
ಕಾಂತರಾಜು ಆಯೋಗದ ವರದಿ ಜಾರಿಗೆ ಆಗ್ರಹ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, ೧೬- ಕಾಂತರಾಜು ಆಯೋಗದ ವರದಿಯನ್ನು ರಾಜ್ಯ ಸರ್ಕಾರ ಕಡ್ಡಾಯವಾಗಿ ಜಾರಿಗೆ ತರಬೇಕು, ಇಲ್ಲವಾದಲ್ಲಿ ತೀವ್ರ ಹೋರಾಟ ರೂಪಿಸಬೇಕಾಗುತ್ತದೆ ಎಂದು ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಪ್ರಧಾನ ಸಂಚಾಲಕ ಕೆ.ಎಂ.ರಾಮಚಂದ್ರಪ್ಪ ಹೇಳಿದರು.
ಬಳ್ಳಾರಿಯ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾಧ್ಯಮದವರನ್ನುದ್ಧೇಶಿಸಿ ಮಾತನಾಡಿದರು. ಕಾಂತರಾಜು ಆಯೋಗದ ವರದಿಯ ಜಾರಿಗೆ ಆಗ್ರಹಿಸಿ ಇದೇ ತಿಂಗಳು 28ರಂದು ಚಿತ್ರದುರ್ಗದಲ್ಲಿ ಶೋಷಿತ ಸಮುದಾಯಗಳ ಜಾಗೃತಿ ಸಮಾವೇಶ ಏರ್ಪಡಿಸಲಾಗಿದ್ದು.
ಸಮಾವೇಶಕ್ಕೆ ರಾಜ್ಯ ಸರ್ಕಾರದ ಪರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಹ್ವಾನಿಸಲಾಗಿದ್ದು, ಆ ದಿನ ಮುಖ್ಯಮಂತ್ರಿಗಳು ವರದಿಯನ್ನು ಜಾರಿಗೊಳಿಸುವ ಘೋಷಣೆ ಮಾಡಬಹುದೆಂಬ ನಿರೀಕ್ಷೆ ಇದೆ ಎಂದರು.
ಶೋಷಿತ ಸಮುದಾಯಗಳನ್ನು ಮೇಲೆತ್ತುವ ಉದ್ಧೇಶದಿಂದ ಕಾಂತರಾಜು ಅವರ ನೇತೃತ್ವದ ಆಯೋಗ ರಚಿಸಿ, ಜಾತಿವಾರು ಶೈಕ್ಷಣಿಕ, ಆರ್ಥಿಕ ಸಮೀಕ್ಷೆಗೆ ಆದೇಶ ಮಾಡಿದರು, ಆದರೆ ವರದಿ ಸಿದ್ಧರಾದರೂ ಜಾರಿಗೆ ಬರಲಿಲ್ಲ. ತದನಂತರ ಬಂದ ಸರ್ಕಾರಗಳು ವರದಿಯ ಬಗ್ಗೆ ತೀರ್ಮಾನ ಮಾಡಲಿಲ್ಲ ಎಂದು ರಾಮಚಂದ್ರಪ್ಪ ಹೇಳಿದರು.
ಕೆಲವು ಮೇಲ್ವರ್ಗದ ನಾಯಕರಿಂದಾಗಿ ವರದಿಯನ್ನು ಜಾರಿಗೆ ತರದೇ ಕಾಲಹರಣ ಮಾಡುವ ಹುನ್ನಾರವನ್ನು ನಡೆಸಲಾಗುತ್ತಿದೆ ಎಂದು ಹೇಳಿದ ಅವರು, ಕಾಂತರಾಜು ಆಯೋಗದ ವರದಿಯ ಜಾರಿ ಆಗಬೇಕು, ಅದರ ಆಧಾರದಲ್ಲಿ ಮೀಸಲಾತಿ ಹಾಗೂ ಸರ್ಕಾರದ ಸವಲತ್ತು ಸಿಗಬೇಕು. ಆದರೆ ಮುಂದುವರೆದ ಜಾತಿಗಳ ನಾಯಕರು ವರದಿಯನ್ನು ವಿರೋಧ ಮಾಡುತ್ತಿದ್ದಾರೆ. ಶೋಷಿತರ ಪರ ಇರುವ ಈ ಹಿಂದಿನ ವರದಿಗಳ ವಿಷಯದಲ್ಲೂ ಕೂಡ ವಿರೋಧ ಮಾಡಿದ್ದರು ಎಂದು ಅವರು ಹೇಳಿದರು.
