17caed01-25be-4dff-a074-7d1e03b98869

ಕನ್ನಡ ಭಾಷೆಯ ಸರ್ವತೋಮುಖ ಏಳಿಗೆಯನ್ನು ಸಾಧಿಸುವುದು ವಿಶ್ವವಿದ್ಯಾಲಯದ ಮುಖ್ಯ ಉದ್ದೇಶ :

ಉನ್ನತ ಶಿಕ್ಷಣ ಸಚಿವ ಸುಧಾಕರ್

ಕರುನಾಡ ಬೆಳಗು ಸುದ್ದಿ

ಹೊಸಪೇಟೆ (ವಿಜಯನಗರ ) –  ಕನ್ನಡ ವಿಶ್ವವಿದ್ಯಾಲಯದ 32ನೇ ನುಡಿಹಬ್ಬದಲ್ಲಿ ಪ್ರತಿಷ್ಠಿತ ನಾಡೋಜ ಪದವಿ, ಡಿ.ಲಿಟ್, ಪಿಎಚ್.ಡಿ., ಎಂ.ಫಿಲ್. ಪದವಿಗಳನ್ನು ನೀಡಿ ಸನ್ಮಾನಿಸಿ ಮಾತನಾಡಿದ ಕನ್ನಡ ಭಾಷೆಯ ಸರ್ವತೋಮುಖ ಏಳಿಗೆಯನ್ನು ಸಾಧಿಸುವುದು ವಿಶ್ವವಿದ್ಯಾಲಯದ ಮುಖ್ಯ ಉದ್ದೇಶವಾಗಿದೆ ಎಂದರು.

32ನೇ ನುಡಿಹಬ್ಬದಲ್ಲಿ ವಿದ್ಯಾರಣ್ಯದ ವಿಶಾಲ ಕೆರೆ ಅಂಗಳದ ತಟದಲ್ಲಿರುವ ಬಯಲು ರಂಗಮಂದಿರ ನವರಂಗದಲ್ಲಿ ಜನವರಿ 10 ರಂದು ಅಕ್ಷರಶಃ ಅಕ್ಷರ ಹಬ್ಬದ ಸಂಭ್ರಮ ಕಂಡುಬಂದಿತು. ಉನ್ನತ ಶಿಕ್ಷಣ ಸಚಿವ, ಸಮಕುಲಾಧಿಪತಿಗಳಾದ ಡಾ. ಎಂ ಸಿ ಸುಧಾಕರ್ ಅವರು ನುಡಿಹಬ್ಬ ಕುರಿತು ಕನ್ನಡ ನಾಡು, ನುಡಿ, ನೆಲ, ಜಲ, ಇತಿಹಾಸ ಹಾಗೂ ಪರಂಪರೆಗಳ ಕುರಿತ ಹೊಸ ರೀತಿಯ ಸಂಶೋಧನೆ ಹಾಗೂ ಅಧ್ಯಯನ ಮಾಡಲು ಹುಟ್ಟಿದ್ದೇ ನಮ್ಮೆಲ್ಲರ
ಹೆಮ್ಮೆಯ ಕನ್ನಡ ವಿಶ್ವವಿದ್ಯಾಲಯ. ಕನ್ನಡಿಗರ ಈ ಕನಸನ್ನು ಕನಸುಗಾರ ಕವಿ, ನಾಟಕಕಾರ, ಜ್ಞಾನಪೀಠ ಪುರಸ್ಕೃತ ಡಾ.ಚಂದ್ರಶೇಖರ ಕಂಬಾರವರು, ನಾಡಿನ ಪ್ರಜ್ಞಾವಂತರ, ಸಂಸ್ಕೃತಿ ಚಿಂತಕರ, ಕಲಾವಂತರ, ಇತಿಹಾಸಕಾರರ, ಸಂಘಟಿತ ಚಿಂತನೆಗಳ ಮೂಲಕ ಸಾಕಾರಗೊಳಿಸಿದರು. ಮುಂದೆ ಬಂದ ಕುಲಪತಿ ಗಳೆಲ್ಲರೂ ಕನ್ನಡದ ಈ ಸಸಿಗೆ ನೀರೆರೆದು ಹೆಮ್ಮರವಾಗುವಂತೆ ಬೆಳೆಸಿದ್ದಾರೆ. ಇಂದಿನ ಕುಲಪತಿಗಳಾದ ಡಾ.ಡಿ.ವಿ. ಪರಮಶಿವಮೂರ್ತಿಯವರು ಸಮೃದ್ಧ ವಾಗಿ ಬೆಳೆಯಲು ಬೇಕಾದ ಎಲ್ಲ ವ್ಯವಸ್ಥೆಗಳನ್ನು ಕಲ್ಪಿಸುತ್ತಿರುವುದನ್ನು ನಾನು ತಿಳಿದಿದ್ದೇನೆ.

