
ಎಸ್ ಎಫ್ ಎಸ್ ಐಸಿಎಸ್ಇ ಶಾಲೆಯಲ್ಲಿ 19 ನೇ ವಾರ್ಷಿಕೋತ್ಸವ
ಮಕ್ಕಳನ್ನು ಹೃದಯವಂತರನ್ನಾಗಿ ಮಾಡಿ – ರೆ. ಫಾ. ಆರೋಕ್ಯನಾಥನ್
ಕೊಪ್ಪಳ, ೨೩- ಪ್ರಸಕ್ತ ಸಮಾಜದಲ್ಲಿನ ಜನರ ನಡುವೆ ಸಾಮಾಜಿಕ ಕಳಕಳಿ ಕೊರತೆ ಕಾಡುತ್ತಿದೆ, ಶಾಲೆಯಲ್ಲಿ ಮಕ್ಕಳನ್ನು ದೊಡ್ಡ ಮಟ್ಟದ ಜ್ಞಾನವಂತರನ್ನಾಗಿ ಬೆಳೆಸುವುದಷ್ಟೆ ಕೆಲಸವಾಗದೆ, ಅವರನ್ನು ಹೃದಯವಂತರನ್ನಾಗಿ ಬೆಳೆಸುವುದು ಪ್ರಸ್ತುತ ಸನ್ನಿವೇಶದಲ್ಲಿ ಬಹಳ ಮುಖ್ಯವಾಗಿದೆ ಎಂದು ರೆ. ಫಾ. ಆರೋಕ್ಯನಾಥನ್ ಮಾತನಾಡುತ್ತ ಅಭಿಪ್ರಾಯಪಟ್ಟರು.
ಇತ್ತೀಚೆಗೆ ಕೊಪ್ಪಳದ ಎಸ್ ಎಫ್ ಎಸ್ ಐಸಿಎಸ್ಇ ಶಾಲೆಯಲ್ಲಿ 19 ನೇ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿದ ಮಾತನಾಡಿದರು.ತಂದೆ ತಾಯಿಗಳನ್ನು ಗುರು ಹಿರಿಯರನ್ನು ದೇವರಂತೆ ಕಾಣುವ ಶಿಕ್ಷಣ ನೀಡಬೇಕು, ಮಕ್ಕಳಲ್ಲಿ ದೈವ ಭಕ್ತಿ ಮೂಡಿಸು ವಂತಹ ಶಿಕ್ಷಣ ಬೇಕಾಗಿದೆ. ಮಕ್ಕಳು ಉತ್ತಮ ಹಾದಿಯಲ್ಲಿ ಬೆಳೆದು ಸಾಮಾಜಿಕ ಕಳಕಳಿನ್ನು ವ್ಯಕ್ತ ಪಡಿಸುವಂತಹ ಮೌಲ್ಯಗಳನ್ನು ಅಳವಡಿಸಿಕೊಳ್ಳುವಂತಾಗಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳಾದ ಯಶೋಧಾ ವಂಟಗೋಡಿಯವರು ಮಕ್ಕಳಿಗೆ ಯಾವುದೇ ವಿಷಯದ ಬಗ್ಗೆ ಒತ್ತಾಯಿಸಿ ಓದಿಸಬಾರದು, ನಮಗೆ ಸಿಗಲಾರದ್ದನ್ನು ನಾವು ನಮ್ಮ ಮಕ್ಕಳಿಗೆ ಕೊಡಿಸಲು ಬಯಸುತ್ತೇವೆ ಆದರೆ ಪ್ರೀತಿ ಗೌರವಾದರಗಳನ್ನು ತೋರಿಸುವುದನ್ನು ಮರೆತ್ತಿದ್ದೇವೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ. ಆರ್. ಸಂತೋಷಕುಮಾರರವರು ಶಾಲೆಯ ಕಳೆದ ಹತ್ತೊಂಬತ್ತು ವರ್ಷಗಳ ಸಾಧನೆಯನ್ನು ಶ್ಲಾಘಿಸಿದರು. ಈ ಕಾರ್ಯಕ್ರಮ ನೋಡಿದರೆ ಬೆಂಗಳೂರಿನಲ್ಲಿ ನಡೆದಂತಹ ದೊಡ್ಡ ದೊಡ್ಡ ಕಾರ್ಯಕ್ರಮಗಳನ್ನು ನೋಡಿದಂತೆ ಭಾಸವಾಗುತ್ತದೆ ಎಂದು ಹೇಳಿದರು. ಶಾಲೆಯ ಪ್ರಾಂಶುಪಾಲರಾದ ರೆ. ಫಾ ಜಬಮಲೈ ರವರು ಶಾಲೆಯ ಸಾಧನೆಗಳಿಗೆ ಸಹಕಾರ ಪ್ರೋತ್ಸಾಹ ನೀಡಿದ ಎಲ್ಲ ಪಾಲಕ ಪೋಷಕರಿಗೆ ಗೌರವ ಪೂರ್ವಕ ಧನ್ಯವಾದಗಳನ್ನು ಹಾಗೂ ಕ್ರಿಸ್ಮಸ್ ಹಬ್ಬದ ಶುಭಾಶಯಗಳನ್ನು ಕೋರಿದರು.
ಮ್ಯಾನೇಜರ್ ಮ್ಯಾಥ್ಯೂ ಮಾಮ್ಲಾ ಹಾಗೂ ಎಸ್ ಎಫ್ ಎಸ್ ಹೈಸ್ಕೂಲ್ ಪ್ರಾಂಶುಪಾಲರಾದ ರೆ.ಫಾ. ಜೋಜೋ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಶಾಲಾ ಮಕ್ಕಳು ಕ್ರಿಸ್ಮಸ್ ಹಬ್ಬದ ರೂಪಕವನ್ನು, ಕರಾಟೆ, ಸ್ಕೇಟಿಂಗ್, ಭರತನಾಟ್ಯ ಮತ್ತು ಮುಂತಾದ ಮನರಂಜನಾ ವಿವಿಧ ನೃತ್ಯಗಳನ್ನು ಪ್ರಸ್ತುತ ಪಡಿಸಿದರು. ಕಳೆದ ವರ್ಷದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಪಾರಿತೋಷಕಗಳನ್ನು ನೀಡಿ ಗೌರವಿಸಲಾಯಿತು. ಶಾಲಾ ಮಕ್ಕಳು ಕಾರ್ಯಕ್ರಮವನ್ನು ಅಚ್ಚು ಕಟ್ಟಾಗಿ ನಡೆಸಿಕೊಟ್ಟರು. ಶಾಲಾ ವಾರ್ಷಿಕೋತ್ಸವ ಹಾಗೂ ಕ್ರಿಸ್ಮಸ್ ಆಚರಣೆಯ ಸಮಾರಂಭ ಯಶಸ್ವಿಯಾಗಿ ಜರುಗಿತು.