
ಅಮ್ಮ ನಿನ್ನ ತೋಳಿನಲ್ಲಿ ಕಂದ ನಾನು…
ಪ್ರತಿ ಮಗುವಿನ ಆಲಾಪ
* ವೀಣಾ ಪಾಟೀಲ್ ಮುಂಡರಗಿ
ಕರುನಾಡ ಬೆಳಗು
‘ನಾಡಿಗೆ ಅರಸನಾದರೂ ತಾಯಿಗೆ ಮಗ’ ಎಂಬ ಗಾದೆಯ ಮಾತನ್ನು ಕೇಳಿದ್ದೇವೆ ಅಲ್ಲವೇ. ಅದೆಷ್ಟೇ ದರ್ಪದಿಂದ,ಠೀವಿಯಿಂದ, ರಾಜ ಗಾಂಭೀರ್ಯದಿಂದ ಜನರ ನಡುವೆ ಓಡಾಡುವ ವ್ಯಕ್ತಿಗಳು ಕೂಡ ಒಂದೊಮ್ಮೆ ತಮ್ಮ ತಾಯಿಯ ಮುಂದೆ ಪುಟ್ಟ ಮಗುವಿನಂತೆ ಕಣ್ಣೀರುಗರೆಯುತ್ತಾರೆ, ತಮಾಷೆ ಮಾಡುತ್ತಾರೆ ಕಾಲೆಳೆಯುತ್ತಾರೆ ಜೋರಾಗಿ ಸಿಟ್ಟು ಮಾಡಿಕೊಳ್ಳುತ್ತಾರೆ ಮರುಕ್ಷಣವೇ ಮತ್ತೆ ಮಗುವಿನ ರೀತಿಯಲ್ಲಿ ಆಕೆಯ ಮಡಿಲಿನಲ್ಲಿಯೇ ಮಲಗಿ ನೆಮ್ಮದಿಯನ್ನು ಕಾಣುತ್ತಾರೆ.
ಹೆಣ್ಣು ಮಕ್ಕಳಾದರೂ ಅಷ್ಟೇ!
ಅಪ್ಪನ ಮಗಳು ಎಂಬ ಬಿರುದನ್ನು ಹುಟ್ಟಿನಿಂದಲೇ ಪಡೆದುಕೊಂಡು ಬರುವ ಹೆಣ್ಣುಮಗು ಸಹಜವಾಗಿ ಅಪ್ಪನ ಕಣ್ಣುಗೂಸಾಗಿ, ಕೈಗೊಂಬೆಯಾಗಿ ಬೆಳೆಯುತ್ತಾಳೆ… ಹದಿ ಹರೆಯದಲ್ಲಿಯೂ ಆಕೆಯ ಪಾಲಿಗೆ ತಂದೆ ಫ್ರೆಂಡ್, ಫಿಲಾಸಫರ್, ಗೈಡ್ ಆಗುತ್ತಾನೆ ನಿಜ ಆದರೆ ಜೀವನ ತನ್ನ ಮಹತ್ವದ ತಿರುವುಗಳನ್ನು ತೆಗೆದುಕೊಳ್ಳುವ ಒಂದು ಹಂತದಲ್ಲಿ ಹೆಣ್ಣು ಮಕ್ಕಳು ತಮ್ಮೆಲ್ಲ ಗುಟ್ಟುಗಳನ್ನು ಬಿಚ್ಚಿಕೊಳ್ಳುವುದು ತಾಯಿಯ ಮುಂದೆಯೇ…. ಅದು ಸಹಜ ಕೂಡ.
ತಂದೆ ಮಗಳಿಗೆ ಯಾವ ನೋವುಗಳೂ ಸೋಕದಂತೆ ಬೆಳೆಸಿದರೆ ತಾಯಿ ತನ್ನ ಮಗಳಿಗೆ ಬದುಕಿನ ಎಲ್ಲಾ ನಿಷ್ಟುರ ಸತ್ಯಗಳ ಅರಿವನ್ನು ಮೂಡಿಸುತ್ತಾಳೆ. ಬಹುಶಹ ಇದೇ ಕಾರಣದಿಂದ ಚಿಕ್ಕಂದಿನಿಂದಲೂ ತಾಯಿಯಿಂದ ತುಸು ಅಂತರವನ್ನು ಕಾಯ್ದುಕೊಳ್ಳುವ ಮಗಳು ಒಂದೊಮ್ಮೆ ಈ ನಿಷ್ಟುರ ಸತ್ಯಗಳನ್ನು ಎದುರಿಸುವ ಹಂತದಲ್ಲಿ ಅರಸಿ ಬರುವುದು ತನ್ನ ತಾಯಿಯನ್ನು ಎಂಬುದು ನೂರು ಪ್ರತಿಶತ ನಿಜ.
ಓದಿನಲ್ಲಿ ಅತ್ಯಂತ ಜಾಣನಾಗಿರುವ ಚಟುವಟಿಕೆಗಳಲ್ಲಿ ಅತ್ಯಂತ ಕ್ರಿಯಾಶೀಲನಾಗಿರುವ ಆ ಪುಟ್ಟ ಬಾಲಕ ತನ್ನ ತಾಯಿಯ ಪಾಲಿಗೆ ಮಾತ್ರ ಅರಿ ಭಯಂಕರ. ಆತನ ಅಳು ಹಠ ಮೊಂಡತನ ಎಲ್ಲವುಗಳಿಂದ ಎಷ್ಟೋ ಬಾರಿ ಬೇಸತ್ತು ಹೋಗಿರುವ ಆಕೆ ಸಾಕಪ್ಪ ಸಾಕು ಈ ಜೀವನ ಮಕ್ಕಳನ್ನು ಹೆರಲೇಬಾರದು ಎಂದು ಯೋಚಿಸಿದ್ದೂ ಉಂಟು. ಮತ್ತೆ ಕೆಲವರು ಮಕ್ಕಳ ಈ ಕಿರಿಕಿರಿ ತೊಂದರೆಗಳಿಂದ ಬೇಸತ್ತು ತಮಗೆ ತಾವೇ ಆಘಾತ ಮಾಡಿಕೊಳ್ಳಲು ಪ್ರಯತ್ನಿಸಿದ್ದೂ ಉಂಟು.
ಹರೆಯದ ವಯಸ್ಸಿಗೆ ಬಂದಾಗಲೂ ಕೂಡ ಊರಿನ ಎಲ್ಲ ಜನರ ಪ್ರೀತಿಗೆ ಪಾತ್ರನಾಗಿರುವ ತಮ್ಮ ಮಗ ತಮ್ಮ ಮುಂದೆ ಮಾತ್ರ ಮಗುವಿನಂತೆ ಆಡುವುದು ಕೂಡ ಇದೇ ಕಾರಣಕ್ಕೆ.
ತನ್ನ ಒಡಹುಟ್ಟಿದವರೊಂದಿಗೆ ಕೂಡ ತಾಯಿಯನ್ನು ಹಂಚಿಕೊಳ್ಳಲು ಒಪ್ಪದ ಮಕ್ಕಳು ಅಮ್ಮನ ಪಕ್ಕದಲ್ಲಿ ಮಲಗಲು, ಅಮ್ಮನ ಕೈತುತ್ತು ಮೊದಲು ತಾನೇ ಸವಿಯಲು, ಮುಂದೆ ಅಮ್ಮ ತನ್ನ ಮಾತನ್ನೇ ಕೇಳಲಿ ಎಂಬಲ್ಲಿಯವರೆಗೆ ತಾಯಿಯನ್ನು ಅವಲಂಬಿಸುತ್ತದೆ. ತನಗಿಂತ ಚೂರು ಹೆಚ್ಚು ಕಾಳಜಿಯನ್ನು ತನ್ನ ಒಡಹುಟ್ಟಿದವರಿಗೆ ತಾಯಿ ಮಾಡಬಹುದು ಎಂಬ ಅಭದ್ರತಾ ಭಾವನೆಯಿಂದ ನರಳುವ ಮಗು ತನಗೆ ಇಲ್ಲದ ಆರೋಗ್ಯ ತೊಂದರೆಗಳನ್ನು ಸೃಷ್ಟಿಸಿಕೊಂಡು ತಾಯಿಯ ಗಮನ ಸೆಳೆಯುವುದೂ ಉಂಟು.
ತಾನು ಪ್ರೀತಿಸಿದ ಹುಡುಗಿಯ ಕುರಿತು ತಾನು ಮದುವೆಯಾಗುವ ಹೆಣ್ಣಿನ ಕುರಿತು ತನ್ನೆಲ್ಲ ಕಲ್ಪನೆಗಳನ್ನು ಆತ ಬಿಚ್ಚಿಕೊಳ್ಳುವುದು ತಾಯಿಯ ಮುಂದೆಯೇ.
