
ಕೊಪ್ಪಳಕ್ಕೆ ಆಗಮಿಸಿದ ಎಸ್ಡಿಪಿಐ ಜಾಥಾ
ಕೊಪ್ಪಳ, ೦೮- ಸಾಮಾಜಿಕ ನ್ಯಾಯಕ್ಕಾಗಿ ಬೆಂಗಳೂರಿನಿಂದ ಬೆಳಗಾವಿಗೆ ಹೊರಟಿರುವ ಎಸ್ಡಿಪಿಐ ಪಕ್ಷದ ಅಂಬೇಡ್ಕರ್ ಜಾಥಾ ಶುಕ್ರವಾರ ಕೊಪ್ಪಳಕ್ಕೆ ಆಗಮಿಸಿತು.
ಆಜಾದ್ ವೃತ್ತದಿಂದ ಅಶೋಕ ವೃತ್ತ ಮೂಲಕ ಬಸವೇಶ್ವರ ವೃತ್ತಕ್ಕೆ ಆಗಮಿಸಿ ಅಲ್ಲಿ ಬಹಿರಂಗ ಸಭೆ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಎಸ್ಡಿಪಿಐ ಪಕ್ಷದ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ರಾಜ್ಯ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು.
ಹಿಂದೆ ಸಿಎಂ ಆಗಿದ್ದ ಸಿದ್ದರಾಮಯ್ಯ ಸರಕಾರ 167 ಕೋಟಿ ಖರ್ಚು ಮಾಡಿ ಕಾಂತರಾಜ ಆಯೋಗದ ಮೂಲಕ ಗಣತಿ ನಡೆಸಿದೆ. ಈವರೆಗೆ ಆ ವರದಿ ಬಹಿರಂಗಗೊಂಡಿಲ್ಲ. ಕೂಡಲೇ ಕಾಂತರಾಜ ವರದಿ ಜಾರಿಗೊಳ್ಳಬೇಕು.
ಬಿಹಾರ ಸರಕಾರದ ಜಾತಿಗಣತಿ ವರದಿ ಹಾಡಿಹೊಗಳುವ ರಾಹುಲ್ ಗಾಂಧಿಯವರೆ ನಿಮ್ಮದೆ ಕರ್ನಾಟಕ ಸರಕಾರ ಜಾತಿಗಣತಿ ಜಾರಿಗೊಳಿಸುತ್ತಿಲ್ಲ. ಇದನ್ನು ವಿರೋಧಿಸಿದ ನಿಮ್ಮ ಪಕ್ಷದ ಶಾಸಕರಾದ ಶಾಮನೂರು ಶಿವಶಂಕರಪ್ಪರಿಗೆ ನೋಟಿಸ್ ಕೊಡುವಷ್ಟು ದಮ್ಮಿಲ್ಲವಾ ? ಎಂದು ವಾಗ್ದಾಳಿ ನಡೆಸಿದರು.
ಕಳೆದ 30 ವರ್ಷಗಳಿಂದ ಸದಾಶಿವ ಆಯೋಗದ ವರದಿ ಜಾರಿಗೆ ಹೋರಾಟ ನಡೆದಿದೆ. ರಾಜ್ಯ ಆಳಿದ ಯಾವ ಸರಕಾರ ವೂ ಸದಾಶಿವ ಆಯೋಗದ ವರದಿ ಜಾರಿಗೊಳಿಸಲಿಲ್ಲ ಕೂಡಲೇ ಸರಕಾರ ಒಳಮೀಸಲಾತಿ ವರದಿಯನ್ನು ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕು.
ಹಿಂದಿನ ಬಿಜೆಪಿ ಸರಕಾರ ಮುಸ್ಲಿಮರ 4% ಮೀಸಲಾತಿ ರದ್ದುಪಡಿಸಿದಾಗ ಆಕ್ರೋಶ ವ್ಯಕ್ತಪಡಿಸಿದ್ದ ಸಿದ್ದರಾಮಯ್ಯ ಡಿ.ಕೆ.ಶಿವಕುಮಾರ ಪಕ್ಷ ಅಧಿಕಾರಕ್ಕೆ ಬಂದ ಕೂಡಲೆ ಮುಸ್ಲಿಮರ ಮೀಸಲಾತಿ ಮತ್ತೆ ಕೊಡ್ತೇವೆ ಎಂದಿದ್ರು. ಸಚಿವ ಸಂಪುಟ ಸಭೆಯಲ್ಲಿ ಸಿಬಿಐ ಕೇಸ್ ವಾಪಸ್ ಪಡೆಯುವ ನಿಮಗೆ ಮುಸ್ಲಿಮರ ಮೀಸಲಾತಿ ನೆನಪಾಗುತ್ತಿಲ್ಲವೆ ? ಕೂಡಲೇ ಮುಸ್ಲಿಮರ ಮೀಸಲಾತಿ ಮರುಸ್ಥಾಪಿಸಿ ಅದನ್ನು 8% ಗೆ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಆಡಳಿತ ಬಗ್ಗೆ ವಿಡಂಬನೆಯ ಬೀದಿ ನಾಟಕವನ್ನು ಭಾಸ್ಕರ್ ಪ್ರಸಾದ್ ತಂಡ ಪ್ರದರ್ಶಿಸಿತು.
ಎಸ್ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಭಾಸ್ಕರ ಪ್ರಸಾದ್ , ಅಪ್ಸರ್ ಕೊಡ್ಲಿಪೇಟೆ, ರಾಯಚೂರಿನ ಅಮ್ಜದ್ ಖಾನ್, ಜಮಖಂಡಿಯ ಯಮನಪ್ಪ ಗುಡದಾಳ, ಕೊಪ್ಪಳ ಜಿಲ್ಲಾಧ್ಯಕ್ಷ ಸಲೀಂ ಮನಿಯಾರ್, ಜಿಲ್ಲಾ ಸಮಿತಿ ಸದಸ್ಯ ಸಲೀಂ ಖಾದ್ರಿ, ಕೊಪ್ಪಳ ತಾಲೂಕು ಅಧ್ಯಕ್ಷ ಸಾದಿಕ್, ಕಾರ್ಯದರ್ಶಿ ಅರ್ಷದ್ ಷೇಕ್, ಸಂಘಟನಾ ಕಾರ್ಯದರ್ಶಿ ನಿಜಾಂ ಮಾಳೆಕೊಪ್ಪ ಇತರರು ಇದ್ದರು.