
ಆಯುಷ್ಮಾನ್ ಭವಃ ಆರೋಗ್ಯ ಮೇಳಗಳಲ್ಲಿ ಜಾಗೃತಿ
30 ವರ್ಷ ಮೇಲ್ಪಟ್ಟವರು ಪ್ರತಿ ಆರು ತಿಂಗಳಿಗೊಮ್ಮೆ ರಕ್ತದೊತ್ತಡ, ಸಕ್ಕರೆ ಪರೀಕ್ಷಿಸಿಕೊಳ್ಳಿ : ಡಿಹೆಚ್‍ಓ ಡಾ.ವೈ ರಮೇಶ ಬಾಬು
ಕರುನಾಡ ಬೆಳಗು ಸುದ್ದಿ
ಬಳ್ಳಾರಿ,27- ಜೀವನ ಶೈಲಿಯ ರೋಗಗಳಾದ ರಕ್ತದೊತ್ತಡ, ಸಕ್ಕರೆ ಕಾಯಿಲೆಗಳಿಗೆ 30 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ಪ್ರತಿ ಆರು ತಿಂಗಳಿಗೊಮ್ಮೆ ಪರೀಕ್ಷೆ ಮಾಡಿಸಿಕೊಳ್ಳಬೇಕು. ಈ ಕುರಿತು ಆಯುಷ್ಮಾನ್ ಭವಃ ಉಚಿತ ಆರೋಗ್ಯ ಮೇಳಗಳಲ್ಲಿ ಜಾಗೃತಿ ನೀಡಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೈ.ರಮೇಶ್‍ಬಾಬು ಅವರು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಅವರು, ಆರೋಗ್ಯ ಇಲಾಖೆಯಿಂದ ಜೀವನಶೈಲಿಯ ಕಾಯಿಲೆಗಳಿಂದ ದೂರವಿರಲು ಹೆಚ್ಚಿನ ಜಾಗೃತಿ ನೀಡಲಾಗುತ್ತಿದ್ದು, ಪ್ರತಿಯೊಬ್ಬರೂ ಕಾಲ-ಕಾಲಕ್ಕೆ ಪರೀಕ್ಷಿಸಿಕೊಂಡು ಆರೋಗ್ಯವಂತರಾಗಿರಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಎಲ್ಲ ಸಮುದಾಯ ಆರೋಗ್ಯ ಕೇಂದ್ರಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ನಮ್ಮ ಕ್ಲಿನಿಕ್, ಗ್ರಾಮೀಣ ಭಾಗದ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಲ್ಲಿ ಮಾಹಿತಿ ನೀಡಲಾಗುತ್ತಿದೆ. ಅದೇರೀತಿಯಾಗಿ ತಜ್ಞವೈದ್ಯರು, ವೈದ್ಯರು ಕ್ಷೇತ್ರ ಸಿಬ್ಬಂದಿಯವರು ತಪಾಸಣಾ ಕಾರ್ಯ ಕೈಗೊಂಡಿದ್ದು, ಪ್ರತಿ ಮಂಗಳವಾರ ನಡೆಯುವ ಆರೋಗ್ಯ ಶಿಬಿರಗಳ ಸದುಪಯೋಗ ಎಲ್ಲರೂ ಪಡೆಯಬೇಕು ಎಂದು ವಿನಂತಿಸಿದ್ದಾರೆ.
