣ ತನ್ನೆಲ್ಲ ತಲೆ ನೋವನ್ನು ಪತಿಗೆ ವರ್ಗಾಯಿಸಿದ್ದೇನೆಂದು ಸುಮ್ಮನಾಗಿಬಿಟ್ಟಳು.
ಹ!! ಆಕೆಗೇನು ಗೊತ್ತು ಪತಿಯ ತಲೆಯಲ್ಲಿ ಸಂಶಯದ ಬೀಜ ಮೊಳಕೆಯೊಡೆಯುತ್ತಿದೆ ಎಂದು. ಮರುದಿನದಿಂದಲೇ ಪತ್ನಿಯನ್ನು ಅತ್ಯಂತ ಜಾಗರೂಕನಾಗಿ ಗಮನಿಸಲಾರಂಭಿಸಿದ ಸುರೇಶ ಆಕೆಯ ಮೊಬೈಲ್ ನ ಕಾಲ್ ಹಿಸ್ಟರಿಯನ್ನು ಪ್ರತಿದಿನವೂ ಪರೀಕ್ಷಿಸಲಾರಂಭಿಸಿದ. ಗಂಡನ ಚರ್ಯೆಯಿಂದ ತುಸು ಗೊಂದಲಗೊಂಡ ಆಕೆ ಈ ಕುರಿತು ಪ್ರಶ್ನಿಸಿದಾಗ ಯಾವಾಗಿನಿಂದ ನಿನಗೆ ಆತನೊಂದಿಗೆ ಈ ಸಂಬಂಧ ಎಂದು ಕಠೋರವಾಗಿ ಕೇಳಿಯೇಬಿಟ್ಟ. ಕಾಲ ಕೆಳಗಿನ ನೆಲವೇ ಕುಸಿದಂತಾಯಿತು ಸುಗುಣಳಿಗೆ. ಪದೇಪದೇ ಆ ದಿನ ನಡೆದುದನ್ನು ಗಂಡನಿಗೆ ಆಕೆ ಹೇಳಿದರೂ ಕೂಡ ಆತನ ಅನುಮಾನ ಕರಗಲೇ ಇಲ್ಲ. ಒಂದೇ ವಾರದಲ್ಲಿ ಬಹಳಷ್ಟು ಕುಸಿದು ಹೋದಳು ಸುಗುಣ. ಅತ್ಯಂತ ಲವಲವಿಕೆಯಿಂದ ಓಡಾಡಿ ಇಡೀ ಮನೆಯ ಎಲ್ಲ ಕೆಲಸಗಳನ್ನು ಮಾಡಿ ಪೂರೈಸುತ್ತಿದ್ದ ಸುಗುಣ ನೆರೆಹೊರೆಯವರಿಗೆಲ್ಲ ಮಾದರಿಯಾಗಿದ್ದಳು. ನೆಚ್ಚಿನ ಮಡದಿ,ಒಳ್ಳೆಯ ತಾಯಿ, ಉತ್ತಮ ಗೃಹಿಣಿ ಎಂದೆನಿಸಿಕೊಂಡಿದ್ದ ಸುಗುಣ ಕೇವಲ ಎಂಟು ದಿನಗಳಲ್ಲಿ ಪತಿಯ ಸಂಶಯಾತ್ಮಕ ನಡವಳಿಕೆಯಿಂದ ಕೊರಗಿ ಸೊರಗಿ ಹೋದಳು.. 9ನೇ ಮುಂಜಾನೆ ಪ್ರತಿದಿನದಂತೆ 5 ಗಂಟೆಗೆ ಏಳಲು ಹೋದ ಸುಗುಣಳಿಗೆ ದೇಹ ಸಹಕರಿಸಲಿಲ್ಲ. ಹಾಗೂ ಹೀಗೂ ಸಾವರಿಸಿಕೊಂಡು ನಿಧಾನವಾಗಿ ಮನೆ ಕೆಲಸಗಳನ್ನು ಪೂರೈಸಿ ಮಗಳನ್ನು ಶಾಲೆಗೆ ಕಳುಹಿಸುವ ಹೊತ್ತಿಗೆ ದಣಿದು ಹೋದ ಸುಗುಣ ಮತ್ತೊಂದು ಕೋಣೆಗೆ ತೆರಳಿ ಮಲಗಿಬಿಟ್ಟಳು. ಆಕೆಯ ಕೈಕಾಲುಗಳಲ್ಲಿನ ಶಕ್ತಿಯೇ ಸೋರಿ ಹೋದಂತಾಗಿ ಜೀವನದಲ್ಲಿ ಮೊದಲ ಬಾರಿಗೆ ನಡುಕವನ್ನು ಅನುಭವಿಸಿದಳು. ಒಂದರ್ಧ ಗಂಟೆ ಮಲಗಿದಲ್ಲಿಯೇ ತನ್ನಿಡಿ ಜೀವನವನ್ನು ಮನದ ಕನ್ನಡಿಯಲ್ಲಿ ಪುನರಾವಲೋಕಿಸಿದ ಆಕೆ ತನ್ನ ಇಂದಿನ ಸ್ಥಿತಿಗೆ ಆತಂಕಕ್ಕೀಡಾದಳು. ತನ್ನ ಬದುಕಿನ ಅಸಂಖ್ಯಾತ ಏರಿಳಿತಗಳಲ್ಲಿಯೂ ಆಕೆ ಎಂದೂ ಎದೆಗುಂದಿರಲಿಲ್ಲ. ಪತಿಯ ಅನಾರೋಗ್ಯ, ಒಬ್ಬರ ಹಿಂದೆ ಒಬ್ಬರಂತೆ ಅತ್ತೆ ಮಾವ ಮತ್ತು ಸಹೋದರನ ಸಾವು ಪದೇ ಪದೇ ಕೈ ಕೊಡುವ ಮಗಳ ಆರೋಗ್ಯ ಮನೆಯ ಜವಾಬ್ದಾರಿ ಯಾವುದಕ್ಕೂ ಆಕೆ ಜಗ್ಗದೆ ತನ್ನೊಂದಿಗೆ ಸದಾ ದೇವರಿದ್ದಾನೆ ಎಂಬ ಏಕೈಕ ನಂಬಿಕೆಯಿಂದ ಬದುಕು ಸಾಗಿಸುತ್ತಿದ್ದಳು.
ಬಹಳ ಹೊತ್ತು ಯೋಚಿಸಿದ ಆಕೆ ನೇರ ಗಂಡನ ಬಳಿಗೆ ನಡೆದು ಬಂದು ಆತನ ಎದುರಿಗೆ ಕುಳಿತಳು. ಯಾವುದೋ ಕಡತವನ್ನು ಕೈಯಲ್ಲಿ ಹಿಡಿದು ಕುಳಿತಿದ್ದ ಸುರೇಶ ತನ್ನ ಮುಂದಿನ ಸೋಫಾದಲ್ಲಿ ಕುಳಿತಿದ್ದ ಪತ್ನಿಯನ್ನು ತಲೆಯೆತ್ತಿ ನೋಡಿ ಏನು ಎಂಬಂತೆ ಪ್ರಶ್ನಿಸಿದ. ಗಂಟಲು ಬಿಗಿದು ಬಂದರೂ ಬಿಡದೆ ನಡೆದಿರುವುದೆಲ್ಲವನ್ನು ನಾನು ಹೇಳಿಯಾಗಿದೆ. ನಾನೆಂದೂ ಇಷ್ಟು ಅಸಹಾಯಕಳಾಗಿರಲಿಲ್ಲ, ನನ್ನ ದೇಹದಲ್ಲಿ ಶಕ್ತಿಯೇ ಇಲ್ಲದಂತಾಗಿದೆ, ಮನಸ್ಸು ಖಿನ್ನತೆಯತ್ತ ಜಾರುತ್ತಿದೆ, ಇನ್ನು ನನ್ನಿಂದ ಸಹಿಸಲು ಸಾಧ್ಯವಿಲ್ಲ ಇನ್ನೂ ನಿಮಗೆ ಅನುಮಾನವಿದ್ದರೆ ನನಗೆ ವಿಚ್ಛೇದನ ನೀಡಿಬಿಡಿ ನನ್ನ ಬದುಕನ್ನು ನಾನು ಹೇಗಾದರೂ ಕಟ್ಟಿಕೊಳ್ಳುತ್ತೇನೆ ಎಂದು ದೃಢವಾಗಿ ಹೇಳಿ ಕೋಣೆಗೆ ನಡೆದಳು.
