
ಕಾಯಕ ದೇವೋಭವ-ಜಾಗೃತಿ ಅಭಿಯಾನ: ಪೂರ್ವಭಾವಿ ಸಭೆ
ಕರುನಾಡ ಬೆಳಗು ಸುದ್ದಿ
ಕೊಪ್ಪಳ,19- ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದ ವಿಶೇಷ ವೈಭವ ಕಾರ್ಯಕ್ರಮಗಳಲ್ಲಿ ಒಂದಾದ `ಕಾಯಕ ದೇವೋಭವ-ಜಾಗೃತಿ ಅಭಿಯಾನ’ದ ರುಪರೇಷಗಳ ಕುರಿತು ಜನವರಿ 19ರಂದು ನಗರದ ಗವಿಸಿದ್ದೇಶ್ವರ ಬಿ.ಎಡ್ ಕಾಲೇಜಿನಲ್ಲಿ ಪೂರ್ವಭಾವಿ ಸಭೆ ನಡೆಯಿತು.
ಜಾತ್ರಾ ಮಹೋತ್ವದ ಹಿನ್ನೆಲೆಯಲ್ಲಿ ಬಾಲ್ಯಾ ವಿವಾಹ ನಿಷೇಧ ಕುರಿತು ಜಾಗೃತಿ, ಜಲ ಸಂರಕ್ಷಣೆ, ರಕ್ತದಾನ, ನೇತ್ರದಾನ ಹೀಗೆ ಪ್ರತಿ ವರ್ಷ ಒಂದೊಂದು ಹೊಸ-ಹೊಸ ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಕಳೆದ ಬಾರಿ ಅಷ್ಟೆ ಅಂಗಾಂಗ ದಾನ ಜಾಗೃತಿ ಜಾಥಾ ಹಮ್ಮಿಕೊಂಡು, ಸಾರ್ವಜನಿಕರಿಗೆ ಅಂಗಾಂಗ ದಾನದ ಮಹತ್ವವದ ಬಗ್ಗೆ ತಿಳಿಸಲಾಗಿತ್ತು. ಅಂತೆಯೇ ಈ ಬಾರಿ `ಕಾಯಕ ದೇವೋಭವ-ಜಾಗೃತಿ ಅಭಿಯಾನ’ದ ಮೂಲಕ ಕಾಯಕದ ಮಹತ್ವವನ್ನು ಸಾರಲು ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವವು ನಿರ್ಧರಿಸಿದೆ.
ಈ ಸಭೆಯಲ್ಲಿ ಆರೋಗ್ಯ, ಶಿಕ್ಷಣ, ಕೌಶಲ್ಯಾಭಿವೃದ್ಧಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಜಿಲ್ಲಾ ವಕೀಲರ ಸಂಘ ಹಾಗೂ ಪದಾಧಿಕಾರಿಗಳು, ಸರ್ಕಾರಿ ಹಾಗೂ ಖಾಸಗಿ ಕಾಲೇಜುಗಳ ಪ್ರಾಚಾರ್ಯರು, ಖಾಸಗಿ ಶಿಕ್ಷಣ ಸಂಸ್ಥೆಗಳು, ಸ್ಥಳೀಯ ಸಂಘ ಸಂಸ್ಥೆಗಳು, ಸ್ವ-ಸಹಾಯ ಗುಂಪುಗಳ ಸದಸ್ಯರು, ಎನ್.ಜಿ.ಓ.ಗಳ ಪ್ರತಿನಿಧಿಗಳು ಪಾಲ್ಗೊಂಡು, ಕಾಯಕ ದೇವೋಭವ-ಜಾಗೃತಿ ಅಭಿಯಾನದ ಕುರಿತು ಚರ್ಚೆ ನಡೆಸಿದರು.
ಕಾಯಕ ದೇವೋಭವ-ಜಾಗೃತಿ ಅಭಿಯಾನವನ್ನು ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆ, ಭಾರತೀಯ ರೆಡ್ಕ್ರಾಸ್ ಸಂಸ್ಥೆ ಹಾಗೂ ಸ್ಥಳೀಯ ಶಿಕ್ಷಣ ಸಂಸ್ಥೆಗಳ ಸಹಯೋಗದೊಂದಿಗೆ ಜನವರಿ 24ರಂದು ಬೆಳಿಗ್ಗೆ 8.30 ಗಂಟೆಗೆ ನಗರದ ಬಾಲಕೀಯರ ಸರಕಾರಿ ಪದವಿ ಪೂರ್ವ ಕಾಲೇಜು ಮೈದಾನ (ಪಬ್ಲಿಕ್ ಗ್ರೌಂಡ್)ದಿಂದ ಅಶೋಕ ವೃತ್ತ, ಗಡಿಯಾರ ಕಂಬದ ಮೂಲಕ ಗವಿಮಠದ ವರೆಗೆ ಹಮ್ಮಿಕೊಳ್ಳಲಾಗಿದೆ.