
ಕನ್ನಡ ಭಾಷೆಗೆ ಬಿಕ್ಕಟ್ಟಿನ ಸ್ಥಿತಿ
ಸಾಹಿತಿ ಸ್ವಾಮಿರಾವ್ ಕುಲಕರ್ಣಿ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, ೧೪- ನಮಗೆ ಎಲ್ಲಿಯ ತನಕ ಕನ್ನಡ ಅನ್ನದ ಭಾಷೆಯಾಗುವುದಿಲ್ಲವೊ ಅಲ್ಲಿನ ತನಕ ಕನ್ನಡ ಬೆಳೆಯುವುದು ಕಷ್ಟ ,ಕನ್ನಡ ಭಾಷೆ ಬಿಕ್ಕಟ್ಟಿನ ಸ್ಥಿತಿಯಲ್ಲಿದೆ ಎಂದು ಕಲಬುರಗಿಯ ಹಿರಿಯ ಸಾಹಿತಿ ಸ್ವಾಮಿರಾವ್ ಕುಲಕರ್ಣಿ ಎಚ್ಚರಿಸಿದರು.
ಅವರು ಗುರುವಾರ ಕೊಪ್ಪಳದ ಗವಿಸಿದ್ದೇಶ್ವರ ಮಹಾವಿದ್ಯಾಲಯ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಮಯುಕ್ತಾಶ್ರಯದಲ್ಲಿ ಕಾಲೇಜಿನಲ್ಲಿ ನಡೆದ ಕನ್ನಡ ಭಾಷೆ ಈ ಹೊತ್ತಿನ ಬಿಕ್ಕಟ್ಟುಗಳು ಕುರಿತ ರಾಜ್ಯಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡುತ್ತಿದ್ದರು.
ನಮ್ಮಲ್ಲಿ ತೆಲುಗು ಹಾಗೂ ತಮಿಳು ಭಾಷೆಯನ್ನೇ ಪ್ರಧಾನವಾಗಿ ಮಾತನಾಡುವ ಆಂಧ್ರ, ತಮಿಳುನಾಡು ಜನರಷ್ಟು ಪರಮ ಭಾಷಾಭಿಮಾನಿಗಳಾಗಿ ನಾವು ಉಳಿದಿಲ್ಲಾ ಕನ್ನಡಿಗರಿಗೆ ಸ್ವಾಭಿಮಾನದ ಕೊರತೆ ಈ ಬಿಕ್ಕಟ್ಟು ಸೃಷ್ಟಿಸಿದೆ. ನಮ್ಮ ಭಾಷೆ ಕನ್ನಡಕ್ಕೆ ಸಾವಿರಾರು ವರ್ಷಗಳ ಇತಿಹಾಸ ವಿದೆ , ಸಾಕಷ್ಟು ಮೇರು ಕವಿಗಳ ಪರಂಪರೆ ಕೊಡುಗೆಯಾಗಿ ನೀಡಿರುವ ಹಾಗೂ ಜಗತ್ತಿನೆಲ್ಲೆಡೆ ಪಸರಿಸಿದ ಕನ್ನಡ ಭಾಷೆ ಈಗ ಅನ್ನದ ಭಾಷೆಯಾಗಿ ಉಳಿದುಕೊಂಡಿಲ್ಲ. ಇದು ಕನ್ನಡಕ್ಕೆ ಎದುರಾಗಿರುವ ದೊಡ್ಡ ಸವಾಲು ಎಂದ ಹೇಳಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯ ಚನ್ನಬಸವ ಮಾತನಾಡಿ ‘ಕನ್ನಡವನ್ನು ಓದುವ ಹಾಗೂ ಬರೆಯುವ ಮಕ್ಕಳು ಮಾಡಬೇಕು ಆಗ ಭಾಷೆ ಬೆಳೆಯುತ್ತದೆ. ಯುವಕರು ತಂತ್ರಜ್ಞಾನದ ಮೊರೆ ಹೋಗುತ್ತಿದ್ದಾರೆ ಅದರಲ್ಲೂ ಕನ್ನಡ ಬೆಳಸಿ ಉಳಿಸುವ ಕೆಲಸ ಯುವಕರು ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಹಂಪಿಯ ಕನ್ನಡ ವಿಶ್ವವಿದ್ಯಾಲಯ ಹಸ್ತಪ್ರತಿ ವಿಭಾಗದ ಮುಖ್ಯಸ್ಥ ಪ್ರೊ. ಕೆ. ರವೀಂದ್ರನಾಥ ‘ಯುವ ಮನಸ್ಸುಗಳು ಮತ್ತು ಕನ್ನಡ ಸಾಹಿತ್ಯ, ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಮಲ್ಲಪ್ಪ ಎನ್ ಬಂಡಿ ‘ಅಂತರ್ಜಾಲ ಯುಗದಲ್ಲಿ ಕನ್ನಡ ಭಾಷೆ ಈ ಹೊತ್ತಿನ ತಲ್ಲಣಗಳು’, ಅಂಬ್ಲಿ ದೊಡ್ಡಬರಮಪ್ಪ ಹಾಗೂ ಪ್ರಥಮ ದರ್ಜೆ ಮಹಾವಿದ್ಯಾಲಯದ ಪ್ರಾಧ್ಯಾಪಕ ರಾಜಶೇಖರಯ್ಯ ‘ಚಲನಚಿತ್ರಗಳು ಮತ್ತು ಕನ್ನಡ ಭಾಷೆಯ ಬಿಕ್ಕಟ್ಟುಗಳು ವಿಷಯದ ಕುರಿತು ಈ ಸಂದರ್ಭದಲ್ಲಿ ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥ ಬಸವರಾಜ ಪೂಜಾರ, ಸಹಾಯಕ ಪ್ರಾಧ್ಯಾಪಕ ನಾಗರಾಜ ದಂಡೋತಿ, ಕಾರ್ಯಕ್ರಮ ಆಯೋಜನಾ ಸಮಿತಿ ಸಹ ಸಂಚಾಲಕ ಶರಣಬಸಪ್ಪ ಬಿಳಿಎಲಿ, ಐಕ್ಯುಎಸಿ ಸಂಯೋಜಕ ಅರುಣಕುಮಾರ ಎ.ಜಿ., ಸಾಹಿತಿ ಕೆ.ವಿ. ಬ್ಯಾಳಿ, ಕನ್ನಡ ಉಪನ್ಯಾಸಕ ಸಿದ್ದಲಿಂಗಪ್ಪ ಕೊಟ್ನೇಕಲ್, ಸಮಾರೋಪದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ ಮರಬನಹಳ್ಳಿ ಸೇರಿದಂತೆ ಅನೇಕರು ಇದ್ದರು.