ಕನ್ನಡ ವಿಶ್ವವಿದ್ಯಾಲಯದ ಧ್ಯೇಯವಾಕ್ಯವೇ, “ಕನ್ನಡ ವಿಶ್ವವಿದ್ಯಾಲಯ ವಿದ್ಯೆಯನ್ನು ಕಲಿಯಲು ಅನುವು ಮಾಡಿಕೊಡುವ ಒಂದು ಸಂಸ್ಥೆಯೇ ಹೊರತು, ಅದು ವಿದ್ಯೆಯನ್ನು ಕಲಿಸುವ ಸಂಸ್ಥೆಯಲ್ಲ. ಒಂದು ದೃಷ್ಟಿಯಿಂದ ಇದು ವಿದ್ಯೆಯನ್ನು ನಿರ್ಮಿಸುವ ಸಂಸ್ಥೆಯಾಗಿದೆ.” ಈ ಅರ್ಥದಲ್ಲಿ ಡಾ.ಚಂದ್ರಶೇಖರ ಕಂಬಾರರು “ಕನ್ನಡ ವಿಶ್ವವಿದ್ಯಾಲಯ ಕನ್ನಡಿಗರೆಲ್ಲರ ಕನಸು ಮತ್ತು ಜವಾಬ್ದಾರಿಗಳಿಂದ ಬೆಳೆಯಬೇಕು. ಕನ್ನಡ ವಿಶ್ವವಿದ್ಯಾಲಯ ಕೆಲವರು ಬರೆದು ಮುಗಿಸಬೇಕಾದ ಪುಸ್ತಕವಲ್ಲ, ಕನ್ನಡದ ಸಮಸ್ತದೈವ ಬರೆಯಬೇಕಾದ ಪುಸ್ತಕವಿದು” ಎಂದು ಹೇಳಿದ್ದು, ಶೈಕ್ಷಣಿಕ ವಲಯಗಳಾಚೆಯಿರುವ, ಉಪೇಕ್ಷಿತಗೊಂಡಿರುವ ಸಂಗತಿಗಳನ್ನು ಒಳಗೊಳ್ಳಲೇಬೇಕಾದ ಸಮಷ್ಠಿ ಪ್ರಜ್ಞೆಯನ್ನು ಈ ಧೈಯವಾಕ್ಯ ಧ್ವನಿಸುತ್ತದೆ. ಎಲ್ಲಾ ಗುರಿ ಸಾಧನೆಗಾಗಿ ಸಂಶೋಧನಾಂಗ, ಪ್ರಸಾರಾಂಗ, ಆಡಳಿತಾಂಗ ಎಂಬ ಸಂರಚನೆಯನ್ನು ಮಾಡಿಕೊಂಡು ಹಲವು ಎತ್ತರಗಳನ್ನು ವಿಶ್ವವಿದ್ಯಾಲಯ ಏರಿದೆ.

