WhatsApp Image 2023-11-07 at 4.26.23 PM

                                       ಕರ್ನಾಟಕ ಓಪನ್ ನ್ಯಾಷನಲ್ ಮಾಸ್ಟರ್ಸ್ ಗೇಮ್ಸ್

                                 ಈಜು ಸ್ಪರ್ಧೆಯಲ್ಲಿ ರಜನಿ ಲಕ್ಕ ಅವರಿಗೆ 6 ಚಿನ್ನದ ಪದಕ

ಕರುನಾಡ ಬೆಳಗು ಸುದ್ದಿ
ಬಳ್ಳಾರಿ, ೦೭- ಕರ್ನಾಟಕ ಓಪನ್ ನ್ಯಾಷನಲ್ ಮಾಸ್ಟರ್ಸ್ ಗೇಮ್ಸ್ ವತಿಯಿಂದ ನ.04, 05ರಂದು ಹುಬ್ಬಳ್ಳಿ ಮತ್ತು ಧಾರವಾಡದಲ್ಲಿ ನಡೆದ ಈಜು ಸ್ಪರ್ಧೆಯಲ್ಲಿ ರಜನಿ ಲಕ್ಕ ಅವರು ಒಟ್ಟು ಆರು ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ.
ಮಾಸ್ಟರ್ಸ್ ಗೇಮ್ಸ್ ಅಸೋಸಿಯೇಷನ್ ಆಫ್ ಕರ್ನಾಟಕ ಹಾಗೂ ಪ್ಯಾನ್ ಇಂಡಿಯಾ ಮಾಸ್ಟರ್ಸ್ ಗೇಮ್ಸ್ ಫೆಡರೇಶನ್ ಇದರ ಅಂಗಸಂಸ್ಥೆಯಾದ ಕರ್ನಾಟಕ ಓಪನ್ ನ್ಯಾಷನಲ್ ಮಾಸ್ಟರ್ಸ್ ಗೇಮ್ಸ್‍ನಿಂದ ನಡೆದ ಸ್ಪರ್ಧೆಗಳಲ್ಲಿ ದೇಶದ ವಿವಿಧ ಭಾಗಗಳಿಂದ ಸ್ಫರ್ಧಾಳುಗಳು ಭಾಗವಹಿಸಿದ್ದರು. ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ ರಜನಿ ಲಕ್ಕ ಅವರು ಆಯ್ಕೆಯಾಗಿದ್ದರು.
ಅವರು, ಈಜು ಸ್ಪರ್ಧೆಯಲ್ಲಿ 50 ಮೀ. ಬ್ರೆಸ್ಟ್ ಸ್ಟ್ರೋಕ್, 50 ಮೀ. ಬ್ಯಾಕ್ ಸ್ಟ್ರೋಕ್, 50 ಮೀ. ಫ್ರೀ ಸ್ಟೈಲ್, 100 ಮೀ. ಫ್ರೀ ಸ್ಟೈಲ್, 100 ಮೀ. ಬಟ್ಟರ್‍ಫ್ಲೈ ಹಾಗೂ ರಿಲೇ ವಿಭಾಗಗಳಲ್ಲಿ ಭಾಗವಹಿಸಿ, ಪ್ರಥಮ ಸ್ಥಾನ ಪಡೆದುಕೊಂಡು 6 ಚಿನ್ನದ ಪದಕ ಹಾಗೂ ಪ್ರಶಸ್ತಿ ಪ್ರಮಾಣ ಪತ್ರ ತಮ್ಮದಾಗಿಸಿಕೊಂಡಿದ್ದಾರೆ.
ರಜನಿ ಲಕ್ಕ ಅವರು, ಮೂಲತಃ ಬಳ್ಳಾರಿಯವರಾಗಿದ್ದು, ವಿಶೇಷಚೇತನರಿಗೆ ಈಜು ತರಬೇತುದಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಸಾಧನೆಗೆ ಎರ್ರಿಸ್ವಾಮಿ ಅವರು ಮಾರ್ಗದರ್ಶಕರಾಗಿದ್ದಾರೆ. ರಜನಿ ಲಕ್ಕ ಅವರು, ರಾಜ್ಯ ಮಟ್ಟದ, ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ 100 ಕ್ಕೂ ಹೆಚ್ಚು ಪದಕಗಳನ್ನು ಹೊಂದಿದ್ದಾರೆ.
ಯುವ ಸಬಲೀಕರಣ, ಕ್ರೀಡೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಬಿ.ನಾಗೇಂದ್ರ, ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ, ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜೀತ್ ಕುಮಾರ್ ಬಂಡಾರು, ಸಹಾಯಕ ಆಯುಕ್ತ ಹೇಮಂತ್ ಕುಮಾರ್ ಅವರು ಅಭಿನಂದಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!