
ಬಹದ್ದೂರಬಂಡಿ ಗ್ರಾಮ ಪಂಚಾಯತಿಯ ಬಿ.ಹೊಸಳ್ಳಿ ಕೆರೆ ವೀಕ್ಷಣೆ
ಕೆರೆ ಕಾಮಗಾರಿಗಳನ್ನು ವೈಜ್ಞಾನಿಕವಾಗಿ ಅನುಷ್ಠಾನಗೊಳಿಸಿ: ಸಿಇಒ ರಾಹುಲ್ ರತ್ನಂ ಪಾಂಡೆಯ
ಕರುನಾಡ ಬೆಳಗು ಸುದ್ದಿ
ಕೊಪ್ಪಳ,30- ಗ್ರಾಮ ಪಂಚಾಯತಿ ವ್ಯಾಪ್ತಿಯ ಕೆರೆ ಕಾಮಗಾರಿಗಳನ್ನು ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ವೈಜ್ಞಾನಿಕವಾಗಿ ಅನುಷ್ಠಾನಗೊಳಿಸಿ ಎಂದು ಜಿಲ್ಲಾ ಪಂಚಾಯತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡೆಯ ಅವರು ಅಧಿಕಾರಿಗಳಿಗೆ ಸೂಚಿಸಿದರು.
ತಾಲೂಕಿನ ಬಹದ್ದೂರಬಂಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಿ.ಹೊಸಳ್ಳಿ ಗ್ರಾಮದ ಕೆರೆ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿ ಸಿದ ನಂತರ ಅವರು ಮಾತನಾಡುತ್ತ 2024-25ನೇ ಸಾಲಿನ ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ವೈಜ್ಞಾನಿಕವಾಗಿ ಕೆರೆಗೆ ನೀರು ಹರಿದು ಬರುವ ನಾಲಾಗಳನ್ನು ಸುಧಾರಣೆ ಮಾಡಿದ ನಂತರ ಕೆರೆಯಲ್ಲಿ ಟ್ರಂಚ್‌ಗಳನ್ನು ಮಾರ್ಕ್ಔಟ್ ಮಾಡಿ, ಕೂಲಿಕಾರರಿಗೆ ಕೆರೆ ನಿರ್ಮಾಣ ಕಾಮಗಾರಿಯಲ್ಲಿ ಕೆಲಸವನ್ನು ನೀಡಿ. ಇದರಿಂದ ಮಳೆಯಿಂದ ಹರಿದು ಬರುವ ನೀರು ನೇರವಾಗಿ ಕೆರೆಗೆ ಸೇರುವುದರಿಂದ ಸಾಕಷ್ಟು ಪ್ರಮಾಣದಲ್ಲಿ ನೀರು ಸಂಗ್ರಹಣೆಯಾಗಿ ಕೊಳವೆ ಬಾವಿ ಅಂತರ್ಜಲ ಪ್ರಮಾಣ ಹೆಚ್ಚಳವಾಗಿ ರೈತರಿಗೆ ವರದಾನವಾಗಲಿದೆ. ಕೆರೆ ನಿರ್ಮಾಣ ಕಾಮಗಾರಿಯಲ್ಲಿ ವೈಜ್ಞಾನಿಕ ಸಾಧ್ಯತೆಗಳನ್ನು ಅವಲೋಕಿಸಿ, ಸೂಕ್ತ ರೀತಿಯಲ್ಲಿ ಅನುಷ್ಠಾನಗೊಳಿಸಿ ಎಂದು ಅವರು ಹೇಳಿದರು.
ಕೆರೆಯ ಬಂಡ್ ನಿಂದ 15 ಮೀಟರ್ ಅಂತರದಲ್ಲಿ 10 ಅಡಿ ಗೆ ಒಂದರಂತೆ ಗಿಡಗಳನ್ನು ಅರಣ್ಯ ಇಲಾಖೆಯಿಂದ ಅನುಷ್ಠಾನಿಸಲು ಕ್ರಮ ಕೈಗೊಳ್ಳಿ ಕೆರೆಯ ಮಧ್ಯಭಾಗದಲ್ಲಿ ನೀರಿನ ಗಡ್ಡೆ ನಿರ್ಮಿಸಿ ಪಕ್ಷಿಗಳು ವಾಸಿಸುವಂತಹ ಮರಗಳನ್ನು ನೆಡಬೇಕು.
