
ಕುಣಿಕೆಗೆ ಕೊರಳೊಡ್ದುವ ಮುನ್ನ ತುಸು ಯೋಚಿಸಿ : ವೀಣಾ ಪಾಟೀಲ್
ಕರುನಾಡ ಬೆಳಗು ಸುದ್ದಿ
ಬದುಕಿನ ಎಲ್ಲಾ ಬಾಗಿಲುಗಳು ಮುಚ್ಚಿರಬಹುದು, ಅದೆಷ್ಟೇ ನಿರಾಶೆ, ಗಾಢಾಂಧಕಾರ ಮನದಲ್ಲಿ ತುಂಬಿದ್ದರೂ ಭರವಸೆಯ ಕಿರು ಬೆಳಕಿನ ಒಂದು ಎಳೆ ನಮ್ಮನ್ನು ಬದುಕಿನತ್ತ ಮುಖ ಮಾಡಿಸುತ್ತದೆ.
ಅದೆಷ್ಟೇ ಘೋರ ಅಮಾವಾಸ್ಯೆಯ ಕಗ್ಗತ್ತಲಿದ್ದರೂ ಕೆಲವೇ ಗಂಟೆಗಳಲ್ಲಿ ಪ್ರಖರ ಸೂರ್ಯನ ಬೆಳಕಿಗೆ ತೊಲಗಿ ಹೋಗುವಂತೆ, ನಿರಾಶೆಯ ಕೂಪದಲ್ಲಿ
ಬಿದ್ದಿರುವ ವ್ಯಕ್ತಿಗೆ ಆಶಾವಾದದ ಒಂದು ಎಳೆ ಸಿಕ್ಕೇ ಸಿಗುತ್ತದೆ.
ಸಮಸ್ಯೆಗಳು ಎಲ್ಲರ ಬದುಕಿನಲ್ಲೂ ಇರುತ್ತವೆ. ಅಕಸ್ಮಾತ್ ಈ ಜಗತ್ತಿನಲ್ಲಿ ಯಾರಾದರೂ ಸಮಸ್ಯೆಗಳಿಲ್ಲದವರು ಇದ್ದಾರೆ ಎಂದರೆ ಅದು ಇನ್ನೂ ಹುಟ್ಟಿರದ ಮಗು ಮತ್ತು ಈಗಾಗಲೇ ಸತ್ತು ಹೋಗಿರುವ ವ್ಯಕ್ತಿ ಎಂದರೆ ಸಮಸ್ಯೆ ಮಾನವ ಜನಾಂಗದ ಮೇಲೆ ಹೇಗೆ ಹರಡಿದೆ ಎಂಬುದರ ವ್ಯಾಪಕತೆಯ ಅರಿವಾಗುತ್ತದೆ. ಹಾಗೆಯೇ ಸಮಸ್ಯೆಗಳಿರುವವರು ಆತ್ಮಹತ್ಯೆ ಮಾಡಿಕೊಳ್ಳಬಹುದು ಎಂದಾದರೆ ಈ ಜಗತ್ತಿನಲ್ಲಿ ಒಂದೇ ಒಂದು ನರಪಿಳ್ಳೆ ಉಳಿಯಲಾರದು. ಬದುಕು ಒಡ್ಡುವ ಸಮಸ್ಯೆಗಳಿಗೆ ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ಭಾವಿಸುವ ಪ್ರತಿಯೊಬ್ಬ ಮನುಷ್ಯನು ಅರಿಯಬೇಕಾದುದು ಭಗವಾನ್ ಶ್ರೀಕೃಷ್ಣ ಹೇಳಿದ ಈ ಒಂದು ಸುಂದರ ಮಾತು ‘ಈ ಸಮಯ ಕಳೆದು ಹೋಗುತ್ತದೆ’.
