2c136fae-be38-4577-97e1-318669006cc9

ಅನಾಮಧೇಯ ಕರೆ ಬಂದಲ್ಲಿ ಎಚ್ಚರದಿಂದಿರಿ : ಬಳ್ಳಾರಿ ಮಹಾನಗರ ಪಾಲಿಕೆ ಮನವಿ

ಕರುನಾಡ ಬೆಳಗು ಸುದ್ದಿ

ಬಳ್ಳಾರಿ,26- ಮಹಾನಗರ ಪಾಲಿಕೆಯ ವ್ಯಾಪ್ತಿಯ ಸಾರ್ವಜನಿಕರು ಹಾಗೂ ಉದ್ದಿಮೆದಾರರಿಗೆ ಅನಾಮಧೇಯ ವ್ಯಕ್ತಿಗಳಿಂದ ಕರೆ ಬಂದಲ್ಲಿ ಎಚ್ಚರದಿಂದ ಉತ್ತರಿಸಬೇಕು ಎಂದು ಬಳ್ಳಾರಿ ಮಹಾನಗರ ಪಾಲಿಕೆಯ ಆಯುಕ್ತ ಜಿ.ಖಲೀಲ್‍ಸಾಬ್ ಅವರು ಮನವಿ ಮಾಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಅನಾಮಧೇಯ ವ್ಯಕ್ತಿಗಳು ಬಳ್ಳಾರಿ ಮಹಾನಗರ ಪಾಲಿಕೆ ಹಾಗೂ ಗ್ರಾಹಕರ ನ್ಯಾಯಾಲಯ ಹೆಸರಿನಲ್ಲಿ ಕರೆಮಾಡಿ ನಿಮ್ಮ ಟ್ಯಾಕ್ಸ್, ಉದ್ದಿಮೆ ಪರವಾನಿಗೆ ನವೀಕರಣ ಇತ್ಯಾದಿಗಳು ಬಾಕಿ ಇದ್ದು, ತುರ್ತಾಗಿ ಫೋನ್‍ಪೇ ಮೂಲಕ ಹಣ ಪಾವತಿಸಬೇಕು. ಇಲ್ಲದಿದ್ದಲ್ಲಿ ಜಪ್ತಿ ಮಾಡಿ, ಪ್ರಕರಣ ದಾಖಲಿಸಲಾಗುವುದು ಎಂದು ಬೆದರಿಸಿ ಹಣವಸೂಲಿ ಮಾಡುತ್ತಿರುವ ಪ್ರಕರಣಗಳು ಪಾಲಿಕೆಯ ಗಮನಕ್ಕೆ ಬಂದಿವೆ.

ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ಕೆಲವು ಸಾರ್ವಜನಿಕರಿಂದ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸಾರ್ವಜನಿಕರು ಈ ರೀತಿ ಕರೆ ಬಂದಲ್ಲಿ ವಂಚನೆಗೆ ಒಳಗಾಗದೇ ಪಾಲಿಕೆಗೆ ಸಂಪರ್ಕಿಸಿ ಖಚಿತಪಡಿಸಿಕೊಳ್ಳಬೇಕು. ಫೋನ್‍ಪೇ ಅಥವಾ ಇತರೆ ಡಿಜಿಟಲ್ ಪೇಮೆಂಟ್ ಮೂಲಕ ಪಾವತಿಸಿ ಮೋಸ ಹೋಗಬಾರದು ಎಂದು ಅವರು ತಿಳಿಸಿದ್ದಾರೆ.

ಸಾರ್ವಜನಿಕರು ತಮಗೆ ಬಾಕಿ ಇರುವ ಯಾವುದೇ ಬಿಲ್‍ಅನ್ನು ಆನ್‍ಲೈನ್ ಮೂಲಕ ಪಾವತಿಸಲು ಇಚ್ಛಿಸಿದಲ್ಲಿ ಭಾರತ್ ಬಿಲ್ ಪೆಮೆಂಟ್ ಸಿಸ್ಟಮ್ (ಬಿಬಿಪಿಎಸ್) ಮೂಲಕ ಪಾವತಿಸುವವರು ಪೌರಾಡಳಿತ ನಿರ್ದೇಶನಾಲಯ ಕರ್ನಾಟಕ ಬಿಲ್ಲರ್ ಐಡಿ (Directorate of Municipal Administration Karnataka  Biller ID) ಮೂಲಕ ಮಾತ್ರ ಪಾವತಿಸಬೇಕುಮ ಅಥವಾ ನಗದು ರೂಪದಲ್ಲಿ ಪಾವತಿಸುವವರು ಪಾಲಿಕೆಯ ಕಚೇರಿಯ ಬ್ಯಾಂಕ್ ಆಫ್ ಬರೋಡಾ ನಗದು ಶಾಖೆಯಲ್ಲಿ ಸಂದಾಯ ಮಾಡಬೇಕು.
ಸಾರ್ವಜನಿಕರು ಈ ರೀತಿಯ ಕರೆ ಬಂದಲ್ಲಿ ಜಾಗರೂಕರಾಗಿರಬೇಕು.

ಮೋಸ ಹೋಗದೇ ಸೈಬರ್ ಕ್ರೈಂ ಸಹಾಯವಾಣಿ ಸಂಖ್ಯೆ 1930ಕ್ಕೆ ಕರೆಮಾಡಿ ದೂರು ದಾಖಲಿಸಬಹುದು ಎಂದು ಪಾಲಿಕೆಯ ಆಯುಕ್ತ ಜಿ.ಖಲೀಲ್‍ಸಾಬ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!