ಕೆರೆ ಪ್ರಾರಂಭವಾಗುವ ಸ್ಥಳದಲ್ಲಿ ಬ್ಲಾಕ್ ಪ್ಲಾಂಟೇಷನ್ ಕೈಗೊಳ್ಳಿ. ಕೆರೆಯಲ್ಲಿ ಕೂಲಿಕಾರರಿಗೆ ಸರಿಯಾಗಿ ಬಾಕ್ಸ್ ಮಾದರಿಯಲ್ಲಿ ಅಳತೆ ನೀಡಿ ಹೂಳೆತ್ತಲು ಮಾರ್ಕ್ಔಟ್ ನೀಡಿ ಕಾಮಗಾರಿ ಪ್ರಾರಂಭಿಸಿ. ಬರುವ ಏಪ್ರೀಲ್ ನಿಂದ ಗ್ರಾಮ ಪಂಚಾಯತಿ ವತಿಯಿಂದ ಕೆಲಸ ನೀಡುವ ಪೂರ್ವದಲ್ಲಿ ಬೇರೆ ಬೇರೆ ಗ್ರಾಮ ಪಂಚಾಯತಿಗಳಿಗೆ ಪ್ರತ್ಯೇಕವಾಗಿ ಕೆಲಸ ನೀಡಿದಲ್ಲಿ ಕೆರೆಗೆ ಒಂದು ಆಕಾರವಾಗಿ ನೀರಿನ ಪ್ರಮಾಣ ಹೆಚ್ಚಳವಾಗುತ್ತದೆ ಎಂದು ಅವರು ತಿಳಿಸಿದರು. ನಾಲಾಗಳ ಮುಖಾಂತರ ಕೆರೆಗೆ ಹರಿದು ಬರುವ ನಾಲಾಗಳಿಗೆ ಕಲ್ಲುಗಳ ಮೂಲಕ ಬದು ಗಟ್ಟಿಗೊಳ್ಳಿಸುವಿಕೆ ಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ. ಕೆರೆಯ ಮಣ್ಣನ್ನು ಯಾವುದೇ ಕಾರಣಕ್ಕೂ ಕೆರೆಯಲ್ಲಿ ಬಿಡದಂತೆ ಕೆರೆಯ ಬದುವಿಗೆ ಸಾಗಿಸಿ ಮಾದರಿ ಕೆರೆಯನ್ನಾಗಿ ನಿರ್ಮಿಸಿರಿ ಎಂದು ಸ್ಥಳದಲ್ಲಿ ಹಾಜರಿದ್ದ ನರೇಗಾ ಸಹಾಯಕ ನಿರ್ದೇಶಕರು, ಪಂಚಾಯತ ಅಭಿವೃದ್ದಿ ಅಧಿಕಾರಿಗೆ ಹಾಗೂ ತಾಂತ್ರಿಕ ಸಹಾಯಕರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಸಹಾಯಕ ನಿರ್ದೇಶಕರು(ಗ್ರಾಉ) ಯಂಕಪ್ಪ, ಪಂಚಾಯತ ಅಭಿವೃದ್ಧಿ ಅಧಿಕಾರಿ ಜ್ಯೋತಿ ರಡ್ಡೇರ, ತಾಲೂಕ ಐಇಸಿ ಸಂಯೋಜಕ ದೇವರಾಜ ಪತ್ತಾರ, ತಾಂತ್ರಿಕ ಸಂಯೋಜಕರುಗಳಾದ ಯಮನೂರಪ್ಪ, ಸುರೇಶ ದೇಸಾಯಿ, ತಾಂತ್ರಿಕ ಸಹಾಯಕರಾದ ಶಿವಪ್ರಸಾದ, ಗುರುರಾಜ, ರಮೇಶ್, ಮುರುಳಿಧರ, ಮಂಜುನಾಥ ಮೇಟಿ ಹಾಗು ಇತರರು ಹಾಜರಿದ್ದರು.