ಸಮಸ್ಯೆಯ ಆಯುಷ್ಯ ತುಂಬಾ ಕಡಿಮೆ. ಸಮಸ್ಯೆಯನ್ನು ಕೆಲವರು ಗುಡ್ಡದಂತೆ ಭಾವಿಸಿದರೆ ಮತ್ತೆ ಕೆಲವರು ಕಡ್ಡಿಯಂತೆ ಭಾವಿಸುತ್ತಾರೆ… ಇನ್ನು ಕೆಲವರು ಸಮಸ್ಯೆಗಳನ್ನು ಸವಾಲುಗಳಾಗಿ ಸ್ವೀಕರಿಸಿ ಬದುಕಿನಲ್ಲಿ ಯಶಸ್ಸನ್ನು ಪಡೆಯುತ್ತಾರೆ. ಆಯ್ಕೆ ನಮ್ಮದು ಎಂದಾದರೆ ನಾವುಗಳು ಯಾವುದನ್ನು ಆರಿಸಿಕೊಳ್ಳಲು ಬಯಸುತ್ತೇವೆ ??
ಪ್ರತಿ ಕತ್ತಲ ರಾತ್ರಿಗೂ ಒಂದು ಬೆಳಕಿನ ಹಗಲು ಇರುವಂತೆ, ಪ್ರತಿ ಅಂಧಕಾರಕ್ಕೂ ಒಂದು ಸೂರ್ಯೋದಯವಿರುವಂತೆ, ಪ್ರತಿ ಬೀಗದ ಕಾಯಿಗೂ ಒಂದು ಕೀಲಿ ಇರುವಂತೆ ಪ್ರತಿ ಸಮಸ್ಯೆಗೂ ಒಂದು ಪರಿಹಾರ ಇದ್ದೇ ಇರುತ್ತದೆ.
ಆದ್ದರಿಂದ ಕುಣಿಕೆಗೆ ಕೊರಳೊಡ್ದುವ ಮುನ್ನ ಕೊಂಚ ಯೋಚಿಸಿ… ಸಮಸ್ಯೆಗಳಿಂದ ಬಳಲುತ್ತಿರುವವರು ನೀವೊಬ್ಬರೇ ಅಲ್ಲ.
ಸ್ವಭಾವತಃ ಆತ್ಮಹತ್ಯೆ ಮಾಡಿಕೊಳ್ಳುವವರು ಅಂತರ್ಮುಖಿಗಳಾಗಿರುತ್ತಾರೆ. ಬೇರೆಯವರ ಮುಂದೆ ತಮ್ಮ ವೈಯಕ್ತಿಕ ವಿಚಾರಗಳನ್ನು ಹೇಳಿಕೊಳ್ಳಲು ಅವರ ಅಹಂ ಒಪ್ಪುವುದಿಲ್ಲ. ಮಾನಸಿಕವಾಗಿಯೂ ತುಸು ಬಲಹೀನರಾಗಿರುತ್ತಾರೆ. ಇನ್ನು ಕೆಲವು ಬಾರಿ ಎಲ್ಲ ರೀತಿಯ ಸೌಲಭ್ಯಗಳಿದ್ದಾಗಲೂ ಖಿನ್ನತೆಯಿಂದ ನರಳುವ ಕೆಲವರು ಆತ್ಮಹತ್ಯೆಗೆಳಸುತ್ತಾರೆ.