ಅಂದು ಮಧ್ಯಾಹ್ನ ಮನೆಗೆ ಊಟಕ್ಕೆ ಬಂದ ಸುರೇಶ ಆ ವ್ಯಕ್ತಿಯ ನಂಬರಿಗೆ ಕರೆ ಮಾಡಿ ಸ್ಪೀಕರ್ಗೆ ಹಾಕಿ ಪತ್ನಿಗೆ ಮಾತನಾಡಲು ಹೇಳಿದ…. ತಾನು ಗಾರ್ಮೆಂಟ್ ಫ್ಯಾಕ್ಟರಿ ಮ್ಯಾನೇಜರ್ ರಾಘು ಎಂದು ಹೇಳಿಕೊಂಡಿದ್ದ ಆ ವ್ಯಕ್ತಿ ತನ್ನನ್ನು ತಾನು ಬಚಾವ್ ಮಾಡಿಕೊಳ್ಳಲು ಸುಗುಣಳೆ ಕರೆ ಮಾಡಿದ್ದು ಎಂದು ಮತ್ತೆ ಮತ್ತೆ ಒತ್ತಿ ಹೇಳಿದ. ಇದೀಗ ಸುರೇಶ ಜೋರಾಗಿ ಆತನನ್ನು ಗದರಿಸಿ ಮತ್ತೊಮ್ಮೆ ಹೀಗೆ ಕರೆ ಮಾಡಿದರೆ ಪೊಲೀಸರಿಗೆ ದೂರು ನೀಡುವುದಾಗಿ ಹೆದರಿಸಿ ಕರೆಯನ್ನು ತುಂಡರಿಸಿದ. ಆತನ ಅನುಮಾನ ನಿರಾಧಾರವೆಂದು ತೋಚಿದರೂ ಆಗಾಗ ಪತ್ನಿಗೆ ಮಾತಿನಲ್ಲಿಯೇ ಕುಟುಕುತ್ತಿದ್ದ ಸುರೇಶ. ಆಗ ಸುಗುಣ ಎದುರುತ್ತರ ಕೊಡದೆ ಬಾಯಿಗೆ ಹೊಲಿಗೆ ಹಾಕಿಕೊಂಡು ಬಿಡುತ್ತಿದ್ದಳು.
