IMG-20240531-WA0008

ಎಫ್‍ಐಆರ್‍ನಲ್ಲಿ ಸಚಿವರ ಹೆಸರಿಲ್ಲ: ಸಿ.ಟಿ.ರವಿ ಆಕ್ಷೇಪ

ಕರುನಾಡ ಬೆಳಗು ಸುದ್ದಿ

ಬೆಂಗಳೂರು, 31- ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕ ಚಂದ್ರಶೇಖರ್ ಅವರು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು. ಇವತ್ತಿಗೆ 4 ದಿನ ಕಳೆದಿದೆ. ಆದರೂ ಎಫ್‍ಐಆರ್‍ನಲ್ಲಿ ಸಚಿವರ ಹೆಸರು ಉಲ್ಲೇಖಿಸಿಲ್ಲ; ಎಫ್‍ಐಆರ್‍ನಲ್ಲಿ ಕೊಲೆ ಮೊಕದ್ದಮೆ ಎಂದು ದಾಖಲಿಸಿಲ್ಲ ಎಂದು ಬಿಜೆಪಿ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ಆಕ್ಷೇಪಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಈ ಪ್ರಕರಣದಲ್ಲಿ ಭ್ರಷ್ಟಾಚಾರದ ಕಲಂಗಳನ್ನು ಸೇರಿಸಿಲ್ಲ. ಎಸ್‍ಸಿ, ಎಸ್‍ಟಿ ಕಾಯ್ದೆಯಡಿ ಪ್ರಕರಣ ತರಬೇಕಿದ್ದರೂ ಅದನ್ನೂ ಮಾಡಿಲ್ಲ. ಅದರ ಬದಲು ರಾಜಿ ಪಂಚಾಯಿತಿ ಮಾಡಿ ಒಳಗೇ ಮುಚ್ಚಿ ಹಾಕುವ ಹುನ್ನಾರ ನಡೆಸುತ್ತಿದ್ದಾರೆ ಎಂದು ಟೀಕಿಸಿದರು.
ಆ ಡೆತ್ ನೋಟಿನಲ್ಲಿ ಸಚಿವರ ಮೌಖಿಕ ಸೂಚನೆ ಎಂದು ಇದ್ದ ಮೇಲೆ ಇನ್ನೇನು ಸಾಕ್ಷಿ ಬೇಕು? ಅಂಗೈ ಹುಣ್ಣಿಗೆ ಕನ್ನಡಿ ಬೇಕೇ? ಇಷ್ಟು ದೊಡ್ಡ ಹಗರಣ ದೊಡ್ಡವರ ಬಲ ಇಲ್ಲದೆ ನಡೆಯಲು ಸಾಧ್ಯವೇ? ಹೇಗೆ ನಡೆಯಲು ಸಾಧ್ಯ? ಎಂದು ಪ್ರಶ್ನೆಗಳನ್ನು ಮುಂದಿಟ್ಟರು.
ಎಂ.ಡಿ. ಪದ್ಮನಾಭ್, ಲೆಕ್ಕಾಧಿಕಾರಿ ಪರಶುರಾಂ, ಬ್ಯಾಂಕ್ ಅಧಿಕಾರಿ ಸ್ಮಿತಾ ಹೆಸರನ್ನೂ ಉಲ್ಲೇಖಿಸಿದ್ದಾರೆ. ಇದರ ಜೊತೆ ಎನ್.ನಾಗರಾಜ್ ಹೆಸರೂ ಉಲ್ಲೇಖಿಸಲಾಗಿದೆ. ಹಾಗಿದ್ದರೆ ಎನ್.ನಾಗರಾಜ್ ಯಾರು ಎಂದು ಕೇಳಿದರು.
ಎನ್.ನಾಗರಾಜ್‍ಗೂ ಸಚಿವರಿಗೂ ಇರುವ ಸಂಬಂಧ ಏನು? ಎನ್.ನಾಗರಾಜ್‍ಗೂ ಮುಖ್ಯಮಂತ್ರಿಗಳಿಗೂ ಇರುವ ಸಂಬಂಧ ಏನು? ಎನ್.ನಾಗರಾಜ್‍ಗೂ ಉಪ ಮುಖ್ಯಮಂತ್ರಿಗಳಿಗೂ ಇರುವ ಸಂಬಂಧ ಏನು? ಎಂದು ಪ್ರಶ್ನೆ ಮಾಡಿದರು. ಇದೊಂದು ಸಿಂಡಿಕೇಟ್ ರೂಪದಲ್ಲಿ ಹಗರಣ ಮಾಡಿದ್ದಾರೆ ಎಂದು ಅವರು ಆರೋಪಿಸಿದರು.

ನ್ಯಾಯಮೂರ್ತಿಗಳ ನೇತೃತ್ವದಲ್ಲೇ ಸಮಗ್ರ ತನಿಖೆ ಆಗಲಿ..
ಐಟಿ ಕಂಪನಿಗೆ ಹಣ ವರ್ಗಾವಣೆ ಆದ ಮಾಹಿತಿ ಸಿಕ್ಕಿದೆ. ಅದು ಯಾರ ಕಂಪನಿ? ಸರಕಾರಿ ಹಣವನ್ನು ಐಟಿ ಕಂಪನಿಗೆ ಹೇಗೆ ಹೋಯಿತು? ನಿಗಮವೇ ಐಟಿ ಕಂಪನಿಯಲ್ಲಿ ಹಣ ಹೂಡಿದೆಯೇ? ಹಾಗೆ ಹೂಡಿಕೆಗೆ ಅವಕಾಶ ಇದೆಯೇ? ಇವೆಲ್ಲವೂ ಕೂಡ ಹೊರಗೆ ಬರಬೇಕಿದೆ. ಅದಕ್ಕಾಗಿ ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟಿನ ಹಾಲಿ ನ್ಯಾಯಮೂರ್ತಿಗಳ ನೇತೃತ್ವದಲ್ಲೇ ಇದರ ಸಮಗ್ರ ತನಿಖೆ ನಡೆಸಿ ಎಂದು ಸಿ.ಟಿ.ರವಿ ಅವರು ಆಗ್ರಹಿಸಿದರು.

ರಾಜ್ಯ ಮಾಧ್ಯಮ ಸಮಿತಿ ಸಂಚಾಲಕ ಕರುಣಾಕರ ಖಾಸಲೆ, ಸದಸ್ಯ ವಿಜೇಂದ್ರ ಡಿ.ಟಿ. ಈ ಸಂದರ್ಭದಲ್ಲಿ ಇದ್ದರು.

 

Leave a Reply

Your email address will not be published. Required fields are marked *

error: Content is protected !!