ಬಹುತೇಕ ಆತ್ಮಹತ್ಯೆಗೆಳಸುವವರಲ್ಲಿ ಪ್ರೇಮ ವೈಫಲ್ಯವೇ ಕಾರಣ, ತಮ್ಮ ಪ್ರೀತಿಯನ್ನು ಕುಟುಂಬದವರು ಒಪ್ಪಲಿಲ್ಲ ಎಂಬುದು ಬಹು ಮುಖ್ಯ ಕಾರಣವಾದರೆ ಎಷ್ಟೋ ಬಾರಿ ಪ್ರೇಮಿಗಳ ನಡುವಿನ ಭಿನ್ನಾಭಿಪ್ರಾಯವೇ ಆತ್ಮಹತ್ಯೆಗೆ ಕಾರಣವಾಗುತ್ತದೆ. ನಾನು ಸತ್ತರೆ ಅವರಿಗೆ ತಮ್ಮ ಮಹತ್ವ ಗೊತ್ತಾಗುತ್ತದೆ ಎಂದು ಯಾರಿಗೋ ಬುದ್ಧಿ ಕಲಿಸಲು ಹೋಗಿ ತಮ್ಮನ್ನು ತಾವು ಬಲಿಕೊಟ್ಟುಕೊಳ್ಳುವುದು ಹುಚ್ಚುತನದ ಪರಮಾವಧಿ.
ಮತ್ತೆ ಕೆಲವರು ಕೌಟುಂಬಿಕ ಸಮಸ್ಯೆ, ಸಾಲದ ಸುಳಿ, ಬಡತನ, ಆರೋಗ್ಯ ಸಮಸ್ಯೆ,ನೋವು, ಅಪಮಾನ ದ್ವೇಷ ಅಸೂಯೆಗಳಿಗೆ ಬಲಿಯಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ,ಕಾರಣ ಯಾವುದೇ ಇರಲಿ ಆತ್ಮಹತ್ಯೆಯೊಂದೇ ಇದಕ್ಕೆ ಪರಿಹಾರವಲ್ಲ.
ಜಗತ್ತಿನ ಬಹುತೇಕ ಎಲ್ಲಾ ಧಾರ್ಮಿಕ ಗ್ರಂಥಗಳು ಆತ್ಮಹತ್ಯೆಯನ್ನು ಘೋರ ಪಾಪ ಎಂದು ಹೇಳಿವೆ. ಪುನರ್ಜನ್ಮದಲ್ಲಿ ನಂಬಿಕೆ ಇರುವ ಹಿಂದೂ ಧರ್ಮದಲ್ಲಿ ಆತ್ಮಹತ್ಯೆಯನ್ನು ಮಾಡಿಕೊಳ್ಳುವ ವ್ಯಕ್ತಿ ರೌರವ ನರಕವನ್ನು ಪಡೆಯುತ್ತಾನೆ, ಆತನಿಗೆ ಮುಕ್ತಿ ದೊರೆಯುವುದಿಲ್ಲ ಎಂದು ಹೇಳುತ್ತದೆ. ಕುರಾನ್ ಬೈಬಲ್ ಗಳು ಕೂಡ ಆತ್ಮಹತ್ಯೆಯನ್ನು ಪಾಪ ಎಂದೇ ಅನುಮೋದಿಸುತ್ತವೆ. ಜೈನ ಮುನಿಗಳಲ್ಲಿ ಈ ಹಿಂದೆ ಸಲ್ಲೇಖನವನ್ನು ಪಾಲಿಸುತ್ತಿದ್ದು ಇದು ಮನುಷ್ಯ ಮಾತ್ರರಿಗೆ ಸಾಧ್ಯವಿಲ್ಲದ ವಿಧಾನವಾಗಿದೆ.
ಆದರೆ ಸಾಮಾಜಿಕವಾಗಿ ನೋಡುವುದಾದರೆ
* ಒಂದು ಹೊತ್ತಿನ ಕೂಳಿಗಾಗಿ ಒದ್ದಾಡುವ ಕುಟುಂಬ ವಿದ್ದರೂ ಕೂಡ ಬದುಕಿನ ಬಂಡಿಯನ್ನು ಸಾಗಿಸಲು ಹರಸಾಹಸ ಪಡುವ ಜನರಿದ್ದಾರೆ… ಎಲ್ಲಾ ಸವಲತ್ತುಗಳಿದ್ದರೂ ಅನುಭವಿಸುವ ಮನಸ್ಥಿತಿ ಇಲ್ಲದೆ ದುಶ್ಚಟಗಳ ದಾಸರಾಗಿ, ಖಿನ್ನತೆಯಂತಹ ಗೀಳು ರೋಗಗಳಿಗೆ ಬಲಿಯಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಜನರಿದ್ದಾರೆ.