ಮುಂದಿನ ಕೆಲ ತಿಂಗಳಲ್ಲಿ ರಜೆಗೆ ಬಂದ ಸುರೇಶನ ಸೋದರ ಸಂಬಂಧಿ ಸುಧಾ ಇಳಿ ಮಧ್ಯಾಹ್ನದ ಹೊತ್ತಿನಲ್ಲಿ ಹಾಲ್ನಲ್ಲಿ ಕುಳಿತು ಟಿವಿ ನೋಡುತ್ತಿದ್ದಳು. ಅಲ್ಲಿಯೇ ತುಸು ದೂರದಲ್ಲಿ ಸುಗುಣ ಕಸ ಗುಡಿಸುತ್ತಿದ್ದಾಗ ಸುಧಾಳ ಮೊಬೈಲಿಗೆ ಅನಾಮಧೇಯ ಕರೆಯೊಂದು ಬಂದಿತು. ಅಲ್ಲಿಯೇ ಆಕೆಯೊಂದಿಗೆ ಕುಳಿತು ಟಿವಿ ವೀಕ್ಷಿಸುತ್ತಿದ್ದ ತನ್ನ ಚಿಕ್ಕಮ್ಮನಿಗೆ ಕಳೆದ ಕೆಲ ದಿನಗಳಿಂದ ತನಗೆ ಕರೆ ಮಾಡಿ ತೊಂದರೆ ಕೊಡುತ್ತಿರುವ ಅನಾಮಧೇಯ ವ್ಯಕ್ತಿಯ ವಿಷಯವನ್ನು ಸುಧಾ ಹೇಳಿದಳು. ಚಿಕ್ಕಮ್ಮನ ಸಲಹೆಯಂತೆ ಕರೆಯನ್ನು ಸ್ವೀಕರಿಸಿದ ಸುಧಾ ಅತ್ತ ಕಡೆಯಿಂದ ಮಾತನಾಡುತ್ತಿರುವವ ಈ ಹಿಂದೆ ಕರೆ ಮಾಡಿ ಕಾಡಿಸಿದವನೇ ಎಂದು ಅರಿವಾದೊಡನೆ ಜೋರಾದ ಧ್ವನಿಯಲ್ಲಿ ಯಾಕಲೇ ಹ*** ಭಾ** ಹೊಟ್ಟೆಗೆ ಏನ್ ತಿಂತೀ… ಮನ್ಯಾಗ ಇರೋ ಹೆಣ್ಣುಮಕ್ಕಳಿಗೆ ಫೋನ್ ಮಾಡಿ ಜೀವ ತಿಂತೀಯಾ ಎಂದು ಪಕ್ಕಾ ಗಾಂವಟಿ ಭಾಷೆಯಲ್ಲಿ ಜೋರಾಗಿ ಬುಸುಗುಡುತ್ತಾ ಹೇಳಿದಾಗ ಅತ್ತಣ ಕರೆ ತನ್ನಿಂತಾನೇ ತುಂಡರಿಸಿತ್ತು. ಇದೆಲ್ಲವನ್ನು ಗಮನಿಸುತ್ತಿದ್ದ ಸುಗುಣ ಅಯ್ಯೋ!ನಾನೆಷ್ಟು ಪುಕ್ಕಲು, ಇವರೆಲ್ಲಾ ಅದೆಷ್ಟು ಸಲೀಸಾಗಿ ತಮ್ಮ ತೊಂದರೆಗಳನ್ನು ನಿವಾರಿಸಿಕೊಳ್ಳುತ್ತಾರೆ… ನಾನ್ಯಾಕೆ ಅಷ್ಟು ಭಯಪಟ್ಟೆ ಎಂದು ತನ್ನನ್ನು ತಾನೇ ಹಳಿದುಕೊಂಡಳು.