ವರದಿ ಜಾರಿ ಆಗದ ಹೊರತು, ವರದಿಯಲ್ಲಿ ಏನಿದೆ ಎಂದು ತಿಳಿಯುವುದು ಹೇಗೆ? ಸಮೀಕ್ಷೆಯಲ್ಲಿ ನಮ್ಮ ಸಮುದಾಯದ ಜನರನ್ನು ಒಳಪಡಿಸಿಲ್ಲ ಎಂಬ ಹುಸಿ ಆರೋಪ ಮಾಡಲಾಗುತ್ತಿದೆ ಎಂದು ಹೇಳಿದ ರಾಮಚಂದ್ರಪ್ಪ, ಈ ರೀತಿಯ ಆರೋಪ ಸಮೀಕ್ಷೆಯಲ್ಲಿ ಭಾಗಿಯಾದವರನ್ನು ಅವಮಾನ ಮಾಡಿದ ಹಾಗೆ. ಜನರಿಗೆ ಸೇರಿದ ನೂರಾರು ಕೋಟಿ ರೂ.ಗಳನ್ನು ವರದಿಗಾಗಿ ಖರ್ಚು ಮಾಡಲಾಗಿದೆ. ಹೀಗಾಗಿ ವರದಿ ಬಹಿರಂಗ ಆಗಲಿ, ಸಾರ್ವಜನಿಕರಿಗೆ ವರದಿ ಲಭ್ಯ ಆಗಲಿ, ಈ ಬಗ್ಗೆ ಚರ್ಚೆ ಆಗಲಿ, ದೋಷಗಳಿದ್ದರೆ ತಿದ್ದುವ ಕೆಲಸವಾಗಲಿ ಎಂದರು.
ಸಮೀಕ್ಷೆಯಲ್ಲಿ ಯಾರ ಜನಸಂಖ್ಯೆ ಕಡಿಮೆ ಇದೆಯೋ? ಅವರು ಹೆಗಲು ಮುಟ್ಟಿಕೊಳ್ಳಲಿ ಎಂದ ಅವರು, ನಾವಿಲ್ಲದಿದ್ದರೆ ಆಡಳಿತ ಮಾಡುವುದು ಕಷ್ಟ ಎಂದು ಹೇಳುತ್ತಿರುವವರಿಗೆ ವಾಸ್ತವ ತಿಳಿಸಬೇಕಿದೆ. ವರದಿಯನ್ನು ಸ್ವೀಕರಿಸಲೇಬಾರದು ಎಂಬುದು ಸರ್ವಾಧಿಕಾರಿ ಧೋರಣೆ. ಈವರೆಗಿನ ಯಾವುದೇ ವರದಿಯನ್ನು ಮೇಲ್ವರ್ಗದವರು ವಿರೋಧ ಮಾಡಿದಾಗಲೂ ಕೂಡ ನಾವು ಪ್ರತಿರೋಧ ತೋರಿಸಲಿಲ್ಲ. ಆದರೆ ಈ ಬಾರಿ ನಾವು ತೀವ್ರ ಪ್ರತಿರೋಧ ಒಡ್ಡಲು ಸಜ್ಜಾಗಿದ್ದೇವೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ವರದಿ ಸ್ವೀಕರಿಸಲು ಸಿದ್ಧರಿದ್ದಾರೆ. ಆದರೆ ಅವರದೇ ಸಂಪುಟದ ಸಚಿವರ ಪೈಕಿ ಕೆಲವರು ವಿರೋಧ ಮಾಡಿದ್ದಾರೆ, ಆದರೆ ನಾವು ನಮ್ಮ ಸಮಾವೇಶದ ಮೂಲಕ ಸಿಎಂ ಅವರಿಗೆ ನೈತಿಕ ಸ್ಥೈರ್ಯ ತುಂಬಲಿದ್ದೇವೆ ಎಂದ ರಾಮಚಂದ್ರಪ್ಪ, ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ನಿಗದಿ ಮಾಡಲಾಗಿದೆ. ಯಾವ ಆಧಾರದಲ್ಲಿ, ಯಾವ ಸಮೀಕ್ಷೆಯ ಆಧಾರದಲ್ಲಿ ಆರ್ಥಿಕವಾಗಿ ಹಿಂದುಳಿದವರು ಎಂದು ಗುರುತಿಸಿ ಮೀಸಲಾತಿ ನೀಡಿದ್ದಾರೆ? ಈ ಆರ್ಥಿಕವಾಗಿ ಹಿಂದುಳಿದವರ ಮೀಸಲಾತಿಯನ್ನು ರದ್ದು ಮಾಡಬೇಕು ಎಂದು ಆಗ್ರಹಿಸಿದರು.