ಮುಂದೆ ತನ್ನ ಬದುಕಿನ ಏಳುಬೀಳುಗಳಲ್ಲಿ ಕೂಡ ಮಗು ಹೇಳಿಕೊಳ್ಳುವುದು ತನ್ನ ತಾಯಿಯ ಮುಂದೆಯೇ. ತಾಯಿಯಿಂದ ಮಕ್ಕಳಿಗೆ ಅವರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರವೇ ದೊರೆಯಬೇಕೆಂದು ಆಶಿಸುವುದಿಲ್ಲ, ಆದರೆ ಆಕೆಯ ಕೈಗಳ ನೇವರಿಸುವಿಕೆ ಸಮಾಧಾನದಿಂದ ಬೆನ್ನು ತಟ್ಟುವ ಪ್ರಕ್ರಿಯೆಗಳು, ಮಡಿಲಿನ ಮಮತೆ ಮಗುವಿಗೆ( ಅವರೆಷ್ಟೇ ದೊಡ್ಡವರಾದಾಗಲೂ ಕೂಡ) ಹೆಚ್ಚಿನ ಭದ್ರತೆಯನ್ನು ನೀಡುತ್ತವೆ.
ಭಾವನಾತ್ಮಕವಾಗಿ ಅತ್ಯಂತ ಸೂಕ್ಷ್ಮವಾಗಿರುವ ಮಕ್ಕಳನ್ನು ಎಷ್ಟೋ ಬಾರಿ ಅಮ್ಮನ ಬಾಲ, ಸದಾ ಅಮ್ಮನ ಸೆರಗನ್ನೇ ಹಿಡಿದುಕೊಂಡಿರುತ್ತಾನೆ ಎಂದು ತಮಾಷೆ ಮಾಡಿ ಹೀಯಾಳಿಸುವುದು ಉಂಟು, ಆದರೆ ಇದಾವುದಕ್ಕೂ ಆ ಮಕ್ಕಳು ತಲೆಕೆಡಿಸಿಕೊಳ್ಳುವುದಿಲ್ಲ…. ತಾಯಿ ಕೂಡ.
ಬಹಳಷ್ಟು ಬಾರಿ ಮಕ್ಕಳು ತಮ್ಮ ತಾಯಿಯ ಬೆನ್ನ ಹಿಂದೆಯೇ ಇರುತ್ತಾರೆ. ಅವರು ತಾಯಿಯ ಮೇಲೆ ಎಲ್ಲದಕ್ಕೂ ಅವಲಂಬಿತರಾಗಿದ್ದಾರೆ ಎಂಬುದು ಮಾತ್ರ ಇದಕ್ಕೆ ಕಾರಣವಲ್ಲ ನಿಜವಾದ ಕಾರಣ ಮಕ್ಕಳು ತಮ್ಮ ತಾಯಿಯ ಬಳಿ ಅತ್ಯಂತ ಸುರಕ್ಷಿತತೆಯನ್ನು ಅನುಭವಿಸುತ್ತಾರೆ. ಸಂಶೋಧನೆಗಳೇ ಹೇಳಬೇಕೆಂದಿಲ್ಲ ತಾಯಿಯೊಂದಿಗೆ ಅವರ ನಡವಳಿಕೆಗಳು, ಮೊಂಡತನ, ಹಠ ಚೀರಾಟ, ಕಿರುಚಾಟಗಳಂತೆ ತೋರುತ್ತದೆ ಆದರೆ ಅವರು ತಮ್ಮ ಭಾವನಾತ್ಮಕ ಪ್ರಕ್ರಿಯೆಗಳನ್ನು ತಾಯಿಯ ಮುಂದೆ ಮಾತ್ರ ಹೊರಗೆ ಹಾಕುತ್ತಾರೆ. ನಿಜವಾದ ಸತ್ಯ ಇದೇ.