ಇದಾಗಿ ಮತ್ತೆರಡು ವರ್ಷಗಳೇ ಕಳೆದು ಹೋದವು. ಕೆಲ ದಿನಗಳ ಹಿಂದೆ ತಂದೆಯನ್ನು ಕಳೆದುಕೊಂಡ ಸುಗುಣ ತಾಯಿಯ ಮನೆಯಲ್ಲಿದ್ದಳು. ಮಧ್ಯಾಹ್ನ ಊಟದ ಸಮಯವಾಗಿದ್ದು ಎಲ್ಲರೊಂದಿಗೆ ಕುಳಿತು ಊಟ ಮಾಡಿ ಹೊರಬಂದ ಸುಗುಣಳ ಫೋನಿಗೆ ಅನಾಮಧೇಯ ನಂಬರ್ ನಿಂದ ಕರೆ ಬರುತ್ತಿತ್ತು… ಕರೆಯನ್ನು ಸ್ವೀಕರಿಸಿ ಕಿವಿಗಿಟ್ಟುಕೊಂಡು ಇನ್ನೇನು ಹಲೋ ಎಂದು ಹೇಳಬೇಕು “ನಾನು ಕಣ್ರೀ… ಗಾರ್ಮೆಂಟ್ ಫ್ಯಾಕ್ಟರಿ ರಾಘು” ಎಂದು ಅತ್ತ ಕಡೆಯಿಂದ ದನಿ ಬರುತ್ತಲೇ ಮೈಯೆಲ್ಲಾ ಉರಿದು ಹೋದಂತಾಯಿತು ಸುಗುಣಳಿಗೆ. ಕೂಡಲೇ ಆಕೆ ಈ ಹಿಂದೆ ತನ್ನ ನಾದಿನಿ ಸುಧಾ ಹೇಳಿದಂತೆ ಯಾಕಲೇ ಹ** ಭಾ** ನಿನಗ್ ಅಕ್ಕ ತಂಗಿ ಇಲ್ಲೇನು??ಇನ್ನೊಮ್ಮೆ ಫೋನ್ ಮಾಡಿದರೆ ಚಪ್ಪಲಿ ತಗೊಂಡ್ ಹೊಡಿತೀನಿ ಎಂದು ಜೋರಾಗಿ ಹೇಳಿದಾಗ ಅತ್ತಣ ಫೋನ್ ಕರೆ ತುಂಡರಿಸಿತ್ತು. ಜೋರಾಗಿ ಹೊಡೆದುಕೊಳ್ಳುತ್ತಿದ್ದ ಹೃದಯವನ್ನು ಸಂಭಾಳಿಸಿಕೊಂಡು ನಿಧಾನವಾಗಿ ಮಂಚದ ಮೇಲೊರಗಿದ ಸುಗುಣಳ ಕಣ್ಣಲ್ಲಿ ನೀರ ಧಾರೆಯಿದ್ದರೂ ಮನದಲ್ಲಿ ಇನ್ನಿಲ್ಲದ ನೆಮ್ಮದಿಯನ್ನು ಅನುಭವಿಸಿದಳು.
( ಸ್ನೇಹಿತರೇ ಬಹಳಷ್ಟು ಹೆಣ್ಣು ಮಕ್ಕಳ (ಗಂಡು ಮಕ್ಕಳಿಗೂ ಕೂಡ ಬರಬಹುದು) ಜೀವನದಲ್ಲಿ ಇಂತಹ ಅನಾಮಧೇಯ ಕರೆಗಳು ಬರುತ್ತವೆ, ವಿಕೃತ ಮನಸ್ಸಿನ, ಮಾಡಲು ಕೆಲಸವಿಲ್ಲದ ಬಹುತೇಕ ಜನ ಬೇರೆ ಬೇರೆ ನಂಬರುಗಳಿಗೆ ಈ ರೀತಿ ಕರೆಗಳನ್ನು ಮಾಡಿ ತಮ್ಮ ತೆವಲು ತೀರಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ ಅದಕ್ಕೆ ಬಲಿಯಾಗುವವರು ನಮ್ಮ ಮನೆಯ ತಾಯಿ ಪತ್ನಿ ಸೋದರಿ ಮುಂತಾದ ಹೆಣ್ಣು ಮಕ್ಕಳು. ಪೂರ್ವಾಪರ ವಿಚಾರಿಸದೆ ನಿಮ್ಮ ಮನೆಯ ಹೆಣ್ಣು ಮಕ್ಕಳನ್ನು ಅನುಮಾನಿಸಿ ಅವಮಾನಿಸಬೇಡಿ)
ವೀಣಾ ಹೇಮಂತ್ ಗೌಡ ಪಾಟೀಲ್
ಮುಂಡರಗಿ ಗದಗ್