ಮಹಿಳಾ ಮೀಸಲಾತಿ ಕೊಡುವುದಾಗಿ ಕೇಂದ್ರ ಹೇಳುತ್ತದೆ, ಆದರೆ ಜನಗಣತಿ ಆಗದ ಹೊರತು ಮೀಸಲಾತಿ ನೀಡಲಾಗದು, 15 ವರ್ಷಗಳ ಕಾಲಮಿತಿ ನಿಗದಿ ಮಾಡಲಾಗಿದೆ, ಜನಗಣತಿ, ಕ್ಷೇತ್ರ ಪುನರ್ವಿಂಗಡಣೆ, ಮೀಸಲಾತಿ ನಿಗದಿ 15 ವರ್ಷಗಳಲ್ಲಿ ಸಾಧ್ಯವಾಗದು. ಜನಸಂಖ್ಯೆಯ ಅನುಗುಣವಾಗಿ ನಿಗದಿ ಮಾಡಿರುವ ಮೀಸಲಾತಿಯಂತೆ ಮಹಿಳಾ ಮೀಸಲಾತಿ ನೀಡಬೇಕು, ಅದೇ ರೀತಿ ಅಲ್ಪಸಂಖ್ಯಾತ, ಹಿಂದುಳಿದ, ದಲಿತ ಮಹಿಳೆಯರಿಗೂ ಒಳಮೀಸಲಾತಿ ನೀಡಬೇಕು ಎಂದು ರಾಮಚಂದ್ರಪ್ಪ ಒತ್ತಾಯ ಮಾಡಿದರು.
ಕಾಂತರಾಜು ಆಯೋಗದ ವರದಿ ಜಾರಿಗೆ ಬಂದರೆ ಮೇಲ್ವರ್ಗದವರು ತಾವು ಕಳೆದ ಹಲವು ವರ್ಷಗಳಿಂದ ದೋಚಿರುವ ಸಂಪತ್ತು, ಅನುಭವಿಸಿದ ಅಧಿಕಾರದ ಮಾಹಿತಿ ಹೊರಗೆ ಬರುತ್ತದೆ ಎಂಬ ಭಯ ಮೇಲ್ವರ್ಗದವರಿಗೆ ಇದ್ದಂತೆ ಕಾಣುತ್ತಿದೆ ಎಂದರು. ಚಿತ್ರದುರ್ಗದಲ್ಲಿ ಜ.28ರಂದು ನಡೆಯುವ ಜಾಗೃತಿ ಸಮಾವೇಶದಲ್ಲಿ ಸರ್ಕಾರವನ್ನು ಒತ್ತಾಯಿಸಲಿದ್ದೇವೆ. ಅಲ್ಲಿಯೇ ಸರ್ಕಾರದ ಪ್ರತಿನಿಧಿಗಳಾಗಲಿ, ಸಿಎಂ ಘೋಷಣೆ ಮಾಡಬೇಕು ಎಂದರು.
ಅನಂತ ನಾಯ್ಕ್, ಎ.ಮಾನಯ್ಯ, ಡಾ.ಗಾದಿಲಿಂಗನಗೌಡ, ಕೆ.ಇ.ಚಿದಾನಂದಪ್ಪ, ಹುಮಾಯೂನ ಖಾನ್, ಮುಂಡ್ರಿಗಿ ನಾಗರಾಜ್, ಪಿ.ಗಾದೆಪ್ಪ, ತೌಸಿಫ್, ಹಾಶಿಂ, ಮಂಜುಳಾ, ಚಂಪಾ ಚವ್ಹಾಣ್, ಶೇಖರ್, ಉರುಕುಂದ, ಮೊದಲಾದವರು ಹಾಜರಿದ್ದರು.ಸುದ್ದಿಗೋಷ್ಟಿ ನಂತರ ಸಮಾವೇಶದ ಪೂರ್ವಭಾವಿ ಸಭೆ ನಡೆಯಿತು. ಎ.ಮಾನಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆ.ಇ.ಚಿದಾನಂದಪ್ಪ ವಂದಿಸಿದರು.