ಆತ್ಮಹತ್ಯೆ ಮಾಡಿಕೊಳ್ಳಬೇಕೆಂಬುದು ಒಂದು ಕ್ಷಣಿಕ ಸಮಯದ ತುಡಿತದ ಮನಸ್ಥಿತಿ. ಅಂತಹ ಮನಸ್ಥಿತಿಯ ಸಮಯದಲ್ಲಿ ವ್ಯಕ್ತಿಯು ಈ ಕೆಳಗಿನ ವಿಷಯಗಳನ್ನು ಪಾಲಿಸಿದರೆ ತನ್ನ ತಲೆಯಿಂದ ಆತ್ಮಹತ್ಯೆಯ ವಿಚಾರವನ್ನು ತೊಡೆದು ಹಾಕಬಹುದು.
* ಮನಸ್ಸಿಗೆ ಯಾವುದಾದರೂ ಸಮಸ್ಯೆ ಬಾಧಿಸಿ ಅದು ಆತ್ಮಹತ್ಯೆಗೆಳಸುತ್ತಿದ್ದರೆ… ಕೂಡಲೇ ನಿಮ್ಮ ಪಾಲಕರಲ್ಲಿ ಇಲ್ಲವೇ ಒಡಹುಟ್ಟಿದವರಲ್ಲಿ ನಿಮ್ಮ ಮನಸ್ಸಿನ ಕೋಲಾಹಲವನ್ನು ಹೇಳಿಕೊಳ್ಳಿ. ಇದು ಮನಸ್ಸಿನ ಭಾರವನ್ನು ಇಳಿಸುವುದರ ಜೊತೆಗೆ ಸಮಸ್ಯೆಯ ತೀವ್ರತೆಯನ್ನು ಕಡಿಮೆ ಮಾಡುವುದು. ನಿಮ್ಮನ್ನು ಅಷ್ಟೊಂದು ಪ್ರೀತಿಸುವ ಮತ್ತು ನಿಮ್ಮ ಮೇಲೆ ಭರವಸೆ ಇಟ್ಟಿರುವ ಕುಟುಂಬದ ಜನರನ್ನು ತೊರೆದು ಆತ್ಮಹತ್ಯೆ ಮಾಡಿಕೊಳ್ಳುವುದು ಅದೆಷ್ಟು ಘೋರ ತಪ್ಪು ಎಂಬುದರ ಅರಿವು ಮೂಡಿಸುತ್ತದೆ.
* ಮನುಷ್ಯ ಒಬ್ಬಂಟಿಯಾಗಿದ್ದಾಗಲೇ ಹೆಚ್ಚಾಗಿ ಆತ್ಮಹತ್ಯೆಯ ಯೋಚನೆಗಳು ಬರುವುದು. ಹಾಗೆ ಆತ್ಮಹತ್ಯೆಯ ಯೋಚನೆ ಬಂದಾಗ ಮನೆಯಿಂದ ಹೊರಗೆ ಸ್ನೇಹಿತರ ವಲಯದಲ್ಲಿ, ಸಂಬಂಧಿಕರ ನಡುವೆ ಹೋಗಿ ಕುಳಿತುಕೊಳ್ಳಿ.
* ಮನಸ್ಸು ಆತ್ಮಹತ್ಯೆಯ ಕುರಿತು ಯೋಚಿಸುತ್ತಿರುವಾಗ ಆತ್ಮಹತ್ಯೆ ಮಾಡಿಕೊಳ್ಳಲು ಬೇಕಾಗುವ ಪರಿಕರಗಳನ್ನು ಮನೆಯಿಂದ, ಇಲ್ಲವೇ ನೀವು ವಾಸಿಸುವ ಪರಿಸರದಿಂದ ಕೈಗೆಟುಕದಷ್ಟು ದೂರವಿಡಿ.