ತಮ್ಮ ಮನಸ್ಸಿಗೆ ಆಗುವ ತೊಂದರೆಗಳನ್ನು ಆಘಾತಗಳನ್ನು ಅವರು ಒಂದು ಹಂತದವರೆಗೆ ತಡೆದುಕೊಳ್ಳಬಲ್ಲರು. ಶಾಲೆಯಲ್ಲಿ ಸ್ನೇಹಿತರ ಕೀಟಲೆಗಳಿಗೆ ಅವರು ಒರಟಾಗಿ ಪ್ರತಿಕ್ರಿಯಿಸಬಲ್ಲರು ಅಜ್ಜಿಯ ಮನೆಯಲ್ಲಿ ಅವರ ಬೈಗುಳಕ್ಕೂ ಪೆದ್ದು ಪೆದ್ದಾಗಿ ನಕ್ಕು ಸುಮ್ಮನಿರಬಲ್ಲರು ತಮ್ಮ ತಂದೆಯ ಬಳಿ ಕೂಡ ಅವರು ಗೌರವದಿಂದ ಬಾಯಿ ಮುಚ್ಚಿಕೊಂಡು ಇರಬಲ್ಲರು…. ಆದರೆ ಒಂದೊಮ್ಮೆ ತಾಯಿಯನ್ನು ನೋಡಿದಾಗ ಅವರ ಎಲ್ಲ ಭಾವನೆಗಳು ಉಮ್ಮಳಿಸಿ ಹಠದ ರೂಪದಲ್ಲಿ, ತಂಟೆ ತಕರಾರುಗಳ ರೂಪದಲ್ಲಿ, ಕಣ್ಣೀರಿನ ರೂಪದಲ್ಲಿ ಹೊರಗೆ ಬರುತ್ತವೆ. ಮಕ್ಕಳ ಎಲ್ಲ ಭಾವನೆಗಳಿಗೆ ಆಶ್ರಯ ತಾಣ ತಾಯಿಯ ಮಡಿಲು ತಾಯಿಯ ಅಪ್ಪುಗೆ ಮತ್ತು ಖುದ್ದು ತಾಯಿಯೇ ಆಗಿರುತ್ತಾಳೆ.
1978 ರಲ್ಲಿ ಏನ್ಸ್ ವರ್ತ್ ಎಂಬ ವಿಜ್ಞಾನಿಯ ಸಂಶೋಧನೆಯ ಪ್ರಕಾರ ಮಕ್ಕಳು ತಮ್ಮ ಬಹುದೊಡ್ಡ ಭಾವನಾತ್ಮಕ ಸಂಘರ್ಷಗಳ ಪರಿಣಾಮವನ್ನು ತಮ್ಮ ಮೊದಲ ಕಾಳಜಿಕರ್ತರೊಂದಿಗೆ ಹಂಚಿಕೊಳ್ಳುತ್ತವೆ. ಅವರ ನರಮಂಡಲವು ತಾಯಿಯ ಬಳಿ ಹೆಚ್ಚು ರಕ್ಷಣೆಯನ್ನು ಕಂಡುಕೊಳ್ಳುತ್ತದೆ ಮತ್ತು ಅವರು ತಮ್ಮ ಭಾವನಾತ್ಮಕ ಮುಖವಾಡಗಳನ್ನು ಕಳಚುವುದು ತಾಯಿಯ ಮುಂದೆ ಮಾತ್ರ.
ಆದರೆ ತಾಯಿಯಾದವಳು ಚಿಕ್ಕ ಮಕ್ಕಳಿದ್ದಾಗ ಅವರನ್ನು ಅನಿವಾರ್ಯವಾಗಿಯಾದರೂ ಬಹುತೇಕ ಸಹಿಸಿಕೊಳ್ಳುತ್ತಾಳೆ. ದೊಡ್ಡವರಾಗುತ್ತಾ ಹೋದಂತೆ ಮಕ್ಕಳ ವರ್ತನೆಗಳು ಆಕೆಗೆ ಅಸಹನೀಯ ಎಂದು ತೋರತೊಡಗಿದಾಗ ಆಕೆ ಹೇಳುವುದು ಹೀಗೆ ಎಲ್ಲರ ಹತ್ರ ಗೌರವದಿಂದ, ಪ್ರೀತಿಯಿಂದ ಭಯ ಭಕ್ತಿಯಿಂದ ನಡೆದುಕೊಳ್ಳುವ ನನ್ನ ಮಗ ನನ್ನೊಂದಿಗೆ ಮಾತ್ರ ಕೆಟ್ಟದಾಗಿ ವರ್ತಿಸುತ್ತಾನೆ ಎಂದು.