ಬೇಸಿಗೆ ಹಿನ್ನೆಲೆಯಲ್ಲಿ ವಿಶೇಷ ಕಾಳಜಿ ವಹಿಸಿ : ಬೇಸಿಗೆಯು ಆರಂಭವಾಗಿದ್ದು, ಹೆಚ್ಚೆಚ್ಚು ನೀರು ಕುಡಿಯಬೇಕು. ಹತ್ತಿ ಬಟ್ಟೆಗಳನ್ನು ಧರಿಸಬೇಕು. ಮಧ್ಯಾಹ್ನದ 2-4 ಗಂಟೆಯ ಅವಧಿಯಲ್ಲಿ ವಯೋವೃದ್ಧರು, ಮಕ್ಕಳು, ಗರ್ಭಿಣಿಯರು ಬಿಸಿಲಿನಲ್ಲಿ ಓಡಾಡದಂತೆ ಜಾಗೃತಿ ನೀಡಲಾಗಿದ್ದು, ಪ್ರತಿಯೊಬ್ಬರೂ ಆರೋಗ್ಯದ ಕಾಳಜಿ ವಹಿಸಬೇಕು ಎಂದು ಅವರು ತಿಳಿಸಿದ್ದಾರೆ.
ಆರೋಗ್ಯ ಶಿಬಿರಗಳಲ್ಲಿ ಕ್ಷಯರೋಗ ಪರೀಕ್ಷೆ ಹಾಗೂ ರೋಗ ಲಕ್ಷಣಗಳು ಉಳ್ಳುವರ ಕಫ ಪರೀಕ್ಷೆಯನ್ನು ಕೈಗೊಳ್ಳಲಾಗಿದೆ. ಜೊತೆಯಲ್ಲಿ ಸಾಮಾನ್ಯ ಆರೋಗ್ಯ ಸೇವೆಗಳನ್ನು ಸಹ ನೀಡಲಾಗುತ್ತಿದೆ.
ಶಿಬಿರದಲ್ಲಿ ಬಿಪಿಎಲ್ ಕುಟುಂಬಗಳಿಗೆ 5 ಲಕ್ಷಗಳ ವರೆಗಿನ ಉಚಿತ ಚಿಕಿತ್ಸಾ ವೆಚ್ಚದ ಆಯುಷ್ಮಾನ್ ಭಾರತ-ಪ್ರಧಾನ ಮಂತ್ರಿ ಜನಾರೋಗ್ಯ ಯೋಜನೆ-ಮುಖ್ಯಮಂತ್ರಿಗಳ ಆರೋಗ್ಯ ಕರ್ನಾಟಕ ಯೋಜನೆಯ ಕಾರ್ಡ್, ಡಿಜಿಟಲ್ ಹೆಲ್ತ್‍ಕಾರ್ಡ್‍ಗಳನ್ನು ಸೃಜಿಸಿ ವಿತರಿಸಲಾಗುತ್ತಿದೆ.
ಅಂಗಾಂಗ ದಾನ ನೋಂದಣಿಯನ್ನೂ ಮಾಡಲಾಗುತ್ತಿದ್ದು, ಇಲ್ಲಿಯವರೆಗೆ 4355 ನೋಂದಣಿ ಮಾಡಲಾಗಿದೆ. ಅಲ್ಲದೆ ಶಿಬಿರದಲ್ಲಿ ಡೆಂಗ್ಯು ಮತ್ತು ಚಿಕುನ್ ಗುನ್ಯ ಕುಟುಂಬ ಕಲ್ಯಾಣ ವಿಧಾನಗಳು, ತಾಯಿ ಮಗುವಿನ ಆರೈಕೆ, ಟೆಲಿ ಮನಸ್ ಮಾನಸಿಕ ಆರೋಗ್ಯ ಸಹಾಯವಾಣಿ14416 ಕುರಿತು ಮಾಹಿತಿ ನೀಡಲಾಗುತ್ತಿದೆ.
ಪ್ರತಿಯೊಬ್ಬ ಸಾರ್ವಜನಿಕರು ಆರೋಗ್ಯ ಸೇವೆಗಳನ್ನು ಪಡೆದುಕೊಂಡು ಆರೋಗ್ಯಯುತ ಜಿಲ್ಲೆಯನ್ನಾಗಿಸಲು ಸಹಕರಿಸಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ವೈ.ರಮೇಶ್ ಬಾಬು ಅವರು ಕೋರಿದ್ದಾರೆ.