* ಔದ್ಯೋಗಿಕವಾಗಿ ತೊಂದರೆಯನ್ನು ಅನುಭವಿಸುತ್ತಿರುವಾಗ ಯಾರಲ್ಲೂ ಹೇಳಿಕೊಳ್ಳಲಾಗದೆ ಚಡಪಡಿಸುತ್ತಿರುವುದಕ್ಕಿಂತ ನಿಮ್ಮ ಸಿಟ್ಟು ಆಕ್ರೋಶವನ್ನು ಸಹೋದ್ಯೋಗಿಗಳ ಮುಂದೆ, ಸ್ನೇಹಿತರ ಮುಂದೆ ವ್ಯಕ್ತಪಡಿಸಿ.
* ಮಧ್ಯಪಾನ, ಮಾದಕ ಪದಾರ್ಥಗಳ ಸೇವನೆ ಮತ್ತು ಧೂಮಪಾನದಂತಹ ದುಶ್ಚಟಗಳು ನಿಮ್ಮ ಮಾನಸಿಕ ಸ್ಥಿತಿಯನ್ನು ಬಲಹೀನಗೊಳಿಸುವ ಕಾರಣ ಸಾಧ್ಯವಾದಷ್ಟು ಅವುಗಳನ್ನು ದೂರವಿಡಿ. ಎಷ್ಟೋ ಬಾರಿ ಮಧ್ಯಪಾನ ಮಾಡಿದ ವ್ಯಕ್ತಿಗಳು ವಿವೇಚನಾ ರಹಿತರಾಗಿ ಆತ್ಮಹತ್ಯೆಗೆಳಸುವುದೂ ಉಂಟು.
* ಆತ್ಮಹತ್ಯೆಯ ಯೋಚನೆ ಮೂಡಿ ಬಂದಾಗ ಕಣ್ಣು ಮುಚ್ಚಿ ನೀವು ಆತ್ಮಹತ್ಯೆ ಮಾಡಿಕೊಂಡ ನಂತರದ ಪರಿಣಾಮಗಳಾದ … ನಿಮ್ಮ ತಂದೆ ತಾಯಿಯrs ಒಡಲುರಿಯ ಸಂಕಟದ ಆಕ್ರಂದನ,ಒಡಹುಟ್ಟಿದವರ ಮತ್ತು ಸ್ನೇಹಿತರ ನೋವು, ಆಕ್ರೋಶ, ಅಳು, ಪೊಲೀಸರ ತನಿಖೆ ಮುಂತಾದ ವಿಷಯಗಳ ಕುರಿತು ಒಮ್ಮೆ ಮನದಲ್ಲಿ ಯೋಚಿಸಿದಾಗ ಬಹುಶಃ ಆತ್ಮಹತ್ಯೆ ಮಾಡಿಕೊಳ್ಳಬೇಕೆಂಬ ಭೂತ ಉಚ್ಛಾಟಿಸಲ್ಪಡಬಹುದು.
* ಒಳ್ಳೆಯ ಮನಶಾಸ್ತ್ರಜ್ಞರ ಬಳಿ ಸಮಾಲೋಚನೆಯ ಮೂಲಕ ತಮ್ಮ ತೊಂದರೆಯನ್ನು ಪರಿಹರಿಸಿಕೊಳ್ಳಬಹುದು. ಕೆಲವೊಮ್ಮೆ ಖಿನ್ನತೆ ಯಂತಹ ಮಾನಸಿಕ ರೋಗಗಳಿಂದ ಆತ್ಮಹತ್ಯೆ ಇಳಿಸುವವರು ಔಷಧಿ ಮತ್ತು ಚಿಕಿತ್ಸೆಯ ಮೂಲಕ ತೊಂದರೆಗಳನ್ನು ನಿವಾರಿಸಿಕೊಳ್ಳಬಹುದು.
