mhps school program 1

ಎಂಹೆಚ್.ಪಿ.ಎಸ್. ಶಾಲೆಯ ಗುರುವಂದನಾ ಕಾರ್ಯಕ್ರಮ
ವಿದ್ಯಾರ್ಥಿಗಳ ಹಳೆಯ ದಿನಗಳನ್ನು ನೆನೆದು ಭಾವುಕ ಗೆಳೆಯರು

: ಶಾಲೆ ಕಟ್ಟಡ ಉಳಿಸಲು ಪಣ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, ೨೯- ನಗರದ ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ (ಎಂ.ಹೆಚ್.ಪಿ.ಎಸ್.) ಶಾಲೆಯ ೧೯೯೨-೯೩ನೇ ಸಾಲಿನ ಹಳೆಯ ವಿದ್ಯಾರ್ಥಿ ಬಳಗದಿಂದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಈಚೆಗೆ ಅತ್ಯಂತ ಸಡಗರ ಸಂಭ್ರಮದಿಂದ ಜರುಗಿತು.
೧೯೯೨-೯೩ನೇ ಸಾಲಿನಲ್ಲಿ ೭ನೇ ತರಗತಿ ತೇರ್ಗಡೆ ಹೊಂದಿದ ಸುಮಾರು ೮೦ ವಿದ್ಯಾರ್ಥಿಗಳು ೩೦ ವರ್ಷಗಳ ನಂತರ ಪರಸ್ಪರ ಭೇಟಿಯಾಗಿ ಭಾವುಕರಾದ ಕ್ಷಣಗಳು ಅಲ್ಲಿದ್ದವರ ಕಣ್ಣು ತೇವಗೊಳಿಸಿದವು. ಎಂ.ಹೆಚ್.ಪಿ.ಎಸ್. ಶಾಲೆ ಕ್ರೀಡೆ ವಿಶೇಷವಾಗಿ ಲೇಜಿಮ್ ಕಲಿಕೆಯಲ್ಲಿ ಹೆಸರಾಗಿತ್ತು, ಆ ನೆನಪನ್ನು ಮತ್ತೆ ಹಸಿರಾಗಿಸಲು ಎಲ್ಲಾ ಹಳೆಯ ವಿದ್ಯಾರ್ಥಿನಿಯರು ಲೇಜಿಮ್ ಮಾಡಿ ಪುಷ್ಪವೃಷ್ಟಿ ಮಾಡುವ ಮೂಲಕ ಶಿಕ್ಷಕರನ್ನು ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಆಗಮಿಸಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಶುಭಕೋರಿದರು, ಇಂತಹ ಕಾರ್ಯಗಳು ನಮ್ಮ ಮನಸ್ಸುಗಳನ್ನು ಬೆಸೆಯುತ್ತವೆ ಹಾಗೂ ಉತ್ತಮ ಶೈಕ್ಷಣಿಕ ವಾತಾವರಣ ನಿರ್ಮಿಸುತ್ತವೆ, ನಮ್ಮ ಬೆಳವಣಿಗೆಗೆ ಕಾರಣರಾದವರ ನೆನೆಯುವುದು ಶ್ರೇಷ್ಟವಾದ ಕಾರ್ಯ ಎಂದರು.
