IMG-20231115-WA0025
                                                     ಹೈಟೆಕ್ ಒಳಚರಂಡಿ ನಿರ್ಮಾಣ
                                             ಕೊಪ್ಪಳದಲ್ಲಿ ಸಚಿವ ಶಿವರಾಜ ತಂಗಡಗಿ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, ೧೫-  ಬೆಂಗಳೂರಿನ ದೇವನಹಳ್ಳಿಯ ವಿಮಾನ ನಿಲ್ದಾಣದ ಬಳಿಯಲ್ಲಿ, ಯುಜಿಡಿಗಿಂತ ಹೊಸ ಮಾದರಿಯಲ್ಲಿ ಹೈಟೆಕ್ ತಂತ್ರಜ್ಞಾನ ಆಧಾರಿತ ಒಳಚರಂಡಿ ನಿರ್ಮಾಣ ಕಾರ್ಯ ಆರಂಭವಾಗಿದೆ. ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಪಡೆದು, ಅದೇ ಮಾದರಿಯಲ್ಲಿ ಕೊಪ್ಪಳ ಜಿಲ್ಲೆಯಲ್ಲೂ ಹೈಟೆಕ್ ಒಳ ಚರಂಡಿ ನಿರ್ಮಾಣ ಯೋಜನೆಯನ್ನು ಜಾರಿ ಮಾಡಲಾಗುವುದು ಎಂದು ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ತಂಗಡಗಿ ಅವರು ಹೇಳಿದರು.
ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನದ 4ನೇ ಹಂತದ ಯೋಜನೆಯಡಿ 1799.76 ಲಕ್ಷ ವೆಚ್ಚದ ಕಾಮಗಾರಿಗೆ ನಗರದ ಬಸವೇಶ್ವರ ವೃತ್ತದ ಬಳಿಯಲ್ಲಿ ನವೆಂಬರ್ 15ರಂದು ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ತಾವರಗೇರಾ, ಕುಕನೂರ, ಯಲಬುರ್ಗಾ, ಕನಕಗಿರಿ, ಕಾರಟಗಿ ಇಲ್ಲಿ ಹೈಟೆಕ್ ಒಳ ಚರಂಡಿ ನಿರ್ಮಾಣಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಸಚಿವ ಸಂಪುಟದಿAದ ಒಪ್ಪಿಗೆ ಪಡೆದು ಟೆಂಡರ್ ಪ್ರಕ್ರಿಯೆ ಕಾರ್ಯ ನಡೆಸಲಾಗುವುದು ಎಂದು ಅವರು ಮಾಹಿತಿ ನೀಡಿದರು.
ಈಗ ಭೂಮಿ ಪೂಜೆ ಮಾಡಲಾಗಿರುವ ಕಾಮಗಾರಿಯು ಅತ್ಯಂತ ಗುಣಮಟ್ಟದಿಂದ, ನಿಗದಿತ ಕಾಲಾವಧಿಯೊಳಗೆ ಪೂರ್ಣಗೊಳಿಸಬೇಕು. ಇಲ್ಲವಾದರೆ ಸಂಬAಧಿಸಿದ ಅಧಿಕಾರಿಗಳನ್ನು ಹೊಣೆ ಮಾಡುತ್ತೇವೆ. ಗುತ್ತಿಗೆದಾರರು ಯಾರೇ ಇದ್ದರೂ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಇಡೀ ಕೊಪ್ಪಳ ಜಿಲ್ಲೆಯನ್ನು ಸಮಗ್ರ ಅಭಿವೃದ್ಧಿ ಮಾಡುವ ಯೋಚನೆ ಮತ್ತು ಯೋಜನೆ ನಮಗಿದೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಅನೇಕ ಕಾರ್ಯಗಳಾಗುತ್ತಿವೆ. ದಿನೇದಿನೆ ಅಭಿವೃದ್ಧಿ ಪಥದಲ್ಲಿ ಇರುವ ಕುಕನೂರ, ಕಾರಟಗಿ, ಕನಕಗಿರಿ ತಾಲೂಕುಗಳ ಸಮಗ್ರ ಅಭಿವೃದ್ಧಿ ನಿಟ್ಟಿನಲ್ಲಿ ಕುಡಿಯುವ ನೀರಿನ ವಿವಿಧ ಯೋಜನೆಗಳಿಗೆ ಅಂದಾಜು 500 ಕೋಟಿ ರೂ. ಅನುದಾನ ತರುವ ಕಾರ್ಯ ಮಾಡಿದ್ದೇವೆ ಎಂದು ಸಚಿವರು ತಿಳಿಸಿದರು.
ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಕೊಪ್ಪಳ ನಗರವು ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ವಾಹನ ದಟ್ಟಣೆ ಹೆಚ್ಚಾಗುತ್ತಿದ್ದು, ರಸ್ತೆ ಅಗಲೀಕರಣ ಅನಿವಾರ್ಯವಾಗಿದೆ. ರಸ್ತೆ ಅಗಲೀಕರಣಕ್ಕೆ ಯೋಜನೆ ರೂಪಿಸಲಾಗಿದ್ದು, ಆದಷ್ಟು ಬೇಗ ಅನುದಾನ ತಂದು ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
ಸರಕಾರ ಕೊಪ್ಪಳಕ್ಕೆ ಸಾಕಷ್ಟು ಅನುದಾನ ನೀಡಿದೆ. ನಗರಸಭೆ ವ್ಯಾಪ್ತಿಯಲ್ಲಿ 108 ಕೋಟಿ ರೂ.ವೆಚ್ಚದಲ್ಲಿ 40 ಸಾವಿರ ಮನೆಗಳಿಗೆ ನಳ ಅಳವಡಿಸಲು ಟೆಂಡರ್ ಕರೆಯಲಾಗಿದೆ. 450 ಬೆಡ್ ಬೋಧಕ ಆಸ್ಪತ್ರೆ ನಿರ್ಮಾಣಕ್ಕೆ ಸರಕಾರ ಅನುದಾನ ನೀಡಿದ್ದು, ನಿರ್ಮಾಣ ಹಂತದಲ್ಲಿದೆ. ನಗರದ ನಿವಾಸಿಗಳಿಗೆ ಮೂಲ ಸೌಲಭ್ಯ ಒದಗಿಸಲು ಸರಕಾರವು ಬದ್ಧವಾಗಿದೆ ಎಂದು ಅವರು ತಿಳಿಸಿದರು.
ಸಮಾರಂಭದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ರಾಜಶೇಖರ ಹಿಟ್ನಾಳ, ನಗರಸಭೆ ಸದಸ್ಯರಾದ ಶಿವಗಂಗಾ ಶಿವರೆಡ್ಡಿ ಭೂಮಕ್ಕನವರ್, ಅಕ್ಬರ್ ಪಾಷಾ, ಮುತ್ತುರಾಜ ಕುಷ್ಟಗಿ, ಗುರುರಾಜ ಹಲಗೇರಿ, ಅಜಿಂ ಅತ್ತಾರ, ವಿರೂಪಾಕ್ಷಪ್ಪ ಮೋರನಾಳ, ಸಿದ್ದು ಮ್ಯಾಗೇರಿ, ಉಪ ವಿಭಾಗಾಧಿಕಾರಿಗಳಾದ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ನಗರಸಭೆ ಪೌರಾಯುಕ್ತರಾದ ಗಣಪತಿ ಪಾಟೀಲ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಕಾವ್ಯಾರಾಣಿ, ತಹಸೀಲ್ದಾರ್ ವಿಠಲ್ ಚೌಗಲ್, ಅಭಿಯಂತರರಾದ ಮಧುರಾ ಮಗ್ದೂರ, ಸೋಮಲಿಂಗಪ್ಪ ಸೇರಿದಂತೆ ಇತರರು ಇದ್ದರು. ಯುವ ಮುಖಂಡರಾದ ಮಂಜುನಾಥ ಗೊಂಡಬಾಳ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!