772c189c-5d95-4283-802a-d9280a42ec36

ಕಹಿಯ ಮರಿಯೋಣ ಸಿಹಿಯ ಸವಿಯೋಣ

-ಕುಬೇರ ಮಜ್ಜಿಗಿ

ಕರುನಾಡ ಬೆಳಗು ಸುದ್ದಿ

ನೋಡ ನೋಡುತ್ತಿದ್ದಂತೆ ಹೊಸ ವರ್ಷ ಬಂದೇ ಬಿಟ್ಟಿತು. ಮೊನ್ನೆ ಮೊನ್ನೆ ತಾನೆ ಆರಂಭವಾಗಿದ್ದ 2023 ನೆನಪಿನಂಗಳಕ್ಕೆ ಜಾರಿದ್ದು ಈಗ ಇತಿಹಾಸ. ಮತ್ತೀಗ 2024ರ ಹೊಸ ವರ್ಷದ ಹೊಸ್ತಿಲಲ್ಲಿ ನಾವೆಲ್ಲ ನಿಂತಿದ್ದೇವೆ.

ಇತಿಹಾಸಕ್ಕೆ ಜಾರಿದ ಹಳೆಯ ವರ್ಷದಲ್ಲಿ ಸಾಕಷ್ಟು ಏಳು ಬೀಳುಗಳು, ಕಷ್ಟ ಸುಖಗಳು, ಲಾಭ ನಷ್ಟಗಳು, ನೋವು ನಿರಾಸೆಗಳು, ಸಿಹಿ ಕಹಿ ಅನುಭವಗಳು ಪ್ರತಿಯೊಬ್ಬರಿಗೂ ಆಗಿರುತ್ತದೆ. ಆದರೆ ನಾವು ಕಹಿ ಘಟನೆಗಳ ಮೆಲುಕು ಹಾಕಿ ಮನಸ್ಸನ್ನು ಕದಡುವ ಬದಲು ಸಿಹಿ ನೆನಪುಗಳನ್ನು ಹೆಕ್ಕಿ ತೆಗೆದು ಆಸ್ವಾದಿಸಬೇಕಾಗಿದೆ. ಮನಸ್ಸನ್ನು ತಿಳಿಗೊಳಿಸಬೇಕಿದೆ. ಖುಷಿಪಡಬೇಕಿದೆ.

ಪ್ರತಿಯೊಂದು ಕ್ಷೇತ್ರದಲ್ಲೂ ಇಂತಹ ಸಿಹಿ ಕಹಿ ಘಟನೆಗಳು ನಡೆಯುವುದು ಸಹಜ. ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ, ಶೈಕ್ಷಣಿಕವಾಗಿ ಅನೇಕ ಘಟನಾವಳಿಗಳು ನಡೆಯುವುದು ಸರ್ವೆ ಸಾಮಾನ್ಯ. ಅದರಂತೆ ಕಳೆದ ವರ್ಷ ಸಾಕಷ್ಟು ಬದಲಾವಣೆಗಳು ಆಗಿವೆ ಎಂದು ಭಾವಿಸಿದ್ದೇವೆ. ನೋವು ನಿರಾಸೆಗಳು ನಡೆದಿರುತ್ತವೆ. ಆದರೆ ಒಳ್ಳೆಯದನ್ನು ಆಯ್ದುಕೊಂಡು ಕೆಟ್ಟದ್ದನ್ನು ಬಿಟ್ಟುಬಿಡುವುದು ಉತ್ತಮ ಮಾರ್ಗ.

ಕ್ಷಮೆ ಕೇಳೋಣ, ಥ್ಯಾಂಕ್ಸ್ ಹೇಳೋಣ

ಪ್ರತಿಯೊಬ್ಬರ ಜೀವನದಲ್ಲೂ ಕೆಲವು ತಪ್ಪುಗಳು ನಡೆಯುವುದು ಸಹಜ. ಅದರಿಂದ ಇನ್ನೊಬ್ಬರಿಗೆ ತೊಂದರೆಯಾಗಿರುವುದು ಅಷ್ಟೇ ಸಹಜ. ಗೊತ್ತಿದ್ದೋ ಗೊತ್ತಿಲ್ಲದೆಯೋ ಕೆಲವೊಮ್ಮೆ ನಮ್ಮಿಂದ ಇನ್ನೊಬ್ಬರಿಗೆ ನೋವಾಗಿರುತ್ತದೆ. ಬೇಸರವಾಗಿರುತ್ತದೆ. ಹಾಗಾಗಿ ಅಂತಹ ಕಹಿ ಘಟನೆಗಳಿದ್ದರೆ ನಮ್ಮಿಂದ ನೋವಾಗಿದ್ದ ವ್ಯಕ್ತಿಗಳನ್ನು ಕ್ಷಮೆ ಕೇಳಿಬಿಡೋಣ. ಕ್ಷಮೆ ಕೇಳುವುದರಿಂದ ನಾವೇನೂ ಕಳೆದುಕೊಳ್ಳುವುದಿಲ್ಲ. ಬದಲಾಗಿ ಅದರಿಂದ ಅವರ ಪ್ರೀತಿ, ವಿಶ್ವಾಸವನ್ನು ಪಡೆದುಕೊಳ್ಳುತ್ತೇವೆ.

