
ಎಸ್ ಡಿ ಪಿ ಐ ರಾಷ್ಟ್ರ ಅಧ್ಯಕ್ಷ ಫೈಜ್ ರವರನ್ನು ಕೂಡಲೆ ಬಿಡುಗಡೆ ಮಾಡಿ
: ಜಿಲ್ಲಾಧ್ಯಕ್ಷ ಸಲೀಂ ಒತ್ತಾಯ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ ಮಾರ್ಚ್ 5 : ಕ್ಷುಲ್ಲಕ ಕಾರಣಕ್ಕಾಗಿ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ರಾಷ್ಟ್ರ ಅಧ್ಯಕ್ಷರಾದ ಫೈಜ್ ರವರನ್ನು ವಿಮಾನ ನಿಲ್ದಾಣದಲ್ಲಿ ಬಂಧಿಸಿರುವದು ಖಂಡನೀಯ ಕೂಡಲೆ ಅವರನ್ನು ಬಿಡುಗಡೆ ಮಾಡಬೇಕೆಂದು ಎಸ್ ಡಿ ಪಿ ಐ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ಸಲೀಂ ಒತ್ತಾಯಿಸಿದರು.
ಅವರಿಂದು ನಗರದ ರಾಜಕುಮಾರ್ ಪಾರ್ಕ್ ನ ಜಿಲ್ಲಾಧಿಕಾರಿ ಕಚೇರಿಗಳ ಎದುರುಗಡೆ ಇರುವ
ಮಹಾತ್ಮ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆಯನ್ನು ನಡೆಸಿ ಮಾತನಾಡಿ, ಕೇಂದ್ರ ಸರ್ಕಾರ ತಮಗಾಗದವರನ್ನು ಮತ್ತು ವಿರೋಧ ಪಕ್ಷದ ನಾಯಕರುಗಳನ್ನು ಸಣ್ಣಪುಟ್ಟ ಕಾರಣಕ್ಕೆ ಈಡಿ ಮತ್ತು ಸಿಬಿಐ ಅಧಿಕಾರಿಗಳನ್ನು ಬಳಸಿಕೊಂಡು ಮುಖದ್ದಮೆಯನ್ನು ದಾಖಲಿಸುವುದು ಮತ್ತು ಬಂಧಿಸುವುದು ಸೇರಿದಂತೆ ಕಾನೂನನ್ನು ದುರ್ಬಳಕೆ ಮಾಡಿಕೊಂಡು ಅವರನ್ನು ಹತ್ತಿಕ್ಕುವ ಹುನ್ನಾರ ನಡೆಸುತ್ತಿದೆ. ಅದೇ ಪ್ರಕಾರವಾಗಿ ನಮ್ಮ ಪಕ್ಷದ ರಾಷ್ಟ್ರ ಅಧ್ಯಕ್ಷರಾದ ಎಂ. ಕೆ ಪೈಜ್ ರವರನ್ನು ವಿಮಾನ ನಿಲ್ದಾಣದಲ್ಲಿ ಕೇಂದ್ರದ ತನಿಖಾಧಿಕಾರಿಗಳು ಬಂಧಿಸಿದ್ದಾರೆ. ಕೇಂದ್ರ ಅಧಿಕಾರಿಗಳ ಈ ನಡೆಯನ್ನು ಎಸ್ ಡಿ ಪಿ ಐ ಜಿಲ್ಲಾ ಘಟಕ ಖಂಡಿಸುತ್ತಾ ಕೂಡಲೇ ಅವರನ್ನು ಬಿಡುಗಡೆ ಮಾಡಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತಿದ್ದೇವೆ ಎಂದು ಜಿಲ್ಲಾಧ್ಯಕ್ಷ ಸಲೀಂ ತಿಳಿಸಿದರು.
ಒಂದು ವೇಳೆ ಕೇಂದ್ರ ಸರ್ಕಾರ ಇದೆ ನಡೆಯನ್ನು ಮುಂದುವರಿಸಿದಲ್ಲಿ ರಾಷ್ಟ್ರಾದ್ಯಂತ ಉಗ್ರ ಹೋರಾಟ ನಡೆಸಲಾಗುವುದೆಂದು ಇದೇ ಸಂದರ್ಭದಲ್ಲಿ ಎಚ್ಚರಿಸಿದರು
ಈ ಸಂದರ್ಭದಲ್ಲಿ ಎಸ್ ಡಿ ಪಿ ಐ ಜಿಲ್ಲಾ ಉಪಾಧ್ಯಕ್ಷರಾದ ಹೈದರ್ ಅಲಿ , ಪ್ರಧಾನ ಕಾರ್ಯದರ್ಶಿ ನಬಿ ರಸೂಲ್, ಕಾರ್ಯದರ್ಶಿ ಝಕ್ರಿಯ ಸೇರಿದಂತೆ ಹಲವು ಜನ ಎಸ್ ಡಿ ಪಿ ಐ ಕಾರ್ಯಕರ್ತರು ಇದ್ದರು.