ಆದರೆ ವಿಜ್ಞಾನ ಹೇಳುವುದು ಮಕ್ಕಳು ತಮ್ಮ ತಾಯಿಯನ್ನು ಬೇರೆಲ್ಲರಿಗಿಂತ ಹೆಚ್ಚು ನಂಬುತ್ತವೆ ಎಂದು.
ಮಕ್ಕಳ ಭಾವನಾತ್ಮಕ ರಕ್ಷಣೆಗಳು ಬಹುತೇಕ ಹೀಗಿರುತ್ತವೆ
*ಅವರು ತಮ್ಮೆಲ್ಲ ಆರ್ಭಟಗಳನ್ನು ತಾಯಿಯ ಮುಂದೆ ತೋರುತ್ತಾರೆ… ತಾಯಿಯ ರಕ್ಷಣೆಯನ್ನು ಬಯಸಿ ಹೀಗೆ ಮಾಡುತ್ತಾರೆ.
ತಾಯಿಯ ಬಳಿ ಅವರಿಗೆ ಯಾವುದೇ ನಾಚಿಕೆ, ಅವಮಾನಗಳು ಇರುವುದಿಲ್ಲ ಎಂಬ ಭಾವ ಅವರದ್ದು.
ಅದು ನಿಮ್ಮ ಮತ್ತು ತನ್ನ ನಡುವೆ ಒಂದು ಪುಟ್ಟ ವರ್ತುಲವನ್ನು ರಚಿಸಿ ಅದರಲ್ಲಿ ಬೇರೊಬ್ಬರು ಪ್ರವೇಶಿಸದಂತೆ ನಿರ್ಬಂಧಿಸುತ್ತದೆ.ಇಂತಹ ಸಮಯದಲ್ಲಿ ಅಕಸ್ಮಾತ್ ನೀವು ಮಗುವನ್ನು ನಿರ್ಧಂಧಿಸಲು ಪ್ರಯತ್ನಿಸಿದರೆ ಅದು ಜೋರಾಗಿ ಕಿರುಚಾಡಿ ನೀವಾಗಿಯೇ ಹೊರಗೆ ಹೋಗುವಂತೆ ಮಾಡುತ್ತದೆ.
ತನ್ನ ತಾಯಿಯ ಬಳಿ ಸಾರುವ ಮಗು ತನ್ನ ಸೋಲನ್ನು, ಅವಮಾನವನ್ನು ಮರೆತು, ನಂಬಿಕೆಯನ್ನು, ಪ್ರೀತಿಯನ್ನು, ಸಾಂತ್ವನವನ್ನು ಬಯಸಿ ಆಕೆಯ ತೋಳುಗಳ ಅಪ್ಪುಗೆಯಲ್ಲಿ ಸೇರಿಕೊಳ್ಳುತ್ತದೆ.
ಅತ್ಯಂತ ಸರಳ ಮತ್ತು ಸ್ವಾಭಾವಿಕವಾಗಿರುವ ಈ ಪ್ರಕ್ರಿಯೆಗೆ ಅರ್ಥ ಇಷ್ಟೇ ಅಮ್ಮ ನಿನ್ನ ತೋಳಿನಲ್ಲಿ ಕಂದ ನಾನು. ಇದು ಗರ್ಭದಿಂದ ಆರಂಭವಾದ ಬಾಂಧವ್ಯ ಜೀವಿತದ ಕೊನೆಯವರೆಗೂ ಇರುತ್ತದೆ. ತನ್ನ ಹೊಟ್ಟೆಯಲ್ಲಿ ಭ್ರೂಣವಾಗಿ ಮಗುವಾಗಿ ಬೆಳೆದು ಕೈಗೆ ಬಂದ ಮಗು ತನ್ನ ಜೀವಿತದ ಕೊನೆಯವರೆಗೂ ಬಹುತೇಕ ಅಮ್ಮನ ಸೆರಗನ್ನು ಹಿಡಿದು ಓಡಾಡುವುದು ಇದೇ ಕಾರಣಕ್ಕೆ.
ತಾಯಿಯ ಮಡಿಲು ಅಮೃತದ ಕಡಲು. ತಾಯಿಯ ಮಮತೆಗೆ, ಸ್ನೇಹಕ್ಕೆ ಕೋಟಿ ನಮನ.