ಸಾಕಷ್ಟು ಸ್ನೇಹಿತರು ಹಾಗೂ ಸಂಬಂಧಿಕರು, ಕೆಲವೊಮ್ಮೆ ಪರಿಚಯ ಇರದಿದ್ದವರೂ ನಮಗೆ ಸಹಾಯ ಮಾಡಿರುತ್ತಾರೆ. ಯಾವುದೋ ಸಂದರ್ಭದಲ್ಲಿ ನಮ್ಮ ಬೆನ್ನಿಗೆ ನಿಂತಿರುತ್ತಾರೆ. ಕೆಲವೊಮ್ಮೆ ನೇರವಾಗಿ, ಇನ್ನೂ ಕೆಲವು ಬಾರಿ ಪರೋಕ್ಷವಾಗಿ ಸಹಾಯವನ್ನು ತೆಗೆದುಕೊಂಡಿರುತ್ತೇವೆ. ಅಂತಹ ಸಹಾಯ ಮಾಡಿದ ಸಹೃದಯಿಗಳಿಗೆ ಅಥವಾ ನಮ್ಮ ಕಷ್ಟದಲ್ಲಿ ಬೆನ್ನು ತಟ್ಟಿ ಚಿಂತೆ ಮಾಡಬೇಡ ನಾನಿದ್ದೇನೆ ಎಂದು ಆತ್ಮವಿಶ್ವಾಸ ತುಂಬಿದ ಹಿತೈಷಿಗಳಿಗೆ ಥ್ಯಾಂಕ್ಸ್ ಹೇಳೋಣ ಥ್ಯಾಂಕ್ಸ್ ಹೇಳುವುದರಿಂದ ಸಹಾಯ ಮಾಡಿದ ಸಾರ್ಥಕ ಭಾವ ಅವರಲ್ಲಿ ಮೂಡುತ್ತದೆ. ಅದರಿಂದ ಪ್ರೀತಿ-ವಿಶ್ವಾಸ ಹೆಚ್ಚುತ್ತದೆ.

ಈಗ ಶುರುವಾಗುವ ಹೊಸ ವರ್ಷದಲ್ಲಿ ಹೊಸ ಭರವಸೆಯಿಂದ ಹೊಸ ಹೆಜ್ಜೆ ಇಡೋಣ. ಪ್ರತಿ ಹೆಜ್ಜೆಯನ್ನು ಜಾಗೃತಿಯಿಂದ ಇಡಲು ಪ್ರಯತ್ನಿಸೋಣ. ಪ್ರತಿಯೊಬ್ಬರಿಗೂ ಸ್ನೇಹ, ಪ್ರೀತಿ, ವಿಶ್ವಾಸ ಹಂಚೋಣ ಮತ್ತು ಪಡೆಯೋಣ. ಶ್ರದ್ಧೆ ನಿಷ್ಠೆಯಿಂದ ನಮ್ಮ ನಮ್ಮ ಕಾಯಕದಲ್ಲಿ ತೊಡಗಿ ಯಶಸ್ಸಿನತ್ತ ಪಯಣಿಸೋಣ.

ನಿಮಗೆಲ್ಲರಿಗೂ ಹೊಸ ವರ್ಷ ಹೊಸತನವನ್ನು ನೀಡಲಿ. ನೀವು ಹಳೆಯ ವರ್ಷದಲ್ಲಿ ಕಂಡ ಕನಸು ಹೊಸ ವರ್ಷದಲ್ಲಿ ನನಸಾಗಲಿ. ಕಷ್ಟ, ದುಃಖ, ದುಮ್ಮಾನಗಳು ದೂರವಾಗಲಿ. ಸುಖ, ಶಾಂತಿ, ಸಂಪತ್ತು, ಸಮೃದ್ಧಿ ನಿಮ್ಮದಾಗಲಿ. ನಿಮ್ಮ ಹಾಗೂ ನಿಮ್ಮ ಕುಟುಂಬದ ಭವಿಷ್ಯ ಉಜ್ವಲವಾಗಲಿ ಎಂದು ಆಶಿಸುವೆ. ನಿಮಗೆಲ್ಲರಿಗೂ ಹೊಸ ವರ್ಷದ ಹಾರ್ಧಿಕ ಶುಭಾಶಯಗಳು.

-ಕುಬೇರ ಮಜ್ಜಿಗಿ

Leave a Reply

Your email address will not be published. Required fields are marked *

error: Content is protected !!