
ಐಸಿಎಆರ್ ನಿಂದ ಮೂರು ದಿನಗಳ ಕೃಷಿ-ಡ್ರೋನ್ ತಂತ್ರಜ್ಞಾನ ಪ್ರಾತ್ಯಕ್ಷಿಕೆ ಕಾರ್ಯಕ್ರಮ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ,29- ಬಳ್ಳಾರಿಯ ಐಸಿಎಆರ್-ಭಾರತೀಯ ಮಣ್ಣು ಮತ್ತು ನೀರು ಸಂರಕ್ಷಣೆ ಸಂಶೋಧನಾ ಕೇಂದ್ರ ವತಿಯಿಂದ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಸೋಮಲಾಪುರ ಗ್ರಾಮ, ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ರಾಮಸಾಗರ ಗ್ರಾಮ ಮತ್ತು ಬಳ್ಳಾರಿ ತಾಲ್ಲೂಕಿನ ಬೆಳಗಲ್ ತಾಂಡಾ ಗ್ರಾಮದಲ್ಲಿ (ಫೆ.26 ರಿಂದ 28 ರವರೆಗೆ) ಮೂರು ದಿನಗಳ ಕೃಷಿ-ಡ್ರೋನ್ ತಂತ್ರಜ್ಞಾನ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಮೊದಲಿಗೆ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಸೋಮಲಾಪುರ ಗ್ರಾಮದ 20 ಎಕರೆ ಪ್ರದೇಶದಲ್ಲಿ ಬೆಳೆದಿರುವ ತೆಂಗು ಮತ್ತು ಮಾವು ಬೆಳೆಗಳಿಗೆ ಡ್ರೋನ್ ಪ್ರಾತ್ಯಕ್ಷಿಕ ಸಿಂಪಡಣೆಯನ್ನು ಮಾಡಲಾಯಿತು.
ಮಹೋಗಾನಿ, ರೆಡ್-ಸ್ಯಾಂಡರ್ಸ್ ಮತ್ತು ಕ್ಯಾಸುರಿನಾ ಮರಗಳನ್ನು ಸಹ ಆ ಪ್ರದೇಶದಲ್ಲಿ ಬೆಳೆಯಲಾಗಿದೆ. ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಕರಡಿಹಳ್ಳಿಯಲ್ಲಿ 5 ಎಕರೆ ಶೇಂಗಾ ಬೆಳೆಗೆ ಸಿಂಪಡಣೆಯನ್ನು ಮಾಡಲಾಯಿತು.
ಬಳಿಕ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ರಾಮಸಾಗರ ಗ್ರಾಮದಲ್ಲಿ 22 ಎಕರೆ ಶೇಂಗಾ ಬೆಳೆಗೆ ಹಾಗೂ 3 ಎಕರೆ ಮೆಕ್ಕೆಜೋಳದ ಬೆಳೆಗೆ ಪ್ರಾತ್ಯಕ್ಷಿಕ ಸಿಂಪಡಣೆಯನ್ನು ಮಾಡಲಾಯಿತು. ನಂತರದಲ್ಲಿ ಬಳ್ಳಾರಿ ತಾಲ್ಲೂಕಿನ ಬೆಳಗಲ್ ತಾಂಡಾ ಗ್ರಾಮದಲ್ಲಿ 6 ಎಕರೆ ಶೇಂಗಾ ಬೆಳೆಗೆ ಮತ್ತು 4 ಎಕರೆ ಕರಿಬೇವಿನ ಬೆಳೆಗೆ ಪ್ರಾತ್ಯಕ್ಷಿಕ ಸಿಂಪಡಣೆಯನ್ನು ಮಾಡಲಾಯಿತು.
ಕಾರ್ಯಕ್ರಮದಲ್ಲಿ ಬಳ್ಳಾರಿಯ ಐಸಿಎಆರ್-ಭಾರತೀಯ ಮಣ್ಣು ಮತ್ತು ನೀರು ಸಂರಕ್ಷಣೆ, ಸಂಶೋಧನಾ ಕೇಂದ್ರದ ಮುಖ್ಯಸ್ಥರಾದ ಡಾ.ಬಿ.ಕೃಷ್ಣ ರಾವ್ ಮಾತನಾಡಿ, ಕೃಷಿ-ಡ್ರೋನ್ ಸಿಂಪಡಣೆಯು ಬೆಳೆಗಳಿಗೆ ರಾಸಾಯನಿಕಗಳನ್ನು ಸಿಂಪಡಿಸಲು ಬೇಕಾಗುವ ಕಾರ್ಮಿಕರನ್ನು ಕಡಿಮೆ ಮಾಡುತ್ತದೆ. ಕೇಂದ್ರೀಕೃತ ರಾಸಾಯನಿಕವನ್ನು ನಿಖರವಾಗಿ ಸಿಂಪಡಿಸಲು ಸಹಾಯ ಮಾಡುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರೈತರು ಹೆಚ್ಚಿನ ಪ್ರದೇಶದಲ್ಲಿ ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕೆಂದು ಒತ್ತಾಯಿಸಿದರು.
ಈ ಹಳ್ಳಿಗಳಲ್ಲಿ, ಡ್ರೋನ್ ಬಾಡಿಗೆಗೆ ಪಡೆದು, ಶೇಂಗಾ ಬೆಳೆಗೆ ಸೂಕ್ಷ್ಮ ಪೆÇೀಷಕಾಂಶಗಳನ್ನು ಹೆಚ್ಚಿನ ಪ್ರದೇಶಗಳಲ್ಲಿ ಸಿಂಪಡಿಸಲು ಪ್ರೇರೇಪಿತರಾಗಿದ್ದಾರೆ. ಭಾಗವಹಿಸಿದ ಅನೇಕ ರೈತರು ಡ್ರೋನ್‍ನ ಬೆಲೆಯನ್ನು ಕೇಳಿದರು ಮತ್ತು ಅವರಲ್ಲಿ ಕೆಲವರು ಮುಂಬರುವ ವರ್ಷಗಳಲ್ಲಿ ಡ್ರೋನ್ ಖರೀದಿಸಲು ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಸೋಮಲಾಪುರ, ಕರಡಿಹಳ್ಳಿ, ರಾಮಸಾಗರ, ರಾಂಪುರ, ಬೆಳಗಲ್ ತಾಂಡಾ, ಚೆಳ್ಳಗುರ್ಕಿ, ಚಾಗನೂರು ಗ್ರಾಮಗಳ ಸುಮಾರು ಎಪ್ಪತ್ನಾಲ್ಕು ರೈತರು ಭಾಗವಹಿಸಿದ್ದರು.