
ಮಾರ್ಚ 21 ರಂದು ಕಾರ್ಯಕರ್ತ ಸಭೆ
ಬಿಜೆಪಿ ರಾಜ್ಯಧ್ಯಕ್ಷರ ವಿರುದ್ದ ಸಂಗಣ್ಣ ಗರಂ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 19- ಲೋಕಸಭಾ ವ್ಯಾಪ್ತಿಯ ಬೆಂಬಲಿಗರು ಹಾಗೂ ಕಾರ್ಯಕರ್ತರ ಸಭೆಯನ್ನು ಗುರುವಾರ 21 ರಂದು ಕೊಪ್ಪಳ ನಗರದ ಶ್ರೀ ಶಿವಶಾಂತ ವೀರ ಮಂಗಲ ಭವನದಲ್ಲಿ ಕರೆದು ಬೆಂಬಲಿಗರ ಸಭೆಯಲ್ಲಿ ನಿಲುವು ನಿರ್ಧಾರ ಮಾಡುವುದಾಗಿ ಸಂಸದ ಸಂಗಣ್ಣ ಕರಡಿ ಹೇಳಿದರು.
ಅವರು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಬೆಂಬಲಿಗರ ಕಾರ್ಯಕರ್ತರ ನಿರ್ಧಾರದಂತೆ ಮುಂದಿನ ನಿರ್ಧಾರ ಮಾಡಲಾಗುವುದು, ಟಿಕೆಟ್ ತಪ್ಪಿಸಲು ಲಾಬಿ ಮಾಡಲಾಗಿದೆ ಎಂದು ಆರೋಪಿಸಿದರು.
ನಾನು ಕೇಳಿರುವ ಪ್ರಶ್ನೆಗಳಿಗೆ ಇದುವರೆಗೆ ಹೈ ಕಮಾಂಡ್ ಇನ್ನು ಉತ್ತರ ನೀಡಿಲ್ಲ ಬೆಂಬಲಿಗರ ಕಾರ್ಯಕರ್ತರ ಒತ್ತಡವಿದೆ ಎಲ್ಲರ ಸಭೆ ಕರೆದು ಅಭಿಪ್ರಾಯ ಪಡೆದು ಮುಂದಿನ ತೀರ್ಮಾನ ಮಾಡುವೆ ಎಂದರು.
ಬಿಜೆಪಿ ಅಭ್ಯರ್ಥಿ ಡಾ. ಬಸವರಾಜ ಕ್ಯಾವಟರ್ ಅವರನ್ನು ಬಿಜೆಪಿ ಅಭ್ಯರ್ಥಿಯನ್ನಾಗಿ ಘೋಷಿಸಿದೆ. ಹಿಂದಿನ ಎರಡೂ ಅವಧಿಗೆ ಸಂಸದರಾಗಿದ್ದ ಸಂಗಣ್ಣ ಇದರಿಂದ ಅಸಮಾಧಾನಗೊಂಡು ಪಕ್ಷದ ವರಿಷ್ಠರ ವಿರುದ್ಧ ಹರಿಹಾಯ್ದಿದ್ದರು.
21ರಂದು ಸಭೆ ನಡೆಸಿ ಕಾರ್ಯಕರ್ತರು ಹಾಗೂ ಪಕ್ಷದ ಎರಡನೆ ಹಂತದ ನಾಯಕರ ಅಭಿಪ್ರಾಯ ಪಡೆಯಲಾಗುವುದು. ಅಲ್ಲಿ ಯಾವ ಅಭಿಪ್ರಾಯ ವ್ಯಕ್ತವಾಗುತ್ತದೆಯೊ ಅದನ್ನು ಆಧರಿಸಿ ಮುಂದಿನ ರಾಜಕೀಯ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಗರಂ : ನನಗೆ ಟಿಕೆಟ್ ಕೈ ತಪ್ಪಿದಾಗ ಸೌಜನ್ಯಕ್ಕೂ ಪಕ್ಷದ ವರಿಷ್ಠರು ಕರೆ ಮಾಡಿಲ್ಲ, ನನಗೆ ಟಿಕೆಟ್ ತಪ್ಪಿಸಿದವರು ಯಾರು? ಯಾವ ಕಾರಣಕ್ಕೆ ಟಿಕೆಟ್ ಕೊಟ್ಟಿಲ್ಲ? ಎನ್ನುವ ಮೂರು ಪ್ರಶ್ನೆಗಳನ್ನು ಅವರು ವರಿಷ್ಠರಿಗೆ ಕೇಳಿರುವ ಅದಕ್ಕೆ ಇನ್ನುವರೆಗು ಉತ್ತರ ಸಿಕ್ಕಿಲ್ಲಾ ಎಂದು ಬಿಜೆಪಿ ರಾಜ್ಯಾಧ್ಯಕ್ಷರ ವಿರುದ್ಧ ಗರಂ ಆದರು.
ನನಗೆ ಟಿಕೆಟ್ ನೀಡದ್ದಕ್ಕೆ ಕಾರ್ಯಕರ್ತರು ಬೇಸರಗೊಂಡಿದ್ದಾರೆ. ನನಗೆ ಅಧಿಕಾರದ ಆಸೆಯಿಲ್ಲ, ಕಾರ್ಯಕರ್ತರ ಸಲುವಾಗಿ ಸಭೆ ನಡೆಸುತ್ತಿದ್ದೇನೆ. ಕಾಂಗ್ರೆಸ್ ಸೇರಬೇಕೊ, ಸ್ವತಂತ್ರವಾಗಿ ಸ್ಪರ್ಧೆ ಮಾಡಬೇಕೊ ಅಥವಾ ಬಿಜೆಪಿಯಲ್ಲಿಯೇ ಮುಂದುವರಿಯಬೇಕೊ? ಎನ್ನುವ ಬಗ್ಗೆ ಸಭೆ ನಂತರ ನಿರ್ಧರಿಸುವೆ ಎಂದರು.
ನಮ್ಮ ಬಿಜೆಪಿ ಅಭ್ಯರ್ಥಿ ಬಸವರಾಜ ಪರ ಪ್ರಚಾರಕ್ಕೆ ಬರುವಂತೆ ಜಿಲ್ಲೆಯ ಬಿಜೆಪಿ ನಾಯಕರು ಕರೆಯುತ್ತಿದ್ದಾರೆ. ಒಂದು ವೇಳೆ ನಾನು ಪ್ರಚಾರಕ್ಕೆ ಹೋದರೂ ನಾಯಕತ್ವ ವಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಗುರುವಾರದಂದು ಲೋಕಸಭಾ ವ್ಯಾಪ್ತಿಯ ಎಂಟು ವಿಧಾನಸಭೆ ಕ್ಷೇತ್ರದ ಅಭಿಮಾನಿಗಳು, ಕಾರ್ಯಕರ್ತರು ಸಭೆಯಲ್ಲಿ ಭಾಗವಹಿಸಲಿದ್ದು ಅವರ ಅಭಿಪ್ರಾಯ ಪಡೆದು ,ಅವರೊಂದಿಗೆ ಚರ್ಚಿಸಿ ಒಂದು ನಿರ್ಣಯಕ್ಕೆ ಬರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಹಾಂತೇಶ ಮೈನಳ್ಳಿ, ಬಿಜೆಪಿ ತಾಲೂಕ ಅಧ್ಯಕ್ಷ ಮಂಜುನಾಥ ಹಂದ್ರಾಳ ಇತರರು ಇದ್ದರು.