ಶಿಕ್ಷಕ ಪ್ರಾಣೇಶ ಅವರು ಮಾತನಾಡಿ, ತಮ್ಮ ನಿವೃತ್ತಿ ಜೀವನ ಸುಖಮಯವಾಗಿರಲು ಕಾರಣವೇ ತಮ್ಮ ವೃತ್ತಿ ಜೀವನದಲ್ಲಿ ಮಾಡಿದ ಉತ್ತಮ ಕೆಲಸ, ಮಕ್ಕಳಿಗೆ ಪರಿಪೂರ್ಣವಾಗಿ ಸೇವೆ ಮಾಡಿದ ತೃಪ್ತಿ ಇದೆ ಎಂದರು. ಎಲ್ಲರೂ ತಮ್ಮ ಪಾಲಿಗೆ ಬಂದ ಸೇವೆಯನ್ನು ಚನ್ನಾಗಿ ಮಾಡಬೇಕು ತಮ್ಮ ಶಿಷ್ಯರು ದೊಡ್ಡ ದೊಡ್ಡ ಸ್ಥಾನದಲ್ಲಿ ಇದ್ದರೂ ಂದು ತೋರಿಸಿದ ಪ್ರೀತಿ ಅವಿಸ್ಮರಣೀಯ ಎಂದರು.
ಶಾಲೆಯ ಶಿಕ್ಷಕರಾದ ಪ್ರಾಣೇಶ್ ಹೆಚ್. ಅಜ್ಜಪ್ಪ ಏಳುಬಾವಿ, ವಿರುಪಾಕ್ಷಪ್ಪ ಮೇಟಿ. ಲಕ್ಷ್ಮೀ, ಅಕ್ಕಮಹಾದೇವಿ ಕಲಹಾಳ, ಉಷಾ ಯಾದಗೀರಕರ್, ನಾಗಮ್ಮ ಯಲಬುರ್ಗಾ, ಗುಂಡಮ್ಮ ಪಾಟೀಲ್, ಪರಿಮಳ ಕುಲಕರ್ಣಿ, ಅಸ್ಮತ್‌ಬೇಗಂ ಹಾಗೂ ಮರಣ ಹೊಂದಿದ ಕೆಲವು ಶಿಕ್ಷಕರ ಪರವಾಗಿ ಅವರ ಕುಟುಂಬದವರನ್ನು ಕರೆಸಿ ಸನ್ಮಾನಿಸಿ ಅವರ ಗುಣಗಾನ ಮಾಡಿದರು. ವಿದ್ಯಾರ್ಥಿಗಳು ತಮ್ಮ ಪರಿಚಯ ಅನುಭವ ನೆನಪುಗಳನ್ನು ಹಂಚಿಕೊಂಡರು.
ಮಂಜುಳಾ ಡಿ. ಪ್ರರ್ಥಿಸಿದರು, ಸಜ್ಜಾದ ಹುಸೇನ್ ಸ್ವಾಗತಿಸಿದರು, ಜಗದೀಶ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು, ಮಂಜುಳಾ ಪಾಟೀಲ್ ನಿರೂಪಿಸಿದರು, ಸಿದ್ದು ಬುಳ್ಳಾ ವಂದಿಸಿದರು. ರೋಹಿಣಿ, ಗಿರೀಶ್ ಬಡಿಗೇರ್, ಮಂಜುನಾಥ ಕೆ., ವಂದನಾ ಪದಕಿ, ರೇಣುಕರಾಜ್ ತಮ್ಮ ನೆನಪುಗಳನ್ನು ಹಂಚಿಕೊAಡರು. ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ (ಎಂ.ಹೆಚ್.ಪಿ.ಎಸ್.) ಶಾಲೆಯ ಹಳೆಯ ಕಟ್ಟಡವನ್ನು ಕೆಡವಿ ಗುರುಭವನ ಕಟ್ಟುವ ಪ್ರಯತ್ನ ನಡೆದಿದ್ದು, ಅದೊಂದು ಐತಿಹಾಸಿಕ ಸ್ಮಾರಕವಾಗಿದ್ದು ಹಾಗೆಯೇ ಉಳಿಸಿ ಜೀರ್ಣೋದ್ಧಾರ ಮಾಡುವ ನಿರ್ಧಾರ ಮಾಡಿದ್ದು ಅವಶ್ಯ ಬಿದ್ದರೆ ಅದಕ್ಕೆ ಆರ್ಥಿಕ ನೆರವು ಕೊಡುವ ವಿಷಯಕ್ಕೆ ಹಳೆಯ ವಿದ್ಯಾರ್ಥಿಗಳು ಸಮ್ಮತಿ ಸೂಚಿಸಿದರು.

Leave a Reply

Your email address will not be published. Required fields are marked *

error: Content is protected !!