ಇತಿಹಾಸ, ಸಮಾಜಶಾಸ್ತ್ರ, ಮಾನವಶಾಸ್ತ್ರ, ಜಾನಪದ, ಬುಡಕಟ್ಟು, ಲಲಿತಕಲೆಗಳು, ವಿಜ್ಞಾನಗಳ ಅಧ್ಯಯನಕ್ಕೂ ಭಾಷೆಗೂ ಕರುಳಬಳ್ಳಿ ಸಂಬಂಧವಿದೆ. ಕನ್ನಡ ಭಾಷೆ, ಕಲೆ, ಸಂಸ್ಕೃತಿ, ಇತಿಹಾಸದ ಅಧ್ಯಯನವೆಂದರೆ, ಕನ್ನಡ ಜನತೆಯ ನೈತಿಕಮೌಲ್ಯಗಳ, ಆಧ್ಯಾತ್ಮಿಕ ಆಕಾಂಕ್ಷೆಗಳ, ಧಾರ್ಮಿಕ ಅಪೇಕ್ಷೆಗಳ, ಇನ್ನು ದಾಖಲಾಗದೆ ಉಳಿದ ಕನ್ನಡ ಮನುಷ್ಯರ ಚರಿತ್ರೆ ಇವೆಲ್ಲವುಗಳ ಪ್ರತಿಫಲವೇ ಆಗಿದೆ.

ಶಾಸನ ಸಂಪುಟಗಳು, ದೇವಾಲಯ ಕೋಶಗಳು, ಬುಡಕಟ್ಟು ಹಾಗೂ ಜನಪದ ಮಹಾಕಾವ್ಯಗಳು, ಚರಿತ್ರೆ ಸಂಪುಟಗಳು, ಹಸ್ತಪ್ರತಿಸೂಚಿಗಳು, ವಿವಿಧ ವಿಷಯ ವಿಶ್ವಕೋಶಗಳು, ಸಾಹಿತ್ಯ, ಸಮಾಜವಿಜ್ಞಾನ, ತಂತ್ರಜ್ಞಾನ, ವಿಜ್ಞಾನ, ಲಲಿತಕಲೆಗಳ ಕ್ಷೇತ್ರಕ್ಕೆ ಸಂಬಂಧಿಸಿದ ಇಂತಹ ಪ್ರಕಟಣೆಗಳಲ್ಲಿ ಕನ್ನಡ ವಿಶ್ವವಿದ್ಯಾಲಯದ ಉನ್ನತ ಮಟ್ಟದ ಚಿಂತನೆಗಳನ್ನು ಕಾಣಬಹುದಾಗಿದೆ. ಇಂತಹ ಅಮೋಘ ಸಾಧನೆ ಮಾಡಿದ ಹೆಮ್ಮೆಯ ವಿಶ್ವವಿದ್ಯಾಲಯವು ಅನುದಾನದ ಕೊರತೆಯಿಂದ ತನ್ನ ಸಂಶೋಧನೆ ಅಭಿವೃದ್ಧಿ ಹಾಗೂ ನಿರ್ವಹಣೆ ಚಟುವಟಿಕೆಗಳಲ್ಲಿ ಸಂಕಷ್ಟಗಳನ್ನು ಎದುರಿಸುತ್ತಿರುವುದನ್ನು ಕೇಳಿದ್ದೇನೆ. ಸ್ವತಃ ಕುಲಪತಿಗಳಾದ ಡಾ.ಡಿ.ವಿ. ಪರಮಶಿವಮೂರ್ತಿಯವರು ಆರ್ಥಿಕ ಸಂಕಷ್ಟಗಳಿಂದಾಗಿ ಉದ್ಭವಿಸಿರುವ ಸಮಸ್ಯೆಗಳ ಕುರಿತು ನಮಗೆ ಹೇಳಿದ್ದಾರೆ.

