
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಚುನಾವಣೆ
ಎಸ್. ರಘುನಾಥ್ ಮತಯಾಚನೆ
ಸಮಾಜದ ಸಂಘಟನೆಗೆ ಬೆಂಬಲಿಸಿ
ಕರುನಾಡ ಬೆಳಗು ಸುದ್ದಿ
ಕೊಪ್ಪಳ,18- ‘ವಿಪ್ರ ಸಮಾಜದಲ್ಲಿರುವ ಬಡವರು, ಮಹಿಳೆಯರು, ವೃದ್ಧರು, ಅಸಹಾಯಕರು ಹೀಗೆ ಎಲ್ಲ ತರಹದ ಜನರ ಆಶಯಗಳನ್ನು ಈಡೇರಿಸಲು ಶ್ರಮಿಸುತ್ತೇನೆ. ಈ ಬಾರಿ ನನ್ನನ್ನು ಅಧ್ಯಕ್ಷನನ್ನಾಗಿ ಆಯ್ಕೆ ಮಾಡಬೇಕು’ ಎಂದು ಬೆಂಗಳೂರಿನ ಎಸ್. ರಘುನಾಥ್ ಮಂಗಳವಾರ ಇಲ್ಲಿ ಮತಯಾಚನೆ ಮಾಡಿದರು.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯಾಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿರುವ ಅವರು ಇಲ್ಲಿನ ರಾಯರ ಮಠದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಸಮಾಜದ ಜನರನ್ನು ಉದ್ದೇಶಿಸಿ ಮಾತನಾಡಿ ‘ಕಳೆದ ಬಾರಿಯ ಚುನಾವಣೆಯಲ್ಲಿ 455 ಮತಗಳ ಅಂತರದಿಂದ ಮಾತ್ರ ಸೋತಿದ್ದೇನೆ. ಆದರೆ ಈ ಬಾರಿ ಎಲ್ಲರೂ ನಮ್ಮ ಜೊತೆಗಿದ್ದು ಗೆಲುವಿನ ವಿಶ್ವಾಸವಿದೆ. ಇದೇ 27ರಂದು ನಾಮಪತ್ರ ಸಲ್ಲಿಸುತ್ತೇನೆ. ಅಂದೇ ಸಮಾಜದ ಜನರ ಅಭಿವೃದ್ಧಿಗೆ ರೂಪಿಸಿರುವ ಯೋಜನೆಗಳ ಪ್ರಣಾಳಿಕೆ ಬಿಡುಗಡೆ ಮಾಡುವೆ’ ಎಂದು ತಿಳಿಸಿದರು.
‘ನಾವು ಎದುರಾಳಿಗಳನ್ನು ಟೀಕಿಸಿದರೆ ನಮ್ಮ ಶಕ್ತಿ ಹೆಚ್ಚಾಗುವುದಿಲ್ಲ. ಆದರೆ ನಮ್ಮ ಎದುರಾಳಿಗಳಿಗೆ ಸೋಲಿನ ಸೂಚನೆ ಸಿಕ್ಕಂತೆ ಕಾಣುತ್ತಿದೆ. ಆದ್ದರಿಂದ ನಮ್ಮನ್ನು ಎಲ್ಲೆಂದರಲ್ಲಿ ಟೀಕಿಸುತ್ತಿದ್ದಾರೆ. ಎಲ್ಲ ವಿಪ್ರರು ಆಸ್ತಿ ನೋಂದಣಿ ಮಾಡಿಸಿಕೊಳ್ಳುವಾಗ ಶುದ್ಧಕ್ರಯ ಪತ್ರದಲ್ಲಿಯೂ ಕುಲದ ಇತಿಹಾಸ ಬರೆಯಿಸಿ’ ಎಂದು ಸಲಹೆ ನೀಡಿದರು. ಇವರ ಎದುರಾಳಿ ಅಭ್ಯರ್ಥಿಯಾಗಿ ಭಾನು ಪ್ರಕಾಶ ಶರ್ಮಾ (ಅಶೋಕ ಹಾರನಹಳ್ಳಿ ಬೆಂಬಲಿತರು) ಕಣದಲ್ಲಿದ್ದಾರೆ.
‘ರಾಜ್ಯದಲ್ಲಿ ಒಟ್ಟು 60,750 ಮತದಾರರು ಇದ್ದು, ಇದರಲ್ಲಿ ಅರ್ಧದಷ್ಟು ಮತದಾರರು ಬೆಂಗಳೂರಿನಲ್ಲಿ, ಇನ್ನುಳಿದವರು ರಾಜ್ಯ ರಾಜಧಾನಿಯಿಂದ ಹೊರಗಡೆ ಇದ್ದಾರೆ. ಹೀಗಾಗಿ ಯಾರನ್ನೂ ನಿರ್ಲಕ್ಷ್ಯ ಮಾಡದೆ ಎಲ್ಲರನ್ನೂ ಒಂದುಗೂಡಿಸಿಕೊಂಡು ಹೋಗಲಾಗುವುದು’ ಎಂದು ಭರವಸೆ ನೀಡಿದರು.
ಮಹಾಸಭಾದ ನಿಕಟಪೂರ್ವ ಹಿರಿಯ ಉಪಾಧ್ಯಕ್ಷ ಆರ್. ಲಕ್ಷ್ಮೀಕಾಂತ, ಸಮಾಜದ ಮುಖಂಡರಾದ ಸುದರ್ಶನ ಬೆಂಗಳೂರು, ವೇಣುಗೋಪಾಲ ಬೆಂಗಳೂರು, ಕೆ.ಜಿ. ಕುಲಕರ್ಣಿ, ಪ್ರಾಣೇಶ ಮಾದಿನೂರ, ರವಿಕಿರಣ ಕುಲಕರ್ಣಿ, ಡಿ.ವಿ. ಜೋಶಿ, ಗಿರೀಶ್ ಆಚಾರ್ ಜೋಶಿ, ನರಹರಿ ದಿಕ್ಷೀತ್, ಎ.ಎಸ್. ಪಟವಾರಿ, ಮಧುರಾ ಕರ್ಣಂ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಪ್ರಾಣೇಶ ಜಿಲ್ಲಾ ಪ್ರತಿನಿಧಿ ಅಭ್ಯರ್ಥಿ
ಬ್ರಾಹ್ಮಣ ಮಹಾಸಭಾದ ಕೊಪ್ಪಳದ ಜಿಲ್ಲಾ ಪ್ರತಿನಿಧಿ ಅಭ್ಯರ್ಥಿಯನ್ನಾಗಿ ಪ್ರಾಣೇಶ ಮಾದಿನೂರು ಅವರನ್ನು ಘೋಷಣೆ ಮಾಡಲಾಯಿತು. ಇವರು ಎಸ್. ರಘುನಾಥ್ ಬಣದಿಂದ ಸ್ಪರ್ಧೆ ಮಾಡುವರು.
‘ಎಲ್ಲರ ಆಶಯದಂತೆ ಅಭ್ಯರ್ಥಿಯಾಗಿದ್ದೇನೆ. ನೀವೆಲ್ಲರೂ ನನ್ನನ್ನು ಗೆಲ್ಲಿಸಬೇಕು’ ಎಂದು ಪ್ರಾಣೇಶ ಮನವಿ ಮಾಡಿದರು.