
ಕಾಂಗ್ರೆಸ್ ನ ಸಿದ್ದರಾಮಯ್ಯ ಸರಕಾರದಲ್ಲಿ
ದಲಿತರ ಮೇಲೆ ದೌರ್ಜನ್ಯಗಳು ಹೆಚ್ಚುತ್ತಿವೆ
ಎಸ್ ಸಿ ಮೋರ್ಚಾ ಜಿಲ್ಲಾಧ್ಯಕ್ಷ ಸಣ್ಣ ಕನಕಪ್ಪ ಚಲವಾದಿ ಆರೋಪ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, ೨೧- ಕಾಂಗ್ರೆಸ್ ನ ಸಿದ್ದರಾಮಯ್ಯ ಸರಕಾರ ಅಧಿಕಾರಕ್ಕೆ ಬಂದ ನಂತರ ಬೆಳಗಾವಿ ಜಿಲ್ಲೆಯ ಮಹಿಳೆಯ ವಿವಸ್ತ್ರ ಪ್ರಕರಣ ಸೇರಿದಂತೆ ರಾಜ್ಯದಲ್ಲಿ ದಲಿತರ ಮೇಲೆ ದೌರ್ಜನ್ಯಗಳು ಹೆಚ್ಚಾಗಿವೆ. ಜೂನ್ ನಿಂದ ಅಕ್ಟೋಬರ್ ವರೆಗೆ ಒಂದು ಸಾವಿರಕ್ಕೂ ಹೆಚ್ಚು ದಲಿತರ ಮೇಲೆ ಅಪರಾಧ ಪ್ರಕರಣ ವರದಿಯಾಗಿವೆ ಎಂದು ಬಿಜೆಪಿ ಎಸ್ ಸಿ ಮೋರ್ಚಾ ಜಿಲ್ಲಾಧ್ಯಕ್ಷ ಸಣ್ಣ ಕನಕಪ್ಪ ಚಲವಾದಿ ಹೇಳಿದರು.
ಅವರು ಗುರುವಾರ ಕೊಪ್ಪಳ ಮೀಡಿಯಾ ಕ್ಲಬ್ ನಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಸರಕಾರದ ಐದು ತಿಂಗಳ ಅವಧಿಯಲ್ಲಿ 1 ಲಕ್ಷ 5 ಸಾವಿರ ಪ್ರಕರಣಗಳು ದಾಖಲಾಗಿದ್ದು ಸರಕಾರದ ವಿಫಲತೆಗೆ ಸಾಕ್ಷಿ. ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳರವರ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಗೂಂಡಾಗಿರಿ ನಡೆದಿದೆ. ಸರಕಾರದ ದಲಿತ ವಿರೋಧಿ ನೀತಿಯಿಂದ ಎಸ್ ಸಿ/ಎಸ್ ಟಿ ಜನಾಂಗದ ವಿದ್ಯಾರ್ಥಿಗಳ ಸ್ಕಾಲರ್ಶಿಪ್ ನೀಡುವಲ್ಲಿ ವಿಫಲವಾಗಿದೆ. ದಲಿತರು ಮತ್ತು ಬಿಜೆಪಿ ಕಾರ್ಯಕರ್ತರ ವಿರುದ್ದ ದೌರ್ಜನ್ಯ ನಿಲ್ಲದೆ ಹೋದರೆ ಬೀದಿಗಿಳಿದು ಹೋರಾಟ ಅನಿವಾರ್ಯ ಆಗಲಿದೆ ಎಂದರು.
ಪಕ್ಷದ ಬಳ್ಳಾರಿ ವಿಭಾಗದ ಸಹ ಪ್ರಭಾರಿ ಚಂದ್ರಶೇಖರಗೌಡ ಪಾಟೀಲ್ ಮಾತನಾಡಿ ಮುಂಬರುವ ಲೋಕಸಭಾ ಚುನಾವಣೆಗೆ ಇಂಡಿಯಾ ಒಕ್ಕೂಟದಿಂದ ಮಲ್ಲಿಕಾರ್ಜುನ ಖರ್ಗೆಯವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿದ ನಂತರ ಒಕ್ಕೂಟ ಒಡೆದಿದ್ದು ಒಗ್ಗಟ್ಟು ಇಲ್ಲ. ಸಂಸತ್ ನಲ್ಲಿನ ದಾಳಿ ಪ್ರಕರಣ ತನಿಖೆ ನಡೆದಿದ್ದು ಅಧಿವೇಶನದಲ್ಲಿ ವಿರೋಧ ಪಕ್ಷದ ಸದಸ್ಯರ ನಡವಳಿಕೆ ಸರಿ ಇಲ್ಲದ್ದಕ್ಕೆ ಅಮಾನತ್ತು ಆಗಿದ್ದಾರೆ. ಟಿಎಂಸಿ ಸಂಸದರು ಉಪರಾಷ್ಟ್ರಪತಿ ಜಗದೀಪ್ ಧನ್ಖರ್ ಅವರ ಮಿಮಿಕ್ರಿ ಮಾಡಿದ್ದು ಅವಮಾನಕಾರಿ ವರ್ತನೆ ಎಂದು ಹೇಳಿದರು.
ಎಸ್.ಸಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಣೇಶ ಹೊರತಟ್ನಾಳ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ರಾವಣ ರಾಜ್ಯ ಆರಂಭವಾಗಿದೆ. ಈ ಸರಕಾರಕ್ಕೆ ಜನ ಮುಂಬರುವ ದಿನಗಳಲ್ಲಿ ತಕ್ಕಪಾಠ ಕಲಿಸಲಿದ್ದಾರೆ ಎಂದರು. ಎಸ್.ಸಿ ಮೊರ್ಚಾ ಜಿಲ್ಲಾ ಉಪಾಧ್ಯಕ್ಷ ಮಂಜುನಾಥ ಮುಸಲಾಪುರ, ಪಕ್ಷದ ಜಿಲ್ಲಾ ವಕ್ತಾರ ಮಹೇಶ ಅಂಗಡಿ ಉಪಸ್ಥಿತರಿದ್ದರು.