ಅಂತಿಮವಾಗಿ ಸಾಸಿವೆ ಇಲ್ಲದ ಮನೆಯಂತೆಯೇ ಸಮಸ್ಯೆಗಳಿಲ್ಲದ ಮನೆಯೂ ಈ ಜಗತ್ತಿನಲ್ಲಿ ಇಲ್ಲ. ಎಲ್ಲ ಸಮಸ್ಯೆಗಳಿಗೂ ಆತ್ಮಹತ್ಯೆಯೊಂದು ಪರಿಹಾರವಲ್ಲ.
ದಾಸರು ಹೇಳಿದಂತೆ
” ಏಸು ಕಾಯಂಗಳ ಕಳೆದು 84 ಲಕ್ಷ ಕೋಟಿ ಜೀವರಾಶಿ ದಾಟಿ ಬಂದ ಈ ಶರೀರ
ತಾನಲ್ಲ ತನ್ನದಲ್ಲ..ಆಸೆ ತರವಲ್ಲ
ದಾಸನಾಗು ವಿಶೇಷನಾಗು ”
ಈ ಪ್ರಪಂಚದಲ್ಲಿ ಇರುವ 84 ಲಕ್ಷ ಕೋಟಿ ಜೀವರಾಶಿಗಳಲ್ಲಿ ಅತ್ಯುತ್ಕಷ್ಟವಾದ ಮಾನವ ಶರೀರವನ್ನು ಪಡೆಯಲು ಅದೆಷ್ಟೋ ಜನ್ಮಗಳನ್ನು ಎತ್ತಿ ಬರಬೇಕಾಗುತ್ತದೆ…. ಆದರೂ ಕೂಡ ಈ ಶರೀರ ನಮ್ಮದಲ್ಲ ಆದ್ದರಿಂದ ಆಸೆಯನ್ನು ತೊರೆದು ಆ ದೇವರ ದಾಸನಾಗಿ… ಎಲ್ಲವೂ ಆ ದೇವರ ಕೃಪೆ, ಅವನಿಟ್ಟಂತೆ ಆಗಲಿ ಎಂಬ ಭಾವದಿಂದ ಬದುಕಿದಾಗ
ಆತ್ಮಹತ್ಯೆಯಂತಹ ದುಷ್ಟ ಯೋಚನೆಗಳು ನಮ್ಮಿಂದ ದೂರ ಆಗುತ್ತವೆ.
ಮಾನವ ಜನ್ಮ ದೊಡ್ಡದು
ಇದ ಹಾನಿ ಮಾಡಲು ಬೇಡಿ
ಹುಚ್ಚಪ್ಪಗಳಿರಾ…. ಎಂಬ ಪುರಂದರ ದಾಸರ ನುಡಿಯನ್ನು ನೆನಪಿಸಿಕೊಳ್ಳುತ್ತಾ ಸಮಾಜದ ಯಾವುದೇ ಸ್ಥರದಲ್ಲಿಯಾದರೂ ಆತ್ಮಹತ್ಯೆ ಮಾಡಿಕೊಳ್ಳುವ ಮನಸ್ಥಿತಿಯವರನ್ನು ಗುರುತಿಸಲು ಪ್ರಯತ್ನಿಸಿ ಅವರನ್ನು ಸಂತೈಸಿ ತಪ್ಪು ನಿರ್ಧಾರ ಕೈಗೊಳ್ಳದಿರುವಂತೆ ಸಹಾಯ ಮಾಡುವ ಮೂಲಕ ಸದೃಢ ಮನಸ್ಥಿತಿ ಉಳ್ಳ ಸಮಾಜವನ್ನು ಕಟ್ಟುವ ಆಶಯ ಹೊಂದೋಣ.
ವೀಣಾ ಹೇಮಂತ್ ಗೌಡ ಪಾಟೀಲ್
ಮುಂಡರಗಿ ಗದಗ್