ಮುಖ್ಯಮಂತ್ರಿಳಿಗೆ ವಿವಿಯ ಆರ್ಥಿಕ ಸಂಕಷ್ಟಗಳ ಕುರಿತು ಮಾತನಾಡಿ, ಆದಷ್ಟು ಬೇಗ ಪರಿಹಾರಗಳನ್ನು ಹುಡುಕಿ, ಕನ್ನಡ ವಿಶ್ವವಿದ್ಯಾಲಯದ ಶೈಕ್ಷಣಿಕ ಚಟುವಟಿಕೆಗಳು, ಅಭಿವೃದ್ಧಿ ಕಾರ್ಯಗಳಿಗೆ ಬೇಕಾದ ವಾತಾವರಣದ ಸೃಷ್ಟಿಗೆ ಪ್ರಾಮಾಣಿಕ ವಾಗಿ ಪ್ರಯತ್ನಿಸುತ್ತೇನೆ. ಸ್ವತಃ ಮುಖ್ಯಮಂತ್ರಿಗಳು ಇತ್ತೀಚೆಗೆ ಕರ್ನಾಟಕದಲ್ಲಿ ಶೇ.60ರಷ್ಟು ವಾಣಿಜ್ಯ ಫಲಕಗಳು ಕನ್ನಡದಲ್ಲಿರಬೇಕು ಎನ್ನುವ ಕಳಕಳಿ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಕನ್ನಡ ವಿಶ್ವವಿದ್ಯಾಲಯದ ಆರ್ಥಿಕ ಸಂಕಷ್ಟಗಳನ್ನು ಮಾನ್ಯ ಮುಖ್ಯಮಂತ್ರಿಗಳು ಪರಿಹರಿಸಬಲ್ಲರು ಎನ್ನುವ ನಂಬಿಕೆ ನನ್ನದು. ಇಂದು ಪದವಿ ಪಡೆದ ಎಲ್ಲ ಪದವೀಧರರಿಂದ ಕರ್ನಾಟಕದ ಹಾಗೂ ಕನ್ನಡದ ಕೀರ್ತಿ ಮತ್ತಷ್ಟು ಉಜ್ವಲವಾಗಲಿ ಎಂದು ಆಶಿಸಿದರು.

ಈ ಸಂಧರ್ಭದಲ್ಲಿ ಕುಲಪತಿಗಳಾದ ಡಾ.ಡಿ.ವಿ. ಪರಮಶಿವಮೂರ್ತಿ, ಕೇಂದ್ರೀಯ ವಿಶ್ವವಿದ್ಯಾಲಯ ಆಂಧ್ರ ಪ್ರದೇಶ ಇಲ್ಲಿ ಕುಲಪತಿಗಳಾಗಿರುವ ಪ್ರೊ.ಎಸ್.ಎ.ಕೋರಿ, ಕನ್ನಡ ವಿಶ್ವವಿದ್ಯಾಲಯದ ನಾಡೋಜ ಪದವಿಗೆ ಭಾಜನರಾದ ಪೂಜ್ಯ ಶ್ರೀ ಶ್ರೀ ಮ.ಘ.ಚ. ಬಸವಲಿಂಗ ಪಟ್ಟದ್ದೇವರು, ಡಾ.ಟಿ.ವಿ.ಕಟ್ಟಿಮನಿ, ಡಾ.ಎಸ್.ಸಿ.ಶರ್ಮ, ವಿವಿಧ ಪದವಿಗಳನ್ನು ಪಡೆದ ಪದವಿಧರರು, ಮತ್ತು ಕನ್ನಡ ವಿಶ್ವವಿದ್ಯಾಲಯದ ಅಧ್ಯಾಪಕ ವೃಂದದವರು ಹಾಗೂ ಆಡಳಿತ ಸಿಬ್ಬಂದಿಗಳು ಇತರರಿದ್ದರು.

ಲಲಿತಕಲೆಗಳ ನಿಕಾಯ, ಡಿ ಲಿಟ್ ಪದವಿ (1). ಪಿ.ಹೆಚ್.ಡಿಯಲ್ಲಿ ,ಭಾಷಾ ನಿಕಾಯ (103),
ಸಮಾಜ ವಿಜ್ಞಾನಗಳ ನಿಕಾಯ, (169)
ಲಲಿತಕಲೆಗಳ ನಿಕಾಯ, (4) ಈ ಭಾರಿ ಒಟ್ಟು 277 ಪದವಿಗಳನ್ನು ನೀಡಲಾಯಿತು.

Leave a Reply

Your email address will not be published. Required fields are marked *

error: Content is protected !!